ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ 3ನೇ ಅಲೆ ಅಪ್ಪಳಿಸದಂತೆ ತಡೆಯಲು ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ

Last Updated 9 ಮೇ 2021, 13:05 IST
ಅಕ್ಷರ ಗಾತ್ರ

ನವೆದಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಹೊಡೆತಕ್ಕೆ ದೇಶ ತತ್ತರಿಸುತ್ತಿದೆ. ಜನರು ಕಠಿಣ ಮಾರ್ಗಸೂಚಿ ಅನುಸರಿಸಿದರೆ ಮತ್ತು ಹೆಚ್ಚಿನ ಜನಸಂಖ್ಯೆಗೆ ಲಸಿಕೆ ಹಾಕಿಸಿದರೆ ಮುಂದಿನ ಸಂಭನೀಯ 3ನೇ ಅಲೆಯನ್ನು ತಡೆಯಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಮೂರನೇ ಅಲೆ ಬಂದೇ ಬರುತ್ತದೆ ಎಂದು ಹೇಳಿದ್ದ ಪ್ರಧಾನಿಗಳ ಪ್ರಮುಖ ವೈಜ್ಞಾನಿಕ ಸಲಹೆಗಾರ ಕೆ ವಿಜಯರಾಘವನ್, ಮುನ್ನೆಚ್ಚರಿಕಾ ಕ್ರಮಗಳು ಮತ್ತು ಕಠಿಣ ಮಾರ್ಗಸೂಚಿ ಅನುಸರಿಸಿದರೆ ಸೋಂಕು ಹರಡದಂತೆ ತಡೆದು ಮೂರನೇ ಅಲೆಯನ್ನು ನಿರ್ಬಂಧಿಸಬಹುದು ಎಂದಿದ್ದಾರೆ. ಮುಂಜಾಗ್ರತೆ, ಸೋಂಕಿನ ಬಗ್ಗೆ ಎಚ್ಚರಿಕೆ, ಕಂಟೈನ್ಮೆಂಟ್ ಝೋನ್ ಗುರುತಿಸುವಿಕೆ, ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಸಮರ್ಪಕಗೊಳಿಸುವ ಮೂಲಕ ಇದು ಸಾಧ್ಯ ಎಂದು ಅವರು ಹೇಳಿದ್ದಾರೆ.

‘ನಾವು ಬಲವಾದ ಕ್ರಮಗಳನ್ನು ತೆಗೆದುಕೊಂಡರೆ, ಮೂರನೆಯ ಅಲೆಯು ದೇಶದ ಎಲ್ಲ ಸ್ಥಳಗಳಲ್ಲಿ ಅಥವಾ ಎಲ್ಲಿಯೂ ಸಂಭವಿಸುವುದಿಲ್ಲ. ಇದು ಸ್ಥಳೀಯ ಮಟ್ಟದಲ್ಲಿ ರಾಜ್ಯಗಳು, ಜಿಲ್ಲೆಗಳು ಮತ್ತು ನಗರಗಳಲ್ಲಿ ಎಲ್ಲೆಡೆ ಮಾರ್ಗಸೂಚಿಗಳನ್ನು ಎಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ’ ಎಂದು ಅವರು ಹೇಳಿದರು.

ತಜ್ಞರ ಪ್ರಕಾರ, ರೋಗನಿರೋಧಕ ಶಕ್ತಿಯನ್ನು ಸ್ವಾಭಾವಿಕವಾಗಿ ಅಥವಾ ಲಸಿಕೆ ಮೂಲಕ ವೃದ್ಧಿಸಿಕೊಂಡರೂ ಸಹ ಕೆಲವು ತಿಂಗಳುಗಳಲ್ಲಿ, ವೈರಸ್ ಮತ್ತೆ ದಾಳಿ ಮಾಡಬಹುದು. ವೈರಸ್ ಮತ್ತೆ ಪುಟಿದೇಳದಂತೆ ತಡೆಯುವ ಏಕೈಕ ಮಾರ್ಗವೆಂದರೆ ಕಠಿಣ ನಿಯಮಾವಳಿ ಪಾಲಿಸುವ ಮೂಲಕ ಜನರು ತಮ್ಮನ್ನು ತಾವು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬುದಾಗಿದೆ.

‘ಈ ವರ್ಷದ ಆರಂಭದಲ್ಲಿ, ಹೊಸ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ, ಜನರು ವೈರಸ್ ಇಲ್ಲ ಎಂಬಂತೆ ಸಂವಹನ ನಡೆಸಲು ಪ್ರಾರಂಭಿಸಿದರು. ರೋಗನಿರೋಧಕ ಶಕ್ತಿ ಅದಾಗಲೇ ಕ್ಷೀಣಿಸಲು ಪ್ರಾರಂಭಿಸಿತ್ತು. ಸಾಮೂಹಿಕ ಕೂಟಗಳನ್ನು ಆಯೋಜಿಸಲು ಆರಂಭಿಸಿದರು, ಮಾಸ್ಕ್ ಧರಿಸುವುದನ್ನು ನಿಲ್ಲಿಸಿದರು. ವೈರಸ್‌ ಕಮ್ ಬ್ಯಾಕ್ ಮಾಡಲು ಅವಕಾಶ ನೀಡಿದರು’ ಎಂದು ನವದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಜಿನೋಮಿಕ್ಸ್ ಅಂಡ್ ಇಂಟಿಗ್ರಲ್ ಬಯಾಲಜಿ ನಿರ್ದೇಶಕ ಡಾ. ಅನುರಾಗ್ ಅಗರ್ವಾಲ್ ಹೇಳಿದ್ದಾರೆ.

‘ಮೂರನೇ ಅಲೆಯು ಯಾವಾಗ ಬರುತ್ತದೆ ಅಥವಾ ಎಷ್ಟು ತೀವ್ರವಾಗಿರುತ್ತದೆ ಎಂದು ನಾವು ಹೇಳಲಾರೆವು. ಆದರೆ, ಮುಂಬರುವ ತಿಂಗಳುಗಳಲ್ಲಿ ಜನರು ಸೂಕ್ತವಾದ ಎಚ್ಚರಿಕೆ ವಹಿಸಿದರೆ ಮತ್ತು ನಾವು ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ನೀಡಲು ಯಶಸ್ವಿಯಾದರೆ ಮೂರನೇ ಅಲೆಯ ತೀವ್ರತೆ ಕಡಿಮೆಯಾಗಿರಬಹುದು’ ಎಂದು ಡಾ ಅಗರ್ವಾಲ್ ಹೇಳಿದರು.

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಹೆಚ್ಚುತ್ತಿರುವ ಪ್ರಕರಣಗಳು ಜನರಲ್ಲಿ ಆತಂಕಕ್ಕೆ ಕಾರಣವಾಗಿದ್ದರೂ, ಅವರ ಭಯವನ್ನು ಹೆಚ್ಚಿಸುತ್ತಿರುವುದು ವೈರಸ್‌ನ ಹೊಸ ರೂಪಾಂತರಿಗಳು.

ಆದರೂ, ಕೆಲವು ತಜ್ಞರು ಹೇಳುವ ಪ್ರಕಾರ, ವೈರಸ್ ರೂಪಾಂತರಗೊಳ್ಳುವುದು ಸಾಮಾನ್ಯ ವಿದ್ಯಮಾನ. ರೂಪಾಂತರಿ ವೈರಸ್‌ನಿಂದ, ವೈರಸ್ ತಡೆಗಟ್ಟುವ ಪ್ರಯತ್ನಗಳು, ಚಿಕಿತ್ಸೆ ಅಥವಾ ವ್ಯಾಕ್ಸಿನೇಷನ್ ಮೇಲೆ ಪರಿಣಾಮ ಬೀರುವುದಿಲ್ಲ.

'ಪ್ರತಿ ವೈರಸ್, ಮನುಷ್ಯನ ದೇಹ ಪ್ರವೇಶಿದಾಗ ರೂಪಾಂತರಗೊಂಡು ದ್ವಿಗುಣಗೊಳ್ಳುತ್ತದೆ. ಆದರೆ, ಅಲ್ಲಿ ರೂಪಾಂತರಗೊಳ್ಳುವ ವೈರಸ್ ಮೊದಲ ವೈರಸ್‌ನಂತೆ ಇರದೇ ಇರಬಹುದು’ ಎನ್ನುತ್ತಾರೆ ತಜ್ಞರು.

‘ವೈರಸ್ ಪ್ರತಿಕೃತಿಯ ರಚನೆಯಲ್ಲಿ ಸಂಭವಿಸುವ ಯಾವುದೇ ಸಣ್ಣ, ದೊಡ್ಡದಾದ ಬದಲಾವಣೆಯನ್ನು ರೂಪಾಂತರ ಎಂದು ಕರೆಯಲಾಗುತ್ತದೆ. ವೈರಸ್ ನೂರಾರು ಮತ್ತು ಸಾವಿರಾರು ರೂಪಾಂತರಗಳಿಗೆ ಒಳಗಾಗುತ್ತದೆ’ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೀನೋಮಿಕ್ಸ್ (ಎನ್‌ಐಬಿಎಂಜಿ) ನಿರ್ದೇಶಕ ಡಾ.ಸೌಮಿತ್ರ ದಾಸ್ ಹೇಳಿದ್ದಾರೆ.

‘ರೂಪಾಂತರಗೊಂಡ ವೈರಸ್ ಹೆಚ್ಚು ಹರಡುವ ಅಥವಾ ಅಧಿಕ ಪರಿಣಾಮಕಾರಿಯಾಗಿರುತ್ತದೆಯೇ. ಅಸ್ತಿತ್ವದಲ್ಲಿರುವ ಔಷಧಿಗಳನ್ನು ಅಥವಾ ಲಸಿಕೆಗಳನ್ನು ನಿಷ್ಪರಿಣಾಮಕಾರಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆಯೇ ಎಂಬುದು ನಮ್ಮ ಕಳವಳವಾಗಿದೆ’ ಎಂದು ಡಾ ದಾಸ್ ಹೇಳಿದರು.

ಆದರೆ, ಇದುವರೆಗೆ ಕಂಡುಬಂದಿರುವ ರೂಪಾಂತರಿಗಳು ಅಸ್ತಿತ್ವದಲ್ಲಿರುವ ಔಷಧಿ ಅಥವಾ ಲಸಿಕೆಯನ್ನು ಬುಡಮೇಲು ಮಾಡುವಂತಹವುಗಳಾಗಿಲ್ಲ. ಹಾಗೇನಾದರೂ ಆದಲ್ಲಿ ಲಸಿಕೆಯಲ್ಲಿ ತ್ವರಿತ ಬದಲಾವಣೆ ಸಾಧ್ಯ ಎಂದು ಎಂದು ತಜ್ಞರು ನಂಬುತ್ತಾರೆ.

‘ಕೋವಿಡ್ -19 ರ ವಿಷಯಕ್ಕೆ ಬರುವುದಾದರೆ ಅದರ ಹರಡುವಿಕೆಯು ವೇಗವಾಗಿರುವುದರಿಂದ, ಎಲ್ಲಾ ರೂಪಗಳನ್ನು ಗುರುತಿಸಲು ಇದು ನಮ್ಮ ವಿಜ್ಞಾನಿಗಳಿಗೆ ಸಾಕಷ್ಟು ಸಮಯವನ್ನು ನೀಡುತ್ತಿಲ್ಲ. ಹಾಗಾಗಿ, ಕೋವಿಡ್ ಸೋಂಕಿನ ನಡವಳಿಕೆಯ ಸೂಕ್ತವಾದ ಮಾಹಿತಿ ದೊರೆತರೆ ಮಾತ್ರ ಅದನ್ನು ನಿಯಂತ್ರಿಸುವುದು ಸಾಧ್ಯ’ ಎಂದು ಸಮುದಾಯ ಔಷಧ ತಜ್ಞ ಮತ್ತು ಜೋಧ್‌ಪುರದ ಎನ್‌ಐಆರ್‌ಎನ್‌ಸಿಡಿ (ಐಸಿಎಂಆರ್) ನಿರ್ದೇಶಕ ಡಾ.ಅರುಣ್ ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT