ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದೀರ್ಘ ಹೋರಾಟದ ಸುತ್ತ

Last Updated 25 ಜುಲೈ 2020, 19:45 IST
ಅಕ್ಷರ ಗಾತ್ರ

‘ಕೋವಿಡ್‌–19ಗೆ ಲಸಿಕೆ ಶೀಘ್ರವೇ ಬರಲಿದೆಯಂತೆ. ಹೀಗಾಗಿ ಮುಖಗವಸು ಧರಿಸುವುದು, ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ಕಷ್ಟಕ್ಕೆ ವಿದಾಯ ಹೇಳಬಹುದು’

‘ಮನೆಯಿಂದಲೇ ಕಚೇರಿ ಕೆಲಸ ಮಾಡಿ ಸಾಕಾಯಿತು. ಸಹೋದ್ಯೋಗಿಗಳ ಜೊತೆ ಹರಟೆ ಹೊಡೆಯದೇ ಯಾವ ಕಾಲವಾಯಿತೋ. ಲಸಿಕೆ ಬಂದು ಬಿಟ್ಟರೆ ಸಾಕು, ಮತ್ತೆ ಎಂದಿನಂತೆ ಕಚೇರಿಗೆ ಹೋಗಬಹುದು’

ಇಂತಹ ಮಾತುಗಳು ಸಾಮಾನ್ಯ ಸಂಭಾಷಣೆಯಲ್ಲಿ ಬಂದು ಹೋಗುತ್ತಿವೆ. ಅದೂ ದೇಶ– ವಿದೇಶಗಳ ಹಲವಾರು ಕಂಪನಿಗಳು ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಪ್ರಗತಿ ಸಾಧಿಸಿದ್ದು, ಶೀಘ್ರದಲ್ಲಿ ಸಮುದಾಯವನ್ನು ತಲುಪಲಿದೆ ಎಂಬಂತಹ ಸುದ್ದಿಗಳನ್ನು ಓದಿದಾಗ ಇಂತಹ ಆಶಾಭಾವನೆ ಸಹಜವೇ.

ಹೌದು, ಕೊರೊನಾ ಸೋಂಕಿನ ಇಂತಹ ಸಂದರ್ಭದಲ್ಲಿ, ಕಳೆದ ನಾಲ್ಕಾರು ತಿಂಗಳಿಂದ ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಬಯಸುವುದು ಲಸಿಕೆ ಆದಷ್ಟು ಶೀಘ್ರವಾಗಿ ಬರಲಿ ಎಂದು. ಹಾಗಂತ ಸಾರ್ವಜನಿಕರ ಅಥವಾ ರಾಜಕೀಯ ಒತ್ತಡದಿಂದ ಈ ಲಸಿಕೆಯನ್ನು ಗಡಿಬಿಡಿಯಲ್ಲಿ ಬಿಡುಗಡೆ ಮಾಡುವುದಂತೂ ಸಾಧ್ಯವಿಲ್ಲ. ಕೊರೊನಾ ಸೋಂಕು ಇಡೀ ಜಗತ್ತನ್ನೇ ಅಕ್ಷರಶಃ ಸ್ತಬ್ಧಗೊಳಿಸಿಬಿಟ್ಟಿದೆ. ಹಲವಾರು ತಿಂಗಳಿಂದ ಜನ ಮನೆಯೊಳಗೇ ಕೂತಿದ್ದಾರೆ; ಅಂಗಡಿಮುಂಗಟ್ಟುಗಳು ಮುಚ್ಚಿವೆ; ವಿಮಾನಗಳು ನಿಲ್ದಾಣಗಳಲ್ಲೇ ಆಕಳಿಸುತ್ತಿವೆ.. ಹಲವಾರು ದೇಶಗಳಲ್ಲಿ ತಿಂಗಳುಗಟ್ಟಲೆ ಲಾಕ್‌ಡೌನ್‌ ಹೇರಲಾಯಿತು.

ಇವೆಲ್ಲ ಹತಾಶೆಗಳ ಮಧ್ಯೆ ಇರುವುದೊಂದೇ ಆಶಾಕಿರಣ ಅದು ಆದಷ್ಟು ಬೇಗ ಲಸಿಕೆ ಕಂಡುಹಿಡಿಯುವುದು. ಇಡೀ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಅವರು ಸಿರಿವಂತರಿರಲಿ ಅಥವಾ ಬಡವರಿರಲಿ, ವೈದ್ಯರು ಮತ್ತು ರೋಗಿಗಳು, ಮಕ್ಕಳು ಮತ್ತು ವೃದ್ಧರು.. ಹೀಗೆ ಎಲ್ಲರೂ ಲಸಿಕೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಕೊರೊನಾ ಜಾತಿಯ ವೈರಸ್‌ ಈ ಭೂ ಗ್ರಹದ ಮೇಲೆ ಲಾಗಾಯ್ತಿನಿಂದಲೂ ಇದೆ. ಸಾಮಾನ್ಯ ನೆಗಡಿಯಿಂದ ಹಿಡಿದು ತೀವ್ರತರದ ಉಸಿರಾಟದ ಸಮಸ್ಯೆ (ಸಾರ್ಸ್‌) ಉಂಟು ಮಾಡುವಂತಹವು. ಇದರಲ್ಲಿರುವ ಎಸ್‌ ಪ್ರೊಟೀನ್‌ ಮಾನವನ ಜೀವಕೋಶದ ಮೇಲ್ಮೈಗೆ ಅಂಟಿಕೊಂಡು ಸೋಂಕು ಹರಡುತ್ತದೆ ಎಂಬುದು ಈಗ ಸರ್ವವಿಧಿತ.

ಈಗ ಲಸಿಕೆ ವಿಷಯಕ್ಕೆ ಬಂದರೆ ಯಾವುದೇ ಹೊಸ ಲಸಿಕೆ ಕಂಡು ಹಿಡಿಯಲು ವರ್ಷಗಳೇ ಬೇಕು. ಈಗಿರುವ ಸವಾಲೆಂದರೆ ವೈರಸ್‌ನಲ್ಲಿರುವ ಎಸ್– ಪ್ರೊಟೀನ್‌ ಮಾನವನ ಜೀವಕೋಶದೊಂದಿಗೆ ಬೆಸೆದುಕೊಳ್ಳುವ ಪ್ರಕ್ರಿಯೆಗೆ ತಡೆಯೊಡ್ಡುವುದು. ಇದು ಲಸಿಕೆಯ ಮೂಲಭೂತ ಉದ್ದೇಶ. ಅಂದರೆ ವೈರಸ್‌ ದ್ವಿಗುಣಗೊಳ್ಳುವ, ಅಪರಿಮಿತ ಸಂಖ್ಯೆಯಲ್ಲಿ ಹೆಚ್ಚಾಗುವ ಪ್ರಕ್ರಿಯೆಯನ್ನು ನಿಲ್ಲಿಸುತ್ತದೆ.

ತೊಡಕುಗಳು
ಈಗಾಗಲೇ ಸಂಶೋಧನೆ ನಡೆದಿದ್ದರೂ ಕೂಡ, ಕೋವಿಡ್‌–19 ವಿರುದ್ಧ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಹಲವಾರು ತೊಡಕುಗಳಿವೆ. ಒಂದು ಲಸಿಕೆಯಲ್ಲಿ ಸುರಕ್ಷತೆ. ಯಾವುದೇ ಲಸಿಕೆ ತೆಗೆದುಕೊಂಡರೂ ಸುರಕ್ಷತೆ ತುಂಬಾ ಮುಖ್ಯ. ದೀರ್ಘಾವಧಿಯಲ್ಲಿ ಕೂಡ ಅದು ಯಾವುದೇ ಸಮಸ್ಯೆಗಳನ್ನು ಅಥವಾ ಧಕ್ಕೆಯನ್ನು ಉಂಟು ಮಾಡದಂತೆ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ವಿವಿಧ ಆರೋಗ್ಯ ಸಮಸ್ಯೆಗಳಿರುವ ಹಾಗೂ ವಿವಿಧ ವಯಸ್ಸಿನ ಜನರ ಮೇಲೆ ಲಸಿಕೆಯ ಪರೀಕ್ಷೆ ನಡೆಯಬೇಕಾಗುತ್ತದೆ.

ಎರಡನೆಯದು ದೀರ್ಘಾವಧಿ ರಕ್ಷಣೆ. ಈ ಭೂಮಿಯ ಮೇಲಿಂದ ಯಾವುದೇ ಸಾಂಕ್ರಾಮಿಕ ಪಿಡುಗು ಸಂಪೂರ್ಣವಾಗಿ ತೊಲಗಿದ ಬಗ್ಗೆ ಪುರಾವೆ ಇಲ್ಲ. ಈ ವೈರಸ್‌ ಎಂಬುದು ಜಗತ್ತಿನ ಯಾವುದೇ ಮೂಲೆಯಲ್ಲೂ ಮತ್ತೆ ಕಾಣಿಸಿಕೊಳ್ಳಬಹುದು. ಹೀಗಾಗಿ ಈ ಸಮಸ್ಯೆ ಪುನಃ ಬರದಂತೆ ಜನರಿಗೆ ದೀರ್ಘಾವಧಿ ರಕ್ಷಣೆ ನೀಡುವುದು ಮುಖ್ಯ.

ಕೋವಿಡ್‌–19 ಸಂಭಾವ್ಯ ಲಸಿಕೆಯಲ್ಲಿ ಕೆಲವೆಂದರೆ– ಜೀವಂತ ಲಸಿಕೆ. ಇದರಲ್ಲಿ ದುರ್ಬಲ ರೂಪದ ಜೀವಂತ ಸೂಕ್ಷ್ಮಾಣುವನ್ನು ವೈರಸ್‌ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಉದ್ದೀಪನಗೊಳಿಸಲು ಬಳಸಲಾಗುತ್ತದೆ. ಆದರೆ ಈ ಲಸಿಕೆಗೆ ಬಹಳಷ್ಟು ಸುರಕ್ಷಿತ ಪರೀಕ್ಷೆಗಳ ಅಗತ್ಯವಿದೆ. ನಿಷ್ಕ್ರಿಯ ಲಸಿಕೆ. ಇದರಲ್ಲಿ ಸತ್ತು ಹೋದ ಸೂಕ್ಷ್ಮಾಣು ರೋಗ ನಿರೋಧಕ ಶಕ್ತಿಯನ್ನು ಪ್ರಚೋದಿಸುತ್ತದೆ.

ಆದರೆ ಇದು ಜೀವಂತ ಲಸಿಕೆಯಂತೆ ಒಂದೇ ಚುಚ್ಚುಮದ್ದಿನಲ್ಲಿ ಹೆಚ್ಚು ಪರಿಣಾಮಕಾರಿ ಎನಿಸಲಾರದು. ಜೆನೆಟಿಕ್‌ ಆಗಿ ಬದಲಾಯಿಸಿದ ಲಸಿಕೆ. ಇದರಲ್ಲಿ ಎಸ್‌ ಪ್ರೊಟೀನ್‌ ನಕಲು ಮಾಡುವ ತಂತ್ರ ಬಳಸಲಾಗುತ್ತದೆ.

ಯಾವಾಗ ಸಿಗುತ್ತದೆ?
ಆದರೆ, ಈಗ ಜನರಲ್ಲಿ ಮೂಡಿರುವ ಗೊಂದಲವೆಂದರೆ ಯಾವಾಗ ಲಸಿಕೆ ಸಿಗುತ್ತದೆ ಎಂಬುದು. ಭಾರತ ಸೇರಿದಂತೆ ಹಲವಾರು ದೇಶಗಳ ಔಷಧದ ಕಂಪನಿಗಳು ತಮ್ಮ ಪ್ರಯೋಗಾಲಯಗಳಲ್ಲಿ ಸಂಶೋಧನೆಗಳು ನಡೆಯುತ್ತಿದ್ದು, ಶೀಘ್ರ ಜನ ಸಾಮಾನ್ಯರಿಗೆ ಲಭ್ಯ ಎಂದು ಹೇಳುತ್ತಿವೆ. ನಿಜ. ಆದರೆ ಯಾವುದೇ ಲಸಿಕೆ ಅಭಿವೃದ್ಧಿಗೆ ವರ್ಷಗಳೇ ಬೇಕು. ವಿವಿಧ ಹಂತಗಳಲ್ಲಿ ಲಸಿಕೆಯ ಅಭಿವೃದ್ಧಿ ಸಾಗಬೇಕು, ಉತ್ಪಾದನೆ ಶುರುವಾಗುವ ಮುನ್ನ ಪ್ರಯೋಗಗಳು, ಪರೀಕ್ಷೆಗಳು ನಡೆಯಬೇಕು. ಮೊದಲು ಪ್ರಾಣಿಗಳ ಮೇಲೆ ಪ್ರಯೋಗ ನಡೆಸಿ, ಅದರಲ್ಲಿ ಯಶಸ್ವಿಯಾದ ನಂತರ ಅದನ್ನು ಮನುಷ್ಯರ ಮೇಲೆ ಪ್ರಯೋಗಿಸಲಾಗುವುದು.

ಮಾನವರ ಮೇಲೆ ಮೂರು ಹಂತಗಳಲ್ಲಿ ಪ್ರಯೋಗ ನಡೆಸಲಾಗುವುದು. ಮೂರೂ ಹಂತಗಳಲ್ಲಿ ಯಶಸ್ಸು ಕಂಡು ಬಂದರೆ ಮಾತ್ರ ಉತ್ಪಾದನೆ ಶುರು ಮಾಡುತ್ತಾರೆ. ಅದೂ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಶುರುವಾಗಬೇಕಾದರೆ ಸಾಕಷ್ಟು ಸಮಯವೂ ಹಿಡಿಯುತ್ತದೆ.

ಈ ಎಲ್ಲಾ ಪ್ರಕ್ರಿಯೆಗಳನ್ನು ವೇಗವಾಗಿ ನಡೆಸಿದರೂ ಕೂಡ ಇನ್ನಾರು ತಿಂಗಳಲ್ಲಿ ಕೋವಿಡ್‌–19ಕ್ಕೆ ಲಸಿಕೆಯನ್ನು ನಿರೀಕ್ಷೆ ಮಾಡುವುದು ಕಷ್ಟ. ಒಂದು ಲಸಿಕೆಯನ್ನು ಅಭಿವೃದ್ಧಿಪಡಿಸಿ ಪರೀಕ್ಷೆಗೆ ಒಳಪಡಿಸಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಇದಲ್ಲದೇ ಇಡೀ ಜಗತ್ತಿನ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಲಸಿಕೆಯನ್ನು ಉತ್ಪಾದಿಸುವುದು, ವಿತರಿಸುವುದು, ಲಸಿಕೆಯನ್ನು ಚುಚ್ಚುಮದ್ದಿನ ರೂಪದಲ್ಲಿ ನೀಡುವುದು ಇನ್ನೊಂದಿಷ್ಟು ದಿನಗಳು ಬೇಕು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿವಿಧ ದೇಶಗಳಲ್ಲಿ ನೂರಕ್ಕಿಂತಲೂ ಅಧಿಕ ಬಗೆಯ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಪ್ರಯೋಗದ ವಿವಿಧ ಹಂತಗಳಲ್ಲಿವೆ. ಕೆಲವನ್ನು ಮನುಷ್ಯರ ಮೇಲೆ ಪ್ರಯೋಗಿಸಲೂ ಶುರು ಮಾಡಲಾಗಿದೆ. ಆದರೆ ಇಂತಹ ಲಸಿಕೆಗಳನ್ನು ಉತ್ಪಾದಿಸಲು ಆತುರ ತೋರುವುದು ಸರಿಯಲ್ಲ. ಸಣ್ಣ ಪ್ರಮಾಣದ ನಿರ್ಲಕ್ಷ್ಯ ತೋರಿದರೂ ಸಾಕು, ಅದರ ಅಡ್ಡ ಪರಿಣಾಮಗಳು ದೊಡ್ಡ
ರೀತಿಯಲ್ಲಿ ಅಂದರೆ ವೈರಸ್‌ಗಿಂತ ಹೆಚ್ಚು ಪ್ರಮಾಣದಲ್ಲಿ
ಸಂಭವಿಸಬಹುದು.

ಯಾವುದೇ ಲಸಿಕೆಗೆ ಈ ಎಲ್ಲಾ ಹಂತಗಳಿರುತ್ತವೆ. ಪ್ರಯೋಗಾಲಯದಲ್ಲಿ ಸಂಶೋಧನೆ, ಪ್ರಯೋಗಾಲಯದಲ್ಲಿ ಪರೀಕ್ಷೆ ಮತ್ತು ಪ್ರಾಣಿಗಳ ಮೇಲೆ ಪ್ರಯೋಗ, ಮನುಷ್ಯರ ಮೇಲೆ ಪರೀಕ್ಷೆ, ನಿಯಮಗಳ ಪ್ರಕಾರ ಇದರ ಪುನರ್‌ವಿಮರ್ಶೆ ಮತ್ತು ಅನುಮತಿ, ಉತ್ಪಾದನೆ ಮತ್ತು ಗುಣಮಟ್ಟ ನಿಯಂತ್ರಣ. ಎಲ್ಲಾ ಬಗೆಯ ಅವಶ್ಯಕ ಪರೀಕ್ಷೆ, ಪ್ರಯೋಗಗಳನ್ನು ನಿಖರವಾಗಿ ನಡೆಸಿದ ನಂತರ 2021ರ ಮಧ್ಯಭಾಗದಲ್ಲಿ ಪರಿಣಾಮಕಾರಿ ಲಸಿಕೆ ಲಭ್ಯವಾಗಬಹುದು ಎಂಬ ನಿರೀಕ್ಷೆಯಿದೆ.

ಲಭ್ಯತೆಯ ಆತಂಕ
ಸಾರ್ಸ್‌ ಬಂದಾಗ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕ್ಲಾಸ್‌ ಸ್ಟೋರ್‌ ಪ್ರಕಾರ, ಜಗತ್ತಿನ 7.5 ಶತಕೋಟಿ ಜನರಿಗೆ ಲಸಿಕೆ ಪೂರೈಸಲು ವರ್ಷಗಟ್ಟಲೆ ಹಿಡಿಯಬಹುದು. ಅದರಲ್ಲೂ ಅಭಿವೃದ್ಧಿಶೀಲ ಹಾಗೂ ಬಡ ರಾಷ್ಟ್ರಗಳು ಸರಿಯಾದ ಮೂಲ ಸೌಲಭ್ಯ, ಹಣಕಾಸಿನ ಲಭ್ಯತೆ ಇಲ್ಲದೇ ಪರದಾಡುವಾಗ ಈ ಲಸಿಕೆ ಪಡೆಯಲು ಸಾಕಷ್ಟು ವರ್ಷಗಳೇ ಆಗಬಹುದು. ಅಗಾಧ ಜನಸಂಖ್ಯೆ ಇರುವ ದೇಶಗಳಲ್ಲಂತೂ ಎಲ್ಲರಿಗೂ ಪೂರೈಸಲು 2–3 ವರ್ಷ ಹಿಡಿಯಬಹುದು.

ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕೆ ಎಂಬು ದರ ಬಗ್ಗೆ ಭಾರಿ ಚರ್ಚೆಯೇ ನಡೆಯುತ್ತಿದೆ. ಈಗಂತೂ ಮಗು ಹುಟ್ಟಿದ ನಂತರ ಲಸಿಕೆ ಕೊಡಿಸುವುದು ಕಡ್ಡಾಯ. 14 ವರ್ಷ ತುಂಬುವವರೆಗೂ ಮಕ್ಕಳಿಗೆ ವಿವಿಧ ಲಸಿಕೆ ಕೊಡಿಸುತ್ತಲೇ ಹೋಗುತ್ತೇವೆ. ಈ ಬಗೆಯ ಲಸಿಕೆಗಳು ಅವಶ್ಯಕವೇ ಎಂಬ ಪ್ರಶ್ನೆ ಏಳುತ್ತದೆ. ಹಿಂದೆ ಇದ್ದ ಕೆಲವು ಕಾಯಿಲೆಗಳು ಈಗ ಇಲ್ಲವೆ ಇಲ್ಲ. ಹಾಗಾದರೆ ಲಸಿಕೆ ಪಡೆಯುವುದು ಅಷ್ಟು ಅಗತ್ಯವೇ? ಮಕ್ಕಳ ದೇಹ ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡು ವೈರಸ್‌ ವಿರುದ್ಧ ಹೋರಾಡಬಹುದಲ್ಲ? ಇಂತಹ ಹಲವಾರು ಪ್ರಶ್ನೆಗಳನ್ನು ಇಟ್ಟುಕೊಂಡು ಮಾಧ್ಯಮಗಳಲ್ಲಿ ಲೇಖನಗಳು, ವರದಿಗಳು ಪ್ರಕಟವಾಗಿವೆ. ಹಲವಾರು ಪೋಷಕರು ಇವೆಲ್ಲ ಆರೋಗ್ಯ ಸೇವೆ ಉದ್ಯಮ ಸೃಷ್ಟಿಸಿದ ಮಿಥ್ಯೆ ಎಂದೇ ನಂಬಿದ್ದಾರೆ.

ಹೌದು, ಹಿಂದೆ ಇದ್ದ ಹಲವಾರು ಕಾಯಿಲೆಗಳನ್ನು ಇಂದು ನೋಡಲೂ ಸಾಧ್ಯವಿಲ್ಲ. ಆದರೆ ಇದರರ್ಥ ಈ ಭೂ ಗ್ರಹದ ಮೇಲೆ ಈ ಕಾಯಿಲೆಗಳೇ ಇಲ್ಲ ಎಂದಲ್ಲ. ಇಂತಹ ಕಾಯಿಲೆ ಬರುವ ಸಾಧ್ಯತೆ ಕಡಿಮೆಯಿದ್ದರೂ ಬರಬಾರದು ಎಂದೇನಿಲ್ಲ. ಇಂತಹ ಪಿಡುಗನ್ನು ಹಿಂದೆ ಕಣ್ಣಾರೆ ಕಂಡವರು ಮತ್ತೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದೇ ಹೇಳುತ್ತಾರೆ. ಹಾಗೆಯೇ ಕೆಲವು ಅಪರೂಪದ ಸಂದರ್ಭಗಳಲ್ಲಿ ಲಸಿಕೆಯಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು. ಆದರೆ ಲಸಿಕೆಯ ಲಾಭಗಳ ಜೊತೆ ಹೋಲಿಸಿದರೆ ಇಂತಹ ಸಂಭವ ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT