ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಜಲೀಕರಣ ತಪ್ಪಿಸಲು ದೇಹಕ್ಕೆ ಬೇಕು ನೀರು...

Published 11 ಸೆಪ್ಟೆಂಬರ್ 2023, 23:30 IST
Last Updated 11 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ನಮ್ಮ ದೇಹದ ಬಹುಭಾಗ ನೀರು. ‘ಭೂಮಿಯ ಶೇ. 66 ನೀರು; ಅಂತೆಯೇ, ದೇಹದ 66 ಪ್ರತಿಶತ ನೀರು’ ಎನ್ನುವ ಚಮತ್ಕಾರದ ಮಾತಿದೆ. ಸುಮಾರು 70 ಕಿಲೋಗ್ರಾಂ ತೂಗುವ ವ್ಯಕ್ತಿಯ ಶರೀರದ 40-45 ಕಿಲೋಗ್ರಾಂ ನೀರು ಎಂದು ಅಂದಾಜಿಸಬಹುದು. ಸಣ್ಣ ಮಕ್ಕಳ ದೇಹದಲ್ಲಿ ಈ ನೀರಿನ ಪ್ರತಿಶತ ಪ್ರಮಾಣ ಅಧಿಕ; ವೃದ್ಧರಲ್ಲಿ ಸ್ವಲ್ಪ ಕಡಿಮೆ. ಮೂತ್ರ, ಬೆವರು, ಶ್ವಾಸದ ಆರ್ದ್ರತೆ, ಮತ್ತು ವಾತಾವರಣದ ಉಷ್ಣತೆಗೆ ಚರ್ಮದಿಂದ ಆವಿಯಾಗುವ ನೀರಿನ ಪ್ರಮಾಣವನ್ನು ನಾವು ಶರೀರಕ್ಕೆ ಮತ್ತೆ ನೀಡಬೇಕು. ನಾವು ಸೇವಿಸುವ ದ್ರವದ ಪ್ರಮಾಣ ನಮ್ಮ ದೇಹದಿಂದ ಹೊರ ಹೋಗುವ ನೀರಿನ ಅಂಶಕ್ಕಿಂತ ಕಡಿಮೆಯಾದರೆ ಶರೀರದ ಒಟ್ಟಾರೆ ನೀರಿನ ಮಟ್ಟ ಇಳಿದುಹೋಗುತ್ತದೆ. ಇದನ್ನೇ ‘ನಿರ್ಜಲೀಕರಣ’ (ಡಿಹೈಡ್ರೇಷನ್‌) ಎನ್ನಬಹುದು.

ಏಕಕೋಶ ಜೀವಿಗಳಿಂದ ಮೊದಲಾದ ಜೀವವಿಕಾಸ ಆರಂಭವಾದದ್ದು ಸಮುದ್ರದ ನೀರಿನಲ್ಲಿ. ಈ ಪ್ರಕ್ರಿಯೆ ಮುಂದುವರೆದಂತೆಲ್ಲ ಬಹುಕೋಶ ಜೀವಿಗಳು ವಿಕಾಸಗೊಂಡವು. ಇದು ಮುಂದುವರೆದು ನೆಲದ ಮೇಲೆ ಬದುಕಬಲ್ಲ ಜೀವಿಗಳು ವಿಕಸನವಾದವು. ಜೀವವಿಕಾಸ ಪ್ರಕ್ರಿಯೆಯನ್ನು ಯಾವುದೇ ದಿಕ್ಕಿನಲ್ಲಿ ಗಮನಿಸಿದರೂ ಜೀವಿಗಳ ಒಡಲಿನಲ್ಲಿ ಸಮುದ್ರದ ವಾತಾವರಣವೇ ಇರುತ್ತದೆ ಎಂದು ತಜ್ಞರ ಅಭಿಮತ. ಹೀಗಾಗಿ, ಸಮುದ್ರದ ನೀರಿನಂತೆಯೇ ನಮ್ಮ ದೇಹವೂ ಹಲವಾರು ಲವಣಗಳಿಗೆ ಮನೆ. ಈ ಉಪ್ಪಿನ ಅಂಶ ದೇಹದ ನೀರಿನಲ್ಲಿ ಕರಗಿ ದ್ರಾವಣದ ರೂಪದಲ್ಲಿರುತ್ತದೆ. ಈ ಲವಣಗಳು ದೇಹದ ಕೆಲಸಗಳಿಗೆ ಅತ್ಯಗತ್ಯ. ಶರೀರದೊಳಗಿನ ನೀರು ಮತ್ತು ಲವಣಗಳ ಅನುಪಾತ ಒಂದು ನಿರ್ದಿಷ್ಟ ಮಟ್ಟವನ್ನು ಕಾಯ್ದುಕೊಳ್ಳಬೇಕು. ನೀರಿನ ಭಾಗ ಹೆಚ್ಚಾದರೆ ಲವಣಗಳ ಸಾಂದ್ರತೆ ಕಡಿಮೆಯಾಗುತ್ತದೆ. ಒಂದು ವೇಳೆ ದೇಹದಲ್ಲಿ ನಿರ್ಜಲೀಕರಣವಾದರೆ ಉಪ್ಪಿನ ಮಟ್ಟ ಏರುತ್ತದೆ. ಈ ಎರಡೂ ಸಂದರ್ಭಗಳಲ್ಲಿ ಶರೀರದ ನಿರ್ವಹಣೆ ಹಳಿ ತಪ್ಪುತ್ತದೆ.

ಶರೀರದ ಚಯಾಪಚಯಗಳಿಂದ ಸದಾ ಕಾಲ ನೀರು ಬಾಷ್ಪವಾಗುತ್ತಲೆ ಇರುತ್ತದೆ. ಈ ನೀರಿನ ಅಂಶ ಒಂದು ಹಂತಕ್ಕಿಂತ ಕಡಿಮೆಯಾದಾಗ ಮಿದುಳು ಅದನ್ನು ದಾಹ ಎಂದು ಗುರುತಿಸುತ್ತದೆ. ನೀರಡಿಕೆ ಎಂಬುದು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದೆ ಎಂದು ನಮ್ಮ ಮಿದುಳು ನೀಡುವ ಸಂಕೇತ. ಈ ಸೂಚನೆಯನ್ನು ಅವಗಣಿಸಿದರೆ, ಅಥವಾ ನೀರಿನ ಬದಲಿಗೆ ಸಕ್ಕರೆಯುಕ್ತ ಪೇಯಗಳನ್ನು ಸೇವಿಸಿದರೆ, ನೀರಡಿಕೆ ತಾತ್ಕಾಲಿಕವಾಗಿ ಇಂಗುತ್ತದೆ. ಸಕ್ಕರೆಯುಕ್ತ ಪಾನೀಯಗಳು ಮೂತ್ರಪಿಂಡಗಳ ಮೂಲಕ ಹೆಚ್ಚು ನೀರನ್ನು ಸೋಸಿ, ಇನ್ನಷ್ಟು ನೀರನ್ನು ಮೂತ್ರದಲ್ಲಿ ಹೊರಹಾಕುತ್ತವೆ. ಇಂತಹ ಪಾನೀಯಗಳ ಜೊತೆಗೆ ಸೇವಿಸಿದ ನೀರಿಗಿಂತ ಶರೀರ ಹೊರಹಾಕುವ ನೀರಿನ ಅಂಶವೇ ಅಧಿಕ. ಹೀಗಾಗಿ, ದಾಹವಾದಾಗ ಮೊದಲು ಸಾಕಷ್ಟು ನೀರು ಕುಡಿಯುವುದು ಸರಿಯಾದ ಪದ್ದತಿ.

ನಿರ್ಜಲೀಕರಣದ ಲಕ್ಷಣಗಳು ಹಲವಾರು - ದಾಹ, ತಲೆಸುತ್ತಿವಿಕೆ, ಬಾಯಿ ಒಣಗುವುದು, ಸುಸ್ತು, ನಿತ್ರಾಣ, ಮಂಕು ಕವಿಯುವುದು, ಕಣ್ಣು ಕಪ್ಪುಗಟ್ಟುವುದು, ಮೂತ್ರದ ಪ್ರಮಾಣ ಕಡಿಮೆಯಾಗುವುದು, ಮೂತ್ರ ಗಾಢ ಹಳದಿಬಣ್ಣಕ್ಕೆ ತಿರುಗುವುದು, ಮೊದಲಾದುವು. ಶರೀರದ ಸಹಜ ನೀರಿನ ಮಟ್ಟದಲ್ಲಿ ಎರಡು ಪ್ರತಿಶತ ಇಳಿಕೆಯಾದರೂ ಈ ಲಕ್ಷಣಗಳು ಕಾಣುತ್ತವೆ. ಮೂರು ಪ್ರತಿಶತ ಕಡಿಮೆಯಾದರೆ ಆಹಾರದ ರುಚಿ ಕಡಿಮೆಯಾಗಿ, ಪ್ರಜ್ಞೆ ತಪ್ಪುವಂತಾಗುತ್ತದೆ. ಇದಕ್ಕಿಂತ ಹೆಚ್ಚಿನ ಅಂಶ ನಷ್ಟವಾದರೆ ಆಸ್ಪತ್ರೆ ಸೇರುವ ಅಗತ್ಯ ಬರಬಹುದು.

ನಿರ್ಜಲೀಕರಣಕ್ಕೆ ಕಾರಣಗಳನ್ನು ಎರಡು ಮುಖ್ಯ ವಿಭಾಗಗಳಾಗಿ ಪರಿಗಣಿಸಬಹುದು: ಅಗತ್ಯಕ್ಕಿಂತ ಕಡಿಮೆ ನೀರಿನ ಸೇವನೆ. ಮತ್ತು ನೀರಿನ ಅಧಿಕ ನಷ್ಟ. ದೇಹದ ಸಹಜ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲು ವಯಸ್ಕರು ದಿನವೊಂದಕ್ಕೆ ಕನಿಷ್ಠ ಒಂದೂವರೆ ಲೀಟರ್ ನೀರನ್ನು ಕುಡಿಯಬೇಕು. ಹೆಚ್ಚು ಶ್ರಮದ ಕೆಲಸ ಮಾಡುವವರಿಗೆ, ರೋಗಿಗಳಿಗೆ, ಹಾರ್ಮೋನ್ ವ್ಯತ್ಯಯ ಇರುವವರಿಗೆ, ಚಯಾಪಚಯ ಕ್ರಿಯೆಗಳು ಅಧಿಕ ಮಟ್ಟದಲ್ಲಿ ಉಳ್ಳವರಿಗೆ ನೀರಿನ ಅಗತ್ಯ ಹೆಚ್ಚಾಗಿರುತ್ತದೆ. ಕಾಯಿಲೆಯ ವೇಳೆಯಲ್ಲಿ, ಜ್ವರದ ಸಮಯದಲ್ಲಿ ದೇಹದಿಂದ ಅಧಿಕ ಪ್ರಮಾಣದ ನೀರು ಆವಿಯಾಗುತ್ತದೆ. ಬಿಸಿಲುಗಾಲದಲ್ಲಿ, ಸೂರ್ಯನ ಶಾಖ ಹೆಚ್ಚು ಇರುವ ದೇಶಗಳಲ್ಲಿ ಚರ್ಮದಿಂದ ಹೆಚ್ಚಿನ ಪ್ರಮಾಣದ ನೀರು ಇಂಗುತ್ತದೆ. ಅತಿಸಾರಭೇದಿ, ವಾಂತಿಯಂತಹ ಕಾಯಿಲೆಗಳ ವೇಳೆ ಅಲ್ಪ ಸಮಯದಲ್ಲಿ ಬಹಳಷ್ಟು ನೀರಿನ ಅಂಶ ಶರೀರದಿಂದ ಹೊರಹೋಗುತ್ತದೆ. ಮಧುಮೇಹಿಗಳಲ್ಲಿ, ಮದ್ಯಪಾನಿಗಳಲ್ಲಿ ಅತಿಮೂತ್ರದ ಮೂಲಕ ನೀರಿನ ಅಂಶ ಕಡಿಮೆಯಾಗುತ್ತದೆ. ಮುಕ್ತವಾಗಿ ಗಾಳಿಯಾಡದ, ಹೆಚ್ಚು ಜನಸಾಂದ್ರತೆಯುಳ್ಳ ಜಿಮ್‌ಗಳಲ್ಲಿ ಸಹಜವಾಗಿಯೇ ವಾತಾವರಣದ ಉಷ್ಣತೆ ಹೆಚ್ಚಿರುತ್ತದೆ. ಅಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಶ್ರಮದ ವ್ಯಾಯಾಮ ಮಾಡುವಾಗ ಶರೀರದ ನೀರಿನ ಅಂಶ ಸಹಜಕ್ಕಿಂತಲೂ ವೇಗವಾಗಿ ನಷ್ಟವಾಗುತ್ತದೆ. ಆಗ ತೀವ್ರವಾಗಿ ಅಧಿಕವಾಗುವ ರಕ್ತದಲ್ಲಿನ ಲವಣದ ಅಂಶ ಹೃದಯದ ಬಡಿತವನ್ನು ಏರುಪೇರಾಗಿಸಬಹುದು. ಜಿಮ್‌ಗಳಲ್ಲಿ ಗಂಟೆಗಟ್ಟಲೆ ಕಸರತ್ತು ಮಾಡಿದ ನಂತರ ಹಠಾತ್ತಾಗಿ ಹೃದಯದ ಸಮಸ್ಯೆ ಕಾಣುವವರಲ್ಲಿ ಈ ಕಾರಣವೂ ಒಂದು.

ನಿರ್ಜಲೀಕರಣಕ್ಕೆ ಇರುವ ಏಕೈಕ ಚಿಕಿತ್ಸೆ ಶರೀರದ ನೀರಿನ ಅಂಶವನ್ನು ಪುನಃ ಸಾಮಾನ್ಯ ಮಟ್ಟಕ್ಕೆ ತಲುಪಿಸುವುದು. ನೀರಿನ ನಷ್ಟವನ್ನು ನೀರಿನಿಂದಲೇ ತುಂಬಬೇಕು. ಅಲ್ಪ ಪ್ರಮಾಣದ ನಿರ್ಜಲೀಕರಣದ ಚಿಕಿತ್ಸೆಯಲ್ಲಿ ಓ.ಆರ್.ಎಸ್. ದ್ರಾವಣ, ನಿಂಬೆ ಪಾನಕ, ಅಕ್ಕಿಯ ಗಂಜಿ, ಸೂಪ್ ಮೊದಲಾದವು ಸಾಕಾಗುತ್ತವೆ. ಆದರೆ, ನಿರ್ಜಲೀಕರಣ ತೀವ್ರವಾದಾಗ ರಕ್ತದಲ್ಲಿನ ಉಪ್ಪಿನ ಅಂಶಗಳನ್ನು ಅಳೆದು, ಅದಕ್ಕೆ ಸಂವಾದಿಯಾದ ಲವಣಯುಕ್ತ ನೀರಿನ ಬಳಕೆ ಬೇಕಾಗುತ್ತದೆ. ಚಿಕಿತ್ಸೆಯ ಪ್ರತಿಯೊಂದು ಹಂತದಲ್ಲೂ ದೇಹದ ನೀರು ಮತ್ತು ಲವಣಗಳ ಅನುಪಾತವನ್ನು ಸರಿಯಾದ ಮಟ್ಟದಲ್ಲಿ ನಿರ್ವಹಿಸುವುದು ಬಹಳ ಮುಖ್ಯ. ಈ ಪ್ರಕ್ರಿಯೆಯಲ್ಲಿ ಅನುಪಾತ ಏರುಪೇರಾದರೆ ಜೀವಕ್ಕೆ ಅಪಾಯವಾಗಬಹುದು. ಲವಣಯುಕ್ತ ನೀರಿನ ಸೇವನೆ ಸಾಧ್ಯವಿಲ್ಲದಿರುವಾಗ ಸೂಕ್ತವಾದ ‘ಸಲೈನ್’ ದ್ರಾವಣವನ್ನು ನೇರವಾಗಿ ರಕ್ತನಾಳಕ್ಕೆ ಸೇರಿಸಬೇಕಾಗುತ್ತದೆ.

ಅವಕಾಶ ದೊರೆತಾಗಲೆಲ್ಲ ಸ್ವಲ್ಪ ಸ್ವಲ್ಪ ನೀರು ಕುಡಿಯುತ್ತಿರುವುದು ಒಳಿತು. ನಮ್ಮ ವಾಸದ ವಾತಾವರಣ ಮತ್ತು ಕೆಲಸದ ಪ್ರಮಾಣಕ್ಕೆ ಅನುಗುಣವಾಗಿ ಅಗತ್ಯವಾದಷ್ಟು ನೀರನ್ನು ಸೇವಿಸುವುದು ಬಹಳ ಮುಖ್ಯ. ನಿರ್ಜಲೀಕರಣ ಅನೇಕ ಕಾಯಿಲೆಗಳಿಗೆ ರಹದಾರಿ. ದೇಹದಲ್ಲಿನ ನೀರಿನ ಅಂಶವನ್ನು ಸರಿಯಾದ ಮಟ್ಟದಲ್ಲಿ ಕಾಯ್ದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT