ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು: ಪೋಷಕರಿಲ್ಲದ ನೋವು ಮರೆಯುವುದು ಹೇಗೆ?

Last Updated 1 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ನನ್ನ ತಂದೆ ತೀರಿ ಹೋಗಿ 7 ವರ್ಷವಾಯಿತು. ಈಗ ತಾಯಿ ಕೂಡ ತೀರಿ ಹೊಗಿದ್ದಾರೆ. ನನಗೆ ಉತ್ತಮ ಸ್ನೇಹಿತರೂ ಇಲ್ಲ. ಅಮ್ಮನೇ ಉತ್ತಮ ಸ್ನೇಹಿತೆಯಾಗಿದ್ದಳು. ಸಂಬಂಧಿಕರು ಇದ್ದೂ ಇಲ್ಲದಂತಿದ್ದಾರೆ. ನನಗೆ ತುಂಬಾ ಬೇಸರವಾಗಿ ಜೀವನ ಸಾಕು ಅನ್ನಿಸುತ್ತಿದೆ. ಪರಿಹಾರ ಸೂಚಿಸಿ.

ಹೆಸರು ಊರು ತಿಳಿಸಿಲ್ಲ.

ನೀವು ಬಹಳ ಬೇಸರದಲ್ಲಿದ್ದೀರೆಂದು ನಿಮ್ಮ ಪತ್ರದ ಧಾಟಿಯಿಂದಲೇ ತಿಳಿಯುತ್ತದೆ. ನಿಮ್ಮ ಲಿಂಗ, ವಯಸ್ಸು, ವಿದ್ಯಾರ್ಹತೆ, ಉದ್ಯೋಗ ಮುಂತಾದ ಯಾವ ವಿವರಗಳನ್ನೂ ನೀಡಿಲ್ಲ. ಪೋಷಕರನ್ನು ಸಣ್ಣವಯಸ್ಸಿನಲ್ಲಿಯೇ ಕಳೆದುಕೊಂಡಾಗ ಆಗುವ ದುಃಖ ಮತ್ತು ಕಾಡುವ ಅಸಹಾಯಕತೆಗಳು ತುಂಬಾ ಆಳವಾಗಿರುತ್ತವೆ. ಈ ನೋವು ಮರೆಯಲು ಬಹಳಷ್ಟು ಸಮಯಬೇಕು. ಪೋಷಕರು ಬದುಕಿದ್ದಾಗಲೂ ನಿಮ್ಮ ಕ್ಷಮತೆ ಆಸಕ್ತಿ ಮುಂತಾದವುಗಳ ಮೂಲಕ ಸ್ವಂತಿಕೆಯನ್ನು ಗುರುತಿಸಿಕೊಂಡು ಬೇರೆಯ ಸ್ನೇಹ–ಸಂಬಂಧಗಳನ್ನು ನೀವು ಹುಡುಕಿಕೊಂಡಂತಿಲ್ಲ. ಹಾಗಾಗಿ ಈಗ ಏಕಾಂಗಿತನ ಹೆಚ್ಚಾಗಿ ಕಾಡುತ್ತದೆ. ಈಗಲೂ ಸಮಯ ಮಿಂಚಿಲ್ಲ. ಸ್ವತಂತ್ರವಾಗಿ ಬದುಕಬಲ್ಲ ಪ್ರಕೃತಿದತ್ತ ಮಾನಸಿಕ ಸಾಮರ್ಥ್ಯ ನಿಮ್ಮೊಳಗಿದೆ. ಅದನ್ನು ಗುರುತಿಸಿ ಉತ್ತೇಜಿಸಬೇಕು. ನಿಮ್ಮ ಜೀವನದ ಆಯ್ಕೆ, ಆಸಕ್ತಿ, ಸಾಧ್ಯತೆಗಳನ್ನು ಗುರುತಿಸಿ ಹೊಸ ಹೊಸ ಅವಕಾಶಗಳಿಗೆ ತೆರೆದುಕೊಳ್ಳಿ. ನಿಧಾನವಾಗಿ ಹೊಸ ಸ್ನೇಹ ಸಾಧ್ಯತೆಗಳು ಕಾಣುತ್ತವೆ. ನಿಮ್ಮ ಸ್ನೇಹಕ್ಕೆ ಕೈಚಾಚುವವರು ಸುತ್ತಲೂ ಸಾಕಷ್ಟು ಜನರಿದ್ದಾರೆ.

ಪುರುಷ, 33 ವರ್ಷ. ಮದುವೆಯಾಗಿ 2 ವರ್ಷಗಳಾಗಿವೆ. ಮಕ್ಕಳಾಗಿಲ್ಲ. ಪಿತ್ತಕೋಶದ ಕಾಯಿಲೆಯಿದೆ. ಅನಾರೋಗ್ಯದಿಂದ ನಿಮಿರುವಿಕೆ ಆಗುತ್ತಿಲ್ಲ. ಪರಿಹಾರವೇನು?

ಹೆಸರು ಊರು ತಿಳಿಸಿಲ್ಲ.

ದೈಹಿಕ ಕಾಯಿಲೆಗಳು ಮತ್ತು ಅದರಿಂದ ಮೂಡಿರುವ ಆತಂಕಗಳಿರುವಾಗ ಉದ್ರೇಕವಾಗದೆ ಇರುವುದು ಸಹಜ. ನೀವು ತೆಗೆದುಕೊಳ್ಳುತ್ತಿರುವ ಮಾತ್ರೆಗಳ ಅಡ್ಡಪರಿಣಾಮಗಳ ಕುರಿತು ವೈದ್ಯರಲ್ಲಿ ಚರ್ಚಿಸಿ. ಅವು ಸುರಕ್ಷಿತವೆಂದಾದರೆ ನಿಮ್ಮ ಆತಂಕ ಮಾತ್ರ ನಿಮಿರುವಿಕೆಯ ಸಮಸ್ಯೆಗೆ ಕಾರಣವಾಗುತ್ತದೆ. ತಾತ್ಕಾಲಿಕವಾಗಿ ಮುಂದಿನ 2 ರಿಂದ 3 ತಿಂಗಳು ಸಂಭೋಗ ಮಾಡುವ ಗುರಿಯನ್ನೇ ಇಟ್ಟುಕೊಳ್ಳದೆ ದೇಹವನ್ನು ಸಡಿಲಬಿಟ್ಟು ಪತ್ನಿಯೊಡನೆ ಸ್ಪರ್ಷ ಅಪ್ಪುಗೆ ಚುಂಬನಗಳಲ್ಲಿ ಆನಂದಿಸಿ. ನಿಧಾನವಾಗಿ ದೇಹ ಮನಸ್ಸುಗಳು ಹೊಸ ಅನುಭವಕ್ಕೆ ತೆರೆದುಕೊಂಡಂತೆ ಆತಂಕ ಕಡಿಮೆಯಾಗುತ್ತದೆ. ಆತುರಪಟ್ಟು ಅನಗತ್ಯ ಔಷಧಿಗಳ ಮೊರೆಹೋಗಬೇಡಿ. ಅಗತ್ಯವಿದ್ದರೆ ಲೈಂಗಿಕ ಮನೋಚಿಕಿತ್ಸಕರನ್ನು ಭೇಟಿಯಾಗಿ.

ಯುವಕ, 24 ವರ್ಷ. 3 ವರ್ಷಗಳಿಂದ ಹಸ್ತಮೈಥುನ ಮಾಡುತ್ತಿದ್ದೇನೆ. ನನಗೆ 30 ಸೆಕೆಂಡ್‌ಗಳಲ್ಲಿ ಸ್ಖಲನವಾಗುತ್ತದೆ. ನಾನು ಡೆಪಾಕ್ಸಟೈನ್‌ 30 ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಇದರಿಂದ ಅಡ್ಡಪರಿಣಾಮಗಳಿವೆಯೇ? ಬದಲಿ ಉಪಾಯಗಳಿವೆಯೇ?

ಹೆಸರು ಊರು ತಿಳಿಸಿಲ್ಲ.

ನಿಮಗೆ ವಿವಾಹವಾಗಿದೆಯೇ? ಲೈಂಗಿಕ ಸಂಗಾತಿ ಇದ್ದಾರೆಯೇ? ಮಾತ್ರೆಗಳನ್ನು ವೈದ್ಯರು ಬರೆದುಕೊಟ್ಟಿದ್ದಾ ರೆಯೇ? ಮುಂತಾದ ವಿವರಗಳನ್ನು ನೀಡಿಲ್ಲ. ಎಲ್ಲಾ ಮಾತ್ರೆಗಳಲ್ಲೂ ಸ್ವಲ್ಪವಾದರೂ ಅಡ್ಡಪರಿಣಾಮಗಳಿದ್ದೇ ಇರುತ್ತವೆ. ಶೀಘ್ರಸ್ಖಲನಕ್ಕೆ ಪ್ರಮುಖ ಕಾರಣ ಮಾನಸಿಕ ಆತಂಕ ಮತ್ತು ಲೈಂಗಿಕತೆಯ ಅಜ್ಞಾನ. ನಿಮ್ಮ ಲೈಂಗಿಕ ಜೀವನ ಇನ್ನು 40 ವರ್ಷಗಳಾದರೂ ಇದೆ ಎಂದುಕೊಂಡರೆ ಅಷ್ಟು ದೀರ್ಘಕಾಲ ಮಾತ್ರೆಗಳನ್ನು ತೆಗೆದುಕೊಳ್ಳು ತ್ತೀರಾ? ತಜ್ಞ ಲೈಂಗಿಕ ಮನೋಚಿಕಿತ್ಸಕರನ್ನು ಭೇಟಿಯಾಗಿ ಔಷಧಿರಹಿತ ಪರಿಹಾರಗಳನ್ನು ಪಡೆದುಕೊಳ್ಳಿ. ವೈದ್ಯರ ಮೇಲ್ವಿಚಾರಣೆಯಿಲ್ಲದೆ ಔಷಧ ಬಳಸುವುದು ಅಪಾಯಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT