ಭಾನುವಾರ, ಸೆಪ್ಟೆಂಬರ್ 26, 2021
21 °C
ಅಧಿಕಾರ ಪಡೆಯಲು ಬಿಜೆಪಿ, ಕಾಂಗ್ರೆಸ್‌ ಕಾರ್ಯತಂತ್ರ, ಎರಡೂ ಪಕ್ಷಗಳಲ್ಲಿ ಹೆಚ್ಚಿದ ಟಿಕೆಟ್‌ ಆಕಾಂಕ್ಷಿಗಳು

ಗುಂಡ್ಲುಪೇಟೆ: ಪುರಸಭೆ ಚುಕ್ಕಾಣಿ ಯಾರಿಗೆ?

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಪುರಸಭೆ ಚುನಾವಣಾ ವೇಳಾ ಪಟ್ಟಿ ಪ್ರಕಟವಾಗುತ್ತಲೇ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿದ್ದು, ರಾಜಕೀಯ ಪಕ್ಷಗಳು ಚುನಾವಣಾ ಲೆಕ್ಕಾಚಾರ, ಕಾರ್ಯತಂತ್ರದಲ್ಲಿ ಮುಳುಗಿದ್ದಾರೆ.

ಪಕ್ಷಗಳಲ್ಲಿ ಹಲವು ಟಿಕೆಟ್‌ ಆಕಾಂಕ್ಷಿಗಳು ಹುಟ್ಟುಕೊಂಡಿದ್ದಾರೆ. ಕುಡಿಯುವ ನೀರಿನ ಅಭಾವ ಹಾಗೂ ಸ್ವಚ್ಛತೆ ಕೊರತೆಯ ಸಮಸ್ಯೆಯಿಂದ ಬಳಲುತ್ತಿರುವ ಗುಂಡ್ಲುಪೇಟೆ ಪಟ್ಟಣದ ವಿವಿಧ ಬಡಾವಣೆಗೆ ಹೊಸ ಹೊಳಪು ನೀಡುವ ಭರವಸೆಗಳನ್ನು ನೀಡುತ್ತಾ ಟಿಕೆಟ್‌ಗಾಗಿ ಮುಖಂಡರ ಬೆನ್ನು ಹತ್ತಿದ್ದಾರೆ. ಒಂದು ವೇಳೆ ಪಕ್ಷದ ಟಿಕೆಟ್ ಸಿಗದಿದ್ದರೆ, ಸ್ವತಂತ್ರವಾಗಿ ಸ್ಪರ್ಧಿಸುವ ಯೋಚನೆಯಲ್ಲಿಯೂ ಇದ್ದಾರೆ. 

ಬಿಜೆಪಿ, ಕಾಂಗ್ರೆಸ್, ಬಿಎಸ್‌ಪಿ ಚುನಾವಣಾ ತಯಾರಿ ಆರಂಭಿಸಿವೆ. ಯಾವ ವಾರ್ಡ್‌ನಲ್ಲಿ ಯಾವ ಅಭ್ಯರ್ಥಿ ಸೂಕ್ತ ಎಂಬುದರ ಬಗ್ಗೆ ಮುಖಂಡರ ಅನಿಸಿಕೆಗಳನ್ನು ಪಡೆಯಲು ಮುಖಂಡೆ ಪೂರ್ವಭಾವಿ ಸಭೆಗಳನ್ನು ಕರೆದಿವೆ.

ಈ ಬಾರಿ ವಾರ್ಡ್‌ಗಳ ಮೀಸಲಾತಿ ಬದಲಾಗಿದ್ದು, ಹಾಲಿ ಸ‌ಸದಸ್ಯರಾಗಿದ್ದುಕೊಂಡು ಮತ್ತೆ ಸ್ಪರ್ಧಿಸಲು ಬಯಸುವವರು ಬೇರೆ ಬೇರೆ ವಾರ್ಡ್‌ಗಳನ್ನು ಹುಡುಕಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. 

ಪುರಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಇದ್ದಂತೆ ಕಾಣುತ್ತದೆ. ಗೆಲ್ಲುವ ಸಾಮರ್ಥ್ಯ ನೋಡಿ ಅಭ್ಯರ್ಥಿಗಳಿಗೆ ಮಣೆ ಹಾಕಲು ಎರಡೂ ಪಕ್ಷಗಳು ನಿರ್ಧರಿಸಿವೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ಮುಖಂಡರಿಗೆ ತಲೆ ನೋವಾಗಿ ಪರಿಣಮಿಸಿದೆ. ಟಿಕೆಟ್‌ ತಪ್ಪಿದ ಆಕಾಂಕ್ಷಿಗಳು ಬಂಡಾಯವೆದ್ದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಧಿಕಾರವನ್ನು ಪಡೆಯಲು ಗೆಲುವಿನ ನಗೆ ಬರುವವರಿಗೆ ಟಿಕೆಟ್ ನೀಡಲು ಚಿಂತಿಸಿದ್ದಾರೆ. ಆದರೆ ಎರಡು ಪಕ್ಷದಲ್ಲೂ ಆಕಾಂಕ್ಷಿಗಳು ಹೆಚ್ಚಿರುವುದರಿಂದ ಬಂಡಾಯದ ಭೀತಿಯೂ ಎದುರಾಗಿದೆ.

ಯಾವ ಪಕ್ಷದಿಂದ ಆಯ್ಕೆಯಾದವರೂ ತಮ್ಮ ವಾರ್ಡ್‌ಗಳ ಅಭಿವೃದ್ಧಿಗೆ ಶ್ರಮಿಸಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ. ಹಾಗಾಗಿ, ಪಕ್ಷಗಳು ಯಾರಿಗೆ ಟಿಕೆಟ್‌ ನೀಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. 

ಪಕ್ಷಾಂತರ ರಾಜಕೀಯ: ಕಳೆದ ಅವಧಿಯಲ್ಲಿ ಪಕ್ಷಾಂತರ ಪರ್ವಕ್ಕೆ ಪುರಸಭೆ ಸಾಕ್ಷಿಯಾಗಿತ್ತು. 23 ವಾರ್ಡ್‌ಗಳ ಪೈಕಿ ಕಳೆದ ಬಾರಿ 1‌4 ಕಾಂಗ್ರೆಸ್‌ ಹಾಗೂ 9ರಲ್ಲಿ ಬಿಜೆಪಿ ಜಯಗಳಿಸಿತ್ತು. ಬಹುಮತಗಳಿಸಿದ್ದ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಪಕ್ಷದ ಒಳ ಒಪ್ಪಂದದಂತೆ (ಐವರಿಗೆ ತಲಾ ಒಂದೊಂದು ವರ್ಷ ಅಧ್ಯಕ್ಷ ಸ್ಥಾನ) ಚಂದ್ರಪ್ಪ, ರಮೇಶ್ ಮತ್ತು ಭಾಗ್ಯಮ್ಮ ಅಧಿಕಾರ ನಡೆಸಿದ್ದರು.

ಬಳಿಕ ಕೆಜಿಪಿಯಿಂದ ಗೆದ್ದಿದ್ದ 8 ಮಂದಿ ಸದಸ್ಯರು ಪಿ.ಗಿರೀಶ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಡೆ ವಾಲಿದ್ದರು. ಹಾಗಾಗಿ ಪಿ.ಗಿರೀಶ್ ಅವರು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಒಂದು ವರ್ಷದ ಬಳಿಕ ಅವರು ಅಧಿಕಾರ ಹಸ್ತಾಂತರ ಮಾಡದೇ ಇದ್ದಾಗ, ಮತ್ತೆ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಗಿರೀಶ್‌ ಅವರು 8 ಕೆಜಿಪಿ ಸದಸ್ಯರು ಹಾಗೂ ನಾಲ್ವರು ಕಾಂಗ್ರೆಸ್‌ ಸದಸ್ಯರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿ ಅಧಿಕಾರ ಮುಂದುವರಿಸಿದರು. ಈ ಬೆಳವಣಿಗೆಗಳಿಂದ ಪುರಸಭೆ ಬಿಜೆಪಿ ಕೈವಶವಾಯಿತು.

ವಾರ್ಡ್‌ಗಳ ಮೀಸಲು ಬದಲು: ಹಾಲಿ ಸದಸ್ಯರಲ್ಲಿ ಕೆಲವರು ತಮ್ಮ ಜನಾಂಗದ ಬೆಂಬಲದಿಂದ ಗೆದ್ದಿದ್ದರು. ಬಳಿಕ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ, ತಮ್ಮ ಮನೆಯ ಬೀದಿಗಳಿಗೆ ಅನುದಾನ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

ಕೆಲವು ಹಾಲಿ ಸದಸ್ಯರಿಗೆ ಈ ಬಾರಿ ಟಿಕೆಟ್‌ ಕೈತಪ್ಪಲಿದೆ ಎಂದು ಹೇಳಲಾಗುತ್ತಿದೆ. ವಾರ್ಡ್‌ನ ಮೀಸಲು ಬದಲಾಗಿರುವುದರಿಂದ ಕೆಲ ಸದಸ್ಯರು ತಮ್ಮ ಕುಟುಂಬದವರನ್ನು ರಾಜಕೀಯಕ್ಕೆ ತರಲು ಚಿಂತನೆ ಮಾಡಿದ್ದಾರೆ. ಪತ್ನಿ ಅಥವಾ ಕುಟುಂದ ಸದಸ್ಯರನ್ನು ಕಣಕ್ಕಿಳಿಸಿ ಗೆಲ್ಲಿಸುವುದು ಅವರ ಚಿಂತನೆ. ಅವರು ಗೆದ್ದರೂ ಅಧಿಕಾರ ತಮ್ಮ ಹಿಡಿತದಲ್ಲಿ ಇರುತ್ತದೆ ಎಂಬುದು ಅವರ ನಂಬಿಕೆ.

ಸೋಲುವ ಬೀತಿಯಿಂದ ಈ ಬಾರಿ ಕೆಲವರು ಚುನಾವಣೆಯಿಂದ ಹಿಂದೆ ಸರಿಯಲು ನಿರ್ಧಾರ ಮಾಡಿದ್ದಾರೆ ಎಂದೂ ತಿಳಿದುಬಂದಿದೆ.

ನಿರಂಜನ್‌ಕುಮಾರ್‌, ಗಣೇಶ್‌ ಪ್ರಸಾದ್‌ಗೆ ಪ್ರತಿಷ್ಠೆಯ ಪ್ರಶ್ನೆ

ಪುರಸಭಾ ಚುನಾವಣೆ ಬಿಜೆಪಿ ಶಾಸಕ ಸಿ.ಎಸ್‌.ನಿರಂಜನ್ ಕುಮಾರ್‌ ಮತ್ತು ಕಾಂಗ್ರೆಸ್‌ ಮುಖಂಡ ಎಚ್‌.ಎಂ.ಗಣೇಶ್‌ ಪ್ರಸಾದ್‌ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಕಾಂಗ್ರೆಸ್‌ ನಾಯಕರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರು ಬದುಕಿದ್ದಾಗ ಇಡೀ ವಿಧಾನಸಭಾ ಕ್ಷೇತ್ರದ ಮೇಲೆ ಅವರು ಪ್ರಬಲ ಹಿಡಿತಗೊಂದಿದ್ದರು. ಅವರು ಹೇಳಿದ್ದೇ ನಡೆಯುತ್ತಿತ್ತು. ಅಭ್ಯರ್ಥಿಯನ್ನು ಆರಿಸುವಾಗ ಅವರ ಆಯ್ಕೆಗೆ ಅಂತಿಮವಾಗಿತ್ತು. ಅವರ ನಿಧನದ ನಂತರ ಕ್ಷೇತ್ರದ ರಾಜಕೀಯ ಚಿತ್ರಣ ಬದಲಾಗಿದೆ. ಬಿಜೆಪಿ ಪ್ರಬಲವಾದಂತೆ ಕಾಣುತ್ತಿದೆ.

ಮಹದೇವ ಪ್ರಸಾದ್‌ ನಿಧನದ ನಂತರ ನಡೆದಿದ್ದ ಉಪ ಚುನಾವಣೆಯಲ್ಲಿ ಅವರ ಪತ್ನಿ ಎಂ.ಸಿ. ಮೋಹನಕುಮಾರಿ ಆಯ್ಕೆಯಾದರು. ಅದೇ ಕೊನೆ. ಆ ಬಳಿಕ ಕಾಂಗ್ರೆಸ್‌ಗೆ ಕ್ಷೇತ್ರದಲ್ಲಿ ಹಿನ್ನಡೆ ಮೇಲೆ ಹಿನ್ನಡೆ ಅನುಭವಿಸುತ್ತಾ ಬಂದಿದೆ. 

ಕಳೆದ ವರ್ಷ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ನಿರಂಜನ್‌ ಕುಮಾರ್‌ ಅವರು ಮೊದಲ ಬಾರಿಗೆ 17 ಸಾವಿರ ಮತಗಳ ಅಂತರದಿಂದ ಗೆದ್ದು ಶಾಸಕರಾದರು. ಬಳಿಕ ತೆರಕಣಾಂಬಿ ತಾಲ್ಲೂಕು ಪಂಚಾಯತಿ ಸದಸ್ಯ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಜೇತರಾದರು. ಕೆಲ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರಿಗೇ ಜಯ ಸಿಕ್ಕಿದೆ.

ಇದೀಗ ಪುರಸಭೆಯಲ್ಲೂ ಅಧಿಕಾರ ಹಿಡಿಯಬೇಕು ಎಂಬ ನಿಟ್ಟಿನಲ್ಲಿ ನಿರಂಜನ್‌ ಕುಮಾರ್‌ ಪ್ರಯತ್ನ ಪಡುತ್ತಿದ್ದಾರೆ. ಶಾಸಕರ ಗೆಲುವಿಗೆ ಶ್ರಮವಹಿಸಿದವರು ಕೂಡ ತಮಗೆ ಟಿಕೆಟ್ ಬೇಕು ಎಂದು ಮನವಿ ಮಾಡಿದ್ದಾರೆ. 

ಮಹದೇವ ಪ್ರಸಾದ್‌ ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕತ್ವ ವಹಿಸಿರುವ ಅವರ ಮಗ ಎಚ್.ಎಂ.ಗಣೇಶ್ ಪ್ರಸಾದ್ ಕೂಡ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್‌ನ ಹಿರಿಯ ಮುಖಂಡರು ಕೂಡ ಅವರ ಬೆನ್ನಿಗೆ ನಿಂತಿದ್ದಾರೆ. ಕೆಲವರು ತಮ್ಮ ಬೆಂಬಲಿಗರಿಗೆ ಟಿಕೆಟ್‌ ಕೊಡಿಸಲು ಪ್ರಯತ್ನವನ್ನೂ ನಡೆಸಿದ್ದಾರೆ.

***

23 ವಾರ್ಡ್‌ಗಳ ಸಂಖ್ಯೆ

21,170 ಮತದಾರರ ಸಂಖ್ಯೆ

10,372 ಪುರುಷರು

10,794 ಮಹಿಳೆಯರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.