ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಶಿರದಲ್ಲಿ ಕಾಡುವ ಕಫ

Last Updated 1 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಆಯುರ್ವೇದದಲ್ಲಿ ಸ್ವಸ್ಥರ ಸ್ವಾಸ್ಥ್ಯ ರಕ್ಷಣೆ ಮತ್ತು ರೋಗಿಗಳ ರೋಗ ನಿವಾರಣೆ ಪ್ರಮುಖ ಉದ್ದೇಶ. ಸ್ವಾಸ್ಥ್ಯರಕ್ಷಣೆಯ ವಿಚಾರದಲ್ಲಿ ದಿನಚರ್ಯೆ, ಋತುಚರ್ಯೆ ಮತ್ತು ಸದ್ವೃತ್ಥ ಪ್ರಮುಖ ಅಂಶಗಳು.

ಮಾಘಾದಿ ಮಾಸಗಳನ್ನು ಎರಡೆರಡರಂತೆ ವಿಂಗಡಿಸಿಕೊಂಡು ವರ್ಷಕ್ಕೆ ಆರು ಋತುಗಳೆಂದು ಪರಿಗಣಿಸಲಾಗಿದೆ. ಅವು ಶಿಶಿರ, ವಸಂತ, ಗ್ರೀಷ್ಮ, ವರ್ಷ, ಶರದ್ ಹಾಗೂ ಹೇಮಂತ. ಮೊದಲ ಮೂರು ಋತುಗಳನ್ನು ಆದಾನ ಕಾಲವೆಂದೂ, ನಂತರದ ಮೂರನ್ನು ವಿಸರ್ಗಕಾಲವೆಂದೂ ಶಾಸ್ತ್ರ ತಿಳಿಸಿದೆ.

ಜನವರಿ 15ರ ನಂತರ ಅಂದರೆ ಸಂಕ್ರಾಂತಿಯಾದ ಮೇಲೆ ಸೂರ್ಯ ಉತ್ತರ ದಿಕ್ಕಿಗೆ ಪಯಣಿಸುವುದರಿಂದ ಉತ್ತರಾಯಣವೆಂದೂ ಜುಲೈ 15ರ ನಂತರದ ವಿಸರ್ಗಕಾಲವನ್ನು ದಕ್ಷಿಣಾಯನವೆಂದೂ ತಿಳಿಸಲಾಗಿದೆ. ಆದಾನಕಾಲದಲ್ಲಿ ಹಗಲು ವೃದ್ಧಿಸಿ ರಾತ್ರಿಯು ಕಡಿಮೆಯಾಗುತ್ತದೆ. ಅಂತೆಯೇ ವಿಸರ್ಗಕಾಲದಲ್ಲಿ ಹಗಲು ಸ್ವಲ್ಪ ಕಡಿಮೆಗೊಂಡು ರಾತ್ರಿಕಾಲವು ಹೆಚ್ಚುತ್ತದೆ.

ಅದಾನಕಾಲದಲ್ಲಿ ಸೂರ್ಯನ ಪ್ರಖರತೆ ಹೆಚ್ಚುವ ಕಾರಣ ವಾತಾವರಣದಲ್ಲಿ ಉಷ್ಣತೆ ಮತ್ತು ರೂಕ್ಷತೆ ವೃದ್ಧಿಸುತ್ತದೆ. ಅಂತೆಯೇ ಪ್ರಾಣಿಗಳ ದೇಹದಲ್ಲೂ ಬಾಹ್ಯ ವಾತಾವರಣದಂತೆ ಬದಲಾವಣೆ ಕಾಣುತ್ತದೆ. ವಿಸರ್ಗಕಾಲದ ಕೊನೆಯ ಋತುವಾದ ಹೇಮಂತದಲ್ಲಿ ಹೆಚ್ಚಿನ ಬಲವಿರುವ ಕಾರಣ ಕಾಯಿಲೆಗಳು ಕಡಿಮೆ. ಹೇಮಂತ ಋತುವಿನಲ್ಲಿ ಕಾಣುವ ಬಹುತೇಕ ಗುಣಗಳು ಶಿಶಿರ ಋತುವಿನಲ್ಲೂ ಕಾಣುವುದರಿಂದ ಅದರ ಆಚಾರ ವಿಚಾರಗಳು ಬಹುತೇಕ ಒಂದೇ ಇರುತ್ತದೆ.

ಕಾಡುವ ಉಬ್ಬಸ

ಹೇಮಂತ ಋತುವಿನಲ್ಲಿ ಸಂಚಯಗೊಳ್ಳುವ ಕಫವಾತ ದೋಷಗಳು ಶಿಶಿರದಲ್ಲಿ ಪ್ರಬಲಗೊಳ್ಳುತ್ತವೆ. ಹಾಗಾಗಿಯೇ ಅನೇಕ ಜನರು ಚಳಿಗಾಲದಲ್ಲಿ ತಮಗೆ ಮೇಲ್ಕಂಡ ಸಮಸ್ಯೆಗಳು ಮೊದಲ ಬಾರಿಗೆ ಕಾಣಿಸಿದವು ಇಲ್ಲವೆ ಉಲ್ಬಣಗೊಂಡವು ಎಂದು ತಿಳಿಸುತ್ತಾರೆ. ವಸಂತ ಋತುವಿನಲ್ಲಿ (ಮಾರ್ಚ್‌ 15ರಿಂದ ಮೇ 15) ಸಹಜವಾಗಿ ನೆಗಡಿ, ಮೂಗಿನಲ್ಲಿ ನೀರು ಸುರಿಯುವ ಸಮಸ್ಯೆ, ಉಬ್ಬಸ ಹೆಚ್ಚಾಗಿ ಕಾಡುತ್ತದೆ. ಇದಕ್ಕೆ ಮೂಲ ಕಾರಣವೆಂದರೆ ಹೇಮಂತ ಮತ್ತು ಶಿಶಿರ ಋತುಗಳಲ್ಲಿ ಸಂಚಿತಗೊಂಡ ಕಫ, ವಾತ ದೋಷ ವಸಂತ ಮಾಸದಲ್ಲಿ ಅರ್ಥಾತ್ ಬೇಸಿಗೆಯ ಆರಂಭದಲ್ಲಿ ಕರಗತೊಡಗುತ್ತದೆ ಹಾಗಾಗಿ ಉಬ್ಬಸ ಉಲ್ಬಣಗೊಳ್ಳುತ್ತದೆ. ಹೇಗೆ ಹಿಮಾಲಯದಲ್ಲಿ ಚಳಿಗಾಲದಲ್ಲಿ ಅಧಿಕವಾಗಿ ಶೇಖರಣೆಗೊಂಡ ಹಿಮವು ಬೇಸಿಗೆಯಲ್ಲಿ ಸಹಜವಾಗಿ ಕರಗಲು ಆರಂಭಿಸುವುದೋ ಅಂತೆಯೇ ಮನುಷ್ಯನ ಎದೆಗೂಡಲ್ಲಿ ಸಂಚಯಗೊಂಡ ಕಫದೋಷವು ಬೇಸಿಗೆ ಆರಂಭದಲ್ಲಿ ಕರಗಿ ಸಮಸ್ಯೆ ಹೆಚ್ಚಾಗಿ ತೋರಿದಂತೆ ಕಾಣುತ್ತದೆ.

ವಸಂತ ಋತುವಿನಲ್ಲಿ ಕಫ ವಿಲಯನಗೊಳ್ಳುವುದರಿಂದ ಉಬ್ಬಸದ ರೋಗಿಗಳಿಗೆ ವೈದ್ಯರು ಸೂಕ್ತ ಔಷಧಗಳಿಂದ ವಮನ (ವಾಂತಿ) ಮಾಡಿಸಿ ಉಬ್ಬಸದ ಸಮಸ್ಯೆಯನ್ನು ವಾಸಿ ಮಾಡುತ್ತಾರೆ. ಇದರೊಂದಿಗೆ ಇತರೇ ಶ್ವಾಸಕೋಶ ಸಂಬಂಧಿ ತೊಂದರೆಗಳು ಸಹಾ ಪಲಾಯನಗೊಳ್ಳುತ್ತವೆ. ವಮನದಿಂದ ಶ್ವಾಸಕೋಶಗಳು ಮತ್ತು ಹೃದಯ ಶುದ್ಧಿಗೊಳ್ಳುತ್ತದೆ. ಅಂತೆಯೇ ವಿರೇಚನ (ಭೇದಿ ಮಾಡಿಸುವ ಚಿಕಿತ್ಸಾ ವಿಧಾನ)ದಿಂದ ಹೊಟ್ಟೆ, ಸಣ್ಣ ಕರಳು ಮತ್ತು ದೊಡ್ಡ ಕರಳು ಶುದ್ಧಿಗೊಳುತ್ತದೆ. ಹಾಗಾಗಿಯೇ ನಮ್ಮ ಹಿರಿಯರು ಪ್ರತಿ ಮೂರು ತಿಂಗಳಿಗೊಮ್ಮೆ ವಿರೇಚನಕ್ಕೆ ಔಷಧಿ ತೆಗೆದುಕೊಂಡು ಆರೋಗ್ಯವನ್ನು ಸಂರಕ್ಷಿಸಿಕೊಳ್ಳುತ್ತಿದ್ದರು. ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಸೊತ್ತಿದ್ದರೂ ಪುರಸೊತ್ತಿಲ್ಲದ ಕಾರಣ ಆರೋಗ್ಯವಂತರು ಸಹಜವಾಗಿ ತಮ್ಮ ಆರೋಗ್ಯ ಜೀವನವನ್ನು ಕಡೆಗಣಿಸಿ ಬಹುಬೇಗ ಔಷಧಿಗಳ ದಾಸರಾಗುತ್ತಾರೆ. ‘ಊಟ ಬಲ್ಲವನಿಗೆ ರೋಗವಿಲ್ಲ’ ಎನ್ನುವಂತೆ ಯಾರು ಆರೋಗ್ಯವಂತರಾಗಿ ಭಾವಿಸುವರೋ ಅವರು ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಬುದ್ಧಿವಂತಿಕೆ.

ಚಳಿಗಾಲದಲ್ಲಿ ಬಾಧಿಸುವ ಸಮಸ್ಯೆಗಳು

ವಾತವ್ಯಾಧಿಗಳು ಮಂಡಿನೋವು (ಸಂಧಿವಾತ ಹಾಗೂ ಆಮವಾತ), ಸೊಂಟನೋವು ಹಾಗೂ ಸಯಾಟಿಕಾ ಸರ್ವಾಂಗ ಸಂಧಿವಾತ (ಪಾಲಿ ಆರ್ಥರೈಟಿಸ್), ಕುತ್ತಿಗೆ ನೋವು, ಹಿಮ್ಮಡಿ ನೋವು

ಚರ್ಮ ಸಂಬಂಧಿ ಸಮಸ್ಯೆಗಳು, ಶೀತಪಿತ್ತ (ಅರ್ಟಿಕೇರಿಯಾ), ಕಿಟಿಭ (ಸೋರಿಯಾಸಿಸ್)ಒಣಚರ್ಮ, ಕೂದಲು ಉದುರುವಿಕೆ, ತಲೆಹೊಟ್ಟು

ಕಫ ಸಂಬಂಧಿ ಸಮಸ್ಯೆಗಳು, ತಮಕಶ್ವಾಸ (ಆಸ್ತಮಾ) ಕಫಜ ಕಾಸ (ಕಫಯುಕ್ತ ಕೆಮ್ಮು), ನೆಗಡಿ, ಸೈನುಸೈಟಿಸ್ (ಪ್ರತಿಶ್ಯಾಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT