ಕರಾಟೆ ಪ್ರವೀಣೆ ಭಾವನಾಗೆ ಒಲಿದ ‘ಚಿನ್ನ’

7
ಕೇರಳದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಾಧನೆ:

ಕರಾಟೆ ಪ್ರವೀಣೆ ಭಾವನಾಗೆ ಒಲಿದ ‘ಚಿನ್ನ’

Published:
Updated:
Prajavani

ಚಾಮರಾಜನಗರ: ಆತ್ಮರಕ್ಷಣೆಗಾಗಿಯೇ ಇರುವಂತಹ ಕಲೆ ಕರಾಟೆ. ಅತಿ ವೇಗವಾಗಿ ದೇಹದ ಚಲನೆಯೊಂದಿಗೆ ಮನಸ್ಸನ್ನು ಕ್ರೀಯಾಶೀಲತೆಯಿಂದ ಇರಿಸಿಕೊಳ್ಳಲು ಕರಾಟೆ ಸಹಕಾರಿ. ಇಂತಹ ಕರಾಟೆಯಲ್ಲಿ ನಗರದ 14 ವರ್ಷದ ಬಾಲಕಿ ಎಂ.ಭಾವನಾ ‘ಚಿನ್ನ’ದ ಸಾಧನೆ ಮಾಡಿದ್ದಾಳೆ.

ನಗರದ ಮಾರುತಿ ಲೇಔಟ್ ನಿವಾಸಿಗಳಾದ ಮಂಜುನಾಥ್, ಶ್ವೇತಾ ದಂಪತಿಯ ಪುತ್ರಿಯಾಗಿರುವ ಈಕೆ, ಇತ್ತೀಚೆಗೆ ಕೇರಳದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಚಾಮರಾಜನಗರ ನಾಗಮಾರ್ಷಲ್ ಆರ್ಟ್ಸ್ ಕರಾಟೆ ಶಾಲೆಯ ವಿದ್ಯಾರ್ಥಿಯಾಗಿ ಭಾಗವಹಿಸಿ ಈ ಸಾಧನೆ ಮಾಡಿದ್ದಾಳೆ. ಕಟಾ ಹಾಗೂ ಕುಮಿತೆ ವಿಭಾಗದಲ್ಲಿ ಬ್ರೌನ್ ಬೆಲ್ಟ್‌ನಲ್ಲಿ ಪ್ರಥಮ ಸ್ಥಾನ ಪಡೆದು 2 ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾಳೆ.

ಕರಾಟೆಯಲ್ಲಿ ಬ್ರೌನ್ ಬೆಲ್ಟ್ 2ನೇ ಹಂತ ತಲುಪಿರುವ ಭಾವನಾ ಜೆಎಸ್‌ಎಸ್‌ ಪಬ್ಲಿಕ್‌ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ. ಶಾಲೆಯಲ್ಲಿ ನಡೆಯುವ ಸಾಂಸ್ಕೃತಿಕ ಹಾಗೂ ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿಯನ್ನು ಪಡೆದಿದ್ದಾಳೆ. ಓದಿನಲ್ಲೂ ಮುಂದೆ ಇರುವ ಇವರು ಶೇ 80ರಷ್ಟು ಅಂಕಗಳನ್ನು ಪಡೆದು ಶಿಕ್ಷಣದಲ್ಲಿಯೂ ಉತ್ತಮ ಸಾಧನೆ ಮಾಡುತ್ತಿದ್ದಾಳೆ.

ಭಾವನಾಗೆ ಈವರೆಗೆ 3 ಚಿನ್ನದ ಪದಕ, 2 ಬೆಳ್ಳಿ ಪದಕ ಸೇರಿದಂತೆ ಒಟ್ಟು 12 ಪದಕಗಳು 10ಕ್ಕೂ ಹೆಚ್ಚು ಪಾರಿತೋಷಕಗಳು ಸಿಕ್ಕಿವೆ. ಕರಾಟೆ ಶಾಲೆಯಲ್ಲಿ ಎಂ.ರಾಜೇಂದ್ರ ಅವರ ಗರಡಿಯಲ್ಲಿ ಕಲಿತದ್ದನ್ನು ಮನೆ ಹಾಗೂ ಶಾಲೆಯಲ್ಲಿ ಅಭ್ಯಾಸ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದಾಳೆ. ಸಾಧನೆಗೆ ಪೋಷಕರು, ಸ್ನೇಹಿತರ ಉತ್ತೇಜನವೂ ಇದೆ. 

‘ಭಾವನಾ ಬಹುಮುಖ ಪ್ರತಿಭೆ. ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಆಸಕ್ತಿ, ಶ್ರದ್ಧೆಯಿಂದ ತರಬೇತಿ ಪಡೆಯುತ್ತಾಳೆ. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವಂತೆ ಅವರ ಪಠ್ಯೇತರ ಚಟುವಟಿಕೆಗೂ ಹೆಚ್ಚಿನ ಉತ್ತೇಜನ ನೀಡಲು ಪೋಷಕರ ಮುಂದಾಗಬೇಕು. ಆಗ ಮಾತ್ರ ದೈಹಿಕ, ಮಾನಸಿಕವಾಗಿ ಮಕ್ಕಳು ಸದೃಢರಾಗುತ್ತಾರೆ’ ಎಂದು ಭಾವನಾ ಅವರ ಕರಾಟೆ ಗುರು ಎಂ.ರಾಜೇಂದ್ರ ‘ಪ್ರಜಾವಾಣಿ’ಗೆ ಹೇಳಿದರು.

‘ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಕರಾಟೆ ಕಲಿಕೆಗೆ ಸರ್ಕಾರ ಆಸಕ್ತಿ ತೋರಬೇಕಿದೆ. ಜಪಾನ್‌, ಜರ್ಮನಿಗಳಲ್ಲಿ ದೈಹಿಕ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ ನೀಡುವಂತೆ ಇಲ್ಲೂ ಪ್ರಾಮುಖ್ಯ ನೀಡಬೇಕು’ ಎಂದು ಸಲಹೆ ನೀಡುತ್ತಾರೆ. 

‘ಮಕ್ಕಳಲ್ಲಿರುವ ಕ್ರೀಯಾಶೀಲ ಚಟುವಟಿಕೆಗಳಿಗೆ ಬಾಲ್ಯದಿಂದಲೇ ಪ್ರೋತ್ಸಹ ನೀಡಬೇಕು. ಈ ನಿಟ್ಟಿನಲ್ಲಿ ಪೋಷಕರ ಪಾತ್ರ ಹೆಚ್ಚಿದೆ. ನನ್ನ ಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತೇನೆ. ಅವಳ ಸಾಧನೆಗೆ ಅಡ್ಡಿ ಬರುವುದಿಲ್ಲ’ ಎಂದು ಭಾವನಾ ತಂದೆ ಮಂಜುನಾಥ್ ಹೇಳಿದರು.

‘ವಿಜ್ಞಾನಿಯಾಗುವ ಆಸೆ’

‘ಹೆಣ್ಣುಮಕ್ಕಳಿಗೆ ಕರಾಟೆಯಿಂದ ಹೆಚ್ಚು ಅನುಕೂಲಗಳಿವೆ. ಇದು ಮಾನಸಿಕ ಸ್ಥೈರ್ಯ, ಧೈರ್ಯವನ್ನೂ ತುಂಬುತ್ತದೆ. ಜ್ಞಾನ, ಆರೋಗ್ಯವನ್ನೂ ವೃದ್ಧಿಸಿಕೊಳ್ಳಬಹುದು’ ಎಂದು ಹೇಳುತ್ತಾಳೆ ಭಾವನಾ.

‘ನನಗೆ ಮುಂದೆ ವಿಜ್ಞಾನಿಯಾಗುವ ಆಸೆ ಇದೆ. ಕರಾಟೆಯು 2020ಕ್ಕೆ ಒಲಿಂಪಿಕ್ಸ್‌ಗೆ ಸೇರಲಿದೆ.  ಅದರದಲ್ಲಿ ನಮ್ಮ ರಾಷ್ಟ್ರವನ್ನು ಪ್ರತಿನಿಧಿಸಬೇಕು. ಅಂತರರಾಷ್ಟ್ರೀಯ ಮಟ್ಟದ್ಲಲ್ಲಿ ಕೀರ್ತಿ ತರಬೇಕು ಎಂಬ ಮಹದಾಸೆ ಇದೆ’ ಎಂದು ತನ್ನ ಕನಸನ್ನು ಬಿಚ್ಚಿಡುತ್ತಾಳೆ.

ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ: ಭಾವನಾ ಮಾತ್ರವಲ್ಲದೇ, ಕೇರಳದಲ್ಲಿ ನಡೆದ ರಾಷ್ಟ್ರೀಯ ಮಟ್ಟ ಕರಾಟೆ ಪಂದ್ಯಾವಳಿಯಲ್ಲಿ ನಾಗಮಾರ್ಷಲ್ ಆರ್ಟ್ಸ್ ಕರಾಟೆ ಶಾಲೆಯ ವಿದ್ಯಾರ್ಥಿಗಳಾದ ಗೌತಮ್ (ಕಟಾ ವಿಭಾಗದಲ್ಲಿ ಬ್ರೌನ್‌ ಬೆಲ್ಟ್‌ನಲ್ಲಿ ತೃತೀಯ ಸ್ಥಾನ, ಕುಮಿತೆ ವಿಭಾಗದಲ್ಲಿ ಬ್ರೌನ್‌ ಬೆಲ್ಟ್‌ನಲ್ಲಿ ಪ್ರಥಮ) ಭರತ್ (ಕುಮಿತೆ ವಿಭಾಗದಲ್ಲಿ ಬ್ಲಾಕ್ ಬೆಲ್ಟ್‌ನಲ್ಲಿ ಪ್ರಥಮ) ಕೂಡ ಉತ್ತಮ ಸಾಧನೆ ಮಾಡಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !