ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕ ಬೇಡ: ಮಂಕಿಪಾಕ್ಸ್‌ಗೆ ಚಿಕಿತ್ಸೆ ಏನು? ಮುನ್ನೆಚ್ಚರಿಕೆ ಕ್ರಮಗಳೇನು?

Last Updated 26 ಜುಲೈ 2022, 12:54 IST
ಅಕ್ಷರ ಗಾತ್ರ

ದೇಶದೆಲ್ಲೆಡೆ ಕೋವಿಡ್‌ ಬಳಿಕ ಮಂಕಿಪಾಕ್ಸ್‌ ಬಗ್ಗೆ ಜನರು ಹೆಚ್ಚು ಆತಂಕಪಡುವ ಸ್ಥಿತಿ ಉಲ್ಭಣವಾಗಿದೆ. ಈಗಾಗಲೇ ಭಾರತದಲ್ಲಿ ನಾಲ್ಕು ಪ್ರಕರಣಗಳು ಕಾಣಿಸಿಕೊಳ್ಳುವ ಮೂಲಕ ಎಲ್ಲರಲ್ಲೂ ಆತಂಕ ಹೆಚ್ಚಿಸಿದೆ. 75ಕ್ಕೂ ಹೆಚ್ಚು ದೇಶಗಳಲ್ಲಿ 16 ಸಾವಿರ ಪ್ರಕರಣಗಳು ಪತ್ತೆಯಾಗಿದ್ದು, ಸಾವು ನೋವುಗಳು ಕೂಡ ದಾಖಲಾಗುತ್ತಿವೆ. ಮಂಕಿಪಾಕ್ಸ್‌ ಯಾವ ವಯಸ್ಸಿನವರಿಗೆ ಕಂಡು ಬರಲಿದೆ? ಇದರ ಲಕ್ಷಣಗಳೇನು? ಇದಕ್ಕೆ ಚಿಕಿತ್ಸೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಕುರಿತು ವೈದ್ಯರು ಇಲ್ಲಿ ವಿವರಿಸಿದ್ದಾರೆ.

***

ಏನಿದು ಮಂಕಿಪಾಕ್ಸ್?
ಮಂಕಿಪಾಕ್ಸ್ ಒಂದು ರೀತಿಯ ಆರ್ಥೋಪಕ್ಸ್ ವೈರಸ್ ಆಗಿದ್ದು, ಇದು ಸಿಡುಬುಗೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತದೆ, ಇದು ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಮಂಗಗಳಿಂದ ಬಂದ ಕಾಯಿಲೆ. ಹಲವು ದಶಕಗಳಿಂದ ಈ ಕಾಯಿಲೆ ಮನುಷ್ಯರಿಗೆ ಹರುಡುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಂಕಿಪಾಕ್ಸ್‌ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಉಂಟು ಮಾಡುತ್ತಿದೆ.

ಮಂಕಿಪಾಕ್ಸ್‌ ಹೇಗೆ ಹರಡಲಿದೆ?
ಮಂಕಿಪಾಕ್ಸ್ ಪ್ರಾಣಿಗಳಿಂದ ಹರಡುವ ಕಾಯಿಲೆಯಾಗಿದೆ. ಕಾಡುಪ್ರಾಣಿಗಳ ನಿಕಟ ಸಂಪರ್ಕ ಹೊಂದಿದ್ದರೆ ಈ ಕಾಯಿಲೆ ಬರುವ ಸಾಧ್ಯತೆ ಇದೆ. ಒಮ್ಮೆ ಸೋಂಕಿಗೆ ಒಳಗಾದ ವ್ಯಕ್ತಿಯ ಸಂಪರ್ಕ ಹೊಂದಿದ್ದರೆ ಬರುವ ಸಾಧ್ಯತೆ ಅಧಿಕ. ಉದಾ: ತಬ್ಬಿಕೊಳ್ಳುವುದು, ಚುಂಬಿಸುವುದು, ಕೈ ಹಿಡಿದುಕೊಳ್ಳುವುದು ಅಥವಾ ಲೈಂಗಿಕ ಸಂಪರ್ಕದಂತಹ ದೈಹಿಕ ಸಂಪರ್ಕದ ರೂಪದಲ್ಲಿ ಸುಲಭವಾಗಿ ಹರಡಲಿದೆ. ಮತ್ತೊಂದು ಆಘಾತಕಾರಿ ವಿಷಯವೆಂದರೆ ಕೆಮ್ಮುವುದು ಹಾಗೂ ಸೀನುವುದರ ಮೂಲಕವೂ ಈ ಸೋಂಕು ಹರಡುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಜಾಗರೂಕರಾಗಿರಬೇಕು. ಈ ಕಾಯಿಲೆಗೆ ತುತ್ತಾದರೆ ಇದು ಕನಿಷ್ಠ 21 ದಿನಗಳವರೆಗೆ ಕಾಡಲಿದೆ.

ಇದರ ಗುಣಲಕ್ಷಣಗಳು:
ಮಂಕಿಪಾಕ್ಸ್‌ ಹೊಂದಿರುವ ವ್ಯಕ್ತಿಗೆ ಕನಿಷ್ಠ 12 ದಿನಗಳ ವರೆಗೆ ಜ್ವರ ಇರಲಿದೆ. ದೇಹದ ಎಲ್ಲಾ ಭಾಗಗಳಲ್ಲಿ ದದ್ದು ರೀತಿಯಲ್ಲಿ ಅಥವಾ ಕೀವು ತುಂಬಿದ ಗುಳ್ಳೆಗಳು ಏಳಲಿವೆ. ಅದರಲ್ಲೂ ಬಾಯಿ, ನಾಲಗೆ, ಕಣ್ಣು, ಖಾಸಗಿ ಅಂಗಗಳಲ್ಲಿ ಈ ದದ್ದುಗಳು ಹೆಚ್ಚಾಗಿ ಹರಡಲಿವೆ. ಇದಲ್ಲದೆ, ದುಗ್ಧರಸ ಗ್ರಂಥಿಗಳು, ಗಲಗ್ರಂಥಿಯ ಪ್ರದೇಶದ ಸುತ್ತಲೂ ಊತ ಕಂಡು ಬರುತ್ತದೆ. ಆಯಾಸ, ದೇಹವೆಲ್ಲ ನೋವಿನಿಂದ ಕೂಡಿರುವುದು, ಊಟ ಸೇರದೇ ಇರುವುದು ಸೇರಿದಂತೆ ಇತರೆ ಲಕ್ಷಣಗಳನ್ನು ಕಂಡು ಬರುತ್ತವೆ.

ಯಾವ ವಯಸ್ಸಿನ ಗುಂಪುಗಳು ಹೆಚ್ಚು ದುರ್ಬಲವಾಗಿವೆ?
ಈ ವೈರಸ್‌ ಎಲ್ಲ ವಯಸ್ಸಿನ ಗುಂಪಿನವರಿಗೂ ಕಾಡಲಿದೆ. ಅದರಲ್ಲೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರಲ್ಲಿ ಈ ವೈರಸ್‌ನ ತೀವ್ರತೆ ಕಂಡು ಬರುವ ಸಾಧ್ಯತೆ ಹೆಚ್ಚು. ಆದರೆ, ಈ ವೈರಸ್‌ನಿಂದ ಸಾವಿನ ಪ್ರಮಾಣ ತೀರ ಕಡಿಮೆ. ಕನಿಷ್ಠ ೨೧ ದಿನಗಳ ವರೆಗೆ ಚಿಕಿತ್ಸೆ ಪಡೆದುಕೊಂಡು, ಐಸೋಲೇಟ್‌ ಆಗುವ ಮೂಲಕ ಇದನ್ನು ಗುಣಪಡಿಸಬಹುದು ಹಾಗೂ ಹೆಚ್ಚು ಜನರಿಗೆ ಹರಡುವುದನ್ನು ತಡೆಯಬಹುದು.

ಚಿಕಿತ್ಸೆ ಏನು?
ಪ್ರಸ್ತುತ ಮಂಕಿಪಾಕ್ಸ್‌ಗೆ ಯಾವುದೇ ನಿಗಧಿತ ಚಿಕಿತ್ಸೆ ಅಥವಾ ಲಸಿಕೆಯಾಗಲಿ ಇಲ್ಲ. ಆದರೆ, ಈ ರೋಗವನ್ನು ಸಿಡುಬು ರೋಗ, ಸ್ಮಾಲ್‌ ಮಂಕಿ ಪಾಕ್ಸ್‌ಗೆ ನೀಡುವ ಚಿಕಿತ್ಸೆ ಹಾಗೂ ಲಸಿಕೆಯನ್ನು ನೀಡಲಾಗುತ್ತಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಮಂಕಿಪಾಕ್ಸ್‌ ತುರ್ತುಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್‌ಗಳನ್ನು ಮೀಸಲಿಡಲಾಗುತ್ತಿದೆ. ಕೋವಿಡ್‌ಗೆ ಚಿಕಿತ್ಸೆ ನೀಡಿದ ರೀತಿಯಲ್ಲಿಯೇ ವೈದ್ಯರು ಪಿಪಿಟಿ ಕಿಟ್‌ ಧರಿಸಿ ಈ ಪ್ರಕರಣಗಳನ್ನು ನೋಡುತ್ತಿದ್ದಾರೆ.

ಮುನ್ನೆಚ್ಚರಿಕೆ ಕ್ರಮಗಳೇನು?
ಮಂಕಿಪಾಕ್ಸ್‌ ಈಗಾಗಲೇ 75ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿದ್ದು, ಭಾರತದಲ್ಲಿಯೂ ನಾಲ್ಕು ಪ್ರಕರಣಗಳು ಕಾಣಿಸಿಕೊಂಡಿವೆ. ಇದರ ಲಕ್ಷಣಗಳನ್ನು ನೋಡಿದರೆ, ಪ್ರತಿಯೊಬ್ಬರಿಗೂ ಭಯ ಆವರಿಸುತ್ತದೆ. ಮಂಕಿಪಾಕ್ಸ್‌ ಬಾರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತರಾಗಿರಬೇಕು.

ಪ್ರತಿಯೊಬ್ಬರು ವ್ಯಕ್ತಿಗಳಿಂದ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್‌ ಧರಿಸುವುದು, ಕೈಗಳನ್ನು ಪದೇ ಪದೇ ಸ್ಯಾನಿಟೈಸ್‌ ಮಾಡಿಕೊಳ್ಳುತ್ತಾ ಇರಬೇಕು. ಜೊತೆಗೆ ಮಾಂಸಹಾರಿಗಳು ತಾವು ತರುವ ಮಾಂಸವನ್ನು ಪೂರ್ತಿಯಾಗಿ ಬೇಯಿಸಿ ತಿನ್ನುವುದು ಒಳಿತು. ಹಾಗೆಯೇ, ತರಕಾರಿ ಇತ್ಯಾದಿ ಪದಾರ್ಥಗಳನ್ನು ಬಳಸುವ ಮೊದಲು ಹೆಚ್ಚು ಶುದ್ಧೀಕರಿಸಬೇಕು. ಮಕ್ಕಳಿಗೂ ಸಹ ಶಾಲೆಗಳಲ್ಲಿ ಹಾಗೂ ಮನೆಯಲ್ಲಿ ಈ ಬಗ್ಗೆ ಮಾಹಿತಿ ನೀಡುವುದು ಮುಖ್ಯ.

ಡಾ. ಶೀಲಾ ಮುರಳಿ ಚಕ್ರವರ್ತಿ, ನಿರ್ದೇಶಕರು, ಇಂಟರ್ನಲ್ ಮೆಡಿಸಿನ್, ಫೋರ್ಟಿಸ್ ಆಸ್ಪತ್ರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT