ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಯೋಗ ದಿನ: ಯೋಗ ನಮ್ಮ ಕಾಲದ ಬದುಕು

Last Updated 21 ಜೂನ್ 2021, 19:30 IST
ಅಕ್ಷರ ಗಾತ್ರ

ಇನ್ನೊಂದು ಸುತ್ತಿನ ಅಂತರರಾಷ್ಟ್ರಿಯ ಯೋಗದಿನ ಮುಗಿದಿದೆ. ಅಂತರರಾಷ್ಟ್ರಿಯ ಯೋಗದಿನದ ಆಚರಣೆಯು ಇತ್ತೀಚಿನ ಐದಾರು ವರ್ಷಗಳ ಬೆಳವಣಿಗೆಯಾದರೂ ಯೋಗ ಎಂಬುದು ಪ್ರಪ್ರಾಚೀನವಾದ ಮತ್ತು ಭಾರತದ ಮೂರ್ನಾಲ್ಕು ಸಹಸ್ರಮಾನದ ಬದುಕಿನಲ್ಲಿ ಬಹುಮುಖ್ಯವಾಗಿದ್ದ ಒಂದು ಸಂಗತಿ. ಬೇರೆ ಬೇರೆ ದರ್ಶನಗಳಲ್ಲಿ ಯೋಗಶಬ್ದಕ್ಕೆ ಬೇರೆ ಬೇರೆ ಅರ್ಥಗಳಿವೆ. ವ್ಯಾಸಭಾರತದ ಗೀತಾಚಾರ್ಯನಾದರೋ ಹಲವಾರು ಬಗೆಯ ಜೀವನದೃಷ್ಟಿಗಳನ್ನು ಪರಿಚಯಿಸುತ್ತ ಅವನ್ನೆಲ್ಲ ಯೋಗವೆಂದೇ ಗುರುತಿಸುತ್ತಾನೆ. ಅಷ್ಟಲ್ಲದೆ ಯೋಗ ಎನ್ನುವ ಪದಕ್ಕೆ ಸಾಕ್ಷಾತ್ತಾಗಿ ಎರಡು–ಮೂರು ವಿಧದ ನೇರ ವ್ಯಾಖ್ಯಾನವನ್ನೂ ಕೊಡುತ್ತಾನೆ. ಕರ್ಮದಲ್ಲಿ ಕೌಶಲವನ್ನು ಸಾಧಿಸುವುದೂ, ಸಮತೆಯನ್ನು ಕಾಪಾಡಿಕೊಳ್ಳುವುದೂ ಅವನ ಪ್ರಕಾರ ಯೋಗವೇ ಆಗಿದೆ. ಈ ಎಲ್ಲ ವ್ಯಾಖ್ಯಾನಗಳ ಹೊರತಾಗಿ ಯೋಗವೆಂಬುದು ತಾನೊಂದು ಸ್ವತಂತ್ರ ದರ್ಶನವಾಗಿ ಹೊಮ್ಮಿದ್ದೂ ನಮ್ಮ ನೆಲದಲ್ಲೇ. ಅಂತರರಾಷ್ಟ್ರಿಯ ಯೋಗದಿನದ ಹಿನ್ನೆಲೆಯಲ್ಲಿ ಮತ್ತು ನಮ್ಮ ಸುತ್ತಲೂ ಕವಿದಿರುವ ಜಗದ್ವ್ಯಾಪಿ ರೋಗದ, ಆ ರೋಗದ ಉಪದ್ರವಗಳ ಹಿನ್ನೆಲೆಯಲ್ಲಿ ಯೋಗದ ಪ್ರಸ್ತುತತೆಯನ್ನು ತಿಳಿಯುವ ಹೊತ್ತು ಇದು.

ನಾವಿವತ್ತು ಯೋಗವೆಂದು ಬಹುವಾಗಿ ಪರಿಗಣಿಸುತ್ತಿರುವ ಆಸನ, ಪ್ರಾಣಾಯಾಮ ಮತ್ತು ಧ್ಯಾನಗಳು ಯೋಗದ ಎಂಟು ಅಂಗಗಳ ಸಾಲಿನಲ್ಲಿ ಬರುವಂಥವು. ಎಂಟು ಅಂಗಗಳ ಪೈಕಿ ಈ ಮೂರಕ್ಕೆ ಅದೆಷ್ಟು ಪ್ರಚಾರ ದೊರೆತಿದೆಯೆಂದರೆ ಯೋಗದ ಇನ್ನುಳಿದ ಅಂಗಗಳ ಇರುವಿಕೆಯೇ ಮರೆತುಹೋಗುವಷ್ಟು! ಆದರೀಗ ಆಸನಪ್ರಾಣಾಯಾಮಧ್ಯಾನ ಮಾತ್ರವೇ ಯೋಗವೆಂದು ತಿಳಿಯುವ ಹಂತದಿಂದ ಮುಂದಕ್ಕೆ ಸಾಗಿ ಯೋಗದ ವಿಸ್ತಾರರೂಪವನ್ನು ಅರಿವಾಗಿಸಿಕೊಳ್ಳಬೇಕಾದ ಕಾಲದಲ್ಲಿದ್ದೇವೆ. ಯೋಗವೊಂದು ಆಜೀವನವ್ಯಾಪಿಯಾದ ಜಗದ್ದರ್ಶನ ಅಥವಾ ಬದುಕಿನ ಕಾಣ್ಕೆ. ಅದು ಕೇವಲ ಅಂಗಸಾಧನೆಯ ಹಾದಿಯಲ್ಲ, ಒತ್ತಡವನ್ನು ಕಳೆಯುವುದಕ್ಕಾಗಿ ಹಮ್ಮಿಕೊಳ್ಳುವ ಧ್ಯಾನವೂ ಅಲ್ಲ. ಅದು ವ್ಯಕ್ತಿಯನ್ನೂ ಸಮಾಜವನ್ನೂ ಧನಾತ್ಮಕವಾಗಿ ಸೋಕುವ, ಮಾನವ ಮಾತ್ರನಲ್ಲದೆ ಪೂರ್ಣ ಜೀವಲೋಕದ ಕಲ್ಯಾಣವನ್ನು ಪರಿಗಣಿಸುವ ಬದುಕಿನ ಹಾದಿ.

ಕಳೆದೊಂದೂವರೆ ವರ್ಷದಿಂದ ನಮ್ಮೆಲ್ಲರ ಬದುಕಿನ ವಿಧಾನವೇ ಮೊದಲಿಗಿಂತ ಬದಲಾಗಿದೆ. ಹೋಗಬೇಕೆಂದಲ್ಲಿ ಹೋಗಲಾಗದ, ಮಾಡಬೇಕೆನಿದ ಹಲವಾರು ಕಾರ್ಯಗಳನ್ನು ಮಾಡಲಾಗದ, ತಿನ್ನಬೇಕೆನಿಸಿದ್ದನ್ನು ತಿನ್ನಲಾಗದ – ಒಟ್ಟಿನಲ್ಲಿ ಇರಬೇಕೆಂದೆನಿಸಿದಂತೆಲ್ಲ ಇರಲಾಗದ ಸ್ಥಿತಿಗೆ ನೂಕಲ್ಪಟ್ಟಿದ್ದೇವೆ. ಈ ದುರಿತಕಾಲವನ್ನೂ ಸಹ್ಯವಾಗಿಸಿಕೊಳ್ಳುವ ನಿಟ್ಟಿನಲ್ಲಿ ಯೋಗವೊಂದು ದಾರಿಯಾಗಬಲ್ಲದು. ಯೋಗದ ಮೊದಲಿನವೆರಡು ಅಂಗಗಳು ಯಮ ಮತ್ತು ನಿಯಮ. ಸ್ಥೂಲವಾಗಿ ಹೇಳಬೇಕೆಂದರೆ ಇವೆರಡು ನಮ್ಮ ದೈನಂದಿನ ಬದುಕು, ವ್ಯವಹಾರ ಮತ್ತು ಆಚಾರವನ್ನು ನೇರ್ಪುಗೊಳಿಸುವ ಸಂಗತಿಗಳು. ಉದಾಹರಣೆಗೆ ಶೌಚ (ಶುಚಿತ್ವ) ಎನ್ನುವುದು ಒಂದು ಯೌಗಿಕ ನಿಯಮ. ಇದ್ದಕ್ಕಿದ್ದಂತೆ ಇತ್ತೀಚೆಗೆ ಇದೊಂದು ಮೌಲ್ಯವು ಜಗತ್ತಿನಾದ್ಯಂತ ಪಡೆದುಕೊಂಡ ಮಹತ್ವವನ್ನಿಲ್ಲಿ ನೆನೆಯಬಹುದು.

ಜಗತ್ತಿನಲ್ಲಿ ಕೋವಿಡ್ ಕಾರಣದಿಂದ ನೇರವಾಗಿ ಬಾಧೆಗೊಳಗಾದವರಿಗಿಂತ ಹೆಚ್ಚಾಗಿ ಅದರ ಉಪಪರಿಣಾಮಗಳಿಂದ ಮಾನಸಿಕ ಖಿನ್ನತೆ, ಹತಾಶೆ ಮತ್ತಿತರ ಸಂಕಷ್ಟಗಳಿಗೆ ಸಿಲುಕಿದವರ ಸಂಖ್ಯೆ ದೊಡ್ಡದಿದೆ. ಇದು ಔಷಧಿಗಳಿಗೆ ನಿಲುಕುವ ಸಮಸ್ಯೆಯಲ್ಲ; ಬದಲಾಗಿ ಜೀವನಪದ್ಧತಿಯಲ್ಲಿ ಸುಧಾರಣೆ ತಂದುಕೊಳ್ಳುವ ಮೂಲಕ ಸರಿಪಡಿಸಬೇಕಾದ್ದು. ಆಸನ ಪ್ರಾಣಾಯಾಮದ ಮೂಲಕವಷ್ಟೇ ಯೋಗವನ್ನು ಅಳವಡಿಸಿಕೊಂಡರೂ ಸಾಕು, ಈ ರೀತಿಯ ಮನೋದೈಹಿಕ ಸಮಸ್ಯೆಗಳನ್ನು ಮೀರಬಹುದು. ನಿತ್ಯವೂ ತಪ್ಪದೆ ಅರ್ಧ ಗಂಟೆ ಆಚರಿಸುವ ಯೋಗಾಸನ ಪ್ರಾಣಾಯಾಮ ಅಭ್ಯಾಸವು ಬದುಕಿಗೊಂದು ನಿಯಮಿತತೆಯನ್ನು ತಂದುಕೊಡುತ್ತದೆ. ನಿಯಮಿತವಾಗಿ ಆಚರಿಸುವ ಯಾವುದೇ ಧನಾತ್ಮಕ ಸಂಗತಿಯೂ ತಂದುಕೊಡುವ ಮನೋಬಲ ಮತ್ತು ಜೀವಶಕ್ತಿಯು ಅಪಾರವಾದ್ದು. ಯೋಗವು ಹಾಗೊಂದು ಧನಾತ್ಮಕ ಆಚರಣೆ; ಮತ್ತದು ಕೊರೊನಾದಂಥ ವಿಷಮ ಸಂದರ್ಭವನ್ನೂ ಹೆಚ್ಚಿಗೆ ಒತ್ತಡವಿಲ್ಲದೆ ದಾಟಿಬಿಡುವ ಮನೋದೈಹಿಕ ಬಲವನ್ನು ತುಂಬಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT