ಭಾನುವಾರ, ಮೇ 9, 2021
19 °C

ಯುಗವು ಮರೆತ ‌ಕವಿ ಈಶ್ವರ ಸಣಕಲ್

ರೇಣುಕಾ ನಿಡಗುಂದಿ Updated:

ಅಕ್ಷರ ಗಾತ್ರ : | |

ಧಾರವಾಡದಲ್ಲಿ ಒಂದು ಕಲ್ಲೆಸೆದರೆ ಅದು ಯಾವುದಾದರೂ ಸಾಹಿತಿಯ ಮನೆಯ ಮೇಲೆ ಬೀಳುತ್ತದೆ ಎನ್ನುವ ಮಾತು ದಿಟವಿದ್ದೀತು. ಯಾಕೆಂದರೆ ನಮ್ಮದೇ ಓಣಿಯಲ್ಲಿ, ನಮ್ಮ ಮನೆ ಎದುರಿನ ಸಾಲಿನಲ್ಲಿ ಕುಟುಂಬವೊಂದರ ಯಜಮಾನ ತೀರಿಹೋದಾಗಲೇ ಅವರು ಈಶ್ವರ ಸಣಕಲ್ಲ ಎಂಬ ಕವಿ ಎಂದು ಗೊತ್ತಾದದ್ದು. ಆ ತನಕ ಇಡೀ ಓಣಿಯ ಜನರಿಗೆ, ಮನೆತುಂಬ ಮಕ್ಕಳಿರುವ ಆ ಕುಟುಂಬದ ಬಗ್ಗೆ ಏನೂ ಗೊತ್ತಿರಲಿಲ್ಲ. ಅವರು ಕವಿ ಎಂಬುದು ಗೊತ್ತಾದ ನಂತರವೂ ದುಡಿದುಣ್ಣುವ ರೈತಾಪಿ ಜನರಿರುವ ಆ ಓಣಿ ಅವರನ್ನು ಮರೆತುಬಿಟ್ಟಿತು.

ಈಶ್ವರ ಸಣಕಲ್ಲರ ಸಾವು ನನಗೆ ಮಾತ್ರ ಕಾಡುತ್ತಿತ್ತು. ನಲ್ಲಿಯ ನೀರು ತುಂಬುತ್ತಲೋ, ಬಟ್ಟೆ ಒಗೆಯುತ್ತಲೋ ಕಂಡ ಆ ಮನೆಯ ಹೆಣ್ಣುಮಕ್ಕಳ ನೆನಪೂ ಮಸುಕು ಮಸುಕು. ಈಗವರು ಎಲ್ಲಿದ್ದಾರೋ ಗೊತ್ತಿಲ್ಲ. ಸಣಕಲ್ಲರ ಪತ್ನಿಯ ಮುಖವನ್ನು ಬಾಗಿಲಿನ ಆಚೆಗೆ ಕಂಡವರು ವಿರಳ. ಕೊನೆಗೆ, ನನ್ನ ಅಂತರ್ಮನದ ಹಂಬಲದ ಕಾರಣಕ್ಕೋ ಏನೋ ಸಣಕಲ್ಲ ಅವರ ಮಗಳು ಮಧುಮತಿ ಸಿಕ್ಕಿದರು. ಕಳೆದ ಬೇಸಿಗೆಯಲ್ಲಿ ಧಾರವಾಡದಲ್ಲಿದ್ದೆ. ಫೋನಾಯಿಸಿದ ಕೂಡಲೇ ಮನೆಗೆ ಬಂದ ಮಧುಮತಿಯನ್ನು ಕೂಡಿಸಿ ನನ್ನ ಅತ್ತಿಗೆ ಉಣಬಡಿಸಿದರು. ಇಂದು ಈ ಓಣಿಯ ಅನ್ನದ ಋಣ ಇತ್ತೆಂದು ಕಾಣುತ್ತದೆ ಎಂದು ಭಾವುಕರಾಗಿದ್ದರು.

‘ಜಗವೆಲ್ಲ ನಗುತಿರಲಿ /ಜಗದಳುವು ನನಗಿರಲಿ...’ ಎಂದ ಈಶ್ವರ ಸಣಕಲ್ಲರ ಅದೃಷ್ಟ ಚೆನ್ನಾಗಿದ್ದಿದ್ದರೆ ನಮ್ಮ ಮೇರು ಕವಿಗಳಂತೆ ಕೀರ್ತಿ ಸಂಪಾದಿಸಿರುತ್ತಿದ್ದರು. ಮಾನ ಸಮ್ಮಾನಗಳು ಅವರನ್ನರಸಿ ಬರುತ್ತಿದ್ದವು. ಆದರೆ, ಜಗದಳುವು ತನಗಿರಲಿ ಎಂದು ಹೇಳಿ ಜಗತ್ತಿನ ದುಃಖವನ್ನೆಲ್ಲ ತಮಗೊಬ್ಬರಿಗೇ ಕೊಡುವಂತೆ ಭಗವಂತನಲ್ಲಿ ಪ್ರಾರ್ಥಿಸಿದವರಿಗೆ ದೇವರು ತಥಾಸ್ತು ಅಂದಿರಬೇಕು. ಅದಕ್ಕೇ ಕಷ್ಟವನ್ನೇ ಉಂಡು ಕಷ್ಟವನ್ನೇ ಬದುಕಿದರು ಈಶ್ವರ ಸಣಕಲ್ಲರು.

ಸಣಕಲ್ಲರಿಗೆ ಚಿಕ್ಕವಯಸ್ಸಿನಲ್ಲಿಯೇ ಮದುವೆಯಾಗಿತ್ತು. ಮೊದಲ ಹೆಂಡತಿ ಒಂದು ಹೆಣ್ಣುಮಗುವಿಗೆ ಜನ್ಮವಿತ್ತು ತೀರಿಹೋದಳು. ಆ ಮಗುವನ್ನು ನೋಡಿಕೊಳ್ಳಲು ಸಣಕಲ್ಲರು ಇನ್ನೊಂದು ಮದುವೆಯಾದರು. ಎರಡನೇ ಹೆಂಡತಿಗೆ ಹತ್ತು ಮಕ್ಕಳು. ಐದು ಹೆಣ್ಣು; ಐದು ಗಂಡು. ಮೊದಲ ಮಗಳನ್ನೂ ಸೇರಿಸಿ ಹನ್ನೊಂದು ಮಕ್ಕಳು. ಮಧುಮತಿ ಹೇಳುವಂತೆ ಈಗ ಉಳಿದವರು ಐವರು ಮಾತ್ರ. ಧಾರವಾಡದ ಆರ್.ಎಲ್.ಎಸ್. ಸ್ಕೂಲಿನಲ್ಲಿ ಶಿಕ್ಷಕಿಯಾಗಿರುವ ಮಧುಮತಿ ಒಬ್ಬರೇ ಅನಾರೋಗ್ಯ ಪೀಡಿತ ಅಕ್ಕ, ಅಂಗವಿಕಲ ಸೋದರನನ್ನು ಸಾಕುತ್ತ ದುಡಿಯುತ್ತಿರುವುದು.

ಈಗಿನ ಬಾಗಲಕೋಟೆ ಜಿಲ್ಲೆಯ ರಬಕವಿ, ಈಶ್ವರ ಸಣಕಲ್ಲರ ಸ್ವಂತ ಊರು. ನೇಕಾರಿಕೆಯನ್ನೇ ಅವಲಂಬಿಸಿದ ಮಹಾರುದ್ರಪ್ಪ ಮತ್ತು ನೀಲಮ್ಮರ ಪುಣ್ಯದ ಉದರದಲ್ಲಿ 1906ರ ಡಿಸೆಂಬರ್ 20ರಂದು ಈಶ್ವರ ಸಣಕಲ್ಲ ಜನಿಸಿದರು. ಮನೆಯಲ್ಲಿ ಬಡತನ. ರಬಕವಿ ಆಗ ಸಾಂಗಲಿ ಸಂಸ್ಥಾನದಲ್ಲಿತ್ತು. ಮರಾಠಿಮಯವಾಗಿದ್ದ ರಬಕವಿಯಲ್ಲಿ ಕನ್ನಡವನ್ನು ಬಿತ್ತಿ ಬೆಳೆಯುವಲ್ಲಿ ತಮ್ಮಣ್ಣಪ್ಪ ಚಕ್ಕೌಡಿ ತಲ್ಲೀನರಾಗಿದ್ದ ಸಂಕ್ರಮಣ ಕಾಲವದು. ತಾಯಿಯ ತವರೂರು ಗೋಕಾಕ ತಾಲ್ಲೂಕಿನ ಯಾದವಾಡ ಗ್ರಾಮ. ಸಣಕಲ್ಲರು ಐದು ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ತಾಯಿಯೊಂದಿಗೆ ಅಜ್ಜ ಮಲ್ಲಪ್ಪನ ಆಶ್ರಯದಲ್ಲಿ ರಬಕವಿಯಲ್ಲಿ ಬಾಲ್ಯದ ಶಿಕ್ಷಣ ಪ್ರಾರಂಭವಾಯಿತು. ತಂದೆಯಿಲ್ಲದ ಮಕ್ಕಳೆಂದು ಅಜ್ಜ ಅಕ್ಕರೆ ಮಾಡುತ್ತಿದ್ದರಾದರೂ ಬಡತನದ ಕಾರಣವಾಗಿ ಜೀವನ ಕಷ್ಟವಾಗಿತ್ತು. ಮಕ್ಕಳ ಪೋಷಣೆಗಾಗಿ ತಾಯಿ ನೀಲಮ್ಮನೂ ಕೂಲಿ ಮಾಡಬೇಕಾಗಿತ್ತು.

ಬಾಲ್ಯದಲ್ಲೇ ಸಣಕಲ್ಲರಿಗೆ ಓದುವ ಹಂಬಲ ಅಪಾರವಾಗಿತ್ತು. ರಬಕವಿಯ ವಿರಕ್ತಮಠದ ವಾಚನಾಲಯ, ಶಂಕರಲಿಂಗ ವಾಚನಾಲಯ ಹಾಗೂ ಹಿರಿಯರಾದ ಚಿಕ್ಕೋಡಿ ತಮ್ಮಣ್ಣಪ್ಪ, ಮುರಿಗಯ್ಯ ಬಾಗೋಜಿಮಠ ಮಾಸ್ತರರ ಪ್ರೋತ್ಸಾಹದಿಂದ ಅಕ್ಷರವಂತರಾದರು. ಬಾಲಕ ಈಶ್ವರನಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಿದವರು ಶಾಲಾ ಶಿಕ್ಷಕರಾಗಿದ್ದ ಭೈರಪ್ಪ ಹದ್ದಾರ ಮಾಸ್ತರರು.

ಈಶ್ವರ ಸಣಕಲ್ ಸರಳಜೀವಿ. ಮಾಸಿದ ಕೋಟು. ಮಾಸಿದ ರಟ್ಟಿನ ಟೊಪ್ಪಿಗೆ. ಕಗ್ಗು ದೋತರ, ಕೈಯಲ್ಲೊಂದು ಛತ್ರಿ. ಹೆಗಲಲ್ಲಿ ಕೈಚೀಲ. ಕಾಲಲ್ಲಿ ಹರಕು ಚಪ್ಪಲಿ. ಮನೆಯಲ್ಲಿ ಏನುಂಟೋ ಅದನ್ನೇ ಸಮನಾಗಿ ಹಂಚಿಕೊಂಡು ತಿನ್ನುತ್ತಿದುದನ್ನು, ಅರೆಹೊಟ್ಟೆ ಉಂಡರೂ ಯಾರ ಬಳಿಯೂ ಸಾಲ ಕೇಳದೆ, ಕಡ ಪಡೆಯದೇ ಅವರ ತಾಯಿ ಸಂಸಾರ ನಡೆಸುತ್ತಿದ್ದುದನ್ನು ಮಧುಮತಿ ನೆನೆಯುತ್ತಾರೆ.

ಅಪ್ಪ ಕೊಡಿಸುವ ‘ಐಸ್ಕ್ರೀಂ’ ಆಸೆಗೆ ತಾವು ಅಪ್ಪನ ಹಿಂದೆ ಸಂತೆಗೆ ಹೋಗಿ ಸಾಮಾನು ಹೊತ್ತು ತರುತ್ತಿದ್ದುದನ್ನು ಮಧುಮತಿ ನೆನೆಯುತ್ತಾರೆ. ಮನೆಯಲ್ಲಿ ‘ಜೋಳದ ನುಚ್ಚಿನ ಊಟವೇ ಪರಮಾನ್ನ. ಅನ್ನ, ರೊಟ್ಟಿ, ಪಲ್ಲೆಗೂ ದುಸ್ತರವಾಗಿದ್ದ ಮನೆಯಲ್ಲಿ ನುಚ್ಚು, ಜೋಳದ ಮುದ್ದೆಯಷ್ಟೇ ಸಿಗುತ್ತಿತ್ತು. ಮಕ್ಕಳು ಶಾಲೆಗೆ ಹೊರಟಾಗ ಕೈಗೆ ಬೆಲ್ಲದ ಚೂರನ್ನು ಕೊಡುತ್ತಿದ್ದರಂತೆ ಸಣಕಲ್ಲರು. ಮೊದಮೊದಲು ಮನೆ ಮಕ್ಕಳು ಎಂಬ ಪ್ರೀತಿ ಮೋಹಗಳಿದ್ದ ತಂದೆ ಆ ನಂತರದ ದಿನಗಳಲ್ಲಿ ವಿರಾಗಿಯಾಗಿದ್ದರು ಎನ್ನುತ್ತಾರೆ ಮಧುಮತಿ. ಬಡತನವೇ ಬೃಹತ್ ಕಾದಂಬರಿಯಾಗಿತ್ತು ಆಗ. ಈಗಲೂ ಹೆಚ್ಚು ವ್ಯತ್ಯಾಸವಿಲ್ಲ. ಬಡತನ ಮಧುಮತಿ ಅವರನ್ನು ದಣಿಸಿದೆ. ಆದರೆ, ಸೋತಿಲ್ಲ.

ಮದುವೆ ವಯಸ್ಸಿನ ಹೆಣ್ಣುಮಕ್ಕಳನ್ನು ಮನೆಯಲ್ಲಿಟ್ಟುಕೊಂಡು ತಾಯಿ ಕೊರಗುತ್ತಿದ್ದರೆ ಸಣಕಲ್ಲರು ಯಾರ ಮುಂದೆಯೂ ಕೈಯೊಡ್ಡದೇ ‘ದೇವರಿದ್ದಾನೆ’ ಎನ್ನುತ್ತಿದ್ದರಂತೆ.

ಸತ್ಯ ಮತ್ತು ಪ್ರಾಮಾಣಿಕತೆಯೇ ಈಶ್ವರ ಸಣಕಲ್ಲರ ಉಸಿರಾಗಿತ್ತು. ಜೊತೆಗೆ ನಿಷ್ಠುರವಾದಿ. ತಮ್ಮ ನಿರ್ಭಿಡೆ ಮತ್ತು ನಿಷ್ಠುರತೆಯ ಕಾರಣದಿಂದಾಗಿ ಅವರು ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಆಗಲಿಲ್ಲ. ಅನೇಕರ ಮೋಸ ಅವರನ್ನು ನರಳಿಸಿತು. ಸಾಂಸಾರಿಕ ಜೀವನದಲ್ಲಿಯೂ ನೆಮ್ಮದಿ ಕಾಣಲಿಲ್ಲ. ಬಡತನದ ಬೇಗೆಯಿಂದ ಹೊರಬರಲೂ ಇಲ್ಲ.

1956ರಲ್ಲಿ ರಾಜ್ಯಗಳ ಪುನರ್‌ ವಿಂಗಡಣೆಯಾಗಿ ಈಶ್ವರ ಸಣಕಲ್ಲರ ಸೇವೆಯ ಹೊಣೆಯನ್ನು ಮುಂಬಯಿ ರಾಜ್ಯದಿಂದ ಮೈಸೂರು ರಾಜ್ಯಕ್ಕೆ (ಕರ್ನಾಟಕಕ್ಕೆ) ಒಪ್ಪಿಸಲಾಯಿತು. ಇಲ್ಲಿ ಹಿರಿತನದ ತಾರತಮ್ಯದಿಂದಾಗಿ ಸಣಕಲ್ಲರು ಕೆಲಸವನ್ನೇ ತೊರೆದರು. 1962ರಿಂದ 1971ರವರೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ವಚನ ಸಂಶೋಧನ ಶಾಖೆಯಲ್ಲಿ ಸಹಾಯಕ ಸಂಶೋಧಕರಾಗಿ ಸೇವೆ ಸಲ್ಲಿಸಿದರು.

ಈಶ್ವರ ಸಣಕಲ್ಲರು ಆಧುನಿಕ ಸಾಹಿತ್ಯ ಪ್ರಕಾರದಲ್ಲಿ ಕೃತಿ ರಚನೆ ಮಾಡಿದ್ದಾರೆ. ಅವುಗಳಲ್ಲಿ ಗದ್ಯ ಕೃತಿಗಳೇ ಹೆಚ್ಚು. ಚರಿತ್ರೆ, ಕಾದಂಬರಿ, ಸಂಪಾದನ, ಸಂಗ್ರಹ ಮತ್ತು ಅನುವಾದ ಹೆಚ್ಚು. ‘ಕೋರಿಕೆ’, ‘ಬಟ್ಟೆ’ ಕವನ ಸಂಕಲನಗಳು ಸಾಹಿತ್ಯ ಲೋಕದಲ್ಲಿ ಸಣಕಲ್ಲರ ಹೆಸರನ್ನು ಅಜರಾಮರಗೊಳಿಸಿದವು. ಪ್ರಬಂಧ, ಸಣ್ಣ ಕಥೆ, ಕಾದಂಬರಿ ಆಕಾಶವಾಣಿ ಭಾಷಣ, ಜಾನಪದ ಕುರಿತೂ ಸಣಕಲ್‍ ಅವರು ಬರೆದಿದ್ದಾರೆ.

ಕುವೆಂಪು ಅವರ ‘ನೆನಪಿನ ದೋಣಿ’ಯಲ್ಲಿ ಈಶ್ವರ ಸಣಕಲ್ಲರ ಬಗ್ಗೆ ಒಂದು ಕಡೆ ಉಲ್ಲೇಖ ಇರುವುದನ್ನು ಮಧುಮತಿ ಹೇಳಿದ್ದರು. ಆ ಪುಟವನ್ನು ಹುಡುಕಿ ಓದಿ ಹಿಗ್ಗಿದೆ. ರಾಷ್ಟ್ರಕವಿ ಕುವೆಂಪು ಅವರನ್ನು ಸಣಕಲ್ಲರು ‘ಅಣ್ಣಯ್ಯ’ ಎಂದು ಸಂಬೋಧಿಸುತ್ತಿದ್ದರು. ಮೊದಲ ಭೇಟಿಯಲ್ಲಿ ಕುವೆಂಪು ಅವರ ಕಾಲುಮುಟ್ಟಿ ನಮಸ್ಕರಿಸಿ ಪತ್ರ ಬರೆದ ಸಣಕಲ್ಲರ ಬಗ್ಗೆ ಒಂದು ಪುಟವಿದೆ. ಕಷ್ಟ ಎನ್ನುವುದು ಸಣಕಲ್ಲರಿಗೆ ಹುಟ್ಟಿನೊಂದಿಗೇ ಬಂದ ಬಳುವಳಿಯಾಗಿತ್ತು. ಈಶ್ವರ ಸಣಕಲ್ಲರು ನಮ್ಮನ್ನಗಲಿ ಕಾಲು ಶತಮಾನ ಕಳೆದಿದೆ.

ಜಗವೆಲ್ಲ ನಗುತಿರಲಿ / ಜಗದಳುವು ನನಗಿರಲಿ / ನಾನಳಲು ಜಗವೆನ್ನನೆತ್ತಿಕೊಳದೇ? / ನಾ ನಕ್ಕು, ಜಗವಳಲು ನೋಡಬಹುದೇ?

ಎಂದ ಈಶ್ವರ ಸಣಕಲ್ಲರನ್ನು ಜಗವೆತ್ತಿಕೊಂಡು ಸಂತೈಸದೇ ಕಡೆಗಣಿಸಿತು. ಅವರ ಜನ್ಮಶತಮಾನೋತ್ಸವವನ್ನೂ ಲೋಕ ಮರೆಯಿತು. ದೊಡ್ಡ ಕಲ್ಲುಗಳ ಮುಂದೆ ಸಣ್ಣ ಕಲ್ಲು ಕರಗಿಯೇ ಹೋಯ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.