ಶುಕ್ರವಾರ, ಡಿಸೆಂಬರ್ 4, 2020
22 °C
ಕೊರೊನಾ ತಿಳಿಯೋಣ....

ಕೊರೊನಾ ಒಂದಿಷ್ಟು ತಿಳಿಯೋಣ: ಕೊರೊನಾ ಬಳಿಕ ಹೃದಯ ಜೋಪಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ಪೀಡಿತರ ಪರೀಕ್ಷೆ ಮತ್ತು ವೈದ್ಯಕೀಯ ಚಿಕಿತ್ಸಾ ಸ್ವರೂಪವು ಹೆಚ್ಚು ಸಂಕೀರ್ಣವಾದುದು. ಕೋವಿಡ್‌ ಪೀಡಿತರಲ್ಲಿ ಕಾಯಿಲೆಯ ಲಕ್ಷಣಗಳು ಬೇರೆ, ಬೇರೆಯಾಗಿರುತ್ತವೆ. ಕೆಲವರಲ್ಲಿ ಲಕ್ಷಣರಹಿತ ಸೋಂಕು ಇದ್ದರೆ, ಇನ್ನು ಕೆಲವರಲ್ಲಿ ಲಘು ಪ್ರಮಾಣದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇನ್ನೂ ಕೆಲವರಲ್ಲಿ ತೀವ್ರ ಸ್ವರೂಪದ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಂಡು, ಅದು ಹೃದಯಾಘಾತಕ್ಕೂ ಕಾರಣವಾಗುತ್ತದೆ. ಸಕಾಲದಲ್ಲಿ ಸಮರ್ಪಕ ಚಿಕಿತ್ಸೆ ದೊರೆಯದಿದ್ದರೆ ಇಂಥವರಲ್ಲಿ ಸಾವು ಸಂಭವಿಸುವ ಸಾಧ್ಯತೆಯೂ ಇರುತ್ತದೆ.

‘ತೀವ್ರ ಸ್ವರೂಪದ ಲಕ್ಷಣಗಳಿಂದ ಬಳಲುವವರಲ್ಲಿ ಶ್ವಾಸಕೋಶಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹೃದಯಕ್ಕೆ ಪೂರೈಕೆಯಾಗುವ ರಕ್ತದ ಪ್ರಮಾಣ ಕಡಿಮೆಯಾಗುವ ಇಲ್ಲವೇ ಸ್ಥಗಿತಗೊಳ್ಳುವ ಸಾಧ್ಯತೆಗಳು ಇರುತ್ತವೆ. ಕೆಲವರಲ್ಲಿ ಹೃದಯ ಬಡಿತದಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಹೃದಯದ ಸ್ಥಿತಿಗತಿ ಅರಿಯುವ ಎಲೆಕ್ಟ್ರೊಕಾರ್ಡಿಯೊಗ್ರಾಫಿಕ್‌ನಲ್ಲಿ ಅಸಹಜತೆ ಕಾಣಿಸಿಕೊಳ್ಳುತ್ತದೆ. ಇಂತಹ ಪ್ರಕರಣಗಳಲ್ಲಿ ಹೃದಯರೋಗ ತಜ್ಞರು ಕೋವಿಡ್‌ ಪೀಡಿತರ ಜೀವ ಉಳಿಸುವಲ್ಲಿ ತುಂಬ ಮಹತ್ವದ ಪಾತ್ರ ನಿರ್ವಹಿಸುತ್ತಾರೆ’ ಎನ್ನುತ್ತಾರೆ ಏಸ್‌ ಸುಹಾಸ್‌ ಹಾಸ್ಪಿಟಲ್‌ನ ಸಿಇಒ ಡಾ.ಜಗದೀಶ ಹಿರೇಮಠ.

ಹೃದಯಸಂಬಂಧಿ ಸಮಸ್ಯೆಗಳಿಂದ ಬಳಲುವವರ ಜೀವ ರಕ್ಷಿಸಲು ಈ ತಜ್ಞರು ಈಗ ವಿಭಿನ್ನವಾಗಿ ಚಿಂತಿಸಿ ಕಾರ್ಯೋನ್ಮುಖರಾಗಿದ್ದಾರೆ. ಕೋವಿಡ್‌ ಪೂರ್ವದಲ್ಲಿದ್ದ ಹೃದಯದ ತೀವ್ರ ನಿಗಾ ಘಟಕಗಳ (ಸಿಐಸಿಯು) ಕಾರ್ಯನಿರ್ವಹಣೆಯಲ್ಲಿ ಹೃದಯರೋಗ ತಜ್ಞರು ಅನೇಕ ಬದಲಾವಣೆಗಳನ್ನು ಸೂಚಿಸುತ್ತಿದ್ದಾರೆ. ಸಿಐಸಿಯು ಕೋವಿಡ್‌–19 ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಎಲ್ಲೆಡೆ ಆಸ್ಪತ್ರೆಗಳಲ್ಲಿ ಇಂತಹ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಅಗತ್ಯವೂ ಹೆಚ್ಚಿದೆ. ಹಲವು ಆಸ್ಪತ್ರೆಗಳು ಇಂತಹ ಬದಲಾವಣೆಗಳನ್ನು ಅಳವಡಿಸಿಕೊಂಡಿವೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವವರು ಆಯ್ಕೆ ಮಾಡಿಕೊಳ್ಳುವ ವೈದ್ಯಕೀಯ ಚಿಕಿತ್ಸೆ ಅಥವಾ ಹೃದಯ ಶಸ್ತ್ರಚಿಕಿತ್ಸೆಯ ಕೋರಿಕೆಗಳ ಬದಲಿಗೆ ತುರ್ತಾಗಿ ಅಗತ್ಯ ಇರುವವರಿಗೆ ಈ ವೈದ್ಯಕೀಯ ಸೌಲಭ್ಯವನ್ನು ಆದ್ಯತೆ ಮೇರೆಗೆ ಒದಗಿಸುತ್ತಿವೆ.

‘ಸಿಐಸಿಯು’ದಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಚಿಕಿತ್ಸೆಯ ಸರದಿ ನಿರ್ಧರಿಸುವುದಕ್ಕೆ ಸಂಬಂಧಿಸಿದ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತರಲಾಗಿದೆ. ತೀವ್ರ ನಿಗಾ ಘಟಕ (ಐಸಿಯು) ಮತ್ತು ‘ಸಿಐಸಿಯು’ದಲ್ಲಿ ದೊರೆಯುವ ತೀವ್ರ ಸ್ವರೂಪದ ಕಾಳಜಿಯ ಚಿಕಿತ್ಸೆಯ ಗರಿಷ್ಠ ಪ್ರಯೋಜನ ಕಲ್ಪಿಸುವ ಅಗತ್ಯ ಹೆಚ್ಚಿದೆ. ಹೃದ್ರೋಗ ತಜ್ಞರು ಮತ್ತು ಆಸ್ಪತ್ರೆಗಳು ಅಳವಡಿಸಿ ಕೊಂಡಿರುವ ಈ ಎಲ್ಲ ಕ್ರಮಗಳಿಂದ ‘ಸಿಐಸಿಯು’ ಹಾಸಿಗೆಗಳ ಲಭ್ಯತೆ ಹೆಚ್ಚಿದೆ.

‘ಸಿಐಸಿಯು‘ದಲ್ಲಿ ಕಾರ್ಯನಿರ್ವಹಿಸುವ ಪರಿಣತ ಸಿಬ್ಬಂದಿಯಾದ ಹೃದ್ರೋಗ ತಜ್ಞರು, ದಾದಿಯರು ಮತ್ತಿತರ ಆರೋಗ್ಯ ಸಹಾಯಕರ ಲಭ್ಯತೆಯನ್ನೂ ಖಚಿತಪಡಿಸಲೂ ಇದರಿಂದ ಸಾಧ್ಯವಾಗಿದೆ. ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಕ್ಷಿಪ್ರ ಗತಿಯಲ್ಲಿ ಚಿಕಿತ್ಸಾ ಮಾಹಿತಿ ನೀಡಲೂ ಸಾಧ್ಯವಾಗಲಿದೆ. ಆಸ್ಪತ್ರೆಯ ಇತರ ಸಿಬ್ಬಂದಿ ಸೋಂಕಿನ ಪ್ರಭಾವಕ್ಕೆ ಒಳಗಾಗುವುದನ್ನೂ ಇದರಿಂದ ತಪ್ಪಿಸಬಹುದು ಎನ್ನುತ್ತಾರೆ ಡಾ.ಜಗದೀಶ ಹಿರೇಮಠ.

ಟೆಲಿ ಮೆಡಿಸಿನ್‌ ಮೂಲಕ ಹೃದ್ರೋಗ ತಜ್ಞರು ವರ್ಚುವಲ್‌ ರೂಪದಲ್ಲಿ ಐಸಿಯು ರೋಗಿಗಳಿಗೆ ನೀಡಬೇಕಾದ ಚಿಕಿತ್ಸೆ ಬಗ್ಗೆ ಸೂಕ್ತ ಮಾರ್ಗದರ್ಶನ ಮಾಡಲು ಸಾಧ್ಯವಾಗಲಿದೆ. ‘ಸಿಐಸಿಯು’ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಹೆಚ್ಚುವರಿ ಪರೀಕ್ಷೆಗೆ ಒಳಪಡಿಸದೆ ಇತರ ಪರಿಣತ ವೈದ್ಯರ ಸಲಹೆ ಪಡೆದು ಅಗತ್ಯ ಚಿಕಿತ್ಸೆ ನೀಡಲೂ ತಂತ್ರಜ್ಞಾನದ ಪ್ರಯೋಜನವೂ ನೆರವಿಗೆ ಬರುತ್ತಿದೆ ಎನ್ನುತ್ತಾರೆ ಅವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು