ವನ್ಯಜೀವಿ ಫೋಟೊಗ್ರಫಿಯಲ್ಲಿ ‘ಹರಿ’ ಛಾಪು

7

ವನ್ಯಜೀವಿ ಫೋಟೊಗ್ರಫಿಯಲ್ಲಿ ‘ಹರಿ’ ಛಾಪು

Published:
Updated:

ಆ ಹುಡುಗನ ಬಾಲ್ಯ ಕಳೆದಿದ್ದೇ ಎರಡು ದಟ್ಟಡವಿಗಳ ಮಧ್ಯೆ. ಬಳ್ಳಾರಿ ಜಿಲ್ಲೆಯ ಸಂಡೂರು ಮತ್ತು ದೇವಗಿರಿ ನಡುವಿನ ಶಾಲಾ ಹಾದಿಯಲ್ಲಿ ಚಾಚಿಗೊಂಡಿದ್ದ ಎರಡು ಸಂರಕ್ಷಿತ ದಟ್ಟಡವಿ ಆ ಹುಡುಗನ ಕುತೂಹಲಕ್ಕೆ ಕಾರಣವಾಗಿತ್ತು. ಒಮ್ಮೊಮ್ಮೆ ನವಿಲು, ಜಿಂಕೆ, ಚಿರತೆ ಇತ್ಯಾದಿ ವನ್ಯಜೀವಿಗಳನ್ನೂ ಕಣ್ತುಂಬಿಕೊಳ್ಳುವ ಅವಕಾಶ ಆತನದಾಗಿತ್ತು. ಅಂದಿನಿಂದಲೇ ವನ್ಯಜೀವಿಗಳತ್ತ ಆಸಕ್ತಿ ಬೆಳೆಸಿಕೊಂಡ ಆ ಹುಡುಗನೇ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಹರಿ ಸೋಮಶೇಖರ್.


ಹರಿ ಸೋಮಶೇಖರ್

ರಾಜಕಾರಣಿ ಎಂ.ವೈ. ಘೋರ್ಪಡೆ ಅವರು ರೂಪಿಸಿದ್ದ ಕ್ಯಾಲೆಂಡರಿನ ಚಿತ್ರಗಳೂ ಹರಿ ಅವರ ಮನಸೆಳೆದಿದ್ದವು. ಸಂಡೂರಿನ ವಸತಿ ಶಾಲೆಯಲ್ಲಿ ಓದುವಾಗ ಘೋರ್ಪಡೆ ಅವರ ಹತ್ತಾರು ಬಗೆಯ ವನ್ಯಜೀವಿ ಛಾಯಾಚಿತ್ರಗಳನ್ನು ನೋಡಿ ತಾನೂ ಛಾಯಾಗ್ರಾಹಕನಾಗಬೇಕೆಂಬ ಕನಸು ಕಂಡಿದ್ದರು ಹರಿ. ಆದರೆ, ಆ ಕನಸು ಈಡೇರಲು ಅವರು 2009ರವರೆಗೆ ಕಾಯಬೇಕಾಯಿತು.

ಹರಿ ಓದು ಮುಗಿಸಿ ಬೆಂಗಳೂರಿಗೆ ಬಂದರು. ಎಂಟು ವರ್ಷ ಕಾರ್ಪೊರೇಟ್ ಕಂಪನಿಯೊಂದರಲ್ಲಿ ಕೈತುಂಬಾ ಆದಾಯ ತರುವ ಹುದ್ದೆ ಇದ್ದರೂ ಮನದಲ್ಲಿ ಏನೋ ಅತೃಪ್ತಿ. ವನ್ಯಜೀವಿಗಳದ್ದೇ ಗುಂಗು. ಕೆಲಸಕ್ಕೆ ಗುಡ್‌ಬೈ ಹೇಳಿದ ಹರಿ ಸೇರಿಕೊಂಡಿದ್ದು ವನ್ಯಜೀವಿಗಳ ಕುರಿತು ಕೆಲಸ ಮಾಡುವ ಸ್ವಯಂಸೇವಾ ಸಂಸ್ಥೆಗೆ. ಅಲ್ಲಿ ಸ್ವಂತ ದುಡ್ಡಿನಲ್ಲೇ ಕೆಲವರ್ಷ ದುಡಿದರು. ಪ್ರತಿ ವಾರ ಕಾಡಿಗೆ ತೆರಳಿ ಅಲ್ಲಿನ ಸೊಬಗು, ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳುವ ಕೆಲಸವದು. ಮನದಲ್ಲಿ ಕನಸು ಚಿಗುರೊಡೆದು ಸಣ್ಣ ಕ್ಯಾಮೆರಾ ಖರೀದಿಸಿದ ಅವರು ವನ್ಯಜೀವಿ ಛಾಯಾಗ್ರಹಣದಲ್ಲಿ ತೊಡಗಿಸಿಕೊಂಡರು. ಸಣ್ಣ ಕ್ಯಾಮೆರಾದಲ್ಲಿ ಕೈ ಪಳಗಿದ ಬಳಿಕವೇ ದುಬಾರಿ ಕ್ಯಾಮೆರಾ ಖರೀದಿಸಿದರು ಹರಿ.

ಬರೀ ಹುಲಿ,ಸಿಂಹ, ನವಿಲಿನ ಚಿತ್ರ ತೆಗೆದರೆ ಹತ್ತು ಸಾವಿರ ಛಾಯಾಗ್ರಾಹಕರಲ್ಲಿ ನಾನೂ ಒಬ್ಬನಾಗುವೆನೆಂಬ ಚಿಂತನೆ. ಅದಕ್ಕಾಗಿ ವನ್ಯಜೀವಿ ಜಗತ್ತಿನ ಅಪರೂಪದ ಪ್ರಾಣಿ ಪಕ್ಷಿಗಳಾದ ತೋಳ, ಕತ್ತೆಕಿರುವ, ಗ್ರೇಟ್ ಇಂಡಿಯನ್ ಬಸ್ಟರ್ಡ್, ಹಿಮಚಿರತೆ ಇತ್ಯಾದಿಗಳ ಚಿತ್ರ ಸೆರೆಹಿಡಿದರು ಹರಿ. ವರ್ಷಗಟ್ಟಲೆ ಕಾದಿದ್ದಕ್ಕೆ 2017ರಲ್ಲಿ ಅಪರೂಪಕ್ಕೆಂಬಂತೆ ಹಿಮಚಿರತೆಯ ಚೆಂದದ ಚಿತ್ರ ದೊರೆತ ತೃಪ್ತಿ ಅವರಿಗೆ.

ವನ್ಯಜೀವಿ ಫೋಟೊಗ್ರಫಿಗಾಗಿ ರಾಜಸ್ಥಾನ, ಉತ್ತರಾಖಂಡ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಹೀಗೆ 13ಕ್ಕೂ ಹೆಚ್ಚು ರಾಜ್ಯಗಳನ್ನು ಸುತ್ತಿರುವ ಅವರು, ‘ವರ್ಲ್ಡ್‌ ವೈಡ್ ಫಂಡ್ ಫಾರ್ ನೇಚರ್ ಇಂಡಿಯಾ’ ಎನ್ನುವ ಸ್ವಯಂಸೇವಾ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದಾರೆ. ಅಲ್ಲಿ ದೊರೆಯುವ ಆದಾಯವೇ ಫೋಟೊಗ್ರಫಿಯ ಹೊಟ್ಟೆ ತುಂಬಿಸುತ್ತಿದೆ ಅರಣ್ಯ ಇಲಾಖೆಯ ‘ವೈಲ್ಡ್ ಲೈಫ್ ವಾರ್ಡನ್’ ಗೌರವಕ್ಕೆ ಭಾಜನಾಗಿರುವ ಹರಿ ಇದುವರೆಗೆ ಯಾವ ಸ್ಪರ್ಧೆಗಳಿಗೂ ಫೋಟೊ ಕಳಿಸಿಲ್ಲವಂತೆ. ಅಪರೂಪಕ್ಕೆ ಸ್ಪರ್ಧೆಗೆ ಕಳಿಸಿದ್ದ ಹಿಮಾಲಯದ ಬ್ಲೂ ಶೀಪ್ ಪ್ರಾಣಿಯ ಚಿತ್ರಕ್ಕೆ ಫೋಟೊಗ್ರಫಿಕ್ ಸೊಸೈಟಿ ಆಫ್ ಅಮೆರಿಕದಿಂದ ಚಿನ್ನದ ಪದಕದ ಪುರಸ್ಕಾರ ಸಿಕ್ಕಿದೆ.

ಹಿಮಾಲಯದಲ್ಲಿ 15 ಸಾವಿರ ಅಡಿ ಎತ್ತರದಲ್ಲಿ ಟೆಂಟ್ ಹಾಕಿಕೊಂಡು ಮೈನಸ್ ಇಪ್ಪತ್ತು ಡಿಗ್ರಿಯಲ್ಲಿ ಹಿಮಚಿರತೆಯ ಚಿತ್ರ ತೆಗೆದದ್ದು ಹರಿ


ಹಿಮಚಿರತೆ

ಪಾಲಿಗೆ ಸವಾಲಿನದಾಗಿತ್ತು. ಮೈನಡುಗುವ ಚಳಿಯಲ್ಲಿ ಹಿಮದ ಮೇಲೆ ನಡೆದುಕೊಂಡು ಚಿರತೆಯ ಹೆಜ್ಜೆಯ ಜಾಡು ಹಿಡಿದು, ಜೀವ ಕೈಯಲ್ಲಿಟ್ಟುಕೊಂಡು ಫೋಟೊಗ್ರಫಿ ಮಾಡೋದು ದೊಡ್ಡ ಸವಾಲಿನದಾಗಿತ್ತು. ಉತ್ತರಾಖಂಡದ ತುಂಗನಾಥ್‌ನಲ್ಲಿ 12 ಸಾವಿರ ಅಡಿ ಎತ್ತರದಲ್ಲಿ ಹಿಮಾಲಯನ್ ಮೋನಾಲ್ ಎನ್ನುವ ವರ್ಣರಂಜಿತ ಪಕ್ಷಿಯ ಫೋಟೊ ತೆಗೆದದ್ದು ಸ್ಮರಣೀಯ. ತಮ್ಮ ಬತ್ತಳಿಕೆಯಲ್ಲಿ ಇಂಥ ಹತ್ತುಹಲವು ಸವಾಲಿನ ಸಂಗತಿಗಳಿವೆ. ಆದರೆ, ಉತ್ತಮ ಚಿತ್ರ ದೊರೆತಾಗ ಆ ಸವಾಲು ಸಾರ್ಥಕ ಎನಿಸುತ್ತದೆ ಎನ್ನುತ್ತಾರೆ ಅವರು.

ವನ್ಯಜೀವಿ ಛಾಯಾಗ್ರಹಣಕ್ಕೆ ಬರುವ ಹೊಸಬರು ಮೊದಲು ನಿರ್ದಿಷ್ಟ ಕ್ಷೇತ್ರ ಗುರುತಿಸಿಕೊಳ್ಳಬೇಕು. ನೀವು ಹುಲಿಯ ಫೋಟೊಗಳನ್ನಷ್ಟೇ ತೆಗೆಯಬೇಕೆಂದುಕೊಂಡರೆ ಬಂಡೀಪುರ–ನಾಗರಹೊಳೆಗೆ ಮಾತ್ರ ಹೋಗಬೇಡಿ. ದೇಶದ ವಿವಿಧ ಹುಲಿಯ ತಾಣಗಳಿಗೆ ಭೇಟಿ ಕೊಡಿ ಅಲ್ಲಿ ಲಾರ್ಜರ್ ಪಿಕ್ಚರ್ ಅನ್ನೇ ತೆಗೆಯಿರಿ. ಅದುವೇ ನಿಮ್ಮ ಅನನ್ಯ ಗುರುತಾದೀತು. ವನ್ಯಜೀವಿ ಸಂರಕ್ಷಣೆಗೆ ನಿಮ್ಮ ಫೋಟೊಗ್ರಫಿಗೆ ಪೂರಕವಾಗಿರಲಿ. ಬೇಸಿಕ್ ಕ್ಯಾಮೆರಾ ತಗೊಂಡು ಅದರಲ್ಲಿನ ಎಲ್ಲಾ ಕೌಶಲ ಕಲಿತು, ಒಳ್ಳೆಯ ಕ್ಯಾಮೆರಾ ಖರೀದಿಸುವುದು ಒಳಿತು ಎನ್ನುವ ಸಲಹೆ ಹರಿ ಅವರದ್ದು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !