ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಪ್ರಾಯ, ಅಭಿಮತಗಳಲ್ಲಿ ತಲೆಮಾರಿನ ಅಂತರ

Published 12 ಸೆಪ್ಟೆಂಬರ್ 2023, 11:30 IST
Last Updated 12 ಸೆಪ್ಟೆಂಬರ್ 2023, 11:30 IST
ಅಕ್ಷರ ಗಾತ್ರ

ಒಂದು ತಲೆಮಾರಿಗೂ ಮತ್ತೊಂದು ತಲೆಮಾರಿಗೂ ಅಭಿಪ್ರಾಯಗಳಲ್ಲಿ, ಅಭಿಮತಗಳಲ್ಲಿ ಇರುವ ವ್ಯತ್ಯಾಸ ಅಥವಾ ಭಿನ್ನತೆಯನ್ನು ತಲೆಮಾರಿನ ಅಂತರ (ಜನರೇಷನ್‌ ಗ್ಯಾಪ್‌) ಎನ್ನಬಹುದು. ತಾಯಿ-ಮಕ್ಕಳ ನಡುವೆ, ತಂದೆ-ಮಕ್ಕಳ ನಡುವಿನ ಆಲೋಚನಾ ಕ್ರಮದ ಅಂತರವನ್ನೂ ಜನರೇಷನ್‌ ಗ್ಯಾಪ್‌ ಎಂದೇ ಹೇಳಬಹುದು. 

ಸರಳವಾಗಿ ಹೇಳುವುದಾದರೆ, ಇಪ್ಪತ್ತು ರೂಪಾಯಿ ಉಳಿಸಲು ಅಪ್ಪ ಇಪ್ಪತ್ತು ನಿಮಿಷ ನಡೆಯುತ್ತಿದ್ದರು. ಅದೇ ಮಗ ಇಪ್ಪತ್ತು ನಿಮಿಷ ಉಳಿಸಲು ಇಪ್ಪತ್ತು ರೂಪಾಯಿ ಖರ್ಚು ಮಾಡುತ್ತಾನೆ. ವಿಷಯ ಒಂದೇಯಾದರೂ ಗ್ರಹಿಕೆ ಭಿನ್ನವಾಗಿರುತ್ತದೆ. ಹಾಗೆ ನೋಡಿದರೆ ಪ್ರತಿಯೊಬ್ಬರ ಆಲೋಚನಾ ಕ್ರಮ ಭಿನ್ನವಾಗಿಯೇ ಇರುತ್ತದೆ. ವಯಸ್ಸಿನ ವ್ಯತ್ಯಾಸವಷ್ಟೆ ತಲೆಮಾರಿನ ಅಂತರಕ್ಕೆ ಕಾರಣವಲ್ಲ. ಈ ಜನರೇಷನ್‌ ಗ್ಯಾಪ್‌ಗೆ ಅತಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಕೊಡುಗೆಯೂ ಅಧಿಕವಾಗಿದೆ. 

ನಾವು ಚಿಕ್ಕವರಿದ್ದಾಗ ಇದ್ದದ್ದು ಸ್ಥಿರ ದೂರವಾಣಿ ಅಂದರೆ ಲ್ಯಾಂಡ್ ಲೈನ್ ಫೋನ್. ‘ಇನ್ನು ಮುಂದೆ ಪೋನ್‌ನಲ್ಲಿ ಮಾತನಾಡುವವರ ಮುಖ ನೋಡಬಹುದಂತೆ’ ಎಂದು ನಮ್ಮ ಅಜ್ಜಯ್ಯ ಹೇಳುತ್ತಿದ್ದದ್ದನ್ನು ಕೇಳಿದಾಗ, ನಮ್ಮ ಪುಟ್ಟ ತಲೆಯಲ್ಲಿ ನೂರೆಂಟು ಕಲ್ಪನೆಯ ಅಲೆಗಳು ತೇಲುತ್ತಿದ್ದವು. ಇಂದಿನ ಮಕ್ಕಳಿಗೆ ಹೋಲಿಸಿದಲ್ಲಿ ಚಿಕ್ಕವರಿದ್ದಾಗ, ನಾವು ಕೇಳುತ್ತಿದ್ದ ಪ್ರಶ್ನೆಗಳು ಬಹಳಾ ಕಡಿಮೆ. ಆದರೆ ನಮ್ಮ ಮಕ್ಕಳಿಗೆ ಏನು ಹೇಳಿದರೂ ಏಕೆ? ಹೇಗೆ? ಎಲ್ಲಿ? ಯಾವಾಗ? ಈ ರೀತಿಯ ಪ್ರಶ್ನೆಗಳು ಉದ್ಭವಿಸುತ್ತವೆ. ಇದಕ್ಕೆ ಇಂದಿನ ಮಕ್ಕಳಿಗೆ ಎಕ್ಸ್‌ಪೋಷರ್‌ ಅಥವಾ ಹಲವು ವಿಷಯಗಳಿಗೆ ಅನಾವರಣ ಹೆಚ್ಚು ಎಂಬುದೂ ಕಾರಣ. ನಾವು ಎಷ್ಟೇ ಆಧುನಿಕತೆಗೆ ಹೊಂದಿಕೊಂಡರೂ ನಮ್ಮ ಮಕ್ಕಳೆದುರು ನಾವು ಹಳೇ ಕಾಲದವರೇ! ನಮ್ಮ ಅಜ್ಜನಿಗೆ ಅವರಪ್ಪ ಹಳಬ, ಅಪ್ಪನಿಗೆ ಅಜ್ಜ ಹಳಬ, ನಮಗೆ ಅಪ್ಪ ಹಳಬ ಹಾಗೆಯೇ ನಮ್ಮ ಮಕ್ಕಳಿಗೆ ನಾವು ಹಳಬರು!

ನಾವು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ನಮ್ಮ ಊರಿನಲ್ಲಿ ಪ್ರತಿ ನಿತ್ಯ ಕರೆಂಟ್ ಹೋಗುತ್ತಿತ್ತು. ನಾವು ಬುಡ್ಡಿ ದೀಪ, ಲಾಟೀನು, ಮೇಣದ ಬತ್ತಿಯನ್ನು ಹಚ್ಚಿಕೊಂಡು ಹೋಮ್‌ವರ್ಕ್ ಮಾಡಿಕೊಳ್ಳುತ್ತಿದ್ದೆವು. ಇದು ನನ್ನ ಮಗಳಿಗೆ ಅಚ್ಚರಿಯ ಸಂಗತಿ. "ಅಮ್ಮಾ, ನಿಮ್ಮ ಕಾಲದಲ್ಲಿ ಕರೆಂಟ್ ಬ್ಯಾಕ್ ಅಪ್ ಇರಲಿಲ್ಲವಾ"? ಎಂದು ಕಣ್ಣರಳಿಸಿ ಕೇಳುವಾಗ, ನಾನು ಯಾವ ಕಾಲದವಳು ಎಂದು ನನಗೇ ಆಶ್ಚರ್ಯವಾಗುತ್ತದೆ. ನನ್ನ ಮಗಳ ಪ್ರಕಾರ ವಿದ್ಯುತ್ ಇಲ್ಲದ ದಿನಗಳು ಎಂದರೆ ಇತಿಹಾಸದ ಕಾಲ! ಇಂದಿನ ಮಕ್ಕಳು ಆಧುನಿಕತೆಗೆ ಹೇಗೆ ಒಗ್ಗಿ ಹೋಗಿದ್ದಾರೆಂದರೆ, ರಿಮೋಟ್‌ನ ಸಹಾಯವಿಲ್ಲದೆಯೂ ಟಿ.ವಿ ಚಾನಲ್‌ಗಳನ್ನು ಬದಲಿಸಬಹುದು ಎಂಬುದು ಗೊತ್ತಿಲ್ಲ! ಇದೊಂದು ಉದಾಹರಣೆಯಷ್ಟೇ. ಈ ರೀತಿಯ ಬಹಳಷ್ಟು ವಿಷಯಗಳು ನಮ್ಮ ಮಕ್ಕಳಿಗೆ ಗೊತ್ತಿಲ್ಲ. ಅಂದ ಮೇಲೆ ನಮ್ಮ ಮಕ್ಕಳಿಗಿಂತ ನಾವು ಜಾಣರು. ಅಂತೆಯೇ ನಮ್ಮ ಹಿರಿಯರು ನಮಗಿಂತ ಚತುರರು. ಆದರೆ ಪ್ರತಿಯೊಬ್ಬರ ಕಲ್ಪನೆಯಲ್ಲಿಯೂ ತಮ್ಮ ಹಿರಿಯರಿಗಿಂತ ತಾವೇ ಬುದ್ಧಿವಂತರೆಂಬ ನಂಬಿಕೆ. ಹಾಗೆಯೇ ತಾವು ತಮ್ಮ ಕಿರಿಯರಿಗಿಂತ ವಿವೇಕವಂತರೆಂಬ ಹೆಮ್ಮೆ!

ತಂತ್ರಜ್ಞಾನವು ಜನರೇಷನ್ ಗ್ಯಾಪ್‌ಗೆ ಪೂರಕವಾಗಿದ್ದರೂ, ಇದು ಅವರವರ ಬೌದ್ಧಿಕ ಮಟ್ಟಕ್ಕೆ ಸಂಬಂಧಿಸಿದ್ದು. ಇದು ಇಂದು ಹಾಗೂ ನೆನ್ನೆಯದಲ್ಲ. ಎಲ್ಲಾ ಕಾಲದಲ್ಲೂ ಮತ್ತು ಎಲ್ಲಾ ದೇಶಗಳಲ್ಲೂ ಇರುವುದೇ ಆಗಿದೆ.  ಹಾಗೆಯೇ ತಲೆಮಾರಿನ ಅಂತರವು ಖಂಡಿತ ಸಮಸ್ಯೆಯಲ್ಲ. ಇದು ನೈಸರ್ಗಿಕ ಹಾಗೂ ಅನಿವಾರ್ಯ ಕೂಡಾ. ಪ್ರಪಂಚದ ಯಾವುದೇ ಮೂಲೆಯ ಮನುಷ್ಯನನ್ನು ತೆಗೆದುಕೊಂಡರೂ, ಆತನ ಜೀವನದ ಪ್ರತೀ ಹಂತದಲ್ಲೂ ಈ ತಲೆಮಾರಿನ ಅಂತರವನ್ನು ತನ್ನ ಹಿರಿಯರೊಡನೆ ಹಾಗೂ ಕಿರಿಯರೊಡನೆ ಅನುಭವಿಸಿಯೇ ಇರುತ್ತಾನೆ. ಸಂಪ್ರದಾಯ, ಆಚರಣೆಗಳು, ನಂಬಿಕೆ, ಜೀವನಶೈಲಿ ಇವುಗಳ ವ್ಯತ್ಯಾಸದಿಂದಾಗಿಯೇ ತಲೆಮಾರಿನಿಂದ ತಲೆಮಾರುಗಳ ನಡುವೆ ಘರ್ಷಣೆ ಉಂಟಾಗುವುದು. ಇದು ಕೌಟುಂಬಿಕ ವಲಯದಲ್ಲಿ ಮಾತ್ರವಲ್ಲದೆ, ಕಚೇರಿಗಳಲ್ಲಿ, ಶಾಲೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿಯೂ ಇರುತ್ತದೆ. ಇದಕ್ಕೆ ದೇಶ, ಕಾಲ ಹಾಗೂ ಮಾನಗಳ ಭೇದವಿಲ್ಲ. ಬೇಸರದ ಸಂಗತಿಯೆಂದರೆ, ತಲೆಮಾರಿನಿಂದ ತಲೆಮಾರಿಗೆ ಬದುಕಿನ ಬೆಲೆ ಕುಸಿಯುತ್ತಿದೆ ಹಾಗೂ ಸಾಮಾಜಿಕ ಅಂತರ ಹೆಚ್ಚುತ್ತಿವೆ.

ಪ್ರತಿಯೊಂದು ತಲೆಮಾರೂ ತಾವು ನಂಬಿರುವ ಜೀವನ ಮೌಲ್ಯ ಹಾಗೂ ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಿವೆ. ಹಾಗೆಯೇ ತಾವೇ ಸರಿ ಎಂಬುದನ್ನೂ ಪ್ರತಿಪಾದಿಸಲು ಬಯಸುತ್ತದೆ. ಈ ವರ್ತನೆ ತಲೆಮಾರುಗಳ ಅಂತರವನ್ನು ಹೆಚ್ಚಿಸಿವೆ. ಈ ಕಾರಣಕ್ಕಾಗೇ ಕುಟುಂಬಗಳಲ್ಲಿ ಅತ್ತೆ-ಸೊಸೆ, ಅಪ್ಪ-ಮಕ್ಕಳ ನಡುವೆ ಭಿನ್ನಾಭಿಪ್ರಾಯ ತಲೆದೋರುತ್ತದೆ. ತಲೆಮಾರಿನ ಅಂತರವು ಸಮಾಜದಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣವಾಗಿದೆ.

ನಮ್ಮ ದೇಶದಲ್ಲಿ ಅವಿಭಕ್ತ ಕುಟುಂಬ ಪದ್ಧತಿಯು ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಖಾಸಗಿತನಕ್ಕೆ ಆದ್ಯತೆ ಸಿಗುತ್ತಿದೆ. ತಮ್ಮ ಜೀವನವನ್ನು ತಮ್ಮದೇ ರೀತಿಯಲ್ಲಿ ನಡೆಸಲು ಅಪೇಕ್ಷಿಸುತ್ತಾರೆ. ಅವಿಭಕ್ತ ಕುಟುಂಬ ವ್ಯವಸ್ಥೆಯು ಇದಕ್ಕೆ ಅಡ್ಡಿ ಎಂದು ಭಾವಿಸುತ್ತಾರೆ. ಹಾಗಾಗಿಯೇ ವಿಭಕ್ತ ಕುಟುಂಬಗಳು ಹೆಚ್ಚುತ್ತಿವೆ. ಅಂತೆಯೇ ಹಿಂದೆಲ್ಲಾ ಮಹಿಳೆಯರು ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದರು. ಹೊರಗೆ ಹೋಗಿ ಕೆಲಸ ಮಾಡುವುದು ಪುರುಷರ ಕೆಲಸವಾಗಿತ್ತು. ಆದರೆ ತಲೆಮಾರುಗಳಿಂದ ಸಮಾಜದಲ್ಲಿ ಮಹಿಳೆಯರ ಬಗೆಗಿನ ಮನೋಭಾವ ಬದಲಾಗಿದೆ. ಇಂದು ಮಹಿಳೆಯರು ತಮ್ಮಿಷ್ಟದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪುರುಷರಂತೆ ಕೆಲಸ ಮಾಡಬಲ್ಲರು. ಇವು ಕೆಲವು ನಿದರ್ಶನಗಳಷ್ಟೇ.

ಇಂಥ ಬದಲಾವಣೆಗಳು ಸಾಕಷ್ಟಿವೆ. ತಲೆಮಾರಿನ ಅಂತರ ಸಮಸ್ಯೆಯಲ್ಲ. ಆದರೆ ವಿಭಿನ್ನ ತಲೆಮಾರಿನ ಜನರು ತಮ್ಮ ಜೀವನಕ್ರಮ ಹಾಗೂ ಆಲೋಚನೆಗಳನ್ನು ಇನ್ನೊಬ್ಬರ ಮೇಲೆ ಹೇರಲು ಪ್ರಯತ್ನಿಸಿದಾಗಷ್ಟೆ ಸಮಸ್ಯೆ ಉದ್ಭವಿಸುತ್ತದೆ.

ತಲೆಮಾರಿನ ಅಂತರದ ಬದಲಾವಣೆಗಳಿಂದ ಒಳಿತಾಗುತ್ತಿದೆಯೋ ಅಥವಾ ಕೆಡುಕಾಗುತ್ತಿದೆಯೋ ಎನ್ನುವುದಕ್ಕಿಂತ ಸಾಮಾಜಿಕ ಅಂತರ ಹೆಚ್ಚುತ್ತಿದೆ ಎಂಬುದು ವಿಷಾದನೀಯ. ಈ ಅಂತರಕ್ಕೊಂದು ಸಂಪರ್ಕ ಸೇತುವೆ ನಿರ್ಮಿಸುವುದು ಅವಶ್ಯಕ. ಪೋಷಕರ ಹಾಗೂ ಮಕ್ಕಳ ಸಂಬಂಧ ಅತ್ಯಂತ ಗಾಢವಾದ ಅನುಬಂಧ. ಪ್ರತಿಯೊಬ್ಬರೂ ತಮ್ಮ ನಿರ್ಧಾರವೇ ಉತ್ತಮ ಎಂದು ಭಾವಿಸುತ್ತಾರೆ.

ಹಿರಿಯ ತಲೆಮಾರಿನವರು ತಮ್ಮ ಮಕ್ಕಳು ಬೇರೆ ವಯಸ್ಸಿನವರು, ತಮಗಿಂತ ಕಿರಿಯರು, ಆದ್ದರಿಂದ ಅವರ ಮನಸ್ಥಿತಿ ವಿಭಿನ್ನವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು. ತಮಗಿಂತ ತಮ್ಮ ಮಕ್ಕಳ ಅಭಿಪ್ರಾಯ ಭಿನ್ನವೇಕೆ ಎಂಬುದರ ಕುರಿತು ಗಮನ ಹರಿಸಬೇಕು. ಅದಕ್ಕಾಗಿ ಮಕ್ಕಳೊಂದಿಗೆ ಬೆರೆಯಲು ಅವರ ಸ್ನೇಹಿತರಾಗಬೇಕು. ಅವರ ಅಭಿಪ್ರಾಯ, ಅನಿಸಿಕೆಗಳಿಗೂ ಬೆಲೆ ಕೊಡಬೇಕು. ಮಕ್ಕಳ ಭಾವನೆಗಳನ್ನು ಗೌರವಿಸಬೇಕು. ಪಾಲಕರು ತಮ್ಮ ಮಕ್ಕಳ ಯೋಗ್ಯತೆಯನ್ನು ನಿರ್ಣಯಿಸಬಾರದು. ಕಿರಿಯರಿಗೆ ಅವರದೇ ಆದ ಸ್ಪೇಸ್ ಕೊಡಬೇಕು. ತಾವು ಬೆಳೆದಂತೆಯೇ ತಮ್ಮ ಮಕ್ಕಳೂ ಬೆಳೆಯಬೇಕೆನ್ನುವ ನಿರ್ಧಾರವನ್ನು ಸಡಿಲಿಸಬೇಕು. ಮಕ್ಕಳು ಪ್ರತಿಕ್ರಿಯೆಗೆ ಮಕ್ತರಾಗಿರಬೇಕು.

ಅಂತರ ಕಿರಿದಾಗುವುದು ಒಂದು ತಲೆಮಾರಿನ ಬದಲಾವಣೆಯಿಂದಲ್ಲ. ಇಲ್ಲಿ ಕಿರಿಯರ ಪಾಲೂ ಇದೆ. ಮಕ್ಕಳು ತಮ್ಮ ಹೆತ್ತವರನ್ನು ಗೌರವಿಸಬೇಕು. ಅವರ ಆಲೋಚನೆಗಳಿಗೂ ಬೆಲೆ ಕೊಡಬೇಕು. ತಮ್ಮ ಆಲೋಚನೆಗಳನ್ನು ಹಿರಿಯರೊಂದಿಗೆ ಹಂಚಿಕೊಳ್ಳಬೇಕು. ಹಿರಿಯರಿಂದ ಅವರ ನಂಬಿಕೆ,
ಸಂಪ್ರದಾಯಗಳನ್ನು ತಿಳಿಯುವ ಪ್ರಯತ್ನ ಮಾಡಬೇಕು. ಹಿರಿಯರು ಕೊಡುವ ಸಲಹೆಗಳು ಹಳೇಕಾಲದ್ದು ಎಂಬ ಭಾವನೆಯನ್ನು ಬಿಡಬೇಕು. ತಮ್ಮ ಆಲೋಚನೆ, ನಿರ್ಧಾರಗಳು ಭಿನ್ನವಾಗಿದ್ದರೂ, ಅದನ್ನು ಹಿರಿಯರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದಲ್ಲಿ ತಲೆಮಾರಿನ ಅಂತರ ಕಡಿಮೆಯಾಗಬಲ್ಲದು.

ಹಿರಿಯರು ಹಾಗೂ ಕಿರಿಯರು ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ವಿಷಯದ ವಿರುದ್ಧ ತಾವೇ ಸರಿ ಎಂದು ಪ್ರತಿಪಾದಿಸುವ ಬದಲು ಒಬ್ಬರು ಮತೊಬ್ಬರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ತಲೆಮಾರಿನ ಅಂತರಕ್ಕೆ ವಯಸ್ಸಿನ ವ್ಯತ್ಯಾಸ ಮುಖ್ಯವಾದ ಕಾರಣವಾದರೂ ತಮ್ಮ ಆಲೋಚನೆ ಹಾಗೂ ನಂಬಿಕೆಯನ್ನು ಪರಸ್ಪರರ ಮೇಲೆ ಒತ್ತಾಯದಿಂದ ತರುವ ಬದಲು ಅವರಿರುವಂತೆಯೇ ಅವರನ್ನು ಗೌರವಿಸಿ, ಸ್ವೀಕರಿಸಬೇಕು. ತಲೆಮಾರಿನ ಅಂತರ ತಲೆತಲಾಂತರದಿಂದಲೂ ಇದೆ ಹಾಗೆಯೇ ಮುಂದೆಯೂ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT