‘ಸ್ಟ್ರೀಟ್‌ ಫುಡ್‌’ ಉತ್ಸವದ ಸೊಗಸು

7

‘ಸ್ಟ್ರೀಟ್‌ ಫುಡ್‌’ ಉತ್ಸವದ ಸೊಗಸು

Published:
Updated:
Deccan Herald

ಭಾನುವಾರ... ಬೆಳಿಗ್ಗೆಯಿಂದ ಸಂಜೆಯವರೆಗೆ ಮನೆಯಲ್ಲಿಯೇ ಕುಳಿತಿದ್ದ ನನಗೆ ಬೇಸರ ಕಾಡಿತ್ತು. ರಾತ್ರಿ ಊಟವನ್ನಾದರೂ ಹೊರಗಡೆ ಮಾಡೋಣ ಎಂದುಕೊಳ್ಳುತ್ತಿದ್ದಾಗ, ಗೆಳತಿಯೊಬ್ಬಳು ಕಮ್ಮನಹಳ್ಳಿಯ ‘ಸಿಗ್ರಿ ಗ್ಲೋಬಲ್ ಗ್ರಿಲ್‌ ಹೋಟೆಲ್‌’ನಲ್ಲಿ ‘ಸ್ಟ್ರೀಟ್ ಫುಡ್‌ ಫೆಸ್ಟಿವಲ್’ ನಡೆಯುತ್ತಿದೆ ಎಂದು ಹೇಳಿದ್ದು ನೆನಪಾಯಿತು.

ಇನ್ನೇಕೆ ತಡ ಎಂದು ಕಮ್ಮನಹಳ್ಳಿಯತ್ತ ಹೊರಟೆ. ಗಲ್ಲಿ, ಮೂಲೆ ಸುತ್ತಿ ಕೊನೆಗೆ ಹೋಟೆಲ್ ಮುಂದೆ ನಿಂತೆ. ಎರಡನೇ ಮಹಡಿಯಲ್ಲಿರುವ ಹೋಟೆಲ್ ಹೊಕ್ಕ ತಕ್ಷಣ ಸ್ವಾಗತಿಸಿದ್ದು ಹವಾ ನಿಯಂತ್ರಿತ ಕೊಠಡಿ, ಮಂದ ಬೆಳಕು, ಮೆಲುವಾದ ಸಂಗೀತದ ಜೊತೆಗೆ ನಗುಮೊಗದ ಹೋಟೆಲ್ ಸಿಬ್ಬಂದಿ.

ಕಾಯ್ದಿರಿಸಿದ ಟೇಬಲ್ ಬಳಿ ಹೋಗಿ ಕುಳಿತ ನನ್ನ ಮುಂದೆ ಮೆನು ತಂದಿಟ್ಟರು ಸಿಬ್ಬಂದಿ. ಮೆನು ನೋಡುತ್ತಿದ್ದಂತೆ ಇನ್ನಷ್ಟು ಹೊಟ್ಟೆ ಹಸಿಯಲು ಆರಂಭಿಸಿತು. ಸ್ಟ್ರೀಟ್ ಪುಡ್ ಫೆಸ್ಟಿವಲ್ ಎಂದರೆ ಕೇಳಬೇಕೆ...? ವಿವಿಧ ಬಗೆಯ ಚಾಟ್ಸ್‌ಗಳು, ಪಾವ್‌ಬಾಜಿ, ತಾಂಗ್ರಾ ಶೈಲಿಯ ಚಿಲ್ಲಿ ಚಿಕನ್, ಅಂಡಾ ಪರಾಠ ಸೇರಿದಂತೆ ಇನ್ನೂ ಅನೇಕ ಖಾದ್ಯಗಳು ಹಸಿವನ್ನು ತಣಿಸಲು ಕಾಯುತ್ತಿದ್ದವು. 

ಮೊದಲಿಗೆ ಉಪ್ಪು, ಹುಳಿ, ಖಾರ ಮಿಶ್ರಣದ ಆಮ್‌ಪನ್ನಾ ರಸದ ಗುಟುಕು ಗಂಟಲಿನೊಳಗೆ ಇಳಿಯುತ್ತಿದ್ದಂತೆ ವಾವ್ ಎನ್ನಿಸಿತ್ತು. ಅದಕ್ಕಿಂತ ಹೆಚ್ಚು ಖುಷಿ ತಂದಿದ್ದು ಸಿಬ್ಬಂದಿಯ ಆದರ ಹಾಗೂ ಆತ್ಮೀಯತೆ.

ಆಮ್‌ಪನ್ನಾ ಮುಗಿಯುವ ಮೊದಲೇ ಸ್ಟ್ರೀಟ್‌ಫುಡ್‌ನ ವಿಶೇಷಗಳಾದ ಪಾನಿಪುರಿ, ಧಹಿಪುರಿ, ಭೇಲ್‌ಪುರಿ, ರಗ್ಡಾ ಚಾಟ್ ಒಂದೊಂದನ್ನೇ ತಂದು ಟೇಬಲ್ ಮೇಲೆ ನೀಟಾಗಿ ಆಗಿ ಜೋಡಿಸಿಟ್ಟರು. ಖಾರ, ಹುಳಿ, ಸಿಹಿ ಮಿಶ್ರಿತವಾಗಿದ್ದ ಈ ಚಾಟ್ಸ್‌ಗಳ ರುಚಿ ನಾಲಿಗೆಯ ಮೇಲೆ ನರ್ತನ ಮಾಡಿತ್ತು. 

ಮುಂಬೈ ಹಾಗೂ ದೆಹಲಿಯಲ್ಲಿ ಮಾತ್ರ ಸಿಗುವ, ಬೆಂಗಳೂರಿನಲ್ಲಿ ಅಪರೂಪಕ್ಕೆ ಕಾಣುವ ರಗ್ಡಾ ಚಾಟ್ ರುಚಿ ಭಿನ್ನವಾಗಿತ್ತು. ಆಲೂಟಿಕ್ಕಿಯ ಜೊತೆ ಬಟಾಣಿ, ಈರುಳ್ಳಿ ಹಾಗೂ ಮಸಾಲೆ ಸೇರಿಸಿ ಚೌಚೌ ಜೊತೆಗೆ ಅಲಂಕರಿಸಿದ ರಗ್ಡಾ ಚಾಟ್‌ ರುಚಿ ಚೆನ್ನಾಗಿತ್ತು. ಜೊತೆಗೆ ವಿಶೇಷ ಎನ್ನಿಸುವ ಅಮೃತಸರಿ ಫಿಶ್ ಪಕೋಡ ಹಾಗೂ ಸಿಗಡಿ ಪಾಪ್‌ಕಾರ್ನ್ ತಿಂದಷ್ಟು ತಿನ್ನಬೇಕು ಎಂಬ ಆಸೆ ಮೂಡಿಸುತ್ತಿತ್ತು. 

ನಂತರ ತಂದ ಗ್ರಿಲ್ಡ್ ಮೇಥಿ ಚಿಕ‌ನ್, ಸಿಗಡಿ ಗ್ರಿಲ್‌, ಪೈನಾಪಲ್‌, ಪನೀರ್‌, ಕ್ರಿಸ್ಪ ಕಾರ್ನ್‌ ಹಾಗೂ ಪೆಪ್ಪರ್ ಪಿಜ್ಜಾಗಳನ್ನು ತಿಂದು ಮುಗಿಸುವಷ್ಟರಲ್ಲಿ ಹೊಟ್ಟೆ ತುಂಬಿತ್ತು. ತುಪ್ಪ ಸವರಿ ಬಿಸಿ ಮಾಡಿದ ಬನ್‌ ಒಳಗೆ ಬಾಜಿ ಇಟ್ಟ ಸ್ಪೆಷಲ್ ಪಾವ್‌ಭಾಜಿಯಂತೂ ಮತ್ತೆ ಮತ್ತೆ ತಿನ್ನಬೇಕು ಎನ್ನಿಸುತ್ತಿತ್ತು. 

ಇಷ್ಟೆಲ್ಲಾ ತಿಂದ ಮೇಲೆ ಸ್ಟ್ರೀಟ್ ಫುಡ್ ಫೆಸ್ಟಿವಲ್‌ಗಾಗಿ ಹೋಟೆಲ್‌ನವರು ತಯಾರಿಸಿದ ವಿಶೇಷ ರಸಂನ ಸವಿಯನ್ನು ಆಸ್ವಾದಿಸದಿದ್ದರೆ ಹೇಗೆ ಎನ್ನಿಸಿದ್ದೇ
ಒಂದು ಕಪ್‌ನಲ್ಲಿ ರಸಂ ಹಾಕಿಕೊಂಡು ಬಂದೆ. ರಸಂನ ಪರಿಮಳವೇ ಭಿನ್ನವಾಗಿತ್ತು, ರುಚಿಯಂತೂ ಕೇಳುವುದೇ ಬೇಡ, ಅದರ ಭಿನ್ನ ರುಚಿಗೆ ಮನಸೋತ ನಾನು ಸ್ಟಾರ್ಟರ್ಸ್‌ನಲ್ಲೇ ಹೊಟ್ಟೆ ತುಂಬಿಕೊಂಡೆವಲ್ಲಾ ಎಂದು ಬೇಸರಪಟ್ಟುಕೊಂಡೆ.

 ವಿವಿಧ ಬಗೆಯ ಪಾಪಡ್‌ಗಳು, ಉಪ್ಪಿನಕಾಯಿಗಳು, ಸಲಾಡ್‌ಗಳು, ಪನೀರ್‌ ಆಲೂ ಮಟರ್ ತವಾ ಪಲಾವ್, ಮಟನ್ ಬಿರಿಯಾನಿ, ರೋಟಿಗಳು, ಚಿಕನ್ ಬಟರ್ ಮಸಾಲ, ಕರಿಬೇವು ಮಶ್ರೂಮ್ ಮಟರ್, ಐಸ್ ಕ್ರೀಂ, ಜಾಮೂನ್, ಜಿಲೇಬಿಗಳು ಸೇರಿದಂತೆ ಸ್ಟ್ರೀಟ್ ಪುಡ್ ಫೆಸ್ಟಿವಲ್‌ಗಾಗಿ ತಯಾರಿಸಿದ 11 ಸಸ್ಯಾಹಾರಿ ಹಾಗೂ 9 ಮಾಂಸಹಾರಿ ಖಾದ್ಯಗಳು ಆಹಾರಪ್ರಿಯರಿಗಾಗಿ ಅಲ್ಲಿತ್ತು. 

ಸಿಬ್ಬಂದಿ ಉಪಚಾರ

ಸಿಗ್ರಿ ಗ್ಲೋಬಲ್‌ ಗ್ರಿಲ್‌ನಲ್ಲಿ ತುಂಬಾ ಇಷ್ಟವಾಗಿದ್ದು ಹೋಟೆಲ್ ಸಿಬ್ಬಂದಿ ಗ್ರಾಹಕರನ್ನು ನೋಡಿಕೊಳ್ಳುವ ಪರಿ. ಅದು ಗ್ರಾಹಕರಿಗೆ  ಮನೆಯಲ್ಲಿಯೇ ಕುಳಿತು ತಿನ್ನುತ್ತಿದ್ದೇವೆ ಎಂಬ ಭಾವನೆ ಮೂಡಿಸುವಂತಿತ್ತು. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ತಮ್ಮ ಮೆನುನಲ್ಲಿಲ್ಲದ ಖಾದ್ಯಗಳನ್ನು ಗ್ರಾಹಕರ ರುಚಿಗೆ ಅನುಗುಣವಾಗಿ ಮಾಡಿ ಕೊಡುವುದು ಇವರ ಇನ್ನೊಂದು ವಿಶೇಷ. 

‘ನಮ್ಮ ಹೋಟೆಲ್‌ಗೆ ಬರುವ ಗ್ರಾಹಕರಿಗೆ ಭಿನ್ನ ರುಚಿಯ ಖಾದ್ಯಗಳನ್ನು ಉಣಬಡಿಸಬೇಕೆಂಬುದು ನಮ್ಮ ಆಸೆ. ಯಾವಾಗಲೂ ಒಂದೇ ರೀತಿಯ ಮೆನು ಇದ್ದರೆ ಗ್ರಾಹಕರು ಬೇಸರಗೊಳ್ಳುತ್ತಾರೆ. ಆ ಕಾರಣಕ್ಕಾಗಿ ಪ್ರತಿ ವರ್ಷ ಆಹಾರೋತ್ಸವವನ್ನು ಏರ್ಪಡಿಸುತ್ತಿದ್ದೇವೆ. ಕಳೆದ ಬಾರಿ ಪಂಜಾಬಿ ಆಹಾರೋತ್ಸವ ನಡೆಸಿದ್ದೆವು. ಅದಕ್ಕೂ ಹಿಂದಿನ ಬಾರಿ ಬಂಗಾಲಿ ಆಹಾರೋತ್ಸವ ಏರ್ಪಡಿಸಿದ್ದೆವು. ಜನರಿಗೆ ಭಿನ್ನ ರುಚಿ ಹಾಗೂ
ಫ್ಲೇವರ್ ನೀಡಬೇಕು. ಜನರು ತೃಪ್ತಿಯಿಂದ ತಿಂದು ಹೋಗಬೇಕು ಎನ್ನುವುದು ನಮ್ಮ ಉದ್ದೇಶ’ ಎಂದು ಸ್ಟೀಟ್ ಫುಡ್ ಫೆಸ್ಟಿವಲ್‌ನ ಉದ್ದೇಶವನ್ನು ವಿವರಿಸುತ್ತಾರೆ ಹೋಟೆಲ್ ಮ್ಯಾನೇಜರ್ ವಿಶಾಲ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಅಭಿಷೇಕ್.

2014ರಲ್ಲಿ ಈ ಹೋಟೆಲ್ ಆರಂಭವಾಗಿದ್ದು ಇಲ್ಲಿ ಬಂಗಾಳ, ಒಡಿಶಾ, ಬಿಹಾರ ಸೇರಿದಂತೆ ದೇಶದ ಅನೇಕ ರಾಜ್ಯದ ಶೆಫ್‌ಗಳು ತಮ್ಮ ತಮ್ಮ ರಾಜ್ಯದ ವಿಶೇಷ ಖಾದ್ಯಗಳನ್ನು ತಯಾರಿಸಿ ಗ್ರಾಹಕರ ಹೊಟ್ಟೆ ತಣಿಸುತ್ತಿದ್ದಾರೆ. ಆಹಾರೋತ್ಸವದ ಸಮಯದಲ್ಲಿ ಬ್ರ್ಯಾಂಡ್‌ ಶೆಫ್‌ ಹರ್ಮನ್ ಬಂದು ಇಲ್ಲಿನ ಶೆಫ್‌ಗಳಿಗೆ ತರಬೇತಿ ನೀಡುತ್ತಾರಂತೆ.

ಸಿಗ್ರಿ ಗ್ಲೋಬಲ್ ಗ್ರಿಲ್‌ ಹೋಟೆಲ್‌

ವಿಶೇಷ: ಸ್ಟ್ರೀಟ್ ಫುಡ್‌ ಫೆಸ್ಟಿವಲ್

ಕೊನೆ ದಿನ: ಆಗಸ್ಟ್‌ 30. ಸಮಯ: ಮಧ್ಯಾಹ್ನ 12 ರಿಂದ 3. ಸಂಜೆ 6.30ರಿಂದ 11.30

ಒಬ್ಬರಿಗೆ: ಲಂಚ್ ಒಬ್ಬರಿಗೆ ₹ 525, ಡಿನ್ನರ್ ಒಬ್ಬರಿಗೆ ₹ 795 (ಬಫೆ ವ್ಯವಸ್ಥೆ ಇದೆ).

ವಿಳಾಸ: ಸಿಗ್ರಿ ಗ್ಲೋಬಲ್‌ ಗ್ರಿಲ್‌, ಎರಡನೇ ಮಹಡಿ, 5ನೇ ಎ ಕ್ರಾಸ್‌ ಸರ್ವೀಸ್‌ ರಸ್ತೆ, ಕಲ್ಯಾಣನನಗರ, ಕಮ್ಮನಹಳ್ಳಿ. 

ಸಂಪರ್ಕ ಸಂಖ್ಯೆ: 080 2545 1318

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !