ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Monkeypox: ಏನಿದು ಮಂಕಿಪಾಕ್ಸ್? ಮಂಗನಿಂದ ಹರಡಿದ ವೈರಸ್ ಬಗ್ಗೆ ಇಲ್ಲಿದೆ ವಿವರ

Last Updated 19 ಜುಲೈ 2022, 2:52 IST
ಅಕ್ಷರ ಗಾತ್ರ

ಕೋವಿಡ್-19ರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವಷ್ಟರಲ್ಲಿ ಮಂಕಿಪಾಕ್ಸ್ ಆತಂಕ ಎದುರಾಗಿದೆ. ಮೂಲತಃ ಆಫ್ರಿಕಾಖಂಡದ ಮಳೆಗಾಡುಗಳ ದೇಶಗಳಿಗೆ ಸೀಮಿತವಾಗಿದ್ದ ಮಂಕಿಪಾಕ್ಸ್ ಈಗ ಜಾಗತಿಕವಾಗಿ ಹಬ್ಬುತ್ತಿದೆ. ಈ ಕಾಯಿಲೆಗೆ ಕಾರಣ ಮಂಕಿಪಾಕ್ಸ್ ಎನ್ನುವ ವೈರಸ್. 1958ರಲ್ಲಿ ಪ್ರಯೋಗಾಲದಲ್ಲಿ ಸಂಶೋಧನೆಗೆಂದು ಇಟ್ಟುಕೊಂಡಿದ್ದ ಕೆಲವು ಮಂಗಗಳಲ್ಲಿ ಇದು ಮೊದಲ ಬಾರಿಗೆ ಕಂಡಿದ್ದರಿಂದ ಇದನ್ನು ‘ಮಂಗನ ಸಿಡುಬು’ ಅಥವಾ ‘ಮಂಕಿಪಾಕ್ಸ್’ ಎಂದು ಕರೆಯಲಾಗಿತ್ತು. ಇದು ಮನುಷ್ಯರಲ್ಲೂ ಕಾಣುತ್ತದೆ ಎಂದು 1970ರಲ್ಲಿ ತಿಳಿದುಬಂದಿತು. ಪ್ರಾಣಿಗಳಿಂದ ಮನುಷ್ಯರಿಗೆ ಹಬ್ಬುವ ಈ ವೈರಸ್, ಓರ್ವ ಕಾಯಿಲೆಪೀಡಿತನಿಂದ ಮತ್ತೊಬ್ಬನಿಗೆ ಹರಡಬಹುದು.

ಮಂಕಿಪಾಕ್ಸ್ ಕೂಡ ಸಿಡುಬಿನ ಒಂದು ಪ್ರಭೇದ. ಇತರ ಸಿಡುಬುಗಳಲ್ಲಿ ಬರುವಂತೆ ಇದರಲ್ಲೂ ಜ್ವರ, ತಲೆನೋವು, ಬೆನ್ನುನೋವು, ಮೈ-ಕೈ ನೋವು, ಸುಸ್ತು ಕಾಡುತ್ತವೆ. ಗದ್ದದ ಬಳಿ, ಕಂಕುಳಿನಲ್ಲಿ ಸಣ್ಣ ಉಂಡೆಗಳಂತಹ ದುಗ್ಧಗ್ರಂಥಿಗಳು ಕಾಣುತ್ತವೆ. ದುಗ್ಧಗ್ರಂಥಿಗಳು ನಮ್ಮ ಶರೀರದ ರಕ್ಷಕ ವ್ಯವಸ್ಥೆಯ ಭಾಗಗಳು. ಸಾಮಾನ್ಯವಾಗಿ ಸಣ್ಣ ಗಾತ್ರದಲ್ಲಿ ಇರುವ ಇವು, ಶರೀರಕ್ಕೆ ರೋಗ ಬಂದಾಗ ಹಿರಿದಾಗುತ್ತವೆ. ಜ್ವರ ಆರಂಭವಾದ ಮೂರು ದಿನಗಳ ಒಳಗೆ ಚರ್ಮ ಕೆಂಪಾಗಿ, ಸಬ್ಬಕ್ಕಿ ಕಾಳಿನ ಗಾತ್ರದ ಬೊಕ್ಕೆಗಳು ಏಳುತ್ತವೆ. ಈ ಬೊಕ್ಕೆಗಳ ಒಳಗೆ ನೀರಿನಂತಹ ದ್ರಾವಣ ಇರುತ್ತದೆ. ಕೆಲವೊಮ್ಮೆ ಈ ದ್ರಾವಣದ ಬಣ್ಣ ತುಸು ಹಳದಿ ಇರಬಹುದು. ಒಬ್ಬ ವ್ಯಕ್ತಿಯ ಮೈ ಮೇಲೆ ಬೆರಳೆಣಿಕೆಯಷ್ಟು ಸಂಖ್ಯೆಯಿಂದ ಹಿಡಿದು ಸಾವಿರಾರು ಬೊಕ್ಕೆಗಳು ಕಾಣಬಹುದು. ಇವು ಮುಖ್ಯವಾಗಿ ಮುಖ, ಅಂಗೈ ಮತ್ತು ಅಂಗಾಲುಗಳ ಮೇಲೆ ಇರುತ್ತದಾದರೂ, ತೀವ್ರವಾದ ಸೋಂಕಿನಲ್ಲಿ ಬಾಯಿ, ಕಣ್ಣು ಸೇರಿ ಶರೀರದ ಎಲ್ಲೆಡೆ ಬರಬಹುದು.

ಈ ಲಕ್ಷಣಗಳು ಸುಮಾರು 2ರಿಂದ 4 ವಾರಗಳ ಕಾಲ ಇರುತ್ತವೆ. ಆನಂತರ ಯಾವುದೇ ಚಿಕಿತ್ಸೆ ಇಲ್ಲದೆಯೂ ತಂತಾನೇ ಸರಿಹೋಗುತ್ತವೆ. ಆದರೆ, ನವಜಾತ ಶಿಶುಗಳಲ್ಲಿ, ಕ್ಯಾನ್ಸರ್ ರೋಗಿಗಳಲ್ಲಿ, ಸ್ಟೀರಾಯ್ಡ್ ಔಷಧದ ಚಿಕಿತ್ಸೆ ಪಡೆಯುವವರಲ್ಲಿ, ಅನಿಯಂತ್ರಿತ ಮಧುಮೇಹಿಗಳಲ್ಲಿ, ಶರೀರದ ರಕ್ಷಕ ವ್ಯವಸ್ಥೆ ದುರ್ಬಲವಾಗಿರುವವರಲ್ಲಿ ಮಂಕಿಪಾಕ್ಸ್ ಪ್ರಾಣಾಂತಕವಾಗಬಹುದು. ಇಂತಹವರಲ್ಲಿ ಬೊಕ್ಕೆಗಳು ಒಡೆದು, ಆ ಜಾಗಗಳಲ್ಲಿ ವ್ರಣವಾಗಬಹುದು; ಶ್ವಾಸಕೋಶವನ್ನು ಸೇರಿದ ವೈರಸ್ ತೀವ್ರ ನ್ಯುಮೋನಿಯಾವನ್ನು ಉಂಟುಮಾಡಬಹುದು; ಕಣ್ಣಿನಲ್ಲಿ ಕಾಣುವ ಬೊಕ್ಕೆಗಳು ಕಣ್ಣಿನ ಸೋಂಕು ಉಂಟುಮಾಡಿ, ಅಂಧತ್ವಕ್ಕೆ ಕಾರಣವಾಗಬಹುದು. ನೂರು ಮಂದಿ ಮಂಕಿಪಾಕ್ಸ್ ರೋಗಿಗಳಲ್ಲಿ ಸುಮಾರು ಐದು ಜನರಿಗೆ ಈ ರೀತಿಯ ಸಮಸ್ಯೆಗಳು ಕಾಣಬಹುದು ಎಂದು ಅಂದಾಜು.

ಮಂಕಿಪಾಕ್ಸ್ ವೈರಸ್ ಶರೀರದ ಪರಸ್ಪರ ಸಂಪರ್ಕದಿಂದ ಹರಡುತ್ತದೆ. ಇಲಿ, ಹೆಗ್ಗಣ, ಮಂಗ ಮೊದಲಾದ ಪ್ರಾಣಿಗಳು ಈ ವೈರಸ್ ವಾಹಕಗಳು. ಮಂಕಿಪಾಕ್ಸ್ ಕಾಯಿಲೆಯಿಂದ ಬಳಲುವ ಪ್ರಾಣಿಗಳ ಮೃತದೇಹದಿಂದಲೂ ವೈರಸ್ ಹರಡಬಲ್ಲವು ಎಂದು ಸಾಬೀತಾಗಿದೆ. ಇಂತಹ ಪ್ರಾಣಿಗಳ ಜೊತೆಗೆ ಸಂಪರ್ಕಕ್ಕೆ ಬರುವ ವ್ಯಕ್ತಿಗಳು ಮಂಕಿಪಾಕ್ಸ್ ವೈರಸ್ ಅನ್ನು ತಮ್ಮ ಸಂಪರ್ಕಕ್ಕೆ ಬರುವ ಇತರರಿಗೆ ಹರಡಿಸುತ್ತಾರೆ. ಈ ರೀತಿ ಮನುಷ್ಯರಲ್ಲಿ ಮಂಕಿಪಾಕ್ಸ್ ಸೋಂಕು ಹಬ್ಬುತ್ತದೆ. ರೋಗದಿಂದ ಬಳಲುವ ಯಾವುದೇ ವ್ಯಕ್ತಿ ಸುಮಾರು ಎರಡರಿಂದ ನಾಲ್ಕು ವಾರಗಳ ಕಾಲ ಮಂಕಿಪಾಕ್ಸ್ ವೈರಸ್ ಅನ್ನು ಹರಡಬಲ್ಲರು. ಬೊಕ್ಕೆಗಳು, ಅದರ ಒಳಗಿನ ದ್ರವ, ಬೊಕ್ಕೆಗಳು ಒಡೆದಾಗ ಬರಬಹುದಾದ ರಕ್ತ, ಮೊದಲಾದುವು ವೈರಸ್ ಹರಡುವಿಕೆಗೆ ದಾರಿಯಾಗುತ್ತವೆ. ರೋಗಿಯ ಬಟ್ಟೆ, ಹಾಸಿಗೆ, ಟವೆಲ್, ಅವರು ಊಟ ಮಾಡಿದ ತಟ್ಟೆ, ಬಟ್ಟಲುಗಳ ಮೇಲೆಯೂ ಮಂಕಿಪಾಕ್ಸ್ ವೈರಸ್ ಕೆಲಕಾಲ ಜೀವಂತ ಇರುತ್ತದೆ. ಈ ಸಂದರ್ಭದಲ್ಲಿ ಇವುಗಳ ಜೊತೆಗೆ ಸಂಪರ್ಕಕ್ಕೆ ಬರುವ ವ್ಯಕ್ತಿಗಳಿಗೆ ವೈರಸ್ ಸೋಂಕು ಹತ್ತಬಹುದು. ಬಾಯಿಯ ಒಳಗೆ ಬೊಕ್ಕೆಗಳು ಎದ್ದಿರುವ ರೋಗಿಗಳಲ್ಲಿ ಎಂಜಲಿನ ಮೂಲಕವೂ ವೈರಸ್ ಹರಡುತ್ತದೆ. ಗರ್ಭಿಣಿಯರಲ್ಲಿ ಮಂಕಿಪಾಕ್ಸ್ ಉಂಟಾದರೆ ಗರ್ಭಸ್ಥ ಶಿಶುವಿಗೂ ಕಾಯಿಲೆ ಆಗುತ್ತದೆ ಎಂದು ಪತ್ತೆಯಾಗಿದೆ. ಹೀಗಾಗಿ, ಗರ್ಭಿಣಿಯರು ಅಧಿಕ ಎಚ್ಚರದಲ್ಲಿರಬೇಕು.

ಪ್ರಪಂಚವನ್ನು ಸಾವಿರಾರು ವರ್ಷಗಳ ಕಾಲ ಇನ್ನಿಲ್ಲದಂತೆ ಕಾಡಿದ್ದ ಸಿಡುಬು ಕಾಯಿಲೆ (smallpox) ಜಾಗತಿಕವಾಗಿ ನಿರ್ಮೂಲನವಾದದ್ದು 1980ನೆಯ ಇಸವಿಯಲ್ಲಿ. ಆನಂತರ ಜನಿಸಿದವರಿಗೆ ಸಿಡುಬಿನ ಲಸಿಕೆ ಹಾಕಲಾಗಿಲ್ಲ. ಭಾರತದಲ್ಲಿ ಸಿಡುಬಿನ ಲಸಿಕೆ ಕೊನೆಯಾದದ್ದು 1979ರಲ್ಲಿ. ಅದಕ್ಕೆ ಮುನ್ನ ಜನಿಸಿದವರ ಎಡತೋಳಿನ ಮೇಲೆ ಕಾಣುವ ನಾಲ್ಕಾಣೆ ಗಾತ್ರದ ಗುರುತು ಸಿಡುಬಿನ ಮೈಲಿಯದ್ದು. ಸಿಡುಬಿನ ವಿರುದ್ಧದ ಲಸಿಕೆ ಮಂಕಿಪಾಕ್ಸ್ ಅನ್ನು ಕೂಡ ಸ್ವಲ್ಪಮಟ್ಟಿಗೆ ನಿಯಂತ್ರಿಸುತ್ತದೆ ಎಂದು ತಜ್ಞರ ಅಭಿಪ್ರಾಯ. ಆದರೆ, ಇದನ್ನು ಅವಲಂಬಿಸಿ ಎಚ್ಚರ ತಪ್ಪುವುದು ಶಕ್ಯವಲ್ಲ. ಒಂದು ವೇಳೆ ಸಿಡುಬಿನ ಲಸಿಕೆ ಹಾಕಿಸಿಕೊಂಡವರಿಗೆ ಮಂಕಿಪಾಕ್ಸ್ ಆದರೆ, ಅದರ ತೀವ್ರತೆ ಕಡಿಮೆಯಾಗಿರುತ್ತದೆ ಎಂದಷ್ಟೇ ನಂಬಬಹುದು.

ಮಂಕಿಪಾಕ್ಸ್ ಸೋಂಕಿನ ಸಮಯದಲ್ಲಿ ಕೆಲವು ಜಾಗ್ರತೆ ವಹಿಸಬೇಕು. ಅನಗತ್ಯವಾಗಿ ಯಾರ ಸಂಪರ್ಕಕ್ಕೂ ಬರಬಾರದು. ರೋಗದಿಂದ ಬಳಲುವವರನ್ನು ಪ್ರತ್ಯೇಕವಾಗಿ ಚೇತರಿಸಿಕೊಳ್ಳಲು ಬಿಡಬೇಕೇ ಹೊರತು, ಅವರ ಸಾಮಾಜಿಕ ಭೇಟಿಗೆ ಹೋಗಬಾರದು. ರೋಗಿಗಳು ತಮ್ಮನ್ನು ತಾವು ಇತರರಿಂದ ದೂರವಿರಿಸಬೇಕು. ಇತರರಿಂದ ಪ್ರತ್ಯೇಕಗೊಳ್ಳುವ ತರಬೇತಿಯನ್ನು ಕೋವಿಡ್-19 ಕಾಯಿಲೆ ಈಗಾಗಲೇ ಎಲ್ಲರಿಗೂ ನೀಡಿದೆ. ಅದೇ ಮಾಪನಗಳನ್ನು ಇಲ್ಲಿಯೂ ಅನುಸರಿಸಬೇಕು. ಚರ್ಮದ ಮೇಲಿನ ಬೊಕ್ಕೆಗಳನ್ನು ವಾತಾವರಣಕ್ಕೆ ತೆರೆದಿಡಬಾರದು; ಅವು ಮುಚ್ಚುವಂತೆ ಬಟ್ಟೆ ಧರಿಸಬೇಕು. ಬಾಯಿಯ ಒಳಗೆ ಬೊಕ್ಕೆ, ವ್ರಣ ಆದವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಯಾವುದೇ ರೋಗಿಯ ಚರ್ಮದ ಜೊತೆಗೂ ನೇರ ಸಂಪರ್ಕಕ್ಕೆ ಬರಬಾರದು. ಕೋವಿಡ್-19 ಸೊಂಕಿನ ಕಾಲದಲ್ಲಿ ಅನುಸರಿಸಿದಂತೆ ನಿಯಮಿತವಾಗಿ ಸಾಬೂನು ಬಳಸಿ ಕೈ ತೊಳೆಯಬೇಕು. ಸಾಬೂನು ಇಲ್ಲದಿದ್ದಲ್ಲಿ ಸ್ಯಾನಿಟೈಸರ್ ಬಳಸಬಹುದು. ಮಂಕಿಪಾಕ್ಸ್ ರೋಗಿಗಳ ಆರೈಕೆ ಮಾಡುವವರು ಈ ವಿಷಯದಲ್ಲಿ ಕಟ್ಟೆಚ್ಚರ ವಹಿಸಬೇಕು. ರೋಗಿ ಬಳಸಿರುವ ಬಟ್ಟೆಗಳನ್ನು ಪ್ರತ್ಯೇಕವಾಗಿ ಬಿಸಿನೀರಿನಲ್ಲಿ ನೆನೆಸಿ, ಸಾಬೂನು ಬಳಸಿ ಒಗೆಯಬೇಕು. ಅವನ್ನು ಇತರರ ಬಟ್ಟೆಗಳ ಜೊತೆಗೆ ಸೇರಿಸಬಾರದು. ಅಂತೆಯೇ, ರೋಗಿಯು ಆಹಾರ ಸೇವಿಸುವ ತಟ್ಟೆ, ಬಟ್ಟಲುಗಳನ್ನೂ ಪ್ರತ್ಯೇಕವಾಗಿಯೇ ತೊಳೆಯಬೇಕು. ಅವರ ಬೊಕ್ಕೆಗಳ ಚಿಕಿತ್ಸೆಯಲ್ಲಿ ಬರುವ ವೈದ್ಯಕೀಯ ತ್ಯಾಜ್ಯವನ್ನು ತಜ್ಞರ ಸಲಹೆಯಂತೆ ನಿರ್ವಹಿಸಬೇಕು. ಮಂಕಿಪಾಕ್ಸ್ ಸೋಂಕು ತಗುಲಿದ ಅನುಮಾನವಿದ್ದರೆ ಕೂಡಲೇ ಕುಟುಂಬದ ಇತರ ಸದಸ್ಯರಿಂದ ಪ್ರತ್ಯೇಕಗೊಳ್ಳಬೇಕು ಹಾಗೂ ವೈದ್ಯರನ್ನು ಸಂಪರ್ಕಿಸಬೇಕು. ಮಂಕಿಪಾಕ್ಸ್ ಅನ್ನು ನಿರ್ವಹಿಸುವ ನಿರ್ದಿಷ್ಟ ಕಾರ್ಯಸೂಚಿ ಲಭ್ಯವಿದೆ. ಆಯಾ ವ್ಯಕ್ತಿಯ ವೈಯಕ್ತಿಕ ಅಪಾಯದ ಅಂಶಗಳನ್ನು ಗಮನಿಸಿ ವೈದ್ಯರು ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ತೀವ್ರವಾದ ಕಾಯಿಲೆಗೆ ಔಷಧಗಳೂ ಲಭ್ಯವಿವೆ. ಇಂತಹ ವೈಜ್ಞಾನಿಕ ಚಿಕಿತ್ಸೆ ಬಹಳ ಪರಿಣಾಮಕಾರಿಯಾಗಿದೆ; ಯಾವುದೇ ಆತಂಕಕ್ಕೆ ಕಾರಣವಿಲ್ಲ. ಸದ್ಯಕ್ಕೆ ಮಂಕಿಪಾಕ್ಸ್ ವಿರುದ್ಧ ಪರಿಣಾಮಕಾರಿಯದ ಲಸಿಕೆ ವ್ಯಾಪಕವಾಗಿ ಲಭ್ಯವಿಲ್ಲ; ಎಚ್ಚರವಾಗಿರುವುದೊಂದೇ ದಾರಿ.

ಮಂಕಿಪಾಕ್ಸ್ ಹೊಸ ಕಾಯಿಲೆಯೇನಲ್ಲ. ಆಫ್ರಿಕದ ಹಲವಾರು ದೇಶಗಳಲ್ಲಿ ಇದು ಸಾಮಾನ್ಯ ಸಮಸ್ಯೆ. 1970ರಲ್ಲೂ ಮಂಕಿಪಾಕ್ಸ್ ಇದೇ ರೀತಿಯಲ್ಲಿ ಹಲವಾರು ದೇಶಗಳಲ್ಲಿ ತನ್ನ ಆರ್ಭಟ ತೋರಿತ್ತು. ಅದೇ ಮಾದರಿ 2022ರಲ್ಲೂ ಕಂಡುಬರುತ್ತಿದೆ. ಆಫ್ರಿಕಾ ಹೊರತುಪಡಿಸಿ, ಸುಮಾರು 22 ದೇಶಗಳಲ್ಲಿ ಈವರೆಗೆ ಸುಮಾರು 260 ಮಂದಿ ಸೋಂಕಿತರಿದ್ದಾರೆ. ಇದರ ಬಗ್ಗೆ ವೈದ್ಯವಿಜ್ಞಾನಿಗಳಿಗೆ ಸ್ಪಷ್ಟವಾದ ತಿಳಿವಳಿಕೆಯಿದೆ. ಹೀಗಾಗಿ ಇದು ತೀರಾ ಸಮಸ್ಯಾತ್ಮಕ ಹಂತಕ್ಕೆ ಹೋಗುವ ಸಾಧ್ಯತೆಗಳು ಬಹಳ ಕಡಿಮೆ. ಈ ಕುರಿತಾಗಿ ಸರಿಯಾದ ಮಾಹಿತಿಯನ್ನು ತಿಳಿದಿರುವುದು ಅತ್ಯಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT