ಶುಭಶುಕ್ರವಾರದಲ್ಲಿ ಶುಭವೇನಿದೆ?

ಮಂಗಳವಾರ, ಏಪ್ರಿಲ್ 23, 2019
33 °C
ಏ.19 ಗುಡ್‌ ಫ್ರೈಡೇ

ಶುಭಶುಕ್ರವಾರದಲ್ಲಿ ಶುಭವೇನಿದೆ?

Published:
Updated:
Prajavani

ಶುಕ್ರವಾರದ ದಿನದಂದು ಯೇಸುಕ್ರಿಸ್ತ ಮೃತರಾದರು - ಎಂದು ಬೈಬಲ್  ತಿಳಿಸುತ್ತದೆ. ಆ ಶುಕ್ರವಾರವೇ ‘ಗುಡ್ ಫ್ರೈಡೇ’ ಅಥವಾ ‘ಶುಭ ಶುಕ್ರವಾರ.’. ಯೇಸುಸ್ವಾಮಿಯ ಮರಣದ ದಿನವು ಹೇಗೆ ಶುಭಕರವಾದುದು? ಮರಣದಲ್ಲೇನು ಶುಭಸಂದೇಶವಿದೆ? ಇಂಥ ಪ್ರಶ್ನೆಗಳನ್ನು ಉತ್ತರಿಸಬೇಕಾದರೆ ಅವರು ಶಿಲುಬೆಯಲ್ಲೇಕೆ ತನ್ನ ಪ್ರಾಣವನ್ನರ್ಪಿಸಿದರು ಎಂಬುದನ್ನು ತಿಳಿಯಬೇಕು.

ಶಿಲುಬೆಯ ಮರಣವೇಕೆ?

ಚಾರಿತ್ರಿಕವಾಗಿ ನೋಡುವುದಾದರೆ ರೋಮನ್ ಹಾಗೂ ಯಹೂದಿ ಧಾರ್ಮಿಕ ಹಾಗೂ ರಾಜಕೀಯ ಮುಖಂಡರ ಅನ್ಯಾಯ, ಅನಾಚಾರ, ಶೋಷಣೆ, ಸ್ವಾರ್ಥ, ಕಪಟತನ ಮುಂತಾದವುಗಳನ್ನು ತೀಕ್ಷ್ಣವಾಗಿ ಖಂಡಿಸಿದವರು ಯೇಸು. ಅವರು ಬಡವ, ದುರ್ಬಲ, ಅನಾಥ ಮತ್ತು ದಮನಿತರ ಪರವಾಗಿ ನಿಂತರು. ಧರ್ಮದ ಹೆಸರಿನಲ್ಲಿ ನಡೆಯುವ ವಂಚನೆ, ಸುಲಿಗೆ, ಭ್ರಷ್ಟಾಚಾರ, ಮೋಸದ ಶ್ರೇಣೀಕೃತ ವ್ಯವಸ್ಥೆಯನ್ನೇ ಪ್ರಶ್ನಿಸಿದರು. ಇದನ್ನು ಸಹಿಸದ ಧಾರ್ಮಿಕ ನೆಲೆಯ ಯಹೂದಿ ಮುಖಂಡರು, ಆಡಳಿತಾರೂಢ ರೋಮನ್ ಅಧಿಕಾರಿಗಳೊಡನೆ ಪಿತೂರಿ ನಡೆಸಿದರು. ‘ಯೇಸು ರೋಮನ್ ಪ್ರಭುತ್ವವನ್ನು ವಿರೋಧಿಸುತ್ತಾನೆ ಹಾಗೂ ಯಹೂದಿ ಧಾರ್ಮಿಕ ಭಾವನೆಗಳನ್ನು ಉಲ್ಲಂಘಿಸುತ್ತಾನೆ’ ಎಂಬ ತಪ್ಪು ಆಪಾದನೆಗಳನ್ನು ಹೊರಿಸಿ ಮರಣದಂಡನೆಯನ್ನು ವಿಧಿಸಿದರು.

ಆಧ್ಯಾತ್ಮಿಕ ಸ್ತರದಲ್ಲಿ ನೋಡುವುದಾದರೆ ದೇವರ ಮಕ್ಕಳಾದವರೆಲ್ಲರೂ ಪಾಪ ಮಾಡಿ ದೇವರ ಹಾಗೂ ಪರರ ಪ್ರೀತಿಯಿಂದ ದೂರ ಸರಿದಿದ್ದರು. ಕಡಿದು ಹೋದ ಆತ್ಮೀಯ ಸಂಬಂಧಗಳನ್ನು ಮರುಸ್ಥಾಪಿಸಲು, ಮನುಕುಲದ ಉದ್ಧಾರಕ್ಕಾಗಿ ಶಿಲುಬೆಯ ಮುಖಾಂತರ ತನ್ನ ಪ್ರಾಣವನ್ನೇ ಯೇಸು ಧಾರೆಯೆರೆದರು.

ಶಿಲುಬೆಯ ಸಂದೇಶ

ಯೇಸುವಿನ ಶಿಲುಬೆಯು ಅಂಗೀಕಾರ ಹಾಗೂ ನಿರಾಕರಣೆಯ ಸಂಕೇತ. ಅದು ಒಂದೆಡೆ ದೇವರ ಪ್ರೀತಿಯನ್ನು ಪ್ರಸ್ತುತಪಡಿಸಿದರೆ, ಇನ್ನೊಂದೆಡೆ ಮಾನವನ ಕೆಡುಕನ್ನು ಪ್ರತಿಭಟಿಸುತ್ತದೆ. ಆರಂಭದಲ್ಲಿ ಯೇಸುವಿನ ಶಿಲುಬೆಯ ಮರಣವು ‘ಮನುಕುಲಕ್ಕಾಗಿ ದೇವರ ಸೋಲು, ಪಾಪದ ಜಯ’ ಎಂದು ಕಂಡರೂ, ಕೊನೆಯಲ್ಲಿ ಯೇಸುವಿನ ಪುನರುತ್ಥಾನದಲ್ಲಿ ಪ್ರೀತಿಯೇ ಗೆಲುವಿನ ನಗು ಬೀರುತ್ತದೆ.

ಕಷ್ಟ, ವ್ಯಥೆ, ವೇದನೆ ಮತ್ತು ದುಃಖದಿಂದ ಬಳಲುವ ಜ‌ನರಿಗೆ ಶಿಲುಬೆಯು ಭರವಸೆ, ಜಯ, ಸಹನೆ, ತಾಳ್ಮೆಯನ್ನು ನೀಡುತ್ತದೆ.
ಕ್ರಿಸ್ತರಿಲ್ಲದ ಶಿಲುಬೆಗೆ ತಲೆಬಾಗಿದರೆ ನಾವು ನಾಚಿಕೆ, ಭಯ, ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಶಿಲುಬೆಯಿಲ್ಲದ ಕ್ರಿಸ್ತರನ್ನು ಹಿಂಬಾಲಿಸಿದರೆ ನಾವು ಬಾಳಿನಲ್ಲಿ ಎದುರಿಸಬೇಕಾದ ಕಷ್ಟ, ಪರೀಕ್ಷೆ-ಪಂಥಾಹ್ವಾನಗಳಿಂದ ಓಡಿಹೋಗುವುದನ್ನೇ ಯೋಚಿಸಬಹುದು. ಆದರೆ ಕ್ರಿಸ್ತರಿರುವ ಶಿಲುಬೆಯು ನಮ್ಮ ಎಲ್ಲ ರೀತಿಯ ಬಂಧನಗಳನ್ನು ಬಿಡಿಸುವ ಸಾಧನ.

ನಮ್ಮ ಬಾಳಿನಲ್ಲೇಕೆ ಕಷ್ಟ, ದುಃಖಗಳಿವೆ? ಸತ್ಯ-ನೀತಿಯಿಂದ ಬದುಕುವವರಗೂ ಇದು ತಪ್ಪಿದ್ದಲ್ಲ. ಇಂಥ ಯೋಚನೆಗೂ ನಿಲುಕದ ಕಟುವಾಸ್ತವಗಳಿಗೆ ಕ್ರಿಸ್ತರ ಶಿಲುಬೆಯಲ್ಲಿ ಪರಿಹಾರವಿದೆ. ನಮ್ಮ ದುಃಖದ ಅರ್ಥ, ಕಷ್ಟದ ಬೆಲೆ ತಿಳಿಯಲು ಶಿಲುಬೆಯ ಮೇಲಿನ ಯೇಸುವನ್ನೊಮ್ಮೆ ದೈನ್ಯತೆಯಿಂದ ಕಾಣಬೇಕು.

ಶಿಲುಬೆಯ ಎರಡು ಹಲಗೆಗಳು ಎರಡು ರೀತಿಯ ಪ್ರೀತಿಯನ್ನು ಸಾರಿಹೇಳುತ್ತವೆ. ನೇರ ಹಲಗೆಯು ದೇವರ ಪ್ರೀತಿಯ ಪ್ರತೀಕವಾದರೆ, ಅಡ್ಡ ಹಲಗೆಯು ಪರರ ಪ್ರೀತಿಯ ದ್ಯೋತಕವಾಗಿದೆ. ಪರಮಪ್ರೀತಿಯನ್ನು ಸಾರಿ, ಸಂಪೂರ್ಣ ವಿಮೋಚನೆಯನ್ನು ನೀಡಿ ಹಾಗೂ ಕಷ್ಟದಲ್ಲೂ ಬಾಳನ್ನು ಎದುರಿಸಿ ಯೇಸು ಶಿಲುಬೆಯಲ್ಲಿ ವಿಜಯಿಯಾದ ದಿನವೇ ನಮಗೆಲ್ಲರಿಗೂ ಗುಡ್ ಫ್ರೈಡೇ. ಯೇಸುಪ್ರಭುವಿನ ಅಂಥ ಹಾದಿಯಲ್ಲಿ ನಾವೂ ಮುನ್ನಡೆಯೋಣ. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !