ಭಾನುವಾರ, ಮಾರ್ಚ್ 7, 2021
30 °C

ಎಸ್ಸೆಸ್ಸೆಲ್ಸಿ ಮಾರ್ಗದರ್ಶಿ: ವಿದ್ಯುತ್ ಮೋಟಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭೌತಶಾಸ್ತ್ರ

ಇದು ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಒಂದು ಸಾಧನವಾಗಿದೆ. ಇದನ್ನು ನಾವು ದಿನನಿತ್ಯ ಬಳಸುವ ವಿದ್ಯುತ್ ಫ್ಯಾನ್, ಫ್ರಿಜ್‌, ಮಿಕ್ಸರ್‌ಗಳು, ಬಟ್ಟೆ ತೊಳೆಯುವ ಯಂತ್ರಗಳಲ್ಲಿ ಕಾಣುತ್ತೇವೆ.

ವಿದ್ಯುತ್ ಮೋಟಾರ್‌ನ ಸಂಕ್ಷಿಪ್ತ ವಿವರಣೆ

ವಿದ್ಯುತ್ ಮೋಟಾರ್‌ನಲ್ಲಿ ಒಂದು ಅವಾಹಕ ಲೇಪನವಿರುವ ತಾಮ್ರದ ತಂತಿಯನ್ನೊಳಗೊಂಡ ಆಯತಾಕಾರದ ಸುರುಳಿ ABCD ಯನ್ನು ಅಯಸ್ಕಾಂತದ ಎರಡು ಧ್ರುವ (N ಮತ್ತು S)ಗಳ ನಡುವೆ ಇರಿಸಲಾಗುತ್ತದೆ. ಸುರುಳಿಯ AB ಮತ್ತು CD ಬದಿಗಳು ಕಾಂತಕ್ಷೇತ್ರದ ದಿಕ್ಕಿಗೆ ಲಂಬವಾಗಿದ್ದು, ಸುರುಳಿಯ ತುದಿಗಳನ್ನು ಎರಡು ಒಡಕು ಉಂಗುರುಗಳಾದ P ಮತ್ತು Q ಗಳಿಗೆ ಜೋಡಿಸಲಾಗಿರುತ್ತದೆ. ಈ ಒಡಕು ಉಂಗುರಗಳನ್ನು ಕ್ರಮವಾಗಿ ಸ್ಥಿರವಾಹಕ ಕುಂಚ X ಮತ್ತು Y ಗಳನ್ನು ಸ್ಪರ್ಶಿಸುವಂತೆ ಜೋಡಿಸಲಾಗಿರುತ್ತದೆ. ವಾಹಕ ಕುಂಚ X ಮತ್ತು Y ಗಳನ್ನು ವಿದ್ಯುತ್ ಕೋಶಕ್ಕೆ ಸಂಪರ್ಕಿಸಲಾಗುತ್ತದೆ.

ಮೋಟಾರ್‌ನ ಕಾರ್ಯ

ಚಿತ್ರದಲ್ಲಿ ತೋರಿಸಿರುವಂತೆ ವಿದ್ಯುತ್ ಪ್ರವಾಹವು ವಾಹಕ ಕುಂಚ X ನ ಮೂಲಕ ಪ್ರವೇಶಿಸಿ ವಾಹಕ ಕುಂಚ Y ನ ಮೂಲಕ ವಾಪಸ್ಸಾಗುತ್ತದೆ.

ಈ ಸಂದರ್ಭದಲ್ಲಿ ವಿದ್ಯುತ್ A ಯಿಂದ Bಗೆ ಹರಿಯುವಾಗ ಸುರುಳಿಯ AB ಬಾಹುವಿನ ಮೇಲೆ ಹರಿಯುವಾಗ ಸುರುಳಿಯ ಬಾಹುವಿನ ಮೇಲೆ ಕಾರ್ಯನಿರ್ವಹಿಸುವ ಬಲವು ಅದನ್ನು ಕೆಳಗೆ ತಳ್ಳುತ್ತದೆ. ಅದೇ ರೀತಿ ವಿದ್ಯುತ್ C ಯಿಂದ D ಗೆ ಹರಿಯುವಾಗ ಸುರುಳಿಯ CD ಬಾಹುವಿನ ಮೇಲೆ ಕಾರ್ಯನಿರ್ವಹಿಸುವ ಅದನ್ನು ಮೇಲಕ್ಕೆ ತಳ್ಳುತ್ತದೆ. ಆದ್ದರಿಂದ ಸುರುಳಿ ಮತ್ತು ದಂಡ 0 ಗಳು ಅಕ್ಷದ ಮೇಲೆ ಅಪ್ರದಕ್ಷಿಣವಾಗಿ ಸುತ್ತುತ್ತವೆ.

ಈ ಸಮಯದಲ್ಲಿ Q ನ ಕುಂಚ X ನೊಂದಿಗೆ ಮತ್ತು P ಯ ಕುಂಚ Y ನೊಂದಿಗೆ ಸಂಪರ್ಕ ಹೊಂದುತ್ತದೆ ಮತ್ತು ಸುರುಳಿಯಲ್ಲಿನ ವಿದ್ಯುತ್‌ ಪ್ರವಾಹ ಹಿಮ್ಮುಖಗೊಂಡು DCBA ಮಾರ್ಗದಲ್ಲಿ ಪ್ರವಹಿಸುತ್ತದೆ.

ಹಿಮ್ಮುಖವಾದ ವಿದ್ಯುತ್ ಪ್ರವಾಹವು AB ಮತ್ತು CD ಮೇಲೆ ವರ್ತಿಸುವ ಬಲದ ದಿಕ್ಕನ್ನೂ ಕೂಡ ಹಿಮ್ಮುಖಗೊಳಿಸಿ ಮೊದಲು ಕೆಳಗೆ ತಳ್ಳಲ್ಪಟ್ಟ ಸುರುಳಿಯ AB ಬದಿಯ ಮೇಲಕ್ಕೂ ಮೊದಲು ಕೆಳಗೆ ತಳ್ಳಲ್ಪಟ್ಟ CD ಬದಿಯ ಕೆಳಕ್ಕೆ ತಳ್ಳಲ್ಪಟ್ಟು ಮತ್ತರ್ಧ ಸುತ್ತನ್ನು ಸುತ್ತುತ್ತದೆ. ಹೀಗೆ ವಿದ್ಯುತ್ ಪ್ರವಾಹದ ದಿಕ್ಕು ಹಿಮ್ಮುಖವಾಗುವುದಕ್ಕೆ ಸುರುಳಿ ಮತ್ತು ದಂಡದ ನಿರಂತರ ಸುತ್ತುವಿಕೆ ಕಾರಣವಾಗಿದೆ.

ಒಂದು ವಿದ್ಯುನ್ಮಂಡಲದಲ್ಲಿ ವಿದ್ಯುತ್ ಪ್ರವಾಹದ ದಿಕ್ಕನ್ನು ಹಿಮ್ಮುಖಗೊಳಿಸುವ ಸಾಧನವನ್ನು ದಿಕ್ಪರಿವರ್ತನ ಎಂದು ಕರೆಯುತ್ತಾರೆ. ವಿದ್ಯುತ ಮೋಟಾರ್‌ಗಳಲ್ಲಿ ಒಡಕು ಉಂಗುರಗಳು ದಿಕ್ಪರಿವರ್ತಕಗಳಾಗಿ ವರ್ತಿಸುತ್ತವೆ.

ಮೋಟಾರ್‌ನ ಶಕ್ತಿಯನ್ನು ಹೆಚ್ಚಿಸುವ ಅಂಶಗಳು

ಸ್ಥಿರವಾದ ಕಾಂತದ ಬದಲು ವಿದ್ಯುತ್ಕಾಂತವನ್ನು ಬಳಸುವುದು

 ಸುರುಳಿಯಲ್ಲಿ ಹೆಚ್ಚಿನ ಸುತ್ತುಗಳನ್ನು ಬಳಸುವುದು.

ಸುರುಳಿಯಿಂದ ಸುತ್ತಲ್ಪಟ್ಟ ಮೃದು ಕಬ್ಬಿಣ ( ಇದನ್ನು ಆರ್ಮೇಚರ್ ಎನ್ನುತ್ತಾರೆ) ವನ್ನು ಬಳಸುವುದು.

ವಿದ್ಯುತ್ ಕಾಂತೀಯ ಪ್ರೇರಣೆ

ಒಂದು ವಾಹಕದಲ್ಲಿ ಬದಲಾಗುತ್ತಿರುವ ಕಾಂತ ಕ್ಷೇತ್ರವು ಇನ್ನೊಂದು ವಾಹಕದಲ್ಲಿ ವಿದ್ಯುತ್ ಪ್ರವಾಹವನ್ನು ಪ್ರೇರೇಪಿಸುತ್ತದೆ. ಈ ಶಕ್ತಿಯನ್ನು ವಿದ್ಯುತ್ಕಾಂತೀಯ ಪ್ರೇರಣೆ ಎನ್ನುವರು.

ಫ್ಲೆಮಿಂಗ್‌ನ ಬಲಗೈ ನಿಯಮ

ಸುರುಳಿಯ ಚಲನೆಯ ದಿಕ್ಕು ಕಾಂತಕ್ಷೇತ್ರದ ದಿಕ್ಕು ಮತ್ತು ವಿದ್ಯುತ್ ಪ್ರವಾಹದ ದಿಕ್ಕನ್ನು ಈ ನಿಯಮದ ಮೂಲಕ ವಿವರಿಸಬಹುದಾಗಿದ್ದು, ಚಿತ್ರದಲ್ಲಿ ತೋರಿಸಿದಂತೆ ಬಲಗೈನ ಹೆಬ್ಬೆರಳು, ತೋರುಬೆರಳುಗಳು ಮತ್ತು ಮಧ್ಯದ ಬೆರಳುಗಳನ್ನು ಪರಸ್ಪರ ಲಂಬವಾಗಿ ಇರಿಸಿದಾಗ ತೋರು ಬೆರಳು ಕಾಂತಕ್ಷೇತ್ರದ ದಿಕ್ಕನ್ನು ಹೆಬ್ಬೆರಳು ವಾಹಕದ ಚಲನೆಯ ದಿಕ್ಕನ್ನು ಮತ್ತು ಮಧ್ಯದ ಬೆರಳು ವಿದ್ಯುತ್ ಪ್ರವಾಹದ ದಿಕ್ಕನ್ನು ಸೂಚಿಸುತ್ತವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು