ಶುಕ್ರವಾರ, ಮಾರ್ಚ್ 5, 2021
25 °C
ಅಸಮಾಧಾನವಿದ್ದರೆ ಅದನ್ನು ದಾಖಲಿಸಲು ನಾಗರಿಕ ವಿಧಾನವಿದೆ ಎಂಬ ಅರಿವಿರಬೇಕು

ರಾಷ್ಟ್ರೀಯ ಚಾರಿತ್ರ್ಯ ಪ್ರಜ್ಞೆ ಮುಕ್ಕಾಗದಿರಲಿ

ಅರವಿಂದ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

ಅನೇಕ ರಾಷ್ಟ್ರಗಳಲ್ಲಿ ರಾಷ್ಟ್ರ ನಾಯಕರ ಕೊಲೆಗಳಾಗಿವೆ. ಇಸ್ರೇಲ್‌ನ ಪ್ರಧಾನಿಯಾಗಿದ್ದ ಎಜ್ಜಾಕ್ ರಾಬಿನ್ ಅವರನ್ನು ಕಟ್ಟರ್ ಯಹೂದ್ಯನೇ ಕೊಂದ ಘಟನೆ ನಡೆದಿದೆ. ಆದರೆ ಯಾವ ದೇಶವೂ ತನ್ನ ನಾಯಕನ ಕೊಲೆಯನ್ನು ಸಮರ್ಥಿಸುವುದಿಲ್ಲ. ಏಕೆಂದರೆ ಒಬ್ಬ ಮನುಷ್ಯನಿಗೆ ಹೇಗೆ ಶೀಲ ಎಂದು ಇರುತ್ತದೆಯೋ, ಹಾಗೆಯೇ ಒಂದು ರಾಷ್ಟ್ರಕ್ಕೆ ರಾಷ್ಟ್ರೀಯ ಶೀಲ ಎನ್ನುವುದು ಇರುತ್ತದೆ ಎಂಬ ಅರಿವು ಆ ರಾಷ್ಟ್ರದ ಜನರಲ್ಲಿ ಇರುತ್ತದೆ. ಗಾಂಧಿ ಹತ್ಯೆಯ ಅಣಕು ಪ್ರದರ್ಶನದ ಸಂಭ್ರಮಾಚರಣೆಯ ಸುದ್ದಿ ನಾವು ನಮ್ಮ ರಾಷ್ಟ್ರೀಯ ಶೀಲದ ಬಗ್ಗೆಯೇ ಪ್ರಜ್ಞೆ ಕಳೆದುಕೊಂಡಿದ್ದೇವೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ.

ರಾಷ್ಟ್ರೀಯ ಶೀಲದ ಅರಿವನ್ನು ಹುಟ್ಟಿಸುವುದು ಆ ದೇಶದ ನಾಗರಿಕತೆ. ಹಿಂದೂ ನಾಗರಿಕತೆ ಭಾರತದ ಪ್ರಧಾನ ನಾಗರಿಕತೆ. ಗಾಂಧಿಯೂ ತನ್ನನ್ನು ತಾನು ಹಿಂದೂ ಎಂದು ಘೋಷಿಸಿಕೊಂಡವರು. ಗಾಂಧಿ ಹತ್ಯೆ ಮಾಡಿದವರು, ಅದರ ಅಣಕು ಪ್ರದರ್ಶನ ಮಾಡಿದವರೂ ಹಿಂದೂಗಳೇ. ಗಾಂಧಿಯೂ ರಾಮನ ಆರಾಧಕರು. ಗಾಂಧಿ ಹತ್ಯೆಯ ಅಣಕು ಪ್ರದರ್ಶನ ಮಾಡಿದವರೂ ರಾಮನ ಆರಾಧಕರೆಂದು ಹೇಳಿಕೊಳ್ಳುತ್ತಾರೆ. ಆದ್ದರಿಂದ ಹಿಂದೂ ನಾಗರಿಕತೆಯ ಆಧಾರದಲ್ಲೇ ಇದನ್ನು ಅರ್ಥ ಮಾಡಿಕೊಳ್ಳಬೇಕು. ರಾಮಾಯಣದಲ್ಲಿ ರಾವಣ ವಧೆಯಾದಾಗ ವಾನರರು ರಾವಣನ ಹೆಣವನ್ನು ತುಳಿಯಲು ಹೋಗುತ್ತಾರೆ. ಆಗ ರಾಮ ಎಲ್ಲರನ್ನೂ ಹಿಂದಕ್ಕೆ ಸರಿಸಿ ರಾವಣನ ಹೆಣಕ್ಕೆ ನಮಸ್ಕರಿಸಿ ತನ್ನ ಶಾಲನ್ನು ಹೆಣಕ್ಕೆ ಹೊದೆಸಿ ಲಕ್ಷ್ಮಣನಿಗೆ, ‘ಲಂಕೆಯ ಚಕ್ರವರ್ತಿಗೆ ಸಲ್ಲಬೇಕಾದ ಎಲ್ಲ ಗೌರವಗಳ ಸಹಿತ ಅಂತ್ಯಸಂಸ್ಕಾರವನ್ನು ನಡೆಸಿ ಬಾ’ ಎಂದು ತಿಳಿಸಿ ಶಿಬಿರಕ್ಕೆ ಹೋಗುತ್ತಾನೆ. ಇಂತಹ ನಡವಳಿಕೆ ಗಳಿಂದಾಗಿಯೇ ರಾಮ ಮರ್ಯಾದಾ ಪುರುಷೋತ್ತಮ. ನರ ಬಲಿಯನ್ನು ನಿಲ್ಲಿಸಿ, ಪ್ರಾಜ್ಞರ ಜಿಜ್ಞಾಸೆಗೆ ದಕ್ಕದ ವಿಚಾರವನ್ನು ಒಂದೇ ಮಾತಿನಲ್ಲಿ ‘ದ್ರೌಪದಿ ಕೇವಲ ಯುಧಿಷ್ಠಿರನೊಬ್ಬನ ಪತ್ನಿಯಾಗಿದ್ದರೂ ಆಕೆಯನ್ನು ಅಡವಿಡುವ ಅಧಿಕಾರ ಯುಧಿಷ್ಠಿರನಿಗಿಲ್ಲ. ಏಕೆಂದರೆ ಪತ್ನಿ ಸಹಧರ್ಮಿಣಿಯೇ ಹೊರತು ಅಡವಿಡಲಿಕ್ಕೆ ವಸ್ತುವಲ್ಲ’ ಎನ್ನುವ ಛಾತಿ ಇದ್ದುದಕ್ಕೇ ಕೃಷ್ಣನನ್ನು ಜಗದ್ಗುರುವೆಂದು ಭಾವಿಸಿಕೊಂಡದ್ದು. ಗಾಂಧಿಯ ರಾಜಕೀಯ ಜೀವನವನ್ನು ಕಳೆದು ನೋಡಿದರೆ, ‘ದಾಸ್ಯದ ವಿರುದ್ಧ ಹೋರಾಡುವುದು ರಾಜದ್ರೋಹವಾಗುವುದಾದರೆ ಜೈಲಿನಿಂದ ಹೊರಬಂದು ಮತ್ತೆ ರಾಜದ್ರೋಹವನ್ನೇ ಮಾಡಲಿದ್ದೇನೆ’ ಎಂದು ನ್ಯಾಯಾಧೀಶ ಬ್ಲೂಮ್ ಫೀಲ್ಡ್‌ಗೆ ಹೇಳುವ ಗಾಂಧಿಯೂ ರಾಮ-ಕೃಷ್ಣರ ಪರಂಪರೆಯ ಮುಂದುವರಿದ ಕೊಂಡಿ ಎನ್ನುವುದು ಅರ್ಥವಾಗುತ್ತದೆ.

ಅವರವರ ದೃಷ್ಟಿಕೋನಕ್ಕೆ ಅನುಗುಣವಾಗಿ ಗಾಂಧಿಯಲ್ಲಿ ಹಲವು ತಪ್ಪುಗಳು ಹಲವರಿಗೆ ಕಾಣಬಹುದು. ತಮಗಿದ್ದ ಸ್ಥಾನಮಾನ ಕಳೆದುಹೋಗಲು ಗಾಂಧಿ ಕಾರಣರಾದರೆಂದು ಬ್ರಾಹ್ಮಣ ಹಿತಾಸಕ್ತಿಗೆ ಅಸಮಾಧಾನ. ಗಾಂಧಿ ಇಲ್ಲದಿದ್ದರೆ ತಮಗೆ ಜಾಸ್ತಿ ಸ್ಥಾನಮಾನ ಸಿಗುತ್ತಿತ್ತೆಂದು ದಲಿತರಿಗೆ, ಆ ಕಾಲಕ್ಕೆ ತಮ್ಮ ಸಿದ್ಧಾಂತ ಬೆಳೆಯದಂತೆ ತಡೆಯುತ್ತಿದ್ದಾರೆಂದು ಮಾರ್ಕ್ಸ್‌ವಾದಿಗಳಿಗೆ ಗಾಂಧಿ ಮೇಲೆ ಅಸಮಾಧಾನ. ಆ ಕಾಲದ ಮುಸ್ಲಿಂ ರಾಜಕಾರಣಕ್ಕಂತೂ ಗಾಂಧಿ ವಿರೋಧಿಯೇ. ಗಾಂಧಿ ಹಿಂದೂ ಅಲ್ಲದಿದ್ದರೆ ದೇಶವಿಭಜನೆಯ ಪ್ರಶ್ನೆಯೇ ಬೇರೆಯಾಗುತ್ತಿತ್ತು. ಗಾಂಧಿಯ ಆರ್ಥಿಕ ಚಿಂತನೆಗಳು ತಮ್ಮ ಪರವಾಗಿಲ್ಲವೆಂದು ಉದ್ಯಮಿಗಳಿಗೆ ಅಸಮಾಧಾನ. ಆದರೆ ಯಾವುದೇ ದೇಶವಿರಲಿ, ಧರ್ಮವಿರಲಿ, ಜಾತಿಯಿರಲಿ ಅವರೆಲ್ಲರಿಗೂ ಕೊಡಬಹುದಾದದ್ದನ್ನು ಹೊಂದಿರುವ ಒಬ್ಬನೇ ವ್ಯಕ್ತಿ ಎಂದರೆ ಗಾಂಧಿ. ಬರಿಗಾಲಿನಲ್ಲಿ ದಲಿತ ಕೇರಿಯನ್ನು ಸ್ವಚ್ಛಗೊಳಿಸಿದವರು ಗಾಂಧಿ. ‘ಬ್ರಾಹ್ಮಣರು ನಮಗೆ ಉದಾತ್ತ ಮೌಲ್ಯಗಳನ್ನು ಕಲಿಸಿದ್ದಾರೆ’ ಎಂದವರೂ ಗಾಂಧಿಯೇ. ತನ್ನ ಪ್ರಾಣ ಕೊಡಲು ಮುಂದೆ ನಿಂತು ಮುಸ್ಲಿಮರನ್ನು ರಕ್ಷಿಸಿದ್ದೂ ಗಾಂಧಿಯೇ. ಒಬ್ಬ ಮಹಿಳೆ, ಗಾಂಧಿ ಪ್ರತಿಕೃತಿಗೆ ಗುಂಡು ಹೊಡೆಯುವಷ್ಟು ಅತಿಯಾದ ಸ್ವಾತಂತ್ರ್ಯವನ್ನು ಕೊಡಿಸಿದ್ದೂ ಗಾಂಧಿಯೇ. ಒಂದಲ್ಲ ಒಂದು ಕಾರಣಕ್ಕೆ ಗಾಂಧಿಯಿಂದ ಏನನ್ನೂ ಪಡೆದುಕೊಳ್ಳದಿರುವವರು ದೇಶದಲ್ಲಿ ಯಾರೂ ಇರಲಾರರು. ಮಾತ್ರವಲ್ಲ; ಭಾರತೀಯರ ಅನ್ನವನ್ನು ಕಸಿದ ಬ್ರಿಟಿಷ್ ರಾಣಿಯ ಮದುವೆಗೆ ಟೇಬಲ್ ಕ್ಲಾತ್ ಅನ್ನು ಕೈಯ್ಯಾರೆ ನೇಯ್ದು ಉಡುಗೊರೆ ಕೊಟ್ಟವರೂ ಗಾಂಧಿಯೇ. ಬೂಟುಕಾಲಿನ ಒದೆತಕ್ಕೆ ಪ್ರತಿಯಾಗಿ ಬ್ರಿಟಿಷರಿಗೆ ಕೊಡಲು ಗಾಂಧಿ ಬಳಿ ಉಡುಗೊರೆ ಇತ್ತು. ಯಾರಿಗೆ ಅರ್ಥವಾಗದಿದ್ದರೂ ಇದು ಬ್ರಿಟಿಷರಿಗೆ ಅರ್ಥವಾಗಿದೆ. ಒಬ್ಬ ಬ್ರಿಟಿಷೇ ಗಾಂಧಿ ಮೇಲೆ ಸಿನಿಮಾ ತೆಗೆದು ಜಗತ್ತಿನಾದ್ಯಂತ ಅವರ ಬಗ್ಗೆ ಹೇಳುತ್ತಾ ಹೋದರು.

ಗಾಂಧಿಯಲ್ಲಿ ದೋಷಗಳಿರಬಹುದು. ರಾಮನ ಮುಖದಲ್ಲೂ ವಾಲಿವಧೆಯ ಕಲೆ ಇದೆ. ಕೃಷ್ಣನ ಮುಖದಲ್ಲೂ ಕರ್ಣನ ಕೊಲೆಯ ಕಲೆ ಇದೆ. ಹಿಂದೂ ಧರ್ಮ ಏನು ಹೇಳುತ್ತದೆ? ನಿರಾಕಾರವೂ, ಶಕ್ತಿಸ್ವರೂಪವೂ ಆದ ‘ಪರಬ್ರಹ್ಮ’ವನ್ನು ಬಿಟ್ಟರೆ ಉಳಿದೆಲ್ಲ ದೇವರುಗಳೂ ಅಪರಿಪೂರ್ಣರೆಂದೇ ಹಿಂದೂ ಧರ್ಮ ಭಾವಿಸುತ್ತದೆ. ಹಾಗಿರುವಾಗ ಗಾಂಧಿಯಿಂದ ತಪ್ಪುಗಳಾಗಿದ್ದರೆ ಅದು ಹಿಂದೂ ನಾಗರಿಕತೆಗೆ ವಿರುದ್ಧವಾದದ್ದೇನೂ ಅಲ್ಲ. ತಪ್ಪನ್ನು ವಿಮರ್ಶಿಸುವುದನ್ನು ಯಾರೂ ತಡೆಯುವುದಿಲ್ಲ. ವಿಶೇಷವಾಗಿ ಗಾಂಧಿಗೆ ಸಂಬಂಧಿಸಿದ ನಿಂದನೆಗಳನ್ನು ಯಾವ ಸಮುದಾಯವೂ ತಡೆಯಲು ಹೋಗುವುದಿಲ್ಲ. ಏಕೆಂದರೆ ಆಸ್ಟ್ರೇಲಿಯಾದಿಂದ ಲ್ಯಾಟಿನ್ ಅಮೆರಿಕದವರೆಗೂ ಬೃಹತ್ ವ್ಯಾಪಕತ್ವವಿರುವ ಗಾಂಧಿ ಬಂದದ್ದು ಅತೀ ಚಿಕ್ಕದಾದ ಬನಿಯಾ ಸಮುದಾಯದಿಂದ. ಆದ್ದರಿಂದ ಗಾಂಧಿ ಬಗ್ಗೆ ಏನು ಬೇಕಾದರೂ ಹೇಳಿ ದಕ್ಕಿಸಿಕೊಳ್ಳಬಹುದು. ಆದರೆ ವಿರೋಧಿಸಲು ನಾಗರಿಕ ವಿಧಾನವಿದೆ. ಏಕೆಂದರೆ ಇದು ರಾಷ್ಟ್ರೀಯ ಶೀಲದ ಪ್ರಶ್ನೆ. ಒಬ್ಬ ಭಾರತೀಯ ವಿದೇಶಕ್ಕೆ ಹೋದಾಗ ತಾನು ಗಾಂಧಿ ನಾಡಿನವನು ಎಂದಾಗ ಆತನಿಗೆ ಸಲ್ಲುವ ಗೌರವ, ಗೋಡ್ಸೆ ನಾಡಿನವನು ಎಂದಾಗ ಸಲ್ಲುವುದಿಲ್ಲ ಎನ್ನುವುದು ಗೊತ್ತಿರಬೇಕಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ದೇಶ ವಿಭಜನೆಯ ಕಾಲದ ಸಂಗತಿಗಳೇ ಗಾಂಧಿ ಹತ್ಯೆಗೆ ಕಾರಣ ಎಂಬ ಅರ್ಧಸತ್ಯದ ನಿಲುವನ್ನು ಬಿಡಬೇಕು. ಅದು ಆ ಕ್ಷಣದ ಕಾರಣವಿರಬಹುದು. ಆದರೆ ಗಾಂಧಿ ಹತ್ಯೆಗೆ ಬೇಕಾದ ಪ್ರಚೋದನೆಯ ಮನೋಭಾವ ಆ ಕ್ಷಣದ್ದಲ್ಲ. ಅದಕ್ಕಿಂತ ಮೊದಲು ಐದು ಬಾರಿ ಗಾಂಧಿ ಹತ್ಯೆಯ ಪ್ರಯತ್ನಗಳಾಗಿದ್ದವು. ಮೊದಲ ಪ್ರಯತ್ನ 1934ರ ಜೂನ್‌ 25ರಂದು ಪುಣೆಯಲ್ಲಿ ನಡೆದ ದಲಿತ ಯಾತ್ರೆಯಲ್ಲಿ ಗಾಂಧಿ ಭಾಗವಹಿಸಿದಾಗ ಆಗಿತ್ತು. 1934ರಲ್ಲಿ ದೇಶವಿಭಜನೆಯ ಕಾಲದ ಯಾವ ಸಂಗತಿಗಳೂ ಇರಲಿಲ್ಲ. ಆದರೂ ಗಾಂಧಿ ಹತ್ಯೆಯ ಪ್ರಯತ್ನವೇಕಾಯಿತು? ಉತ್ತರವಿಲ್ಲ. ಇಂತಹುದೆಲ್ಲದರ ಹಿಂದೆ ಹಣಕಾಸಿನ ಹಿತಾಸಕ್ತಿಯ ಒಂದು ಪಾತ್ರವಿರುತ್ತದೆ. 1757ರ ಪ್ಲಾಸಿ ಕದನದಲ್ಲಿ ಸಿರಾಜ್ ಉದ್ ದೌಲ ಸೋತದ್ದು ರಾಬರ್ಟ್ ಕ್ಲೈವನ ಯುದ್ಧ ಸಾಹಸದಿಂದಲ್ಲ; ರಾಯ್ ದುರ್ಲಭ್ ಮತ್ತು ಜಗತ್ ಸೇಠ್ ಎಂಬ ವ್ಯಾಪಾರಿಗಳು ಪೂರೈಸಬೇಕಾಗಿದ್ದ ಹಣವನ್ನು ಪೂರೈಸದೆ ಇದ್ದುದರಿಂದ.

ಗಾಂಧಿ ಹತ್ಯೆಯನ್ನು ಪ್ರಚೋದಿಸಿದ ಮನಸ್ಥಿತಿಯನ್ನೂ ಕೆದಕುತ್ತಾ ಹೋದರೆ ಹೊಸ ಸತ್ಯಗಳು ಕಾಣಬಹುದು. ಆದರೆ ಅದರಿಂದ ಉಪಯೋಗವಿಲ್ಲ. ಹಾಗೆಂದು ಇಂತಹ ಅಣಕು ಪ್ರದರ್ಶನಗಳು ನಡೆದಾಗ ‘ಇದರಿಂದ ಗಾಂಧಿಗೆ ಯಾವ ಅವಮಾನವೂ ಇಲ್ಲ’ ಎಂದು ಸುಮ್ಮನಿರುವುದು ಸರಿಯಲ್ಲ. ಮಹಾಭಾರತದಲ್ಲಿ ದುರ್ಯೋಧನ ‘ಕೃಷ್ಣನನ್ನು ಅವಮಾನಿಸುತ್ತೇನೆ’ ಎಂದಾಗ ಭೀಷ್ಮ,‘ಕೃಷ್ಣನನ್ನು ನೀನು ಸನ್ಮಾನಿಸಲೂ ಸಾಧ್ಯವಿಲ್ಲ. ಅವಮಾನಿಸಲೂ ಸಾಧ್ಯವಿಲ್ಲ. ಅವನು ಸನ್ಮಾನ, ಅವಮಾನಗಳೆರಡನ್ನೂ ಮೀರಿದವನು’ ಎನ್ನುತ್ತಾನೆ. ಹಾಗೆಯೇ ಗಾಂಧಿಯಂತಹ ವ್ಯಕ್ತಿತ್ವಗಳನ್ನು ಸನ್ಮಾನಿಸಲೂ ಸಾಧ್ಯವಿಲ್ಲ, ಅವಮಾನಿಸಲೂ ಸಾಧ್ಯವಿಲ್ಲ. ಆದರೆ ದೇಶಕ್ಕೆ ಒಂದು ವಿವೇಕ ಎಂಬುದು ಇರುತ್ತದೆ; ಇರಬೇಕು. ಗಾಂಧಿ ದ್ವೇಷವನ್ನು ತೀರಾ ಅನಾಗರಿಕವಾಗಿ ಪ್ರದರ್ಶಿಸುವಾಗ ಆಕ್ಷೇಪವನ್ನಾದರೂ ದಾಖಲಿಸಬೇ
ಕಾದ್ದು ನಾಗರಿಕ ಸಮಾಜದ ಜವಾಬ್ದಾರಿಯಾಗಿರುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು