ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕತೆ ₹ 325 ಲಕ್ಷ ಕೋಟಿಗೆ

2025ರ ವೇಳೆಗೆ ಗುರಿ ಸಾಧಿಸುವ ನಿರೀಕ್ಷೆ
Last Updated 26 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ಏಳು ವರ್ಷಗಳಲ್ಲಿ ದೇಶಿ ಅರ್ಥ ವ್ಯವಸ್ಥೆಯ ಗಾತ್ರವನ್ನು ₹ 325 ಲಕ್ಷ ಕೋಟಿಗಳ ಮಟ್ಟಕ್ಕೆ ತಲುಪಿಸುವ ಹಾದಿಯಲ್ಲಿ ಭಾರತ ದೃಢ ಹೆಜ್ಜೆ ಹಾಕುತ್ತಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

‘ಸ್ಟಾರ್ಟ್‌ಅಪ್‌, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ), ಮೂಲಸೌಕರ್ಯ ಹೂಡಿಕೆಗೆ ಗಮನ ಕೇಂದ್ರೀಕರಿಸುವುದರ ಮೂಲಕ ದೇಶಿ ಆರ್ಥಿಕ ವೃದ್ಧಿ ದರವು ಶೇ 7 ರಿಂದ ಶೇ 8ರ ದರದಲ್ಲಿ ಬೆಳವಣಿಗೆ ಸಾಧಿಸಲಿದೆ’ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ಚಂದ್ರ ಗರ್ಗ್‌ ಹೇಳಿದ್ದಾರೆ.

‘ಸರಕು ಮತ್ತು ಸೇವೆಗಳ ಉತ್ಪಾದನೆಗೆ ಆದ್ಯತೆ ನೀಡಿ ಮುಂದಿನ ಏಳೆಂಟು ವರ್ಷಗಳಲ್ಲಿ ಬೇಡಿಕೆ ಹೆಚ್ಚಿಸಿದರೆ 2025ರ ವೇಳೆಗೆ ಭಾರತವು ₹ 325 ಲಕ್ಷ ಕೋಟಿ ಗಾತ್ರದ ಆರ್ಥಿಕತೆಯಾಗುವ ಗುರಿ ಸಾಧಿಸಲಿದ್ದೇವೆ. ಅದೊಂದು ಸಮಂಜಸವಾದ ಗುರಿಯಾಗಿರಲಿದೆ.

‘ಸದ್ಯಕ್ಕೆ ಭಾರತದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ಗಾತ್ರದ ಲೆಕ್ಕದಲ್ಲಿ ₹ 162.5 ಲಕ್ಷ ಕೋಟಿಗಳಷ್ಟಿದೆ. ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಹಣದುಬ್ಬರವು ಆರ್‌ಬಿಐ ನಿಗದಿಪಡಿಸಿರುವ ಶೇ 4ರ ಆಸುಪಾಸಿನ ಹಂತದಲ್ಲಿಯೇ ಇದೆ. ಈ ಗುರಿಗೆ
ಬದ್ಧವಾಗಿರುವಲ್ಲಿ ನಾವು ಸಫಲರಾಗುತ್ತಿದ್ದೇವೆ.

‘ಹಣದುಬ್ಬರವೂ ಸೇರಿದಂತೆ ಇತರ ಆರ್ಥಿಕ ವಿದ್ಯಮಾನಗಳು ₹ 325 ಲಕ್ಷ ಕೋಟಿ ಗಾತ್ರದ ಆರ್ಥಿಕತೆಯ ಗುರಿ ಸಾಧಿಸಲು ಅಡ್ಡಿಯಾಗಲಾರವು. ನಮ್ಮ ಹಣದುಬ್ಬರ ದರ ಸ್ಥಿರವಾಗಿದೆ’ ಎಂದು ಹೇಳಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟ ಏರ್ಪಡಿಸಿದ್ದ ಜಾಗತಿಕ ವಾಣಿಜ್ಯೋದ್ಯಮ ಸಂಘಗಳ ಶೃಂಗಮೇಳದಲ್ಲಿ ಅವರು ಮಾತನಾಡುತ್ತಿದ್ದರು. ಸಗಟು ಹಣದುಬ್ಬರವು ಈಗ ಏಳು ತಿಂಗಳ ಹಿಂದಿನ ಮಟ್ಟಕ್ಕೆ (ಶೇ 2.48) ಮತ್ತು ಗ್ರಾಹಕರ ಬೆಲೆ ಸೂಚ್ಯಂಕ ಆಧರಿಸಿದ ಚಿಲ್ಲರೆ ಹಣದುಬ್ಬರವು ಕೂಡ 4 ತಿಂಗಳ ಕನಿಷ್ಠ ಮಟ್ಟಕ್ಕೆ (ಶೇ 4.44) ಇಳಿದಿದೆ. ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ನಿಗದಿ ಮಾಡಲು ಆರ್‌ಬಿಐ ಹಣದುಬ್ಬರವನ್ನೇ ಪರಿಗಣನೆಗೆ ತೆಗೆದುಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT