ಗುರುವಾರ , ಸೆಪ್ಟೆಂಬರ್ 23, 2021
21 °C
276 ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗಳಲ್ಲಿ ಆರಂಭ

ಈ ವರ್ಷವೇ ಸರ್ಕಾರಿ ಎಲ್‌ಕೆಜಿ

ರಶ್ಮಿ ಬೇಲೂರು Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿಕ್ಷಣ ಇಲಾಖೆಯು ಈ ವರ್ಷದಿಂದಲೇ ಲೋಯರ್‌ ಕಿಂಡರ್‌ ಗಾರ್ಟನ್‌ (ಪ್ರಾಥಮಿಕ ಪೂರ್ವ–ಎಲ್‌ಕೆಜಿ) ಆರಂಭಿಸಲಿದ್ದು, ರಾಜ್ಯದಾದ್ಯಂತ ಇರುವ 276 ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗಳಲ್ಲಿ (ಕೆಪಿಎಸ್‌) ಇವು ಕಾರ್ಯಾರಂಭ ಮಾಡಲಿವೆ.

ಪ್ರಾಥಮಿಕ ಶಿಕ್ಷಣ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸೋಮವಾರ ಈ ಸಂಬಂಧದ ಕಡತವನ್ನು ವಿಲೇವಾರಿ ಮಾಡಿದ್ದು, ತಮ್ಮ ಮಕ್ಕಳಿಗೂ ಉತ್ತಮ ಗುಣಮಟ್ಟದ ಎಲ್‌ಕೆಜಿ ತರಗತಿಗಳು ಬೇಕು ಎಂದು ಬಯಸುವ ಬಡ ಪೋಷಕರ ಕನಸು ಈಡೇರುವ ದಿನ ಸಮೀಪಿಸಿದೆ.

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ವ್ಯವಸ್ಥೆಯಲ್ಲಿ ಸದ್ಯ ಪ್ರಾಥಮಿಕ ಪೂರ್ವ ಶಿಕ್ಷಣ ಪದ್ಧತಿ ಇಲ್ಲ. ಇದರಿಂದಾಗಿ ಹಲವಾರು ಪೋಷಕರು ಒತ್ತಾಯಪೂರ್ವಕವಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಬೇಕಾಗಿತ್ತು. 

ಮುಖ್ಯಮಂತ್ರಿ ಅವರು ಒಪ್ಪಿಗೆ ಸೂಚಿಸಿರುವ ಕಾರಣ, ಇಲಾಖೆಯ ಅಧಿಕಾರಿಗಳು ಒಂದೆರಡು ದಿನಗಳಲ್ಲಿ ಅಧಿಸೂಚನೆ ಮತ್ತು ಪ್ರವೇಶಾತಿ ವೇಳಾಪಟ್ಟಿ ಪ್ರಕಟಿಸಲಿದ್ದಾರೆ.

ಇದನ್ನು ದೃಢಪಡಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್‌.ಉಮಾಶಂಕರ್‌, ‘ಪ್ರಾಥಮಿಕ ಪೂರ್ವ ಶಾಲೆಗಳ ಸ್ಥಾಪನೆಗೆ ನಾವು ಎಲ್ಲಾ ಸಿದ್ಧತೆ ನಡೆಸಿದ್ದೇವೆ, ಶೀಘ್ರ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದು ಆರಂಭಿಕ ಹಂತ. ನಾವು ಮೊದಲಿಗೆ ಎಲ್‌ಕೆಜಿ ಆರಂಭಿಸಲಿದ್ದು, 2020–21ನೇ ಸಾಲಿನಲ್ಲಿ ಯುಕೆಜಿ ತರಗತಿಗಳು ಆರಂಭವಾಗಲಿವೆ’ ಎಂದರು.ಎಲ್‌ಕೆಜಿ ತರಗತಿ ಬೋಧನೆಗಾಗಿ ಇಲಾಖೆಯು ಈಗಾಗಲೇ ಶಿಕ್ಷಕರನ್ನು ಗುರುತಿಸಿದೆ. ಪಠ್ಯಕ್ರಮವೂ ಸಿದ್ಧವಾಗಿದೆ. ಈ ವರ್ಷ ಶಾಲಾ ಪೂರ್ವ ಶಿಕ್ಷಣದಲ್ಲಿ ತರಬೇತಿ ಪಡೆದ ಅತಿಥಿ ಶಿಕ್ಷಕರಿಂದ ಪಾಠ ಮಾಡಿಸಲಾಗುತ್ತದೆ.

ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವ ಸಲುವಾಗಿ ಈ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವೂ ಇರಲಿದ್ದು, ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪಠ್ಯಗಳು ಇರಲಿವೆ. ರಾಜ್ಯ ಮಂಡಳಿಗೆ ಒಳಪಟ್ಟ ಖಾಸಗಿ ಶಾಲೆಗಳ ಪಠ್ಯಕ್ರಮದ ಆಧಾರದಲ್ಲೇ ಈ ಪಠ್ಯಕ್ರಮವೂ ಇರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು