ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಶುರುವಾದರೆ ಕಾಯಿಲೆಯೂ ಶುರುವಾಗಬೇಕೆ?

Published 27 ಜೂನ್ 2023, 1:07 IST
Last Updated 27 ಜೂನ್ 2023, 1:07 IST
ಅಕ್ಷರ ಗಾತ್ರ

ಬೇಸಿಗೆಯ ರಜೆಯಲ್ಲಿ ಎರಡು ತಿಂಗಳುಗಳ ಕಾಲ ಮನೆಯಲ್ಲಿ ಮಜಾ ಮಾಡುತ್ತಿದ್ದ ಮಕ್ಕಳು ಶಾಲೆ ಪ್ರಾರಂಭವಾಗುತ್ತಿದ್ದಂತೆ ಅನಾರೋಗ್ಯ ಪೀಡಿತರಾದರೆ ಹೆತ್ತವರು ಆತಂಕಕ್ಕೆ ಒಳಗಾಗುವುದು ಸಹಜ. ಮನೆಯಲ್ಲಿ ಆರಾಮವಾಗಿದ್ದವರು ಶಾಲೆ ಶುರುವಾದ ನಂತರ ರೋಗಗ್ರಸ್ತರಾಗಲು ಶಾಲೆಯ ನೀರು, ಶೌಚಾಲಯ ಅಥವಾ ವಾತಾವರಣದಲ್ಲಿ ಏನಾದರು ಲೋಪವಿರಬಹುದೆಂದು ಶಂಕಿಸುವ ಮಂದಿಯೂ ಇದ್ದಾರೆ. ಶಾಲಾ ವಯಸ್ಸಿನ ಮಕ್ಕಳು ಕೆಲವು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವುದು ನೈಸರ್ಗಿಕ ಪ್ರಕ್ರಿಯೆ ಎಂದು ಅವರಿಗೆ ತಿಳಿಹೇಳಿದರೆ ಹೆತ್ತವರ ಆತಂಕ ಸ್ವಲ್ಪ ಕಡಿಮೆಯಾಗಬಹುದು. ರಾಜಾದಿನಗಳನ್ನು ಮನೆಯಲ್ಲಿ ಮಕ್ಕಳು ಕಳೆಯುವಾಗ ಅವರು ಹೊರಗಡೆಯ ವಾತಾವರಣದಲ್ಲಿರುವ ಅನೇಕ ಸಾಂಕ್ರಾಮಿಕ ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಂದ ದೂರವಿರುತ್ತಾರೆ. ಶಾಲೆಯ ಆರಂಭವಾಯಿತೆಂದರೆ, ಹಲವು ವಿವಿಧ ಬಡಾವಣೆ ಮತ್ತು ಊರುಗಳಿಂದ ವಿವಿಧ ಮಕ್ಕಳು ಒಂದೇ ಸೂರಿನಡಿ ಸೇರುತ್ತಾರೆ. ಆಯಾ ಪ್ರದೇಶಗಳಿಂದ ಮಕ್ಕಳು ಒಂದೇ ಸೂರಿನ ಕೆಳಗೆ ವಿವಿಧ ಸೋಂಕುಗಳನ್ನು ತರುತ್ತಾರೆ. ಒಂದು ಮಗುವಿಗೆ ವೈರಲ್ ಸೋಂಕು ಬಂದಿತೆಂದರೆ ಅದು ಗಾಳಿಯ ಮೂಲಕ ಮತ್ತೊಬ್ಬರಿಗೆ ಹರಡುತ್ತಾ ಹೋಗಿ ಉಳಿದ ಮಕ್ಕಳಲ್ಲೂ ಸೋಂಕನ್ನು ಉಂಟುಮಾಡುತ್ತದೆ. ಒಂದೇ ಕೋಣೆಯೊಳಗೆ ಕುಳಿತು, ಒಂದೇ ಗಾಳಿಯನ್ನು ಉಸಿರಾಡುವಾಗ ಈ ಮಾದರಿಯ ಸೋಂಕು ಹರಡದಂತೆ ತಡೆಯುವುದು ಸಾಧ್ಯವಿಲ್ಲ.

ಮಕ್ಕಳು ಬೆಳೆಯುವ ಹಂತದಲ್ಲಿ ವಿವಿಧ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಸೋಂಕು ತಗುಲಿದಾಗ ಅವರ ದೇಹದ ರೋಗನಿರೋಧಕ ವ್ಯವಸ್ಥೆಯು ಜಾಗೃತಗೊಂಡು ‘ಆ್ಯಂಟಿಬಾಡಿ’ಗಳು ಉತ್ಪತ್ತಿಯಾಗುತ್ತವೆ. ವಿವಿಧ ರೋಗಾಣುಗಳ ವಿರುದ್ಧ ಆ್ಯಂಟಿಬಾಡಿ ಉತ್ಪಾದನೆಯಾಗುತ್ತಾ ಹೋದಂತೆ ದೇಹದ ರೋಗನಿರೋಧಕ ಶಕ್ತಿ ಬೆಳೆಯುತ್ತದೆ. ಈ ಆ್ಯಂಟಿಬಾಡಿಗಳು ಅದೇ ರೋಗಾಣುಗಳು ಮತ್ತೆ ದೇಹದೊಳಗೆ ಸೋಂಕು ತರುವುದನ್ನು ತಡೆಯುತ್ತದೆ. ಒಂದು ಪ್ರಬೇಧದ ರೋಗಾಣುವಿನ ವಿರುದ್ಧ ಸೃಷ್ಟಿಯಾದ ಆ್ಯಂಟಿಬಾಡಿಗಳು ಅದೇ ಪ್ರಭೇದ ಇತರ ರೋಗಾಣುಗಳ ವಿರುದ್ಧವೂ ಅಲ್ಪ ಮಟ್ಟಿಗಿನ ರಕ್ಷಣೆಯನ್ನು ಒದಗಿಸುತ್ತದೆ. ಹಾಗಾಗಿ ಶಾಲಾಮಕ್ಕಳಿಗೆ ಬರುವ ಶೀತ, ಜ್ವರ, ಗಂಟಲುನೋವು ಮುಂತಾದ ಸೋಂಕುಗಳು ಅವರ ದೇಹದ ರೋಗ ನಿರೋಧಕ ಶಕ್ತಿಯನ್ನು ಸಕ್ರಿಯಗೊಳಿಸುವ ಕೆಲಸವನ್ನೂ ಮಾಡುತ್ತದೆ. ವಾತಾವರಣದಲ್ಲಿ ಲಕ್ಷಾಂತರ ವೈರಾಣುಗಳಿವೆ ಅದರಲ್ಲಿ ಹೆಚ್ಚಿನವು ಗಂಭೀರ ಸೋಂಕನ್ನು ಉಂಟು ಮಾಡುವುದಿಲ್ಲ. ಅದರೆ ಈ ವೈರಾಣುಗಳಿಗೆ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಮತ್ತೊಂದು ಜೀವಿಯ ಕೋಶದೊಳಗೆ ಪ್ರವೇಶಿಸುವುದು ಅವರುಗಳಿಗೆ ಅನಿವಾರ್ಯ. ಹಾಗಾಗಿ ವೈರಾಣುಗಳು ತಾವು ಉಳಿಯಲು ಮತ್ತು ಬೆಳೆಯಲು ಮನುಷ್ಯನ ದೇಹವನ್ನು‌ ನಂಬಿಕೊಂಡಿರುವ ಕಾರಣ ಈ ವೈರಲ್ ಸೋಂಕುಗಳು ಶಾಲೆಯಲ್ಲಿ ಮಕ್ಕಳಿಂದ ಮಕ್ಕಳಿಗೆ ಹರಡುವುದು ಸ್ವಾಭಾವಿಕ ಪ್ರಕ್ರಿಯೆ.

ಕೋವಿಡ್ ಲಾಕ್ಡೌನ್ ಸಮಯದಲ್ಲಿ ಸುಮಾರು ಎರಡು ವರ್ಷಗಳ ಕಾಲ ಶಾಲಾ–ಕಾಲೇಜುಗಳು ತೆರೆದಿರಲಿಲ್ಲ. ಈ ಸಮಯದಲ್ಲಿ ಮನೆಯಲ್ಲೆ ಇದ್ದ ಮಕ್ಕಳಿಗೆ ಶೀತ ಮತ್ತು ಜ್ವರ ತರುವ ಯಾವುದೇ ಸೋಂಕು ತಗಲುವ ಸಾಧ್ಯತೆಗಳು ಇರಲಿಲ್ಲ. ಆ ಸಮಯದಲ್ಲಿ ಮಕ್ಕಳು ಮಾತ್ರವಲ್ಲದೆ ಹೊರಗಡೆ ಓಡಾಡುವ ವಯಸ್ಕರರು ಕೂಡ ಮಾಸ್ಕ್ ಬಳಸುತ್ತಿದ್ದ ಕಾರಣದಿಂದ ಹಿರಿಯರಲ್ಲಿಯೂ ಶೀತ ಮತ್ತು ಜ್ವರ ಹೆಚ್ಚಾಗಿ ಕಂಡು ಬರಲಿಲ್ಲ‌. ಈ ಎರಡು ವರ್ಷಗಳ ಕಾಲ ಮಕ್ಕಳು ಆ ವಯಸ್ಸಿನಲ್ಲಿ ಸ್ವಾಭಾವಿಕವಾಗಿ ಸೋಂಕನ್ನು ಉಂಟು ಮಾಡುತ್ತಿದ್ದ ನೂರಾರು ರೋಗಾಣುಗಳ ಸೋಂಕಿನಿಂದ ರಕ್ಷಿತರಾದರು. ಆದರೆ ಅವರ ದೇಹದಲ್ಲಿ ಈ ರೋಗಾಣುಗಳ ಸೋಂಕನ್ನು ತಡೆಗಟ್ಟುವ ರೋಗನಿರೋಧಕ ಶಕ್ತಿಯಿಲ್ಲ. ಇದೇ ಕಾರಣದಿಂದ ಶಾಲೆ ಶುರುವಾದ ನಂತರ ಮಕ್ಕಳು ಪದೇ ಪದೇ ಶೀತ ಜ್ವರಗಳಿಗೆ ತುತ್ತಾಗುತ್ತಿದ್ದಾರೆ. ಶೀತ ಮತ್ತು ಜ್ವರವನ್ನು ಹೊರತು ಪಡಿಸಿ ಉಳಿದ ಸಾಂಕ್ರಾಮಿಕ ಚರ್ಮರೋಗಗಳು ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗ ಹರಡುತ್ತವೆ. ಚಿಕನ್ ಫಾಕ್ಸ್, ಕೈ-ಕಾಲು ಮತ್ತು ಬಾಯಿ ರೋಗಗಳು ಕೂಡ ವೈರಸ್ ಮೂಲಕ ಬರುವ ರೋಗಗಳಾದುದರಿಂದ ಒಬ್ಬರಿಗೆ ಬಂದರೆ ಶಾಲೆಯ ಇತರ ಮಕ್ಕಳಿಗೂ ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಚರ್ಮದಲ್ಲಿ ಕಜ್ಜಿಗಳು ಏಳುವ ಮತ್ತು ಜ್ವರ ಶುರುವಾಗುವ ಒಂದೆರಡು ದಿನಗಳ ಮೊದಲೇ ಮಕ್ಕಳು ಆ ಸೋಂಕನ್ನು ಅಕ್ಕಪಕ್ಕದ ಮಕ್ಕಳಿಗೆ ಹರಡಲು ಶುರುಮಾಡಿಬಿಟ್ಟಿರುತ್ತಾರೆ. ಹಾಗಾಗಿ ಸೋಂಕಿನ ರೋಗಲಕ್ಷಣಗಳು ಮಕ್ಕಳ ದೇಹದಲ್ಲಿ ವ್ಯಕ್ತವಾಗುವ ಮೊದಲೇ ಮಕ್ಕಳು ಸೋಂಕನ್ನು ಇತರರಿಗೆ ಹಬ್ಬಿಸಿರುವ ಕಾರಣದಿಂದ ಶಾಲೆಗಳಲ್ಲಿ ಮಕ್ಕಳಿಗೆ ಬರುವ ಸಾಮಾನ್ಯ ಸೋಂಕುಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಸಾಧ್ಯವಿಲ್ಲ.

ಸರ್ಕಾರದ ಕಡೆಯಿಂದ ಮಕ್ಕಳಿಗೆ ನೀಡಲ್ಪಡುವ ಲಸಿಕೆಗಳು ಕೇವಲ ಮಾರಣಾಂತಿಕ ರೋಗಗಳ ವಿರುದ್ಧ ರಕ್ಷಣೆ ನೀಡುವುದಕ್ಕೆ ಮಾತ್ರ ಸೀಮಿತವಾಗಿದೆ. ಲಸಿಕೆಯ ಆವಿಷ್ಕಾರದ ಇತಿಹಾಸವನ್ನು ನೀವು ಮೆಲುಕು ಹಾಕಿದರೆ ಮಾರಕ ರೋಗಗಳಿಗೆ ಮಾತ್ರ ಲಸಿಕೆಯನ್ನು ಉತ್ಪಾದನಾ ಮಾಡಲಾಗುತ್ತಿತ್ತು. ಪೋಲಿಯೋ, ಧನುರ್ವಾಯು, ಗಂಟಲಮಾರಿ, ನಾಯಿಕೆಮ್ಮ ಮುಂತಾದ ರೋಗಗಳು ‘ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ’ದಿಂದಾಗಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಟೈಫಾಯ್ಡ್, ಹಿಪಟೈಟಿಸ್–ಎ, ಚಿಕನ್ ಫಾಕ್ಸ್ , ಫ್ಲೂ ಮುಂತಾದ ರೋಗಗಳಿಗೆ ಲಸಿಕೆಗಳು ಸರ್ಕಾರದ  ಈ ಕಾರ್ಯಕ್ರಮದ ವ್ಯಾಪ್ತಿಯಲ್ಲಿ ಇಲ್ಲವಾದುದರಿಂದ ಆರ್ಥಿಕವಾಗಿ ಶಕ್ತರಾಗಿರುವವರು ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆಗಳನ್ನು ಪಡೆಯುತ್ತಾರೆ. ಐದು ವರ್ಷದ ಒಳಗಿನ ಮಕ್ಕಳಿಗೆ ಜೀವಹಾನಿ ಮಾಡಬಲ್ಲ ಎರಡು ಪ್ರಮುಖ ರೋಗಗಳಾದ ನ್ಯುಮೋನಿಯಾ ಮತ್ತು ವಾಂತಿ–ಭೇದಿಯನ್ನು ನಿಯಂತ್ರಸುವ ಬಗ್ಗೆ ಆಲೋಚನೆಗಳು ನಡೆದವು. ಒಂದು ವರ್ಷದ ಒಳಗಿನ ಮಕ್ಕಳಲ್ಲಿ ತೀವ್ರ ರೀತಿಯ ಭೇದಿಯನ್ನು ಉಂಟುಮಾಡುವ ರೋಟಾ ವೈರಸ್ ಮತ್ತು ಮಕ್ಕಳಲ್ಲಿ ನ್ಯುಮೋನಿಯಾ, ಕಿವಿಸೋರುವಿಗೆ ಮತ್ತು ಮೆದುಳಿನ ಪೊರೆಯ ಸೋಂಕನ್ನು ಉಂಟುಮಾಡಬಲ್ಲ ‘ಸ್ಟ್ರೆಪ್ಟೋಕೋಕಲ್ ನ್ಯುಮೋನಿಯೆ’ (streptococcal pneumoniae) ಬ್ಯಾಕ್ಟೀರಿಯಾದ ಸೋಂಕನ್ನು ತಡೆಯುವ ಲಸಿಕೆಗಳೂ ಈಗ ಲಭ್ಯವಿವೆ.

ಮಕ್ಕಳಿಗೆ ಬರಬಲ್ಲ ಪ್ರತಿಯೊಂದು ಸೋಂಕನ್ನು ತಡೆಯಲೇಬೇಕೆಂಬ ಹಠಕ್ಕೆ ಬಿದ್ದರೆ ಮಕ್ಕಳನ್ನು ಶಾಲೆಗೆ ಕಳಿಸದೆ ಮನೆಯಲ್ಲಿ ಕೂಡಿಡಬೇಕಾಗುತ್ತದೆ. ಆದರೆ ಅದು ಸಾಧ್ಯವಾಗುವ ಮಾತಲ್ಲ. ಪ್ರತಿಯೊಂದು ವೈರಸ್ ಅಥವಾ ಬ್ಯಾಕ್ಟೀರಿಯಾದ ಸೋಂಕನ್ನು ತಡೆಯಲು ಅದರ ವಿರುದ್ಧ ಲಸಿಕೆ ತಯಾರಿಸುವುದು, ಅದನ್ನು ಪೂರೈಸುವುದು ಸಾಧ್ಯವಾಗದ ಕೆಲಸ. ಎಲ್ಲ ಸೋಂಕಿಗಳಿಗೂ ಲಸಿಕೆಯ ಅವಶ್ಯಕತೆ ಕೂಡ ಇರುವುದಿಲ್ಲ. ಶಾಲೆ ಶುರುವಾದ ನಂತರ ಮಕ್ಕಳಲ್ಲಿ ಕಂಡು ಬರುವ ಸೋಂಕುಗಳನ್ನು ಸೂಕ್ತ ಸಮಯದಲ್ಲಿ ವೈದ್ಯಕೀಯ ನೆರವು ಪಡೆದು ಔಷಧಗಳ ನೆರವಿನಿಂದ ಗುಣಪಡಿಸಬಹುದು‌‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT