ಶನಿವಾರ, ಡಿಸೆಂಬರ್ 7, 2019
21 °C

ಇಲಿ ಜ್ವರ ಇರಲಿ ಎಚ್ಚರ

Published:
Updated:
Prajavani

ನಮ್ಮ ರಾಜ್ಯದ ಬಹುತೇಕ ಪ್ರದೇಶ ಈ ಬಾರಿ ಏಕಾಏಕಿ ಸುರಿದ ಭಾರಿ ಮಳೆಯಿಂದ ತತ್ತರಿಸಿದೆ. ನೆರೆ ತಂದಿಟ್ಟ ಸಂಕಷ್ಟಗಳಿಂದ ಹೊರಬರಲು ಹೆಣಗುತ್ತಿರುವ ನಡುವೆಯೇ ರೋಗಾಣುಗಳೂ ದಾಳಿ ಆರಂಭಿಸಿವೆ. ಡೆಂಗಿ, ಚಿಕೂನ್‌ಗುನ್ಯಾ, ಇಲಿಜ್ವರದ ಪ್ರಕರಣ ಗಳಲ್ಲಿನ ಹಠಾತ್ ಏರಿಕೆ ಮಳೆಗಾಲದ ಕೊಡುಗೆಯೆ. ಅದರಲ್ಲೂ ಮಲೆನಾಡಿನ ಭಾಗಗಳಲ್ಲಿ ಇಲಿಜ್ವರದ ಆತಂಕ ಹೆಚ್ಚುತ್ತಿದೆ.

ಏನಿದು ಇಲಿ ಜ್ವರ?

ವೈಜ್ಞಾನಿಕವಾಗಿ ಲೆಪ್ಟೊಸ್ಪೈರೋಸಿಸ್ ಎಂದು ಕರೆಸಿಕೊಳ್ಳುವ ಈ ಇಲಿ ಜ್ವರ ಬರುವುದು ಲೆಪ್ಟೊಸ್ಪೈರ ಎಂಬ ಬ್ಯಾಕ್ಟೀರಿಯ ರೋಗಾಣುಗಳಿಂದ. ಪ್ರಾಣಿಗಳಿಂದ ಮಾನವರಿಗೆ ಹರಡುವ ಪ್ರಾಣಿಜನ್ಯ ರೋಗಗಳಲ್ಲಿ ಇದೂ ಒಂದು ಪ್ರಮುಖ ಕಾಯಿಲೆ. ಮುಖ್ಯವಾಗಿ ಇಲಿ, ಹೆಗ್ಗಣಗಳಿಂದ ಈ ರೋಗಾಣುಗಳು ಹರಡುವುದರಿಂದ ಇದಕ್ಕೆ ಇಲಿಜ್ವರವೆಂದು ಹೆಸರು. ಈ ರೋಗ ಕೇವಲ ಮನುಷ್ಯರನ್ನಷ್ಟೇ ಅಲ್ಲ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಬೆಕ್ಕು, ವನ್ಯಮೃಗಗಳು ಹೀಗೆ ಬಹುತೇಕ ಪ್ರಾಣಿಗಳನ್ನು ಬಾಧಿಸುತ್ತದೆ.

ರೋಗ ಹೇಗೆ ಹರಡುತ್ತದೆ?

ಹೆಚ್ಚಾಗಿ ಇಲಿ, ಹೆಗ್ಗಣಗಳೆ ರೋಗಾಣುಗಳ ವಾಹಕಗಳು. ಈ ರೋಗ ಇಲಿಗಳನ್ನು ಬಾಧಿಸದಿದ್ದರೂ ಇವು ತಮ್ಮ ಜೀವನ ಪರ್ಯಂತ ಮೂತ್ರದಲ್ಲಿ ರೋಗಾಣುಗಳನ್ನು ವಿಸರ್ಜಿಸುತ್ತಿರುತ್ತವೆ. ಇಂತಹ ಇಲಿಗಳ ಮೂತ್ರದ ಸಂಪರ್ಕಕ್ಕೆ ಬರುವ ಮನುಷ್ಯ, ಪ್ರಾಣಿಗಳಿಗೆ ಸೋಂಕು ತಗಲುತ್ತದೆ. ಹಾಗೆಯೇ ರೋಗಪೀಡಿತ ಪ್ರಾಣಿಗಳ ಮೂತ್ರದ ಮೂಲಕವೂ ಈ ಕಾಯಿಲೆ ಹರಡುತ್ತದೆ. ಆದರೆ ಮನುಷ್ಯನಿಂದ ಮನುಷ್ಯನಿಗೆ ಇದು ಅಂಟದು. ಮಣ್ಣಿಗೆ ಸೇರಿದ ರೋಗಾಣುಗಳು ಸುಮಾರು ಆರು ಗಂಟೆವರೆಗೆ ಜೀವಂತವಿದ್ದರೆ, ನೀರಿನಲ್ಲಿ ಆರು ತಿಂಗಳವರೆಗೆ ಬದುಕಬಲ್ಲವು. ಹಾಗಾಗಿ ಮಳೆಗಾಲದಲ್ಲಿ, ನೆರೆ ಬಂದಾಗ ಈ ರೋಗದ ಹಾವಳಿ ಜಾಸ್ತಿ. ಪಾದದ ಚರ್ಮದಲ್ಲಿನ ಬಿರುಕುಗಳು, ಒಡೆದ ಹಿಮ್ಮಡಿ, ಗಾಯಗಳ ಮೂಲಕ ರೋಗಾಣುಗಳು ದೇಹ ಪ್ರವೇಶಿಸಬಹುದು. ಇಲಿಮೂತ್ರದಿಂದ ಕಲುಷಿತ ನೀರು, ಆಹಾರದ ಮೂಲಕವೂ ದೇಹ ಸೇರುವ ಕ್ರಿಮಿಗಳು ಬಾಯಿ, ಗಂಟಲು, ಅನ್ನನಾಳದ ಲೋಳ್ಪೊರೆಗಳ ಮೂಲಕ ಒಳ ಪ್ರವೇಶಿಸುತ್ತವೆ. ಕಣ್ಣು, ಕಿವಿಯ ಮೂಲಕವೂ ರೋಗಾಣುಗಳು ಶರೀರ ಸೇರಬಹುದು. ಸಾಮಾನ್ಯವಾಗಿ ಸೋಂಕು ತಗುಲಿದ ಎರಡು ದಿನಗಳಿಂದ ಎರಡು ಮೂರು ವಾರಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ರೋಗ ನಿಯಂತ್ರಣ ಹೇಗೆ?

ಇಲಿ ಜ್ವರದ ಪರಿಣಾಮಕಾರಿ ನಿಯಂತ್ರಣದಲ್ಲಿ ಕೆಳಕಂಡ ಅಂಶಗಳು ಮುಖ್ಯವಾಗಿವೆ.

* ಇಲಿ ಜ್ವರ ಪ್ರಮುಖವಾಗಿ ಇಲಿ-ಹೆಗ್ಗಣಗಳಿಂದ ಹರಡುವುದರಿಂದ ಇವುಗಳ ನಿಯಂತ್ರಣ ಬಲು ಮುಖ್ಯ. ಇಲಿ ಪಾಷಾಣ, ಇಲಿಬೋನುಗಳ ಜೊತೆಗೆ ಇವುಗಳನ್ನು ಹಿಡಿಯುವ ಬೇರೆ ಬೇರೆ ತಂತ್ರಗಳನ್ನು ಅನುಸರಿಸಿ ಸಂಖ್ಯೆಯನ್ನು ನಿಯಂತ್ರಿಸಬೇಕು.

* ಇಲಿ ಮೂತ್ರದಿಂದ ರೋಗಾಣುಗಳು ಹರಡುವುದರಿಂದ ಆಹಾರ ಪದಾರ್ಥಗಳು, ಜಾನುವಾರುಗಳಿಗೆ ಕೊಡುವ ಹಿಂಡಿ, ಬೂಸ ಮುಂತಾದವುಗಳು ಕಲುಷಿತವಾಗದಂತೆ ಎಚ್ಚರ ವಹಿಸಬೇಕು. ಈ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಡ್ರಮ್, ಪಣತ, ತೊಟ್ಟಿ, ಮರಿಗೆ, ಬಾನಿಯಲ್ಲಿ ಸಂಗ್ರಹಿಸಿ ಮುಚ್ಚಿಡಬೇಕು.

* ಮಲೆನಾಡು, ಕರಾವಳಿ ಭಾಗಗಳಲ್ಲಿ ಮಳೆಗಾಲದಲ್ಲಿ ಹುಲ್ಲನ್ನು ಕೊಟ್ಟಿಗೆಯ ಅಟ್ಟದಲ್ಲಿ ಕೂಡಿಡುವ ಅಭ್ಯಾಸವಿದ್ದು, ಇಲಿಗಳು ಗೂಡು ಕಟ್ಟಿ, ಮರಿಮಾಡಲು ಇಂತಹ ಜಾಗವನ್ನು ಬಯಸುತ್ತವೆ. ಇಂತಹ ಹುಲ್ಲು ಇಲಿಗಳ ವಿಸರ್ಜನೆಯಿಂದ ಕಲುಷಿತವಾಗುವ ಸಂಭವವಿರುವುದರಿಂದ ಎಚ್ಚರ ವಹಿಸುವುದು ಒಳಿತು.

* ಕುಡಿಯುವ ನೀರು ಇಲಿಮೂತ್ರದಿಂದ ಮಲಿನವಾಗದಂತೆ ನಿಗಾ ವಹಿಸಬೇಕು. ಅದರಲ್ಲೂ ಮಳೆಗಾಲದಲ್ಲಿ ರೋಗಾಣುಗಳು ನೀರಿನಲ್ಲಿ ಬೇಗ ಹರಡುವುದರಿಂದ ಕುದಿಸಿ ಆರಿಸಿದ ನೀರು ಬಳಸುವುದು ಒಳ್ಳೆಯದು. ಜಾನುವಾರುಗಳಿಗೂ ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಮಾಡುವುದು ಸೂಕ್ತ.

* ಕಾಲಿನ ಬಿರುಕುಗಳು, ಗಾಯದ ಮೂಲಕ ರೋಗಾಣುಗಳು ದೇಹ ಸೇರುವುದರಿಂದ ರೈತರು, ಹೈನುಗಾರರು ಕೊಟ್ಟಿಗೆ, ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ಸಾಧ್ಯವಾದ ಮಟ್ಟಿಗೆ ಪಾದರಕ್ಷೆಗಳನ್ನು ಬಳಸುವುದು ಉತ್ತಮ ಅಭ್ಯಾಸ.

* ಮಳೆಗಾಲದಲ್ಲಿ ಕೆಸರು ನೀರು ನಿಂತಿರುವ ಹೊಂಡಗಳಲ್ಲಿ ದನಗಳಿಗೆ ನೀರು ಕುಡಿಸುವುದು, ಮಕ್ಕಳು ಆಟವಾಡುವುದನ್ನು ತಪ್ಪಿಸುವುದು ಒಳ್ಳೆಯದು.

* ಮುದ್ದು ಪ್ರಾಣಿಗಳಿಂದ ರೋಗ ಹರಡುವುದನ್ನು ತಪ್ಪಿಸಲು ನಾಯಿ, ಬೆಕ್ಕುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವುದು ಸೂಕ್ತ.

* ಆಹಾರ ಪದಾರ್ಥಗಳು, ದವಸ ಧಾನ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಮನೆ, ಕೊಟ್ಟಿಗೆಯ ಸ್ವಚ್ಛತೆ ಕಾಪಾಡಿಕೊಳ್ಳುವುದರ ಮೂಲಕ ಇಲಿಗಳು ಆಕರ್ಷಿತವಾಗುವುದನ್ನು ತಪ್ಪಿಸಿ ಅವುಗಳ ಓಡಾಟವನ್ನು ನಿಯಂತ್ರಿಸಬಹುದು.

* ಯಾವುದೇ ರೋಗದಿಂದ ಸತ್ತ ಜಾನುವಾರುಗಳ ದೇಹವನ್ನು ಬಯಲಲ್ಲಿ ಎಸೆಯದೆ ಆಳವಾದ ಗುಂಡಿಯಲ್ಲಿ ಸುಣ್ಣದೊಟ್ಟಿಗೆ ಹೂಳುವುದು ಒಳ್ಳೆಯದು. ಇದರಿಂದ ಸಾಂಕ್ರಾಮಿಕ ಕಾಯಿಲೆಗಳು ವ್ಯಾಪಕವಾಗಿ ಹರಡುವುದನ್ನು ತಪ್ಪಿಸಬಹುದು. 

ರೋಗ ಲಕ್ಷಣಗಳು

ಮಾನವರಲ್ಲಿ ಮೊದಲ ಹಂತದಲ್ಲಿ ಚಳಿ ಜ್ವರ, ಕೆಮ್ಮು, ಮೈಕೈ ನೋವು, ವಿಪರೀತ ತಲೆನೋವು, ಕಣ್ಣು ಕೆಂಪಾಗುವುದು, ವಾಂತಿ ಕಾಣಿಸಿಕೊಳ್ಳುತ್ತದೆ. ವಾರದೊಳಗೆ ಈ ಲಕ್ಷಣಗಳು ಕಡಿಮೆಯಾಗಿ ಸ್ವಲ್ಪ ಆರಾಮೆನಿಸಿದರೂ ನಂತರದಲ್ಲಿ ಎರಡನೇ ಹಂತದ ಲಕ್ಷಣಗಳು ತೀವ್ರವಾಗಿ ಕಾಣಿಸಿಕೊಳ್ಳುತ್ತವೆ. ವಾಂತಿ, ಭೇದಿ ಜಾಸ್ತಿಯಾಗಿ ಜಾಂಡೀಸ್ ಕಾಣಿಸಿಕೊಳ್ಳುತ್ತದೆ. ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಮೆದುಳಿನ ಉರಿಯೂತದ ಜೊತೆಗೆ ಮೂತ್ರಪಿಂಡಗಳಿಗೂ ಸೋಂಕು ತಗುಲಿ ಮಾರಣಾಂತಿಕವಾಗಬಹುದು.

ಕಾಯಿಲೆಯು ಆರಂಭಿಕ ಹಂತದಲ್ಲಿ ಫ್ಲೂ, ಡೆಂಗಿ ಅಥವಾ ಟೈಫಾಯ್ಡ್ ಜ್ವರದ ಲಕ್ಷಣಗಳನ್ನು ತೋರುವುದರಿಂದ ರೋಗ ನಿರ್ಣಯ ತಪ್ಪಾಗುವ ಸಾಧ್ಯತೆಯುಂಟು. ಪ್ರಯೋಗಾಲಯದ ಪರೀಕ್ಷೆಗಳಿಂದ ಮಾತ್ರ ಕಾಯಿಲೆಯನ್ನು ನಿಖರವಾಗಿ ಪತ್ತೆ ಹಚ್ಚಬಹುದು. ಚಿಕಿತ್ಸೆಯಲ್ಲಿ ಪೆನ್ಸಿಲಿನ್, ಡಾಕ್ಸಿಸೈಕ್ಲಿನ್ ಮುಂತಾದ ಜೀವಿರೋಧಕ ಔಷಧಗಳು ತುಂಬಾ ಪರಿಣಾಮಕಾರಿ. ಮನುಷ್ಯರಲ್ಲಿ ಈ ರೋಗ ತಡೆಗಟ್ಟುವಂತಹ ಸೂಕ್ತ ಲಸಿಕೆ ಇನ್ನೂ ಲಭ್ಯವಿಲ್ಲ.

ಪ್ರತಿಕ್ರಿಯಿಸಿ (+)