ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೂಪಸ್‌: ಅರಿವೇ ಮದ್ದು

Last Updated 10 ಮೇ 2019, 19:30 IST
ಅಕ್ಷರ ಗಾತ್ರ

ಲೂಪಸ್. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನೇ ಹದಗೆಡಿಸುವ ದೀರ್ಘಕಾಲೀನ ಅಟೋಇಮ್ಯುನ್ (ಸ್ವರಕ್ಷಿತ) ಕಾಯಿಲೆ. ಸಾಮಾನ್ಯವಾದ, ಆರೋಗ್ಯಕರ ಅಂಗಾಂಶಗಳನ್ನು ಆಕ್ರಮಿಸಿ, ದೇಹದ ಯಾವುದೇ ಭಾಗದ ಮೇಲೆ ಆಕ್ರಮಣ ಮಾಡಬಹುದು. ರೋಗ ನಿರೋಧಕ ಶಕ್ತಿಯನ್ನು ಕ್ಷೀಣಿಸುವ, ಆ ಮೂಲಕ ಚರ್ಮ, ಸಂಧಿಗಳು, ರಕ್ತ, ಮೂತ್ರಪಿಂಡ, ಹೃದಯ, ಶ್ವಾಸಕೋಶಗಳಿಗೆ ಹಾನಿಯನ್ನುಂಟು ಮಾಡುವ ಈ ಕಾಯಿಲೆ ಹೆಣ್ಣುಮಕ್ಕಳಿಗೇ ಹೆಚ್ಚು.

ಭಾರತದಲ್ಲಿ ಪ್ರತಿ 1000 ಜನರಲ್ಲಿ ಒಬ್ಬರು ಲೂಪಸ್‌ನಿಂದ ಬಳಲುತ್ತಾರೆ ಎನ್ನುತ್ತದೆ ಲೂಪಸ್‌ ಟ್ರಸ್ಟ್‌ ಇಂಡಿಯಾ. ಲೂಪಸ್‌ಗೆ ಈಡಾದ 10 ಮಂದಿಯಲ್ಲಿ 9 ಜನ ಮಹಿಳೆಯರೇ ಆಗಿರುತ್ತಾರೆ! 14 ರಿಂದ 40ರ ನಡುವಿನ ವಯೋಮಾನದವರನ್ನೇ ಇದು ಆರಿಸಿಕೊಳ್ಳುವುದು. ಲೂಪಸ್‌ ಹೆಣ್ಣುಮಕ್ಕಳಲ್ಲಿ ತಾಯ್ತನದ ಕಸುವನ್ನೂ ಕಿತ್ತುಕೊಳ್ಳುತ್ತದೆ. ಗರ್ಭಪಾತ ಸಾಧ್ಯತೆ ಹೆಚ್ಚುತ್ತದೆ, ಭ್ರೂಣದ ಆರೋಗ್ಯದ ಮೇಲೆಯೂ ಪ್ರಭಾವ ಬೀರಬಹುದು. ಈ ರೋಗದ ಬಗ್ಗೆ ಸಾಕಷ್ಟು ಅರಿವಿಲ್ಲದಿರುವುದರಿಂದ ಹಾಗೂ ಜನರಲ್ಲಿ ದ್ವಂದ್ವ–ಮೂಢನಂಬಿಕೆಗಳು ಮನೆಮಾಡಿರುವುದರಿಂದ ರೋಗನಿರ್ಣಯ ತಡವಾಗುತ್ತದೆ. ಸೂಕ್ತ ಚಿಕಿತ್ಸೆ ಲಭಿಸದೇ ಸಮಸ್ಯೆ ಉಲ್ಬಣಿಸುವುದೇ ಹೆಚ್ಚು.

ಇದರಲ್ಲಿ ಹಲವಾರು ವಿಧಗಳಿವೆ.ಸಿಸ್ಟಮೆಕ್ ಎರಿತೆಮೆಟೋಸಸ್ ಲೂಪಸ್ ಎನ್ನುವುದು ಗಂಭೀರ ಸ್ವರೂಪದ ಪ್ರಕಾರ. ಇಡೀ ದೇಹವನ್ನು ಆವರಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಬಲಹೀನಗೊಳಿಸುತ್ತದೆ.ಮನುಷ್ಯನ ಆರೋಗ್ಯ ಅಡಗಿರುವುದೇರೋಗನಿರೋಧಕ ಶಕ್ತಿಯಲ್ಲಿ. ಈ ಶಕ್ತಿ ದುರ್ಬಲವಾದಾಗ, ಸಣ್ಣಪುಟ್ಟ ಸಮಸ್ಯೆಗಳಿಗೂ ವ್ಯಕ್ತಿ ನಿಶ್ಯಕ್ತಿಗೊಳ್ಳುತ್ತಾನೆ. ಆರಂಭಿಕ ಹಂತದಲ್ಲಿಯೇ ಇದನ್ನು ಗುರುತಿಸಿದರೆ ಗುಣವಾಗುವ ಸಾಧ್ಯತೆ ಹೆಚ್ಚು. ಸರಿಯಾದ ಚಿಕಿತ್ಸೆ, ಆರೋಗ್ಯಕರ ತೂಕ, ಲಘು ವ್ಯಾಯಾಮಗಳು, ಉತ್ತಮ ಆಹಾರಾಭ್ಯಾಸಗಳಿಂದ ಇದನ್ನು ನಿಯಂತ್ರಿಸಬಹುದು.

ಗುರುತಿಸುವುದು ಹೇಗೆ?

ಲೂಪಸ್‌ ಕಂಡುಹಿಡಿಯುವುದು ಕಷ್ಟ.ಇಲ್ಲಿ ನೀಡಲಾಗಿರುವ ರೋಗಲಕ್ಷಣಗಳಲ್ಲಿ ಕನಿಷ್ಠ 4 ಲಕ್ಷಣಗಳು ಕಂಡುಬಂದರೆ ಲೂಪಸ್‌ ಪರೀಕ್ಷೆಗೆ ಒಳಗಾಗಬೇಕು.

ಸೆರೊಸಿಟಿಸ್: ಶ್ವಾಸಕೋಶ, ಹೃದಯ ಮತ್ತು ಉದರದ ಸುತ್ತ ಉರಿಯೂತ, ತೀವ್ರವಾದ ನೋವು.

ಬಾಯಿಯ ಹುಣ್ಣುಗಳು: ಬಾಯಿ, ಮೂಗಿನ ಒಳಗೆ ಹುಣ್ಣುಗಳು.

ಸಂಧಿವಾತ: ಕೀಲುಗಳಲ್ಲಿ ತೀವ್ರವಾದ ನೋವು, ಬಿಗಿತ, ಊತ ಮತ್ತು ಕೆಂಪಾಗುವುದು (ಭುಜಗಳು, ಮೊಣಕಾಲುಗಳು, ಕಣಕಾಲುಗಳು).

ಬೆಳಕಿನ ಸಂವೇದನೆ: ಸೂರ್ಯನ ಬೆಳಕು ಅಥವಾ ಕೃತಕ ಬೆಳಕಿಗೆ ಅಸಹನೆ, ಆಯಾಸ.

ಚರ್ಮದ ಮೇಲೆ ದದ್ದುಗಳು.

ರಕ್ತ ಅಸ್ವಸ್ಥತೆ: ರಕ್ತಹೀನತೆ (ಕಡಿಮೆ ಹಿಮೋಗ್ಲೋಬಿನ್ ಮಟ್ಟ), ಥ್ರಂಬೋಸಿಸ್ (ವಿಪರೀತ ರಕ್ತ ಹೆಪ್ಪುಗಟ್ಟುವಿಕೆ), ವಾಸ್ಕ್ಯುಲಿಟಿಸ್ (ರಕ್ತನಾಳದ ಗೋಡೆಗಳಿಗೆ ಹಾನಿ).

ಮೂತ್ರಪಿಂಡ ಅಸ್ವಸ್ಥತೆ: ಮೂತ್ರಪಿಂಡಗಳು ಹಾನಿಗೊಳಗಾಗುತ್ತವೆ, ರಕ್ತವನ್ನು ಶೋಧಿಸಲು ಸಾಧ್ಯವಾಗುವುದಿಲ್ಲ, ಮುಖ ಮತ್ತು ಕಾಲುಗಳಲ್ಲಿ ಊತ ಕಾಣಿಸಿಕೊಳ್ಳಬಹುದು.

ನರಕ್ಕೆ ಸಂಬಂಧಿಸಿದ ಅಸ್ವಸ್ಥತೆ: ಮೆದುಳಿನ ನಷ್ಟ, ಗೊಂದಲ. ಮಾನಸಿಕ ಸಮಸ್ಯೆಗಳು (ಖಿನ್ನತೆ, ಆತಂಕ), ಕೆಂಪು ಅಥವಾ ಕೆನ್ನೀಲಿ ದದ್ದುಗಳು.

ಇತರ ರೋಗಲಕ್ಷಣಗಳು: ತೀವ್ರ ಆಯಾಸ / ದಣಿವು, ಉಸಿರಾಟ ತೊಂದರೆ, ಜಠರ, ಕರುಳಿನ ಸಮಸ್ಯೆಗಳು, ವಾಕರಿಕೆ ಮತ್ತು ತಲೆನೋವು, ನಡುಕ, ತೀವ್ರ ಸ್ನಾಯು ಸೆಳೆತ ಮತ್ತು ನೋವು, ಕೂದಲು ಉದುರುವುದು.

ಕಾರಣಗಳು

ನಿಖರವಾದ ಕಾರಣಗಳಿಂದ ಬರುವ, ನಿರ್ದಿಷ್ಟ ಲಕ್ಷಣಗಳಿರುವ ಸ್ಪಷ್ಟವಾದ ಕಾಯಿಲೆ ಇದಲ್ಲ.ಅದಾಗ್ಯೂ ಆನುವಂಶಿಕ ಮತ್ತು ಪರಿಸರ ಅಂಶಗಳು ಇದರ ಅಪಾಯವನ್ನು ಹೆಚ್ಚಿಸುತ್ತವೆ ಎನ್ನುತ್ತದೆ ವೈದ್ಯಕೀಯ ವಲಯ. ಈಸ್ಟ್ರೊಜೆನ್ ಹೊಂದಿರುವ ಗರ್ಭನಿರೋಧಕಗಳ ಬಳಕೆ,ಧೂಮಪಾನ ಈ ಸಮಸ್ಯೆಯ ತೀವ್ರತೆಗೆ ಕಾರಣವಾಗುತ್ತದೆ.

ಪರಿಹಾರ–ಚಿಕಿತ್ಸೆ

ನಿರ್ದಿಷ್ಟವಾದ ಚಿಕಿತ್ಸೆ ಎನ್ನುವುದಿಲ್ಲ. ಇದರ ಲಕ್ಷಣಗಳನ್ನು ಉಪಶಮನ ಮಾಡುವುದು, ಹಾನಿಗೊಳಗಾದಅಂಗಗಳನ್ನು ರಕ್ಷಿಸುವುದುಚಿಕಿತ್ಸೆಯ ಗುರಿ. ಯಾವ ಪ್ರಕಾರದ ಲೂಪಸ್‌, ಅದರ ತೀವ್ರತೆ ಎಷ್ಟಿದೆ, ರೋಗಿಯ ವಯೋಮಾನ ಎಷ್ಟು, ಚಿಕಿತ್ಸೆಗೆ ಸ್ಪಂದಿಸುವ ಅವರ ಕ್ಷಮತೆ ಎಷ್ಟಿದೆ ಎನ್ನುವುದರ ಮೇಲೆನಿಖರವಾದ ಚಿಕಿತ್ಸೆನಿರ್ಧಾರವಾಗುತ್ತದೆ.ರೋಗಿಗಳಿಗೆ ಸ್ಟೆರಾಯ್ಡ್‌ಗಳನ್ನು ನೀಡಲಾಗುತ್ತದೆ. ತೀವ್ರತರವಾದ ಅಂಗಾಂಗ ಹಾನಿಯುಂಟಾದಲ್ಲಿ,ಕೀಮೊತೆರಪಿ ಚಿಕಿತ್ಸೆ ನೀಡಲಾಗುತ್ತದೆ.

***

ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಲೂಪಸ್‌ ಟ್ರಸ್ಟ್‌ ಇಂಡಿಯಾ ಸಂಸ್ಥೆಯಿಂದ ಲೂಪಸ್‌ ವಾಕ್‌ ಆಯೋಜಿಸಲಾಗಿದೆ. ಇದೇ ಭಾನುವಾರ (ಮೇ 12) ಬೆಳಿಗ್ಗೆ 9.30ಕ್ಕೆ ಬೆಂಗಳೂರಿನ ಕ್ವೀನ್ಸ್‌ ರಸ್ತೆಯಿಂದ ಆರಂಭವಾಗುವ ಲೂಪಸ್‌ ವಾಕ್‌ನಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಲೂಪಸ್‌ ಕಾಯಿಲೆಗೆ ಒಳಗಾದವರು, ವೈದ್ಯರು, ವೈದ್ಯಕೀಯ ಕ್ಷೇತ್ರದ ಇತರ ವೃತ್ತಿಪರರು ಭಾಗವಹಿಸಲಿದ್ದಾರೆ.

ಕಡೆಗಣಿಸಿದಲ್ಲಿ ಅದೊಂದು ಗಂಭೀರ ಸಮಸ್ಯೆಯಾಗಿ ಬೆಳೆಯುತ್ತದೆ. ನಿರಂತರ ತಪಾಸಣೆ, ಚಿಕಿತ್ಸೆಯ ಅಗತ್ಯ ಬೀಳುತ್ತದೆ. ಇದರಿಂದ ರೋಗಿಯ ಮೇಲೆ ಆರ್ಥಿಕ ಹೊರೆ ಬೀಳುವ ಜೊತೆ ಆತನನ್ನು ಮಾನಸಿಕವಾಗಿಯೂ ಕುಗ್ಗುವಂತೆ ಮಾಡುತ್ತದೆ. ದೈಹಿಕ ನೋವು, ಅಸಹನೆ, ಆತಂಕವೂ ಕಾಡುತ್ತದೆ. ಇವರಿಗೆ ಕೌಟುಂಬಿಕ, ಸಾಮಾಜಿಕ ಬೆಂಬಲದ ಅಗತ್ಯ ಹೆಚ್ಚು. ಈ ಸ್ಥಿತಿಯಲ್ಲಿರುವವರು ಏಕಾಂಗಿಯಲ್ಲ. ಅಂಥವರು ಸಾಕಷ್ಟು ಜನರಿದ್ದಾರೆ ಎನ್ನುವ ನೈತಿಕ ಬೆಂಬಲವನ್ನು ಸೂಚಿಸುವುದಕ್ಕಾಗಿ ಲೂಪಸ್‌ ವಾಕ್‌ ಆಯೋಜಿಸಲಾಗಿದೆ ಎನ್ನುತ್ತಾರೆ ಟ್ರಸ್ಟ್‌ನಡೆಪ್ಯುಟಿ ಮ್ಯಾನೇಜರ್ ಟ್ರಸ್ಟೀವಾಚಸಮೃತ ಸೈಜು.

ಮಾಹಿತಿಗೆ:lupustrustindia.org/lupustrustindia@gmail.com/+91 8111849888

***

ಲೂಪಸ್‌ ರೋಗಿಗಳಿಂದಲೇ ಸ್ಥಾಪಿಸಲಾಗಿರುವ ಲೂಪಸ್‌ ಟ್ರಸ್ಟ್‌ ಇಂಡಿಯಾ, ಇದನ್ನು ವಿಮೆಯ ವ್ಯಾಪ್ತಿಗೆ ತರಲು, ಸರ್ಕಾರದ ವೈದ್ಯಕೀಯ ಸವಲತ್ತುಗಳನ್ನು ಪಡೆಯಲು ಶ್ರಮಿಸುತ್ತಿದೆ. ಉತ್ತಮ ಆರೋಗ್ಯಕ್ಕಾಗಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ.ಲೂಪಸ್ ಜೊತೆಗೆ ಬದುಕುವವರನ್ನು ಒಂದೇ ವೇದಿಕೆಯಡಿ ತರುವುದು, ಜಾಗೃತಿ ಮೂಡಿಸುವುದು, ಪುನರ್ವಸತಿ ಕಲ್ಪಿಸುವುದು, ನೆಟ್ವರ್ಕಿಂಗ್ ಮತ್ತು ಹಣಕಾಸಿನ ನೆರವು ನೀಡುವುದು ಲೂಪಸ್‌ ಟ್ರಸ್ಟ್‌ನ ಉದ್ದೇಶ.

ಸುಜಾನ್ನೆ ಸಾಂಗಿ, ಲೂಪಸ್‌ ಜೊತೆಗೆ ಬದುಕುತ್ತಿರುವವರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT