ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಷನಲ್‌ ಚೈಲ್ಡ್‌ಹುಡ್‌ ಒಬೆಸಿಟಿ ವೀಕ್‌|ಮಗುವಿಗೆ ತುತ್ತು.ಅಳೆದೂ ತೂಗುವ ಹೊತ್ತು

Last Updated 8 ಜುಲೈ 2022, 20:15 IST
ಅಕ್ಷರ ಗಾತ್ರ

ಪ್ರತಿ ವರ್ಷ ಜುಲೈ 4 ರಿಂದ 10ರವರೆಗೆ ನ್ಯಾಷನಲ್‌ ಚೈಲ್ಡ್‌ಹುಡ್‌ ಒಬೆಸಿಟಿ ವೀಕ್‌ 2022’ (ಮಕ್ಕಳಲ್ಲಿ ಕಾಡುವ ಸ್ಥೂಲಕಾಯದ ಕುರಿತು ಜಾಗೃತಿ ಮೂಡಿಸುವ ಸಪ್ತಾಹ) ಅನ್ನಾಗಿ ಆಚರಿಸಲಾಗುತ್ತಿದೆ. ಈ ಸಪ್ತಾಹದ ನೆಪದಲ್ಲಿ ಮಕ್ಕಳ ಆಹಾರ ಹೇಗಿರಬೇಕು? ಎಂಬ ಕುರಿತ ಮಾಹಿತಿ ಇಲ್ಲಿದೆ.

ಪ್ರಪಂಚದಲ್ಲಿರುವ ಅತ್ಯಂತ ಸವಾಲಿನ‌ ಕೆಲಸಗಳ ಪೈಕಿ ಮಗುವಿಗೆ ತಿನಿಸುವ ಕೆಲಸವೂ ಒಂದು. ಆರು ತಿಂಗಳ ಕಾಲದ ಸ್ತನ್ಯಪಾನದ ನಂತರ ಮಗುವಿಗೆ ಪೂರಕ ಆಹಾರವನ್ನು ಶುರು ಮಾಡಬೇಕಾಗಿ ಬರುವಾಗ ತಾಯಿಗಿರುವ ಸವಾಲುಗಳು ಮತ್ತು ಅನುಮಾನಗಳು ನೂರಾರು. ಮಗುವಿನ ತೂಕವು ಮೊದಲ ಆರು ತಿಂಗಳಲ್ಲಿ ವೃದ್ಧಿಯಾದಷ್ಟು ನಂತರದ ಸಮಯದಲ್ಲಿ ವೃದ್ಧಿಯಾಗದಿರುವ ಸ್ವಾಭಾವಿಕ ಪ್ರಕ್ರಿಯೆಯನ್ನು ಅರಿಯದ ಹೆಚ್ಚಿನ ತಾಯಂದಿರುವ ತಮ್ಮನ್ನು ತಾವು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಕೊಳ್ಳುತ್ತಾರೆ. ಒಂದು ರೊಟ್ಟಿ ಕೇಳಿದಾಗ ಎರಡು ರೊಟ್ಟಿಯನ್ನು ತಟ್ಟೆಯಲ್ಲಿಡುವ ‘ಲೆಕ್ಕ ಬಾರದ’ ತಾಯಂದಿರು ಮತ್ತು ಮಗು ಎಷ್ಟೇ ದಷ್ಟಪುಷ್ಟವಿದ್ದರೂ ಸಣಕಲು ಎಂದು ಭಾವಿಸುವ ‘ದೃಷ್ಟಿ ದೋಷವಿರುವ’ ತಾಯಂದಿರ ಸಂಖ್ಯೆಯೂ ನಮ್ಮಲ್ಲಿ ಕಡಿಮೆಯಿಲ್ಲ!

ಆರು ತಿಂಗಳ ನಂತರ ಸ್ತನ್ಯಪಾನದ ಜೊತೆಗೆ ಇತರ ಪೂರಕ ಆಹಾರವನ್ನು ಮಗುವಿಗೆ ಪರಿಚಯಿಸುವಾಗ ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಪ್ರಮಾಣದ ಕಾರ್ಬೊಹೈಡ್ರೇಟ್, ಪ್ರೊಟೀನ್, ವಿಟಮಿನ್ ಮತ್ತು ಖನಿಜಗಳಿರುವ ಸಮತೋಲನದ ಆಹಾರಗಳನ್ನು ಆಯ್ಕೆ ಮಾಡಬೇಕು. ಕಾರ್ಬೊಹೈಡ್ರೇಟ್ ಪ್ರಮಾಣವು ಹೆಚ್ಚಿರುವ ಧಾನ್ಯಗಳ ಜೊತೆಗೆ ಪ್ರೊಟೀನ್‌ ಪ್ರಮಾಣವು ಹೆಚ್ಚಿರುವ ಕಾಳುಗಳ ಮಿಶ್ರಣದ ಆಹಾರ ಪದಾರ್ಥಗಳನ್ನು ಬಳಸಬೇಕು. ಇದರಿಂದ ಮಗುವಿಗೆ ಸಮತೋಲನವಿರುವ ಆಹಾರ ದೊರಕುತ್ತದೆ. ಬೀಜಗಳು ಮತ್ತು ತರಕಾರಿಗಳನ್ನು ಸೇರಿಸಿದಾಗ ಮಿನರಲ್ ಮತ್ತು ಖನಿಜ ಅಂಶಗಳೂ ಆಹಾರದಲ್ಲಿ ಸೇರಿಕೊಳ್ಳುತ್ತವೆ. ಬೆಲ್ಲ ಮತ್ತು ತುಪ್ಪ ಸೇರಿಸಿದರೆ, ಆಹಾರವು ಹೆಚ್ಚು ರುಚಿಕರವಾಗುವುದರ ಜೊತೆಗೆ ಅದರಲ್ಲಿ ಕಬ್ಬಿಣದ ಅಂಶವೂ ಸೇರಿಕೊಳ್ಳುತ್ತದೆ. ಉದಾಹರಣೆಗೆ ಉಪ್ಪಿಟ್ಟು, ಪಲಾವ್, ಪೋಹಾ, ದಲಿಯಾ ಮತ್ತು ಪಾಯಸದಂತಹ ಖಾದ್ಯಗಳನ್ನು ತಯಾರಿಸುವಾಗ, ಮೇಲೆ ಉಲ್ಲೇಖಿಸಿರುವ ಎಲ್ಲಾ ವಸ್ತುಗಳನ್ನು ಬಳಸುವುದರಿಂದ ಆಹಾರವನ್ನು ಸ್ವಾದಿಷ್ಟಗೊಳಿಸುವ ಜೊತೆಜೊತೆಗೆ ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶವಿರುವಂತೆಯೂ ನೋಡಿಕೊಳ್ಳಬಹುದು.

ಸ್ಥಳೀಯ ಆಹಾರಕ್ಕೆ ಆದ್ಯತೆ

ಉತ್ತರಭಾರತದಲ್ಲಿ ಗೋಧಿಯು ಪ್ರಮುಖ ಆಹಾರ ಧಾನ್ಯ. ದಕ್ಷಿಣಭಾರತದಲ್ಲಿ ಅಕ್ಕಿ ಮತ್ತು ರಾಗಿಯನ್ನು ಹೆಚ್ಚು ಬಳಸುತ್ತಾರೆ. ಮಗುವಿಗೆ ಪೂರಕ ಆಹಾರ ತಿನ್ನಿಸಲು ಆರಂಭಿಸುವಾಗ ಸ್ಥಳೀಯವಾಗಿ ದೊರಕುವ ಹಾಗೂ ಆಯಾ ಪ್ರದೇಶದವರು ಹಿಂದಿನಿಂದ ಬಳಸುತ್ತಾ ಬಂದಿರುವ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮಗುವಿನ ದೇಹದ ಪ್ರಕೃತಿಗೆ ಅನುವಂಶಿಕವಾಗಿ ಒಗ್ಗಿರುವ ಆಹಾರಗಳನ್ನು ಮಗು ಹೆಚ್ಚು ಉತ್ತಮವಾಗಿ ಜೀರ್ಣಿಸಿಕೊಳ್ಳುತ್ತದೆ.

ಆರರಿಂದ ಎಂಟು ತಿಂಗಳ ಮಕ್ಕಳಿಗೆ ದಿನಕ್ಕೆ ಮೂರು ಬಾರಿ, ಒಂಬತ್ತು ತಿಂಗಳಿನಿಂದ ಒಂದು ವರ್ಷದ ಮಕ್ಕಳಿಗೆ ದಿನಕ್ಕೆ ಐದು ಬಾರಿ ಪೂರಕ ಆಹಾರವನ್ನು ಪ್ರತಿ ಬಾರಿಗೆ ಸುಮಾರು ನೂರು ಮಿಲಿಲೀಟರ್ ಪ್ರಮಾಣದಷ್ಟು ಕೊಡಬಹುದು. ಒಂದು ವರ್ಷದ ಕೆಳಗಿನ ಮಗುವಿಗೆ ಕೊಡುವ ಪೂರಕ ಆಹಾರದವು ದೋಸೆ ಹಿಟ್ಟಿನಷ್ಟು ಸಾಂದ್ರತೆ ಹೊಂದಿರಬೇಕು. ಹಾಗೆಯೇ ಮಗು ಬೆಳದಂತೆ ಆಹಾರದ ಸಾಂದ್ರತೆಯನ್ನು ಹೆಚ್ಚಿಸುತ್ತಾ ಹೋಗಬಹುದು.

ಕುದಿಸಿ ಆರಿಸಿರುವ ಶುದ್ಧವಾದ ನೀರನ್ನು ದಿನಕ್ಕೆ ಮೂರುನಾಲ್ಕು ಸಲ ಕುಡಿಸುವುದರ ಜೊತೆಗೆ ಸ್ತನ್ಯಪಾನವನ್ನು ಎರಡು ವರ್ಷಗಳ ಕಾಲ ಮುಂದುವರಿಸಬೇಕು. ಮಗುವಿಗೆ ಒಂದು ವರ್ಷ ತುಂಬಿದ ನಂತರ ಅಡುಗೆ ಮನೆಯಲ್ಲಿ ತಯಾರಾಗುವ ಎಲ್ಲಾ ಆಹಾರಗಳನ್ನು ಮಗು ಸೇವಿಸಬಹುದು.→ಆದರೆ ಮಗುವಿನ ಉಸಿರಾಟದ ನಾಳದಲ್ಲಿ ಸಿಕ್ಕಿ ಹಾಕಿಕೊಳ್ಳುವ ಅಪಾಯವಿರುವ ವಸ್ತುಗಳಾದ ದ್ರಾಕ್ಷಿ, ಗೋಡಂಬಿ, ಕ್ಯಾರೆಟ್ ತುಂಡುಗಳಂತಹ ಪದಾರ್ಥಗಳನ್ನು ತಿನ್ನಿಸುವಾಗ ಎಚ್ಚರವಿರಬೇಕು.

ಮಗು ನಿರ್ದಿಷ್ಟವಾದ ಆಹಾರವನ್ನು ತಿನ್ನಲು ಒಂದೆರಡು ಬಾರಿ ನಿರಾಕರಿಸಿದಾಗ ಮಗುವು ಆ ಆಹಾರವನ್ನು ಮುಂದೆಂದೂ ತಿನ್ನಲಾರದು ಎಂಬ ಆತುರದ ನಿರ್ಧಾರಕ್ಕೆ ಬರಬಾರದು. ಅದೇ ಆಹಾರದ ರುಚಿ, ಬಣ್ಣ ಅಥವಾ ಸಾಂದ್ರತೆಯನ್ನು ಬದಲಾಯಿಸಿ ಮರಳಿ ತಿನ್ನಿಸುವ ಯತ್ನ ಮಾಡಿದಾಗ, ಮಗು ಆ ಆಹಾರವನ್ನೇ ಒಪ್ಪಿಕೊಳ್ಳಬಹುದು.

ಮಗುವಿಗೆ ತಿನಿಸುವಾಗ ಟಿವಿ ಅಥವಾ ಮೊಬೈಲ್ ವೀಕ್ಷಣೆ ಮಾಡದೆ ಮಗುವಿನ ಕಣ್ಣಿನಲ್ಲಿ ಕಣ್ಣಿಟ್ಟು ನೋಡುತ್ತಾ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಮಗುವನ್ನು ತೊಡಗಿಸುತ್ತಾ ತಿನ್ನಿಸುವುದರಿಂದ ಮಗುವು ಊಟ ಮಾಡುವ ಪ್ರಕ್ರಿಯೆಯನ್ನು ಹೆಚ್ಚು ಆನಂದಿಸುತ್ತದೆ. ಒಂದು ವರ್ಷ ಮೀರಿದ ಮಕ್ಕಳಿಗೆ ಅವರದೇ ಆದ ತಟ್ಟೆಯಿಂದ ತಿನ್ನಲು ಉತ್ತೇ‌ಜಿಸಿದರೆ, ದೊಡ್ಡವರು ಊಟ ಮಾಡುವಾಗ, ತಾನೂ ಅವರೊಂದಿಗೆ ಕುಳಿತು ಊಟ ಮಾಡುತ್ತದೆ.

ಒಂದೊಮ್ಮೆ ಮಗು ಒಂದು ನಿರ್ದಿಷ್ಟವಾದ ಆಹಾರವನ್ನು ನಿರಾಕರಿಸಿದರೆ ಅದನ್ನು ಬಲವಂತವಾಗಿ ಮಗುವಿನ ಬಾಯಿಗೆ ತುರುಕಿಸಬೇಡಿ. ಇಂಥ ಕ್ರಮಗಳು ಮಗುವನ್ನು ಹಠಮಾರಿಯಾಗಿಸುತ್ತವೆ. ಜೊತೆಗೆ ಊಟ ಮಾಡುವುದರ ಬಗೆಗೆ ಮಗು ಅಸಹನೆಯನ್ನು ರೂಢಿಸಿಕೊಳ್ಳುತ್ತದೆ.

ಮಿಥ್ಯೆಗಳನ್ನೂ ಹೋಗಲಾಡಿಸಿ..

ನಮ್ಮ ದೇಶದ ಗ್ರಾಮೀಣ ಭಾಗದಲ್ಲಿರುವ, ಆಹಾರದ ಬಗೆಗಿರುವ ಉಷ್ಣ ಮತ್ತು ಶೀತವೆಂಬ ಅವೈಜ್ಞಾನಿಕ ಕಲ್ಪನೆಗಳನ್ನು ಹೋಗಲಾಡಿಸುವುದು ಬಹಳ ಮುಖ್ಯ. ಪ್ರೊಟೀನ್ ಅಂಶ ಹೇರಳವಾಗಿರುವ ಮೀನು ಮತ್ತು ಮಾಂಸವು ಉಷ್ಣವೆಂದೂ, ವಿಟಮಿನ್ ಮತ್ತು ಮಿನರಲ್ ಅಂಶಗಳಿರುವ ಹಣ್ಣು ಮತ್ತು ತರಕಾರಿಗಳು ಶೀತ ಉಂಟು ಮಾಡುತ್ತವೆಂಬ ವಿಚಾರಗಳಲ್ಲಿ ಹುರುಳಿಲ್ಲ. ತುಪ್ಪ ತಿಂದರೆ ಕೆಮ್ಮು ಹೆಚ್ಚುತ್ತದೆ ಎಂಬ ವಾದವೂ ಮತ್ತು ಒಂದು ವರ್ಷ ಮೇಲ್ಪಟ್ಟ ಮಕ್ಕಳು ಮೊಟ್ಟೆಯನ್ನು ಜೀರ್ಣಿಸಿಕೊಳ್ಳಲಾರರೆಂಬ ನಂಬಿಕೆಗಳು ಸತ್ಯಕ್ಕೆ ದೂರವಾದವು.

ಈಗಿನ ಕಾಲದ ಹೆತ್ತವರ ಆತಂಕವನ್ನು ಬಂಡವಾಳವಾಗಿಸಿಕೊಂಡು, ಮಕ್ಕಳ ಆಹಾರವೆಂಬ ಹಣೆಪಟ್ಟಿಯೊಂದಿಗೆ ವಿವಿಧ ರೀತಿಯಲ್ಲಿ ಸಂಸ್ಕರಿಸಿದ ಆಹಾರ ಮಾರುಕಟ್ಟೆ ಪ್ರವೇಶಿಸಿವೆ. ಇವು ಗ್ರಾಮೀಣ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಆಹಾರದ ಕುರಿತಾದ ತಪ್ಪು ಕಲ್ಪನೆಗಳಿಗಿಂತ ಹೆಚ್ಚು ಅಪಾಯಕಾರಿ. ಸಂಸ್ಕರಿಸಿದ ಆಹಾರವು ಯಾವುದೇ ರೂಪದಲ್ಲಿದ್ದರೂ ಮತ್ತು ಯಾವುದೇ ಪ್ರತಿಷ್ಠಿತ ಅಂತರರಾಷ್ಟ್ರೀಯ ಬ್ರಾಂಡಿನಲ್ಲಿ ಲಭ್ಯವಿದ್ದರೂ ಅದು ತಾಜಾ ಆಹಾರದಷ್ಟು ಉತ್ತಮವಲ್ಲ.

ಬೊಜ್ಜು ಹೆಚ್ಚಾಗುವುದು ಹೀಗೆ

ಮಾರುಕಟ್ಟೆಯಲ್ಲಿರುವ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಬಳಸುವುದರಿಂದ ನಗರ ಪ್ರದೇಶದ ಮಕ್ಕಳಲ್ಲಿ ಬೊಜ್ಜಿನ ಪ್ರಮಾಣವು ಹೆಚ್ಚಾಗುತ್ತಿದೆ. ಜಾಹೀರಾತುಗಳಿಗೆ ಮಾರುಹೋಗುವುದಕ್ಕಿಂತ ಜಾಗರೂಕರಾಗಿ ಆಹಾರವನ್ನು ಆಯ್ಕೆ ಮಾಡುವುದನ್ನು ತಾಯಂದಿರು ಮನಗಾಣಬೇಕು. ತಮ್ಮ ಊರಿನಲ್ಲಿ ಬೆಳೆದಿರುವ ಬಾಳೆಹಣ್ಣಿಗಿಂತ ವಿದೇಶಗಳಿಂದ ಬಂದ ದುಬಾರಿ ಹಣ್ಣು ಹಂಪಲುಗಳಲ್ಲಿ ಹೆಚ್ಚು ಪೌಷ್ಟಿಕಾಂಶವಿದೆಯಂಬ ಭಾವನೆಯನ್ನು ಜನರ ಮನಸ್ಸಿನಲ್ಲಿ ಬಿತ್ತಲಾಗಿದೆ. ಹಸುವಿನ ಹಾಲನ್ನು ಆರು ತಿಂಗಳ ನಂತರ ಯಥೇಚ್ಛವಾಗಿ ಬಳಸಿದರೆ ಎಲ್ಲಾ ಪೌಷ್ಟಿಕಾಂಶಗಳು ದೊರಕುತ್ತವೆಯೆಂಬ ತಪ್ಪು ಕಲ್ಪನೆಯಿಂದಾಗಿ ಅನೇಕರು ಮಗುವಿಗೆ ಎಲ್ಲಾ ಪೌಷ್ಟಿಕಾಂಶಗಳು ದೊರಕುವ ಸಮತೋಲನ ಆಹಾರವನ್ನು ನೀಡದೆ ಹಸುವಿನ ಹಾಲನ್ನು ದಿನದ ಮೂರು ಹೊತ್ತೂ ಕುಡಿಸುವ ತಪ್ಪು ಮಾಡುತ್ತಾರೆ.

‘ಇಟ್ ಟೇಕ್ಸ್ ಎ ಹೋಲ್ ವಿಲೇಜ್ ಟು ರೈಸ್ ಎ ಚೈಲ್ಡ್’ ಎಂಬ ಪ್ರಸಿದ್ಧ ಹೇಳಿಕೆಯು ಬೆಳೆಯುವ ಮಕ್ಕಳ ಮೇಲೆ ಸುತ್ತಮುತ್ತಲಿನ ವಾತಾವರಣವು ಬೀರುವ ಪ್ರಭಾವವನ್ನು ತಿಳಿಸುತ್ತದೆ. ಅದರಂತೆ, ಮಕ್ಕಳಿಗೆ ಉತ್ತಮವಾದ ಆಹಾರ ಪದ್ಧತಿಯನ್ನು ರೂಪಿಸುವುದರ ಹಿಂದೆ ತಾಯಿಯಷ್ಟೇ ಜವಾಬ್ದಾರಿ ಕುಟುಂಬದ ಎಲ್ಲಾ ಸದಸ್ಯರಿಗೆ ಮತ್ತು ಮನೆಯ ವಾತಾವರಣಕ್ಕೆ ಇರುವುದರಿಂದಾಗಿ ‘ಇಟ್ ಟೇಕ್ಸ್ ಎ ಹೋಲ್ ಫ್ಯಾಮಿಲಿ ಟು ಫೀಡ್ ಎ ಚೈಲ್ಡ್’ ಎಂದು ಹೇಳಿದರೂ ತಪ್ಪಾಗಲಾರದು.

(ಮಕ್ಕಳ ತಜ್ಞ ವೈದ್ಯರು, ಮಡಿಕೇರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT