ಮಳೆಯೊಳಗಿನ ಆ ಕ್ಷಣ ಮರೆಯುವುದುಂಟೆ!

ಲೋಕಜ್ಞಾನವಿಲ್ಲದ ಬಾಲ್ಯದಲ್ಲಿ ಮಳೆಯ ಜೊತೆಗಿನ ನೆನಪುಗಳು ಇಂದಿಗೂ ಮೆಲುಕು ಹಾಕುವಂತಿವೆ. ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲಿ ಯಾರ ಹಂಗಿಲ್ಲದೇ ಆಟ ಆಡುತ್ತಿದ್ದದ್ದು, ಕಾಲುವೆಯ ದಡದಲ್ಲಿನ ಮರಳಿನಲ್ಲಿ ಸೇತುವೆ ಕಟ್ಟಿದ್ದು...ಹೀಗೆ ಒಂದೊಂದು ನೆನಪೂ ಮಧುರ.
ಪ್ರೌಢಶಾಲೆಯ ಶಿಕ್ಷಣಕ್ಕಾಗಿ ಊರು ದಾಟಿ, ಬೆಟ್ಟ–ಗುಡ್ಡ ಹತ್ತಿಳಿದು ಮಧ್ಯೆ ಸಿಗುತ್ತಿದ್ದ ದೊಡ್ಡಕೆರೆಯನ್ನು ದಾಟಿ ಹೋಗಬೇಕಿತ್ತು. ಮಂಗಳವಾರದ ಸಂತೆಯಲ್ಲಿ ಅಜ್ಜಿ ತಂದುಕೊಟ್ಟಿದ್ದ ಶಾಲಾ ಬ್ಯಾಗ್ ನೆನೆಯಬಾರದೆಂದು ಸದಾ ಪ್ಲಾಸ್ಟಿಕ್ ಚೀಲವನ್ನೂ ಒಯ್ಯುತ್ತಿದ್ದೆ. ಆದರೆ, ಯಾವತ್ತು ನಾನು ಆ ಪ್ಲಾಸ್ಟಿಕ್ ಚೀಲ ಮರೆತು ಹೋಗಿರುತ್ತಿದ್ದೆನೋ ಅಂದೇ ಮಳೆ ಬಂದು ನನ್ನ ಶಾಲಾ ಬ್ಯಾಗ್ ನೆನೆದು ಹೋಗುತ್ತಿತ್ತು.
ಶಾಲೆಯಲ್ಲಿ ಕಬಡ್ಡಿ ತರಬೇತಿ ಪಡೆಯುತ್ತಿದ್ದಾಗ ಒಂದು ಮಳೆಗಾಲದ ದಿನ ತಡವಾಗಿಬಿಟ್ಟಿತು. ಇನ್ನೇನು ಮನೆಗೆ ಹೋಗಬೇಕೆನ್ನುವ ಹೊತ್ತಿಗೆ ಧೋ ಎಂದು ಮಳೆ ಶುರುವಾಯಿತು. ಹತ್ತಿರದಲ್ಲೇ ಇದ್ದ ಗಂಗಮ್ಮ ದೇವಸ್ಥಾನದೊಳಗೆ ಸ್ನೇಹಿತರೊಂದಿಗೆ ಹೋದೆ. ಇತ್ತ ರಾತ್ರಿಯಾದರೂ ಮಕ್ಕಳು ಮನೆಗೆ ಬರಲಿಲ್ಲವಲ್ಲ ಎಂಬ ಆತಂಕದಿಂದ ಪೋಷಕರು ನಮ್ಮನ್ನು ಹುಡುಕುತ್ತಾ ಬಂದರು.
ನಾವೂ ಅದೇ ಹೊತ್ತಿಗೆ ಶಾಲಾ ದಾರಿಯಲ್ಲೇ ಮನೆಗೆ ತೆರಳಲು ಹೊರಟೆವು. ಆ ಕತ್ತಲಲ್ಲಿ ಮನೆಯವರು ಬ್ಯಾಟರಿ ಹಿಡಿದು ಬರುತ್ತಿದ್ದನ್ನು ಗುರುತಿಸಿದ ಸ್ನೇಹಿತ ಕೋನಪ್ಪ ರೆಡ್ಡಿ ಜೋರಾಗಿ ಕೂಗಿ ಅವರ ಗಮನ ಸೆಳೆದ. ನಂತರ ಎಲ್ಲರೂ ಕ್ಷೇಮವಾಗಿ ಮನೆಗೆ ತಲುಪಿದೆವು. ರಾತ್ರಿಯಿಡೀ ಜೋರಾಗಿ ಮಳೆ ಸುರಿದು, ನಮ್ಮೂರಿನ ಕೆರೆಗೆ ಕೋಡಿಯೂ ಬಿದ್ದಿತ್ತು.
–ಮಲ್ಲಿಕಾರ್ಜುನ ಕೆ.ಆರ್., ಶ್ರೀನಿವಾಸಪುರ, ಕೋಲಾರ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.