ಸೋಮವಾರ, ಅಕ್ಟೋಬರ್ 3, 2022
25 °C

ಅಬ್ಬಾ! ಕೆಮ್ಮು, ಶೀತ, ಜ್ವರ.. ಇದರ ಬಗ್ಗೆ ಈ ಮಾಹಿತಿಯನ್ನು ನೀವು ತಿಳಿಯಲೇಬೇಕು

ಡಾ. ಕಿರಣ್ ವಿ. ಎಸ್‌. Updated:

ಅಕ್ಷರ ಗಾತ್ರ : | |

ಶೀತಜ್ವರದ ಚಿಕಿತ್ಸೆಗೆ ನಿರ್ದಿಷ್ಟ ವೈರಸ್-ನಿರೋಧಕ ಔಷಧಗಳು ಇವೆಯಾದರೂ, ಅವು ಎಲ್ಲರಿಗೂ ಬೇಕಾಗುವುದಿಲ್ಲ. ಈಗ ಎಲ್ಲೆಲ್ಲೂ ಶೀತಜ್ವರ ಕಾಣಿಸಿಕೊಳ್ಳುತ್ತಿದೆ. ಆದರೆ, ಇದು ಬಹುಮಟ್ಟಿಗೆ ತಂತಾನೇ ಗುಣವಾಗುವ ಆರೋಗ್ಯ ಸಮಸ್ಯೆ

ಬೇಸಿಗೆ, ಮಳೆ, ಚಳಿಗಾಲಗಳಿಗೆ ತಂತಮ್ಮ ವೈಶಿಷ್ಟ್ಯಗಳು ಇರುತ್ತವೆಯಷ್ಡೆ. ಹೀಗೆಯೇ ಆಯಾ ಕಾಲಗಳ ಜೊತೆಗೆ ಸಾಂಕ್ರಾಮಿಕ ಕಾಯಿಲೆಗಳಿಗೂ ಬಲವಾದ ನಂಟಿವೆ. ಬೇಸಿಗೆಯಲ್ಲಿ ನಿರ್ಜಲೀಕರಣ, ಜ್ವರ, ಅತಿಸಾರಗಳು; ಚಳಿಗಾಲದಲ್ಲಿ ಶ್ವಾಸ ಸಂಬಂಧಿ ಕಾಯಿಲೆಗಳು; ಮಳೆಗಾಲದಲ್ಲಿ ಜ್ವರ, ಗಂಟಲು ಕೆರೆತ ಸಾಮಾನ್ಯ. ಕೋವಿಡ್-19ರ ಅನುಭವದ ನಂತರವಂತೂ ಯಾವುದೇ ಜ್ವರ, ಮೈ-ಕೈ ನೋವು, ನೆಗಡಿ, ಕೆಮ್ಮುಗಳು ‘ಕೋವಿಡ್ ಮರುಕಳಿಸಿತೇ’ ಎನ್ನುವ ಅನುಮಾನವನ್ನು ಪ್ರತಿಯೊಬ್ಬರಲ್ಲೂ ಹುಟ್ಟು ಹಾಕುತ್ತಿವೆ. ವೈರಸ್ ಶೀತಜ್ವರ ಅಥವಾ ಇನ್‌ಫ್ಲುಎನ್‌ಜಾ (ಸಾಮಾನ್ಯ ಭಾಷೆಯಲ್ಲಿ ಫ್ಲೂ) ಎನ್ನುವ ಸಾಮಾನ್ಯ ಕಾಯಿಲೆಗೆ ಹಲವಾರು ವೈರಸ್ ಮೂಲಗಳಿವೆ. ಇದು ಅಯಾ ಋತುವಿನಲ್ಲಿ ಸರಿಸುಮಾರು ಎಲ್ಲರನ್ನೂ ಕಾಡುತ್ತದೆ. ನೂರು ಡಿಗ್ರಿ ಫ್ಯಾರನ್‌ಹೀಟ್ ಆಸುಪಾಸಿನ ಜ್ವರ, ಆಲಸಿತನ, ಮೈ-ಕೈ ನೋವು, ತಲೆಶೂಲೆ, ರುಚಿಯಲ್ಲಿ ವ್ಯತ್ಯಾಸ, ನೆಗಡಿ, ಮೂಗುಕಟ್ಟುವಿಕೆ, ಒಣಕೆಮ್ಮು, ಗಂಟಲು ಒಣಗುವಿಕೆ, ಘ್ರಾಣ ಸಾಮರ್ಥ್ಯ ಕುಂದುವಿಕೆ, ತಲೆಸುತ್ತು ಮೊದಲಾದ ಲಕ್ಷಣಗಳ ಈ ಕಾಯಿಲೆ ವರ್ಷದಲ್ಲಿ ಒಮ್ಮೆಯಾದರೂ ಪ್ರತಿಯೊಬ್ಬರನ್ನೂ ತಾಕಿ ಹೋಗುತ್ತದೆ.

