ಬುಧವಾರ, ಮೇ 18, 2022
23 °C

ನಿಡಗುಂದಿಯಲ್ಲೂ ಮೈದಳೆಯುತ್ತಿದೆ ಉದ್ಯಾನ

ಚಂದ್ರಶೇಖರ ಕೋಳೇಕರ Updated:

ಅಕ್ಷರ ಗಾತ್ರ : | |

Prajavani

ನಿಡಗುಂದಿ: ಪಟ್ಟಣದ ಹೊರ ವಲಯದಲ್ಲಿನ ಆಲಮಟ್ಟಿ ರಸ್ತೆಯಲ್ಲಿ ಅರಣ್ಯ ಇಲಾಖೆಗೆ ಸೇರಿರುವ 6.21 ಎಕರೆ ಜಾಗದಲ್ಲಿ, ₹ 2.6 ಕೋಟಿ ವೆಚ್ಚದಲ್ಲಿ ಸುಂದರ ಉದ್ಯಾನವೊಂದು ನಿರ್ಮಾಣವಾಗುತ್ತಿದೆ. 

ಕೆಬಿಜೆಎನ್‌ಎಲ್‌ ನಿರ್ಮಿಸುತ್ತಿರುವ ಈ ಉದ್ಯಾನದ ಕಾಮಗಾರಿಯು ಸೆಪ್ಟೆಂಬರ್ ಅಂತ್ಯಕ್ಕೆ ಪೂರ್ಣಗೊಂಡು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ. ಉದ್ಯಾನದ ಹಿಂದೆ 2.35 ಎಕರೆಯಲ್ಲಿ ಸಸಿಗಳ ಪಾರ್ಕ್‌, ಅರ್ಧ ಎಕರೆಯಲ್ಲಿ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. 

ಉದ್ಯಾನ ನಿರ್ಮಾಣಕ್ಕೆ ವಿದ್ಯುತ್‌ ಮಾರ್ಗಗಳು ತಡೆಯಾಗಿವೆ. ಇದರಿಂದ ಕಾಮಗಾರಿ ವಿಳಂಬವಾಗುತ್ತಿದ್ದು, ವಿದ್ಯುತ್‌ ಕಂಬಗಳ ಸ್ಥಳಾಂತರಕ್ಕೆ ಹೆಸ್ಕಾಂ ಅನುಮತಿಯೊಂದಿಗೆ ₹ 22 ಲಕ್ಷ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ವಿದ್ಯುತ್ ಮಾರ್ಗದ ಸ್ಥಳಾಂತರದ ಬಳಿಕ ಕಾಮಗಾರಿ ವೇಗ ಇನ್ನಷ್ಟು ಹೆಚ್ಚಲಿದೆ. 

ಪಟ್ಟಣದಲ್ಲಿ ಯಾವುದೇ ಉದ್ಯಾನವಿಲ್ಲ. ಆರೋಗ್ಯ ಸಚಿವ ಶಿವಾನಂದ ಪಾಟೀಲರ ಇಚ್ಛಾಶಕ್ತಿಯಿಂದ ಕೆಬಿಜೆಎನ್‌ಎಲ್, ಅರಣ್ಯ ಇಲಾಖೆ ವತಿಯಿಂದ ಉದ್ಯಾನ ಕಾಮಗಾರಿ ನಡೆಯುತ್ತಿದೆ. ಉದ್ಯಾನ ನಿರ್ಮಾಣ ಪೂರ್ಣಗೊಂಡ ಬಳಿಕ ನಿರ್ವಹಣೆ ಹೊಣೆಯನ್ನು ನಿಡಗುಂದಿ ಪಟ್ಟಣ ಪಂಚಾಯ್ತಿಗೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಉದ್ಯಾನದ ವಿಶೇಷ: ವಾಕಿಂಗ್‌ ಪಾತ್‌, ಜಿಮ್‌ (ವ್ಯಾಯಾಮ ಮಾಡಲು ಅಗತ್ಯವಿರುವ ಸಲಕರಣೆ) ಹಾಗೂ ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಉದ್ಯಾನದಲ್ಲಿ ಅಳವಡಿಸಲಾಗುತ್ತಿದೆ ಎಂದು ಉದ್ಯಾನ ನಿರ್ಮಾಣದ ಉಸ್ತುವಾರಿ ಹೊತ್ತ ಆರ್‌ಎಫ್‌ಒ ಮಹೇಶ ಪಾಟೀಲ ತಿಳಿಸಿದರು.

ಇಡೀ ಉದ್ಯಾನದ ಆರು ಎಕರೆ ಸುತ್ತಲೂ ಚೈನ್ ಲಿಂಕ್ ಮೆಸ್‌ ಅಳವಡಿಸಲಾಗುವುದು. ಆಕರ್ಷಕ ದ್ವಾರ ಬಾಗಿಲು, ವಿವಿಧ ಗಿಡಗಳನ್ನು ಬೆಳೆಸುವುದು, ಹಸಿರು ಹುಲ್ಲುಹಾಸು, ವಿವಿಧ ಜಾತಿಯ ಹೂ ಗಿಡಗಳು, ಅಲಂಕಾರಿಕ ಗಿಡಗಳನ್ನು ಬೆಳೆಸಲಾಗುವುದು. ಉದ್ಯಾನದ ಮಧ್ಯದಲ್ಲಿ ಒಣಹುಲ್ಲು ಹಾಗೂ ಆಪಿನ ಪ್ಯಾರಾಗೋಲಾ ನಿರ್ಮಾಣ ಹಾಗೂ ಕುಸರಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರಿಗೆ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಇರಲಿದೆ ಎಂದರು.

ಆಲಮಟ್ಟಿಯಿಂದ ನೀರು ಪೂರೈಕೆ: ಉದ್ಯಾನಕ್ಕೆ ಇಲ್ಲಿಂದ 4 ಕಿ.ಮೀ ದೂರದ ಆಲಮಟ್ಟಿ ಹಿನ್ನೀರಿನ ಪಾರ್ವತಿ ಕಟ್ಟಾ ಸೇತುವೆ ಬಳಿಯಿಂದ ಪೈಪ್‌ಲೈನ್‌ ಮೂಲಕ ನೀರು ಪೂರೈಸಲಾಗುವುದು. ಉದ್ಯಾನದಲ್ಲಿಯೇ 50 ಸಾವಿರ ಲೀಟರ್‌ ನೀರಿನ ಸಂಗ್ರಹದ ಟ್ಯಾಂಕ್ ನಿರ್ಮಿಸಲಾಗಿದೆ ಎಂದು ಪಾಟೀಲ ತಿಳಿಸಿದರು.

ಶಿವನ ಮೂರ್ತಿ ಪ್ರಸ್ತಾವನೆ

ಉದ್ಯಾನದಲ್ಲಿ 20 ಅಡಿ ಎತ್ತರದ ಕುಳಿತ ಭಂಗಿಯಲ್ಲಿರುವ ಬೃಹತ್ ಶಿವನ ಮೂರ್ತಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಮುರ್ಡೇಶ್ವರದಲ್ಲಿ ಶಿವನಮೂರ್ತಿ ನಿರ್ಮಿಸಿದ ಕಲಾವಿದರ ತಂಡವೇ ಇಲ್ಲಿಯೂ ಶಿವನ ಮೂರ್ತಿ ನಿರ್ಮಿಸಲಿದೆ. ಅದಕ್ಕಾಗಿ ಈ ವರ್ಷದ ಯೋಜನೆಯಲ್ಲಿ ₹ 25 ಲಕ್ಷ ತೆಗೆದಿರಿಸಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ.ನಾಯಕ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು