ಸೋಮವಾರ, ಜೂನ್ 27, 2022
24 °C

ಸರ್ಕಾರಿ ಬರ್ತ್‌ಡೇ

ಸೋಮು ಕುದರಿಹಾಳ Updated:

ಅಕ್ಷರ ಗಾತ್ರ : | |

‘ಡೇಟ್ ಆಫ್ ಬರ್ತ್ ಹೇಳ್ರಿ..’

‘ಹಂಗಂದ್ರೇನ್ರೀ..’

‘ಹುಟ್ಟಿದ ದಿನಾಂಕ..?’

‘...................’

‘ಈ ಹುಡುಗ ಹುಟ್ಟಿದ್ದು ಯಾವಾಗ ಹೇಳಿ..’

‘ಇವ್ನೇನ್ರಿ.. ನಾಗರ ಪಂಚಮಿ ನಾಕ್ ದಿನ ಮುಂದಿತ್ರಿ, ಅವತ್ ಹುಟ್ಯಾನ್ರಿ ಅದಕ್ಕ ನಾಗಪ್ಪ ಅಂತಾನ ಕರಿತೇವ್ರಿ’

‘ಹೋಗ್ಲಿ, ವರ್ಷನಾದ್ರೂ ಹೇಳ್ರಿ.’

‘ಇವ್ನು ನೋಡ್ರಿ ನನ್ನ ಮದ್ವಿ ಆಗಿ ವರ್ಷೊಪ್ಪತ್ತಿಗೆ ಹುಟ್ಟಿದ ಬಿಡ್ರಿ..’

‘ನಿಮ್ಮ ಮದುವೆ ಯಾವಾಗ ಆಗಿದ್ದು..?

‘ನಾನು ಹಿರೇಮನಿಷ್ಯಾಕಿ ಆಗಿ ದೀಡ್ ವರಸಕ್ಕ ಮದ್ವಿ ಮಾಡಿದ್ಲರಿ ನಮ್ಮವ್ವ..’

ಶಿಕ್ಷಕರನ್ನು ತಬ್ಬಿಬ್ಬುಗೊಳಿಸುವಂತಹ ಇಂತಹ ಸ್ವಾರಸ್ಯಕರ ಪ್ರಸಂಗಗಳು ಶಾಲೆಯಲ್ಲಿ ಮಗುವನ್ನು ದಾಖಲಿಸಲು ಬಂದಾಗ ಈಗಲೂ ನಡೆಯುತ್ತಿರುತ್ತವೆ. ಮಕ್ಕಳನ್ನು ಶಾಲೆಗೆ ದಾಖಲಿಸಲು ವಯಸ್ಸು ತುಂಬಾ ಮುಖ್ಯ ಅದನ್ನು ನಿಖರವಾಗಿ ತಿಳಿಯಲು ಹುಟ್ಟಿದ ದಿನಾಂಕ ಆಧಾರ. ಮಕ್ಕಳನ್ನು ಶಾಲೆಗೆ ದಾಖಲಿಸಲು ಆರು ವರ್ಷ ಪೂರೈಸಿರಬೇಕೆಂದು ನಿಯಮ ಇತ್ತು. ಈಗ ಐದು ವರ್ಷ ಹತ್ತು ತಿಂಗಳಿಗೆ ನಿಗದಿಪಡಿಸಲಾಗಿದೆ. ಅದನ್ನು ಮೀರಿ ಖಾಸಗಿ ಶಾಲೆಗಳ ಪ್ಲೇ ಹೋಮ್ ಅಂತೆ, ಬೇಬಿ ಸಿಟ್ಟಿಂಗ್ ಅಂತೆ... ಈಗ ಮೂರು ಮೂರೂವರೆ ವರ್ಷಕ್ಕೆ ಶಾಲೆ ಬಾಗಿಲು ದಾಟುತ್ತವೆ ಮಕ್ಕಳು. ಅಲ್ಲಿ ನೋಡಿದರೆ ಆ ಮಕ್ಕಳ ಆಟ ಕಾಟ ಎಲ್ಲವನ್ನೂ ನೋಡೋದೆ ಚೆಂದ. ಕೆಲವು ಮಕ್ಕಳಿಗೆ ಮನೆಯಲ್ಲಿ ಉಣಿಸುವ ಕಾಟದಿಂದ ತಪ್ಪಿಸಿಕೊಂಡು ಬಂದ ಖುಷಿ. ಅಂತಹ ಮಕ್ಕಳಿಗೆ ಶಾಲೆಯೇ ಬೆಟರ್. ಕಟ್ಟಿಕೊಟ್ಟ ಲಂಚ್ ಬ್ಯಾಗನ್ನು ಹೇಗೆ ತಂದರೋ ಹಾಗೇ ತಗೊಂಡು ಹೋಗಿ ಏಟು ತಿಂತಾವೆ. ಇನ್ನು ಕೆಲವು ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಗೋಳೋ ಅಂತ ಶುರು. ಅವರನ್ನು ಸಮಾಧಾನ ಮಾಡೋದೂ ಒಂದೇ; ಕಾಲೇಜಿನ ದೊಡ್ಡ ಮಕ್ಕಳಿಗೆ ಪಾಠ ಹೇಳೋದೂ ಒಂದೇ. ಎರಡೂ ಮುಗಿಯಲ್ಲ. ಆದರೆ ನಿಲ್ಲಿಸೋಕು ಬರಲ್ಲ. ಸುಮ್ಮನೇನೂ ಇರಲ್ಲ. ಹೇಳೋಕೂ ಬಿಡಲ್ಲ. ಮಧ್ಯಾಹ್ನದ ಹೊತ್ತಿಗೆ ಮಲಗಿಸೋದು ಒಂದು ದೊಡ್ಡ ಕಸರತ್ತು. ಆಗಲೇ ಶಾಲೆಯ ಆಯಾಗಳಿಗೆ ಗೊತ್ತಾಗೋದು! ಇನ್ನು ಈ ಮಕ್ಕಳಿಗೇ ಮೂರು ವರ್ಷಾನೂ ಆಗಿಲ್ಲ ತಂದು ಬಿಟ್ಟಿದಾರೆ ಅಂತ.

ಒಂದು ಶಾಲೆಯ ಆಯಾ ಒಬ್ಬರು ಹೇಳಿಕೊಂಡ ಸಂಕಷ್ಟ ಏನೆಂದರೆ ಅದೊಂದು ಪುಟ್ಟ ಮಗು. ಪುಟ್ಟದು ಅಂದರೆ ಹಾಲು ಕೂಡ ಬಿಟ್ಟಿರಲಿಲ್ಲ. ಬಿಟ್ಟಿರಲಿಲ್ಲ ಅನ್ನೋದಕ್ಕಿಂತಲೂ ಬಿಡಿಸಿರಲಿಲ್ಲ. ಬಿಡಿಸಿರಲಿಲ್ಲ ಅನ್ನೋದಕ್ಕಿಂತಲೂ ಬಿಡಿಸೋಕೆ ಯಾವ ದಾರಿನೂ ಕಾಣದೇ ಶಾಲೆಗೆ ಸೇರಿಸಿದ್ರಂತೆ. ಶಾಲೆಗೆ ಸೇರಿಸೋಕೆ ಬಂದಾಗ ಅವರಮ್ಮ ‘ಈ ಕೂಸಿಗೆ ಎಷ್ಟು ರೂಢಿ ಆಗಿದೆ ಅಂದರೆ ಹಾಲು ಬಿಡಿಸೋಕೆ ಅಂತ ಬೇವಿನ ಸೊಪ್ಪು ಹಚ್ಕೊಂಡ್ರೆ ಅದನ್ನು ಉಗುದು ಕುಡಿತ್ತಿತ್ತು. ಅಮೇಲೆ ಝಂಡುಬಾಮ್ ಹಚ್ಕೊಂಡ್ರೆ ಸ್ವಲ್ಪ ಕುಡಿದು ತುಟಿ ಒರೆಸ್ಕೊಂಡು ಕುಡಿತಿತ್ತು. ಬೇರೆ ದಾರಿ ಕಾಣದೆ ಈ ಐಡಿಯ ಮಾಡಿದ್ವಿ’ ಅಂತ ಹೇಳಿದ್ರು. ಆದರೆ ಆ ಮಗು ಏನು ಮಾಡಿದರೂ ಮಲಗದೇ ಹಾಲು ಕುಡಿಯಲು ಹಟ ಮಾಡುತ್ತಿತ್ತಂತೆ. ಆ ಆಯಾ ಮಗುವನ್ನು ಏನೇನೋ ಐಡಿಯಾ ಮಾಡಿ ಮಲಗಿಸಲು ಹೋದರಂತೆ. ಆದರೆ ಆ ಮಗು ಮಲಗಲೇ ಇಲ್ಲ. ಅವರ ಸಮಸ್ಯೆ ಬಗಹರಿಯಲೇ ಇಲ್ಲ. ಆಗ ನಾನು, ‘ಅಲ್ಲ, ಇಂತಹ ಸಮಸ್ಯೆಗಳು ಬರಬಾರದೆಂದರೆ ಒಂದು ‘ಸಾಂಪ್ರದಾಯಿಕ ವಿಧಾನ’ ಇದೆ. ಅದನ್ನು ಪಾಲನೆ ಮಾಡಬೇಕು. ಅದೇನೆಂದರೆ ಮಕ್ಕಳ ಕೈಯನ್ನು ತಲೆಯ ಮೇಲಿಂದ ಕಿವಿ ಮುಟ್ಟಿಸಿ ವಯಸ್ಸು ದೃಢೀಕರಿಸಿಕೊಳ್ಳುವ ಪದ್ಧತಿ. ಅದು ನಿಖರವಾಗಿರುತ್ತೆ ಕೂಡ!’ ಅಂತಾ ಹೇಳಿದೆ. ಅದಕ್ಕೆ ಅವರು ‘ನಮ್ಮ ಶಾಲೆಯಲ್ಲಿ ಕಿವಿ ಮುಟ್ಟೋದಿರಲಿ ಅಂಬೆಗಾಲಿನ ಮಕ್ಕಳನ್ನೂ ಸೇರಿಸ್ಕೋತಾರೆ’ ಅನ್ನಬೇಕೆ?

ಇನ್ನು ನಮ್ಮ ಶಾಲೆಗೆ ಬಂದ ತಾಯಂದಿರು, ‘ಇಂವ ಸಣ್ಣಾಂವದಾನ್ರಿ. ಕುಳ್ಳ. ಎತ್ತರ ಬೆಳೆದಿಲ್ರಿ, ಕೈಕಾಲು ಸಣ್ಣ. ಅದಕ್ಕ ಕಿವಿ ಮುಟ್ಟಾಂಗಿಲ್ಲ. ಅಲ್ಲಿ ಕುಂತಾಳಲ್ರಿ, ಆ ಹುಡುಗಿ, ಅಕೀಗಿಂತ ತಿಂಗಳ್ದಾಗ ದೊಡ್ಡಾಂವದಾನ್ರಿ’ ಅಂತಾರೆ. ಅವರಿಗೇನು ಅಂದರೆ ಒಟ್ನಲ್ಲಿ ಮಗ ಶಾಲೆ ಸೇರಬೇಕು. ಮಕ್ಕಳ ಕಾಟ ಅವರಿಗೆ ತಪ್ಪಬೇಕು ಅಷ್ಟೆ. ಹಿಂಗ ಶಾಲೆಗೆ ಸೇರಿಸೋದ್ರಿಂದ ಮಕ್ಕಳು ಜಾಣರಾಗೋದಿಲ್ಲ. ಅವರ ಮಾನಸಿಕ ವಯಸ್ಸು ಮತ್ತು ದೈಹಿಕ ವಯಸ್ಸು ಕಲಿಕೆಯ ಮೇಲೆ ಪರಿಣಾಮ ಬೀರುತ್ತವೆ ಎಂಬ ಕಾರಣಕ್ಕೆ ಒಂದು ಮಗು ಎಸ್‍ಎಸ್‍ಎಲ್‍ಸಿ ಬರುವ ಹೊತ್ತಿಗೆ ಹದಿನಾರು ವಯಸ್ಸು ಆಗಿರಬೇಕು ಎಂಬುದು ಮನೋವಿಜ್ಞಾನಿಗಳ ಅಭಿಮತ. ಅದು ನಿಯವಾಗಿಯೂ ಇದೆ. ಅಷ್ಟಾಗಿ ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಆದರೆ ಜೂನ್ ತಿಂಗಳ ಪ್ರಭಾವ ಮಾತ್ರ ಎಲ್ಲಾ ವಿಜ್ಞಾನವನ್ನು ಹೊಡೆದುಹಾಕಬಲ್ಲದ್ದು.

ಈ ಜನ್ಮದಿನಾಂಕದ ಮಹತ್ವ ತಿಳಿಯೋದು ಯಾವಾಗ ಅಂದರೆ ಒಂದು ಬಾರಿ ಕೆಲವು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸರಕಾರಿ ನೌಕರಿಯೊಂದರ ಆಯ್ಕೆ ಪಟ್ಟಿ ಪ್ರಕಟವಾಗಿತ್ತು. ಒಬ್ಬ ಉದ್ಯೋಗಾಕಾಂಕ್ಷಿ ಆಯ್ಕೆ ಪಟ್ಟಿಯಲ್ಲಿರುವವರಷ್ಟೇ ಅಂಕ ಪಡೆದಿದ್ದರೂ ಆತನ ಹೆಸರು ಅದರಲ್ಲಿರಲಿಲ್ಲ. ಆಯ್ಕೆಯಾದ ಒಂದಿಬ್ಬರದು ಮತ್ತು ಈತನದು ಹುಟ್ಟಿದ ವರ್ಷ ಒಂದೇ ಆಗಿದ್ದರೂ ದಿನಾಂಕದ ಹಿರಿತನದಲ್ಲಿ ಅವರಿಗೆ ಸರ್ಕಾರಿ ನೌಕರಿ ಸಿಕ್ಕಿತ್ತು. ಈತನಿಗೆ ಜನ್ಮದಿನಾಂಕ ಗೊತ್ತಿರದೇ, ವರ್ಷವಷ್ಟೇ ಗೊತ್ತಿರುವ ಕಾರಣ ವಯೋಮಿತಿಯ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆಯಿಂದ ಹೊರಬಿದ್ದಿದ್ದ. ‘ನಮ್ಮ ಮಾಸ್ತರ‍್ರು ಒಂದು ನಂಬರ್ ಹಾಕಿದ್ರ ಸಾಕಾಗಿತ್ತಪ. ದೊಡ್ಡ ಅನ್ಯಾಯ ಮಾಡಿಬಿಟ್ಟರು’ ಎಂಬುದು ಆತನ ಮಾತಾಗಿತ್ತು. ಆಗ ಶಾಲೆಯಲ್ಲಿದ್ದ ಮಾಸ್ತರನ್ನು ನೆನೆದು ಬೈದದ್ದೇ ಬೈದದ್ದು. ಇಂತಹ ಅಪವಾದಗಳಿಂದ ಬೈಗುಳಗಳಿಂದ ತಪ್ಪಿಸಿಕೊಳ್ಳಲು ಮಾಸ್ತರುಗಳು ಕಂಡುಕೊಂಡ ಅಂಕಿ ಸಂಖ್ಯೆಗಳೇ 01-06-0000 ಅಂದರೆ ಜೂನ್ ಒಂದು. ಯಾವುದೇ ಮಗು ಶಾಲೆಗೆ ಬರಲಿ ಹುಟ್ಟಿದ ದಿನ, ವರ್ಷ ಗೊತ್ತಿಲ್ಲವೇ? ಹಾಕಿ ಸರಕಾರಿ ಡೇಟ್ ಅಂತಾರೆ. ಹಾಗಾಗಿಯೇ ಜೂನ್ ಬಂತು ಅಂದರೆ ಫೇಸ್ಬುಕ್‍ನ ಬರ್ತ್‌ಡೇ ನೋಟಿಫಿಕೇಶನ್‍ನಲ್ಲಿ ದಿನವೊಂದಕ್ಕೆ ನೂರಾರು ಹೆಸರುಗಳು. ಜೂನ್ ಒಂದಂತೂ ಡೇ ಆಫ್ ದಿ ಇಯರ್ ಫಾರ್ ಬರ್ತ್‌ಡೇ. ಜೂನ್ ಒಂದನ್ನು ಬರ್ತ್‌ಡೇ ದಿನವೆಂತಲೂ, ಜೂನ್ ತಿಂಗಳನ್ನು ಬರ್ತ್‌ಡೇ ತಿಂಗಳೆಂತಲೂ ಘೋಷಿಸಿಬಿಡಬಹುದು.

ಅದೊಂದು ಟಿವಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಜ್ಯೋತಿಷ ಕಾರ್ಯಕ್ರಮ. ಮೊಬೈಲ್ ಮೂಲಕ ಕರೆ ಮಾಡಿದ್ದ ಭವಿಷ್ಯಾಕಾಂಕ್ಷಿಗೆ ‘ನಿಮ್ಮ ಜನ್ಮ ದಿನಾಂಕ ತಿಳಿಸಿ. ಗುರುಗಳ ಹತ್ತಿರ ಮಾತಾಡಿ’ ಅನ್ನುತ್ತಾಳೆ ನಿರೂಪಕಿ. ಈ ಕಡೆಯಿಂದ ‘ಹುಟ್ಟಿದ ದಿನಾಂಕ ಗೊತ್ತಿಲ್ರಿ, ವರ್ಷಾನೂ ನೆನಪಿಲ್ರಿ..’ ಅನ್ನುತ್ತದೆ ಧ್ವನಿ. ಆಗ ಗುರುಗಳು ‘ಹಾಗಾದರೆ ನಿಖರವಾಗಿ ನಿಮ್ಮ ಭವಿಷ್ಯವನ್ನು ಹೇಳುವುದು ಕಷ್ಟ’ ಅನ್ನುತ್ತಾರೆ. ಬೇಸರಗೊಂಡ ವ್ಯಕ್ತಿ ಮಾತನಾಡುವುದಿಲ್ಲ. ‘ಯಾಕೋ ಸಂಪರ್ಕ ಸಿಗುತ್ತಿಲ್ಲ, ಕರೆ ಕಟ್ಟಾಗಿದೆ ಅನಿಸುತ್ತೆ. ಮತ್ತೆ ಕಾಲ್ ಮಾಡುತ್ತಿರಿ’ ಅನ್ನುವ ನಿರೂಪಕಿ ಮತ್ತೊಂದು ಕರೆಗೆ ‘ಹಲೋ..’ ಅನ್ನಬೇಕು ಎನ್ನುವಷ್ಟರಲ್ಲಿ ಆ ಕಡೆಯಿಂದ ಮಾತಾಡುತ್ತಿದ್ದ ವ್ಯಕ್ತಿ ‘ಹಲೋ ರಿ, ಹಲೋ.. ಕಟ್ ಆಗಿಲ್ರಿ.. ಕಟ್ ಮಾಡಬ್ಯಾಡ್ರಿ.’ ಅನ್ನುತ್ತಿದ್ದಂತೆ ‘ಓಕೆ ಓಕೆ, ಸರಿ ಗುರುಗಳ ಹತ್ತಿರ ಮಾತಾಡಿ’ ಎನ್ನುತ್ತಾಳೆ ನಿರೂಪಕಿ. ‘ಗುರುಗಳೇ ಹುಟ್ಟಿದ ದಿನಾಂಕ ಗೊತ್ತಿಲ್ಲ ಅಂದ್ರ ಏನಾತ್ರಿ. ಸರಕಾರಿ ಡೇಟ್‌ ಹಚ್ಕೊಂಡು ಭವಿಷ್ಯ ನೋಡ್ರಿ’ ಅನ್ನುತ್ತಿದ್ದಂತೆ ಆಗ ನಿಜವಾಗಲೂ ಕಾಲ್ ಕಟ್ ಆಗಿತ್ತು. ಗುರುಗಳು ಮತ್ತು ನಿರೂಪಕಿಯ ಮುಖದಲ್ಲಿ ಕಾಣದ ನಗು ಮೂಡಿತ್ತು. ‘ಈಗ ಒಂದು ಪುಟ್ಟ ವಿರಾಮ. ನಂತರ ಗುರುಗಳ ಜೊತೆ ಮಾತುಕತೆ ಮುಂದುವರೆಯುತ್ತೆ’ ಎಂಬ ಮಾತು ಕೇಳಿ ನನಗೋ ನಗು ತಡೆಯಲಾಗಿರಲಿಲ್ಲ.

ಹೆಣ್ಣುಮಕ್ಕಳು ಮದುವೆಯಾದ ನಂತರ ಗಂಡನ ಮನೆಯಲ್ಲಿ ಸಾಮಾನ್ಯವಾಗಿ ಅಲ್ಲಿನ ವಿಳಾಸದ ವೋಟರ್ ಐಡಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇತ್ಯಾದಿ ಮಾಡಿಸುವಾಗ ವಯಸ್ಸಿನ ದೃಢೀಕರಣಕ್ಕೆ ಅಂತ ಶಾಲೆಯ ವ್ಯಾಸಂಗ ಪ್ರಮಾಣ ಪತ್ರ ಕೇಳ್ತಾರೆ. ಈ ಹುಡುಗೀಗೊ ಎಲ್ಲಿಲ್ಲದ ತಳಮಳ ಶುರುವಾಗಿಬಿಡುತ್ತೆ. ಹೇಗೋ ಮಾಡಿ, ಏನೋ ಹೇಳಿ ಹುಡುಗನಿಗಿಂತ ಹುಡುಗಿಯ ವಯಸ್ಸು ಕಡಿಮೆ ಅಂತ ಹೇಳಿದ್ದು ಈಗ ಗೊತ್ತಾಗಿಬಿಡುತ್ತಲ್ಲಪ್ಪ ಅನ್ನುವ ಸಂಕಟ. ಗಂಡನ ಏಕಾಂತದಲ್ಲಿ ವಿಷಯ ತಿಳಿಸುತ್ತಾಳೆ. ಮದುವೆ ಆಗೋಗಿದೆ ಈಗೇನು ಮಾಡೋಕಾಗುತ್ತೆ ಬಿಡು ಅಂದುಕೊಳ್ಳುವಂತೆ ಮಾಡುತ್ತಾಳೆ. ಆದರೆ ಮನೆಯಲ್ಲಿರುವವರು ಸುಮ್ಮನಿರಬೇಕಲ್ಲ. ವಯಸ್ಸಿನಲ್ಲಿ ದೊಡ್ಡವಳು ಅಂತಾರೆ. ಅದಕ್ಕೆ ಈಕೆ ‘ಅಯ್ಯ ನಿಮಗೇನು ಗೊತ್ತು, ನಾನು ಸಣ್ಣಾಕಿದ್ದಾಗ ನಮ್ಮಪ್ಪ ಸಾಲಿಗೆ ಸೇರಿಸಿದ್ದ. ಆ ಮಾಸ್ತರ ಹುಟ್ಟಿದ್ ವರ್ಷನಾ ಹೆಚ್ಚು ಬರೆದಿರಬೇಕು. ನಂದಷ್ಟ ಅಲ್ಲ. ಆ ಮಾಸ್ತರ ನನ್ನ ಗೆಳತ್ಯಾರದೆಲ್ಲ ಹಂಗ ಹಚ್ಚಿದ್ದ’ ಅಂದು ಬಾಯಿಮುಚ್ಚಿಸಿದ್ಲು. ಆ ಹುಡುಗಿಯ ಗಂಡನ ಮನೆಯವವರು ಸಾಲಿಗೆ ಬಂದು ಹಾಜರಿ ಬುಕ್ ತೆಗೆದು ತೋರಿಸ್ರಿ ಅಂತ ಕುಂತಿದ್ರಂತ. ಅದಕ್ಕ ನಮ್ಮ ಶಾಲೆಯ ದೊಡ್ಡ ಮಾಸ್ತರ‍್ರು‘ಸಾಲಿಗೆ ಹೆಸರು ಹಚ್ಚುವಾಗ ಡೇಟ್ ಒಂದು ಕರೆಕ್ಟ್ ಬರಿಬೇಕು ನೋಡ್ರಿ’ ಅಂತಿದ್ರು.

ಈ ಸನ್ನಿವೇಶಗಳು ಹುಟ್ಟಿದ ದಿನಾಂಕಗಳ ಮಹತ್ವ ತಿಳಿಸುತ್ತವೆ. ಹುಟ್ಟಿದ ದಿನಾಂಕ ಅಂದರೆ ತಾರೀಖು, ತಿಂಗಳು ಮತ್ತು ವರ್ಷ. ಇನ್ನೂ ಮುಂದುವರಿದು ಹೇಳುವುದಾದರೆ ತಿಥಿ, ನಕ್ಷತ್ರ, ಮುಹೂರ್ತ, ಘಳಿಗೆ, ಸಮಯ ಹೀಗೆ. ಹಿಂದಿನ ಕಾಲವೇ ಹಾಗಿತ್ತು. ಯಾರೋ ಅಷ್ಟೋ ಇಷ್ಟೋ ಅಕ್ಷರ ಬಲ್ಲವರು ತಮ್ಮ ಮಕ್ಕಳ ಹುಟ್ಟಿದ ದಿನಾಂಕ ಬರೆದಿಡುತ್ತಿದ್ದರು. ಇಲ್ಲವೆಂದರೆ ಹಬ್ಬ ಹರಿದಿನಗಳೇ ಆಧಾರವಾಗಿರುತ್ತಿತ್ತು. ಪ್ರತಿಯೊಬ್ಬರಿಗೂ ಹುಟ್ಟಿದ ದಿನಾಂಕದ ದಾಖಲೆ ಅತ್ಯಗತ್ಯ. ಶಿಕ್ಷಣ, ಉದ್ಯೋಗ ಹಾಗೂ ಇತರೆ ಸರಕಾರಿ ಸೌಲಭ್ಯಗಳನ್ನು ಪಡೆಯುವಾಗ ಹುಟ್ಟಿದ ದಿನಾಂಕ ಅತ್ಯಗತ್ಯ ದಾಖಲೆಗಳಲ್ಲಿ ಒಂದು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಹುಟ್ಟುವ ದಿನಾಂಕದ ಆಸುಪಾಸು ಅಥವಾ ನಿಖರ ದಿನಾಂಕ ಮೊದಲೇ ಗೊತ್ತಾಗುತ್ತಿದೆ. ಇದು ವೈದ್ಯಲೋಕದ ಸಾಧನೆ! ಇನ್ನು ಕೆಲವರು ತಮ್ಮ ಮಕ್ಕಳು ಇಂಥದ್ದೇ ದಿನ ಹುಟ್ಟಬೇಕೆಂಬ ಆಸೆಯಿಂದ ಅದೃಷ್ಟದ ಅಥವಾ ಅವರಿಷ್ಟದ ದಿನಾಂಕಗಳಂದು ಮಕ್ಕಳನ್ನು ಪಡೆಯುತ್ತಾರೆ. ಅಂತಹ ಕೆಲವು ದಾಖಲೆಗಳಾದದ್ದುಂಟು. ಕೆಲವು ಮಕ್ಕಳು ಹುಟ್ಟಿದ ದಿನಾಂಕಗಳಿಂದಲೇ ದಾಖಲೆಪಟ್ಟಿ ಸೇರಿದ್ದೂ ಉಂಟು. ಅದರಲ್ಲಿ ಈ ಫೆಬ್ರುವರಿ 29 ಕೂಡ ಬಹಳ ವಿಶೇಷವೇ ಆಗಿದೆ. ನಾಲ್ಕು ವರ್ಷಕ್ಕೊಮ್ಮೆ ಬರುವ ಹುಟ್ಟುಹಬ್ಬವಲ್ಲವೇ ಮತ್ತೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.