ಶೀತಜ್ವರ ಬಹುಮಟ್ಟಿಗೆ ತಂತಾನೇ ಗುಣವಾಗುವ ಆರೋಗ್ಯ ಸಮಸ್ಯೆ. ಆದರೆ, ಕೆಲವರಲ್ಲಿ ಇದು ತೀವ್ರ ಕಾಯಿಲೆಗೆ ಕಾರಣವಾಗಬಹುದು. ಹೃದಯ ವೈಫಲ್ಯದ ರೋಗಿಗಳಿಗೆ, ಆಸ್ತಮಾಪೀಡಿತರಿಗೆ, ಮಧುಮೇಹಿಗಳಿಗೆ, ಶ್ವಾಸಕೋಶದ ಸಮಸ್ಯೆಗಳಿಂದ ಬಳಲುವವರಿಗೆ, ಕ್ಯಾನ್ಸರ್ ಚಿಕಿತ್ಸೆ ಪಡೆಯುವವರಿಗೆ, ಯಕೃತ್ತಿನ ಅಥವಾ ಮೂತ್ರಪಿಂಡಗಳ ದೀರ್ಘಕಾಲಿಕ ಸಮಸ್ಯೆ ಉಳ್ಳವರಿಗೆ ಹೀಗೆ ಅನೇಕರಲ್ಲಿ ಶೀತಜ್ವರ ಮಾರಕವಾಗಬಹುದು. ಪ್ರಸ್ತುತ ಇಂತಹ ಶೀತಜ್ವರದ ಲಕ್ಷಣಗಳು ಕೋವಿಡ್-19 ಸೋಂಕಿನ ಲಕ್ಷಣಗಳನ್ನು ಬಹಳ ಮಟ್ಟಿಗೆ ಹೋಲುವುದರಿಂದ ರೋಗಿಗಳ ಆತಂಕ ನೂರ್ಮಡಿಸುತ್ತದೆ.

ಶೀತಜ್ವರ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ಸೋಂಕು. ಫ್ಲೂ ಸೋಂಕಿತ ವ್ಯಕ್ತಿಯು ಸೀನಿದಾಗ ಅಥವಾ ಕೆಮ್ಮಿದಾಗ ಹೊರಬರುವ ಸಣ್ಣ ಹನಿಗಳು ಸುತ್ತಮುತ್ತಲಿನ ಆರು ಅಡಿ ಪರಿಧಿಯಲ್ಲಿ ಕೆಲಕಾಲ ಗಾಳಿಯಲ್ಲಿ ತೇಲುತ್ತವೆ. ಇಂತಹ ಹನಿಗಳಲ್ಲಿ ಶೀತಜ್ವರದ ವೈರಸ್ ಮನೆಮಾಡಿರುತ್ತದೆ. ಸೋಂಕಿತ ವ್ಯಕ್ತಿಯ ಸುತ್ತಮುತ್ತಲಿರುವ ನಿರೋಗಿ ವ್ಯಕ್ತಿಯ ಶ್ವಾಸನಾಳಗಳನ್ನು ಉಸಿರಿನ ಮೂಲಕ ಪ್ರವೇಶಿಸುವ ಈ ಹನಿಗಳಲ್ಲಿನ ಶೀತಜ್ವರದ ವೈರಸ್ ಅವರಲ್ಲೂ ಸೋಂಕಿಗೆ ಕಾರಣವಾಗುತ್ತದೆ. ಅಲ್ಲದೆ, ಸೋಂಕಿತ ವ್ಯಕ್ತಿಯ ಶ್ವಾಸದ್ರವಗಳನ್ನು ಹೊಂದಿದ ಬಟ್ಟೆಗಳು, ವಸ್ತುಗಳನ್ನು ಮುಟ್ಟಿದ ನಿರೋಗಿಗಳು ಹಾಗೆಯೇ ತಮ್ಮ ಮೂಗು, ಬಾಯಿಗಳನ್ನು ಸ್ಪರ್ಶಿಸಿದರೆ, ಅದರ ಮೂಲಕವೂ ಶೀತಜ್ವರ ವೈರಸ್ ಹರಡಬಹುದು. ನಗರ ಪ್ರದೇಶಗಳ ಸಣ್ಣ ಜಾಗಗಳಲ್ಲಿ ಬಹಳ ಮಂದಿ ಅಡಕವಾಗುವ ಸಂದರ್ಭಗಳಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗನೆ ಸೋಂಕು ಹರಡುವುದು ಸಾಮಾನ್ಯ.

ಶೀತಜ್ವರದ ಬಳಲಿಕೆ ತ್ರಾಸವೆನಿಸಿದರೂ, ದೀರ್ಘಕಾಲಿಕ ಕಾಯಿಲೆಗಳಿಲ್ಲದ ಆರೋಗ್ಯವಂತರಲ್ಲಿ ಇದರ ಚಿಕಿತ್ಸೆ ಸರಳ. ಮುಖ್ಯವಾಗಿ ವಿಶ್ರಾಂತಿ, ಸಾಕಷ್ಟು ದ್ರವಾಹಾರ, ಕುಡಿಯಲು ಬೆಚ್ಚಗಿನ ನೀರಿನ ಬಳಕೆ, ಜ್ವರನಿವಾರಕ ಗುಳಿಗೆಗಳ ಮಿತವಾದ ಸೇವನೆ, ಉಪ್ಪುನೀರಿನಲ್ಲಿ ಗಂಟಲನ್ನು ಮುಕ್ಕಳಿಸುವುದು, ಒಳ್ಳೆಯ ನಿದ್ರೆ ಮೊದಲಾದುವುಗಳು ಸಾಕಾಗುತ್ತವೆ. ಶೀತಜ್ವರ ಸೋಂಕಿತರು ಸಾಧ್ಯವಾದಷ್ಟೂ ಇತರರಿಂದ ಅಂತರ ಕಾಯ್ದುಕೊಳ್ಳಬೇಕು; ಕೆಮ್ಮುವಾಗ ಅಥವಾ ಸೀನುವಾಗ ತಮ್ಮ ಮೂಗು-ಬಾಯಿಗಳನ್ನು ಬಟ್ಟೆ ಅಥವಾ ಟಿಶ್ಯೂ ಕಾಗದದಿಂದ ಮುಚ್ಚಿಕೊಳ್ಳಬೇಕು; ಅನುಮಾನವಿದ್ದರೆ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬೇಕು; ಶೀತಜ್ವರದ ಲಕ್ಷಣಗಳು ಸಮಯಾನುಸಾರ ಕಡಿಮೆಯಾಗದಿದ್ದರೆ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು.

ಶೀತಜ್ವರದ ಚಿಕಿತ್ಸೆಗೆ ನಿರ್ದಿಷ್ಟ ವೈರಸ್-ನಿರೋಧಕ ಔಷಧಗಳು ಇವೆಯಾದರೂ, ಅವು ಎಲ್ಲರಿಗೂ ಬೇಕಾಗುವುದಿಲ್ಲ. ಶೀತಜ್ವರ ನಿರ್ವಹಣೆಯಲ್ಲಿ ಆ್ಯಂಟಿಬಯಾಟಿಕ್‌ ಔಷಧಗಳ ಪಾತ್ರವಿಲ್ಲ. ಒಂದು ವೇಳೆ ವೈರಸ್ ಕಾಯಿಲೆಯ ಫಲಿತವಾಗಿ ರೋಗನಿರೋಧಕ ಸಾಮರ್ಥ್ಯ ಕುಂದಿ, ಬ್ಯಾಕ್ಟೀರಿಯಾ ಸೋಂಕು ಉಂಟಾದವರಲ್ಲಿ ಮಾತ್ರ ಜೀವಿರೋಧಕ ಔಷಧ ಕೆಲಸ ಮಾಡಬಲ್ಲದು. ಇದನ್ನು ವೈದ್ಯರು ನಿರ್ಧರಿಸಬೇಕೆ ಹೊರತು, ಶೀತಜ್ವರದ ರೋಗಿಗಳು ತಾವಾಗಿಯೇ ಅನಗತ್ಯ ಚಿಕಿತ್ಸೆ ಮಾಡಿಕೊಳ್ಳಬಾರದು. ಜೀವಿರೋಧಕ ಔಷಧಗಳ ಅಡ್ಡಪರಿಣಾಮಗಳು ಹಲವಾರು. ಜೊತೆಗೆ, ಅಗತ್ಯವಿಲ್ಲದೆಡೆ ಆ್ಯಂಟಿಬಯಾಟಿಕ್‌ ಔಷಧಗಳನ್ನು ಬಳಸಿದರೆ ಅವುಗಳಿಗೆ ಪ್ರತಿರೋಧ ಬೆಳೆಯುತ್ತದೆ. ಮುಂದೊಂದು ದಿನ ಅಗತ್ಯ ಬಿದ್ದಾಗ ಅಂತಹ ಆ್ಯಂಟಿಬಯಾಟಿಕ್‌ ಔಷಧ ಬಳಸಿದರೂ ಅದರ ಪರಿಣಾಮ ಆಗುವುದಿಲ್ಲ. ಈ ಬಗ್ಗೆ ಕಟ್ಟೆಚ್ಚರ ಅಗತ್ಯ.

ಬಹುತೇಕ ಮಂದಿಯ ಆಂತರಿಕ ರೋಗನಿರೋಧಕ ಶಕ್ತಿಯೇ ಶೀತಜ್ವರವನ್ನು ತಹಬಂದಿಯಲ್ಲಿ ಇಡುತ್ತದೆ. ಆದರೆ ಆಂತರಿಕ ರೋಗನಿರೋಧಕ ಶಕ್ತಿ ಕುಂಠಿತವಾದವರಲ್ಲಿ ಶೀತಜ್ವರಕ್ಕೆ ವೈರಸ್-ನಿರೋಧಕ ಔಷಧಗಳ ಚಿಕಿತ್ಸೆ ಅಗತ್ಯ. ಇಂತಹ ಕೆಲವರನ್ನು ಆಸ್ಪತ್ರೆಗೆ ದಾಖಲು ಮಾಡಬೇಕಾದ ತುರ್ತು ಬರಬಹುದು. ಅದರಲ್ಲೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಇರುವವರಲ್ಲಿ ಶೀತಜ್ವರ ಉಂಟಾದರೆ, ಅವರನ್ನು ತೀವ್ರನಿಗಾ ಘಟಕಗಳಲ್ಲಿ ಚಿಕಿತ್ಸೆಗೆ ಒಳಪಡಿಸಬೇಕಾಗುತ್ತದೆ. ಇಂತಹ ಗುಂಪಿನವರು ಶೀತಜ್ವರದ ಬಗ್ಗೆ ಬಹಳ ಜಾಗೃತರಾಗಿರಬೇಕು. ಆರಂಭಿಕ ಲಕ್ಷಣಗಳು ಕಂಡುಬಂದಾಗಲೇ ತಮ್ಮ ವೈದ್ಯರಿಗೆ ತೋರಿಸಿ ಚಿಕಿತ್ಸೆ ಆರಂಭಿಸಬೇಕು.

ಹೆಚ್ಚಿನ ಜನರಲ್ಲಿ ಪ್ರಾಣಾಪಾಯವಾಗದಿದ್ದರೂ, ತನ್ನ ವ್ಯಾಪ್ತಿಯ ಕಾರಣದಿಂದ ಶೀತಜ್ವರ ನಾಗರಿಕ ಸಮಾಜದ ಕೆಲಸಗಳನ್ನು ಏರುಪೇರು ಮಾಡಬಲ್ಲದು. ಶೀತಜ್ವರದ ಕಾರಣದಿಂದ ಕಚೇರಿಗಳಲ್ಲಿ ರಜೆ ಹಾಕುವವರ ಸಂಖ್ಯೆ ಏರುತ್ತದೆ. ಇದರಿಂದ ಕೆಲಸದ ಸರಪಣಿ ಅಲ್ಲಲ್ಲಿ ತುಂಡರಿಸಿದಂತಾಗಿ, ಮುಖ್ಯವಾದ ಕೆಲಸಗಳ ನಿರ್ವಹಣೆ ತಡವಾಗುತ್ತದೆ. ಶಾಲೆಯ ಮಕ್ಕಳು ತರಗತಿಯಲ್ಲಿ ಒಟ್ಟಾಗಿ ಕೂರುವುದರಿಂದ ಅವರಲ್ಲಿ ಶೀತಜ್ವರದ ಪರಸ್ಪರ ವಿನಿಮಯ ಹೆಚ್ಚು. ಮಕ್ಕಳ ಗೈರುಹಾಜರಿ ಪಠ್ಯಗಳ ಹೊಂದಾಣಿಕೆಯನ್ನು ಸಡಿಲವಾಗಿಸುತ್ತದೆ. ಒಟ್ಟಾರೆ, ನಾಗರಿಕ ಸಮಾಜದ ಸಂಕೀರ್ಣ ಕಾರ್ಯವೈಖರಿಗೆ ಶೀತಜ್ವರ ಪೆಟ್ಟನ್ನು ನೀಡುತ್ತದೆ.

ಕೋವಿಡ್-19 ಜಾಗತಿಕ ಸೋಂಕು ನಮಗೆ ಹಲವಾರು ಒಳ್ಳೆಯ ಆರೋಗ್ಯ ಪದ್ಧತಿಗಳ ಪರಿಚಯ ಮಾಡಿಸಿದೆ. ಜನಸಂಪರ್ಕಕ್ಕೆ ಬರುವ ಸಂದರ್ಭಗಳಲ್ಲಿ ಮಾಸ್ಕ್ ಧರಿಸುವುದು, ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳುವುದು, ನೀರು ಮತ್ತು ಸಾಬೂನನ್ನು ಬಳಸಿ ಕೈಗಳನ್ನು ಕನಿಷ್ಠ 20 ಸೆಕೆಂಡುಗಳ ಕಾಲ ಆಗಾಗ್ಗೆ ತೊಳೆದುಕೊಳ್ಳುವುದು, ಅಕಾರಣವಾಗಿ ಮೂಗು-ಬಾಯಿಗಳನ್ನು ತಾಕದಿರುವುದು, ರೋಗಲಕ್ಷಣ ಉಳ್ಳವರ ತೀರಾ ಸಮೀಪ ಸುಳಿಯದಿರುವುದು, ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡುವುದು, ಕೆಮ್ಮು-ನೆಗಡಿ-ಜ್ವರಗಳನ್ನು ಅಲಕ್ಷಿಸದೆ ಚಿಕಿತ್ಸೆ ಪಡೆಯುವುದು, ಲಸಿಕೆಗಳ ಮಹತ್ವ ಮೊದಲಾದ ಆರೋಗ್ಯ ರಕ್ಷಣೆಯ ವಿಧಾನಗಳ ಪ್ರಾಮುಖ್ಯ ನಮಗೆ ಅರಿವಾಗಿದೆ. ಶೀತಜ್ವರದ ನಿಗ್ರಹದಲ್ಲೂ ಈ ಪದ್ದತಿಗಳು ಉತ್ತಮ ಪಾತ್ರ ವಹಿಸುತ್ತವೆ. ಕೋವಿಡ್-19 ಸೋಂಕಿನ ತಡೆಯುವಿಕೆಯಲ್ಲಿ ನಾವು ನಿರ್ವಹಿಸಿದ ಎಲ್ಲ ಎಚ್ಚರಗಳನ್ನು ಶೀತಜ್ವರದ ಸಂಬಂಧದಲ್ಲೂ ಕಡ್ಡಾಯವಾಗಿ ಪಾಲಿಸುವುದು ಒಳಿತು.

ಶೀತಜ್ವರದ ಲಕ್ಷಣಗಳು ಇತರ ಕಾಯಿಲೆಗಳ ಲಕ್ಷಣವನ್ನು ಬಹುವಾಗಿ ಹೋಲುವುದರಿಂದ ಎಲ್ಲ ಕಾಯಿಲೆಗಳನ್ನೂ ಶೀತಜ್ವರವೆಂದು ನಿರ್ಲಕ್ಷಿಸಲು ಸಾಧ್ಯವಿಲ್ಲ. ಒಂದು ವಾರದ ಸರಳ ಚಿಕಿತ್ಸೆಯಿಂದ ಶೀತಜ್ವರದ ರೋಗಲಕ್ಷಣಗಳು ಗುಣವಾಗದವರಲ್ಲಿ ಇತರ ಕಾಯಿಲೆಗಳ ಸಾಧ್ಯತೆ ಹೆಚ್ಚು. ಜೊತೆಗೆ, ರೋಗನಿರೋಧಕ ಶಕ್ತಿ ಕುಂಠಿತರಾದವರಷ್ಟೇ ಅಲ್ಲದೆ, ಒಂದು ವರ್ಷದೊಳಗಿನ ಮಕ್ಕಳು, 65 ವರ್ಷ ದಾಟಿದವರು, ಗರ್ಭಿಣಿಯರು, ಬಾಣಂತಿಯರು, ನಿಯಮಿತ ಆಸ್ಪಿರಿನ್ ಗುಳಿಗೆ ಸೇವಿಸುವವರು, ಶೀತಜ್ವರ ರೋಗಿಗಳ ಆರೈಕೆ ಮಾಡುವವರು, ಮುಂತಾದವರು ತಮಗೆ ಶೀತಜ್ವರದ ರೋಗಲಕ್ಷಣಗಳು ಕಂಡಾಗ ತಡಮಾಡದೆ ವೈದ್ಯರನ್ನು ಕಾಣಬೇಕು.

ಲಸಿಕೆ

ಶೀತಜ್ವರವನ್ನು ತಡೆಯಲು ಸಕ್ಷಮವಾದ ಲಸಿಕೆ ಇದೆ. ಅನೇಕ ದೇಶಗಳಲ್ಲಿ ಈ ಲಸಿಕೆಯನ್ನು ಪ್ರತಿವರ್ಷ ಕಡ್ಡಾಯವಾಗಿ ಪಡೆಯಬೇಕು. ನಮ್ಮ ದೇಶದಲ್ಲಿ ಈ ಲಸಿಕೆಯನ್ನು ‘ಶೀತಜ್ವರದಿಂದ ಯಾರಿಗೆ ಹೆಚ್ಚು ಅಪಾಯ ಇದೆಯೋ, ಅವರು ಪಡೆಯಬಹುದು’ ಎಂದು ಶಿಫಾರಸು ಮಾಡಲಾಗಿದೆ. ವೈದ್ಯಕೀಯ ವೃತ್ತಿಯಲ್ಲಿರುವವರು ಮತ್ತು ಶೀತಜ್ವರದಿಂದ ಪ್ರಾಣಾಪಾಯಕ್ಕೆ ಒಳಗಾಗಬಲ್ಲವರು ಇಂತಹ ವಾರ್ಷಿಕ ಲಸಿಕೆಯನ್ನು ಪಡೆಯುವುದು ಸೂಕ್ತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು