ಭಾನುವಾರ, ಜುಲೈ 3, 2022
23 °C

ಶಾಖ ತಗ್ಗಿಸಲು ರಸ್ತೆಗೆ ಬಿಳಿ ಬಣ್ಣ ಬಳಿದು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದನ್ನು ತಪ್ಪಿಸಲು ವಿಜ್ಞಾನಿಗಳು, ಪರಿಸರ ಪ್ರೇಮಿಗಳು ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆಯೇ ರಸ್ತೆಗಳಿಗೆ ಬಿಳಿ ಬಣ್ಣ ಬಳಿಯುವ ಕಲ್ಪನೆ.

ಲಾಸ್‌ಏಂಜಲೀಸ್‌ನ ನಿಕೊಲಾ ನಿಕೊಲೋವ್ ಎನ್ನುವವರು, ರಸ್ತೆಗಳಿಗೆ ಬಿಳಿ ಬಣ್ಣವನ್ನು ಬಳಿಯುವುದರಿಂದ ತಾಪಮಾನ ಕಡಿಮೆಯಾಗುವುದರೊಂದಿಗೆ, ಶುದ್ಧಗಾಳಿಯೂ ಲಭಿಸಲಿದೆ ಎನ್ನುವ ಚಿಂತನೆಯನ್ನು 2017ರ ಅಕ್ಟೋಬರ್‌ 6ರಂದು ತಮ್ಮ ಟ್ವಿಟರ್‌ ಮತ್ತು ಫೇಸ್‌ಬುಕ್‌ಖಾತೆಗಳಲ್ಲಿ ಹಂಚಿಕೊಂಡಿದ್ದರು.

ಕ್ಯಾಲಿಪೋರ್ನಿಯಾ, ಲಾಸ್‌ಏಂಜಲೀಸ್ ಬ್ಯೂರೊ ಆಫ್‌ ಸ್ಟ್ರೀಟ್‌ ಸರ್ವಿಸ್‌ನ ನೇತೃತ್ವದಲ್ಲಿ ರಸ್ತೆಗಳಿಗೆ ಬಿಳಿ ಬಣ್ಣ ಬಳಿಯುವ ಕೆಲಸ ಪ್ರಾರಂಭವಾಯಿತು. ಲಾಸ್‌ಏಂಜಲೀಸ್‌ ಈ ಪ್ರದೇಶಕ್ಕೆ ಮೊದಲ ಬಾರಿಗೆ ಭೇಟಿ ನೀಡಿದರೆ, ವಿಚಿತ್ರವಾಗಿ ಕಾಣಿಸುವುದರ ಜೊತೆಗೆ ವಿನೂತನ ಅನುಭವವನ್ನು ನೀಡುತ್ತದೆ.

ಇಲ್ಲಿನ ನಾಗರಿಕರು ಪರಿಸರವನ್ನು ಸಂರಕ್ಷಿಸುವ ಸಲುವಾಗಿ ಹಲವು ವಿನೂತನ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಇಂಧನ ಉಳಿತಾಯ ಮತ್ತು ಪರಿಸರಕ್ಕೆ ಹಾನಿಯಾಗುವುದನ್ನು ತಪ್ಪಿಸಲು ಬಹುತೇಕರು ಕಾರ್‌ಪೂಲಿಂಗ್ (ಒಂದೇ ಕಾರಿನಲ್ಲಿ ಹಲವರು ಪ್ರಯಾಣಿಸುವುದು) ಮೊರೆ ಹೋಗುತ್ತಿದ್ದಾರೆ.

ಬೇಸಿಗೆಯಲ್ಲಿ ಈ ರಸ್ತೆಗಳಲ್ಲಿ ತಾಪಮಾನ ಗರಿಷ್ಟ 50 ಡಿಗ್ರಿ ಸೆಲ್ಸಿಯಸ್‌ ತಲುಪಿದ ಉದಾಹರಣೆಗಳು ಇವೆ. ಇದು  ಅಲ್ಲಿನ ಜಲ ಮತ್ತು ಪಕ್ಷಿ, ಪ್ರಾಣಿ ಸಂಕುಲಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿತು. ಇದನ್ನು ತಪ್ಪಿಸುವುದಕ್ಕಾಗಿಯೇ ರಸ್ತೆಗೆ ಬಿಳಿ ಬಣ್ಣ ಬಳಿಯಲು ನಿರ್ಧರಿಸಲಾಯಿತು. ಈ ಪ್ರಯೋಗದಿಂದ ರಸ್ತೆಯ ತಾಪಮಾನ ಗಣನೀಯವಾಗಿ ಕಡಿಮೆ ಆಗಿದೆ. ಸೂರ್ಯನ ಕಿರಣಗಳು ಕಪ್ಪು ಬಣ್ಣದ ರಸ್ತೆಗಳ ಮೇಲೆ ಹೆಚ್ಚಿನ ಶಾಖ ಬೀರುತ್ತವೆ. ಬಿಳಿ ಬಣ್ಣವಿದ್ದಾಗ ಅದರ ಪರಿಣಾಮ ಕಡಿಮೆ.

ಕಳೆದ 50 ವರ್ಷಗಳಲ್ಲಿ ಇಲ್ಲಿನ ತಾಪಮಾನ ಶೇ ಐದರಷ್ಟು ಹೆಚ್ಚಾಗಿದೆ. ಬೇಸಿಗೆಯಲ್ಲಿ ಇನ್ನೂ ಹೆಚ್ಚಾಗುತ್ತದೆ. ಹೆಚ್ಚುತ್ತಿರುವ ರಸ್ತೆಗಳು, ವಾಯುಮಾಲಿನ್ಯ, ಮರಗಳ ಮಾರಣ ಹೋಮ ಇದಕ್ಕೆ ಪುಷ್ಟಿ ನೀಡುತ್ತಿವೆ. ಆದ್ದರಿಂದ ತುರ್ತಾಗಿ ತಾಪಮಾನ ಕಡಿಮೆ ಮಾಡುವ ಮತ್ತು ಪರಿಸರವನ್ನು ರಕ್ಷಿಸಿಕೊಳ್ಳುವ ಅಗತ್ಯವಿದೆ.

ಹೀಗೆ ಕಾರ್ಯ ನಿರ್ವಹಿಸುತ್ತದೆ: ನಮಗೆಲ್ಲ ತಿಳಿದಿರುವಂತೆ ಸೂರ್ಯನ ಕಿರಣಗಳು ಕಪ್ಪು ಬಣ್ಣವನ್ನು ಬೇಗನೆ ಆಕರ್ಷಿಸುತ್ತವೆ. ಇದು ಸಹಜವಾಗಿಯೇ ವಾತಾವರಣದ ತಾಪಮಾನ ಹೆಚ್ಚಾಗಲು ಕಾರಣವಾಗುತ್ತದೆ. ಅದೇ ಜಾಗದಲ್ಲಿ ಬಿಳಿ ಬಣ್ಣವಿದ್ದರೆ ಸೂರ್ಯನ ಕಿರಣಗಳ ಪ್ರಭಾವವನ್ನು ಕುಗ್ಗಿಸುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.