ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಅಂತರಂಗ: ಲೈಂಗಿಕತೆಯ ಕನಸು ಕಾಣುವುದು ಸರಿಯೇ?

ಅಕ್ಷರ ದಾಮ್ಲೆ
Published : 2 ಮೇ 2025, 23:30 IST
Last Updated : 2 ಮೇ 2025, 23:30 IST
ಫಾಲೋ ಮಾಡಿ
Comments
ಪ್ರ

ಸರ್, ನನಗೆ 22 ವರ್ಷ. ಈಚೆಗೆ ಲೈಂಗಿಕತೆಗೆ ಸಂಬಂಧಿಸಿದ ಕನಸುಗಳೇ ಹೆಚ್ಚಾಗಿ ಬೀಳುತ್ತಿವೆ. ಇದನ್ನು ನಿಯಂತ್ರಿಸುವುದು ಹೇಗೆ?

ಕನಸುಗಳ ಬಗ್ಗೆ ಅನೇಕ ವ್ಯಾಖ್ಯಾನಗಳಿವೆ. ಹಾಗಂತ ನಿಖರವಾಗಿ ಕನಸುಗಳಿಗೆ ಮೂಲಕಾರಣಗಳೇನು ಮತ್ತು ಯಾವ ಕಾರಣದಿಂದಾಗಿ ಬರುತ್ತದೆ ಎನ್ನುವುದನ್ನು ಇನ್ನೂ ಅಧ್ಯಯನ ಮಾಡುತ್ತಲೇ ಇದ್ದಾರೆ.

ನಿಮ್ಮ ಪ್ರಶ್ನೆಯಲ್ಲಿ ಹೇಳಿರುವ ಹಾಗೆ ಕಾಮಕ್ಕೆ ಸಂಬಂಧಿಸಿದ ಕನಸುಗಳೇ ಹೆಚ್ಚಾಗಿ ಬೀಳುವುದಕ್ಕೆ ಅನೇಕ ಕಾರಣಗಳಿರಬಹುದು.

1 ಮೊದಲನೆಯದಾಗಿ ವಿಶ್ವದ ಶ್ರೇಷ್ಠ ಮನಃಶ್ಶಾಸ್ತ್ರಜ್ಞರಲ್ಲಿ ಒಬ್ಬರಾದ ಸಿಗ್ಮಂಡ್ ಫ್ರಾಯ್ಡ್ ಅವರ ಸಿದ್ಧಾಂತದ ಆಧಾರದ ಪ್ರಕಾರ ಹೇಳುವುದಾದರೆ, ನಿಮ್ಮ ಸುಪ್ತ ಮನಸ್ಸಿನಲ್ಲಿ ಕಾಮದ ಕುರಿತು ಎಲ್ಲಾದರೂ ಒತ್ತಡದಿಂದ ಹತ್ತಿಕ್ಕಿದಂಥ ಯೋಚನೆಗಳು ಅಥವಾ ಭಾವನೆಗಳು ಇದ್ದಲ್ಲಿ ಅವುಗಳು ಕನಸಿನ ರೂಪದಲ್ಲಿ ಬರಬಹುದು. ಮತ್ತು ಮನಸ್ಸು ಹಗಲಿನಲ್ಲಿ ಪೂರ್ಣಗೊಳಿಸಲು ಸಾಧ್ಯವಾಗದಂತಹ ಆಸೆ - ಆಕಾಂಕ್ಷೆಗಳನ್ನು ಎಷ್ಟೋ ಬಾರಿ ರಾತ್ರಿ ಕನಸಿನ ಮೂಲಕ ಪೂರ್ಣಗೊಳಿಸಿಕೊಳ್ಳುತ್ತದೆ ಅಂತಲೂ ಹೇಳಲಾಗುತ್ತದೆ.

2 ಎರಡನೆಯದಾಗಿ, ನಿಮ್ಮ ಶರೀರದಲ್ಲಿ ಹಾರ್ಮೋನ್‌ಗಳು ಬದಲಾವಣೆ ಆಗುತ್ತಿದ್ದರೆ, ಅದರಿಂದಲೂ ಈ ರೀತಿಯ ಕಾಮದ ಕನಸುಗಳು ಬರುವ ಸಾಧ್ಯತೆಗಳಿವೆ.

3 ಮೂರನೆಯದಾಗಿ, ಕಾಮದ ಕುರಿತು ಏನಾದರೂ ದೃಶ್ಯ ಮಾಧ್ಯಮಗಳಲ್ಲಿ (ಸಿನಿಮಾ, ಸೀರಿಯಲ್, ಅಥವಾ ಒಟಿಟಿ ಪ್ಲಾಟ್‌ಫಾರಂಗಳಲ್ಲಿ ಬರುವ ಸೀರೀಸ್‌ಗಳು) ನೋಡುವುದು ಅಥವಾ ಕಾಮದ ಕುರಿತು ಏನಾದರೂ ಕಥೆ - ಕಾದಂಬರಿಗಳನ್ನು ಓದುವುದೂ ಕೂಡಾ ನಿಮ್ಮ ಕನಸಿಗೆ ಕಾರಣಗಳಾಗಿರಬಹುದು.

4 ಅಥವಾ ಕಾಮದ ಬಗ್ಗೆ ಎಲ್ಲಾದರೂ ಅಪರಾಧಿ ಪ್ರಜ್ಞೆ ನಿಮ್ಮಲ್ಲಿದ್ದರೆ ಮತ್ತು ಅಂಥ ಭಾವನೆಯನ್ನು ನೀವು ಅದುಮಿಟ್ಟುಕೊಳ್ಳುತ್ತಿದ್ದೀರಾದರೆ, ಅಂತಹ ಕಾರಣಗಳಿಂದಲೂ ನಿಮಗೆ ಅಂತಹ ಕನಸುಗಳೇ ಬೀಳುತ್ತಿರಬಹುದು.

ಈ ಮೇಲೆ ಹೇಳಿದ ವಿಚಾರಗಳಲ್ಲದೇ, ಇತರೆ ಇನ್ಯಾವುದೋ ಕಾರಣದಿಂದಲೂ ನಿಮಗೆ ಕನಸುಗಳು ಬೀಳುತ್ತಿರಬಹುದು.

ಇದನ್ನು ಪರಿಹರಿಸುವುದು ಹೇಗೆ?
ಮೊದಲನೆಯದಾಗಿ, ಇಂತಹ ಕನಸುಗಳು ಬಿದ್ದಾಗ ಅಥವಾ ಬಿದ್ದಿದೆ ಎಂಬುದು ನಿಮ್ಮ ಅರಿವಿಗೆ ಬಂದಾಗ ನಿಮಗೆ ಯಾವ ರೀತಿಯ ಭಾವನೆ ಉಂಟಾಗುತ್ತದೆ ಎಂಬುದನ್ನು ಗಮನಿಸಿಕೊಳ್ಳಿ. ಮತ್ತು ಆ ರೀತಿಯ ಭಾವನೆಯ ಹಿಂದೆ ಇರುವ ಕಾರಣವನ್ನು ಗೊತ್ತು ಮಾಡಿಕೊಳ್ಳಿ.

ಅದರ ಜತೆಗೆ ಮೇಲೆ ಹೇಳಿರುವ ಒಂದಷ್ಟು ಕಾರಣಗಳ ಆಧಾರದ ಮೇಲೆ ನಿಮಗೆ ಯಾವ ಕಾರಣಕ್ಕೆ ಕನಸು ಬೀಳುತ್ತಿರಬಹುದು ಎಂಬುವುದನ್ನು ಹುಡುಕಿ.

ಈ ಎರಡೂ ವಿಚಾರಗಳ ಮೂಲವನ್ನು ಹುಡುಕಿದ್ದೇ ಆದಲ್ಲಿ ನಿಮಗೆ ಅದನ್ನು ಪರಿಹರಿಸಿಕೊಳ್ಳುವುದು ಸಾಧ್ಯವಾಗಬಹುದು.

ಇನ್ನೊಂದು ವಿಚಾರ, ಈ ಕನಸುಗಳನ್ನು ನಿಯಂತ್ರಿಸಬೇಕು ಎಂಬ ಯೋಚನೆ ಎಲ್ಲಿಂದ ಬಂತು? ಅದಕ್ಕೆ ಕಾರಣಗಳೇನು? ಕಾಮದ ಬಗ್ಗೆ ಸಮಾಜದಲ್ಲಿ ಏನಾದರೂ ತಪ್ಪಾಗಿ ಅಥವಾ ತುಚ್ಛವಾಗಿರುವಂತಹ ಮಾತುಗಳನ್ನು ಕೇಳಿರುವಿರೇ? ಸಾಧಾರಣವಾಗಿ ಸಮಾಜದಲ್ಲಿ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ. ಆ ಕಾರಣದಿಂದಾಗಿ ಎಷ್ಟೋ ಜನರಿಗೆ ಅದರ ಕುರಿತು ಈ ಆಧುನಿಕ ಯುಗದಲ್ಲೂ ತಪ್ಪು ಕಲ್ಪನೆಗಳು ಮತ್ತು ಭಾವನೆಗಳು ಇವೆ. ಆದ್ದರಿಂದ ನಿಮ್ಮೊಳಗೆ ಕಾಮದ ಕುರಿತು ಇರುವ ಅಭಿಪ್ರಾಯವೇನು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ. ಯಾಕೆಂದರೆ ಇದು ನೈಸರ್ಗಿಕವಾದಂತಹ ಸಹಜ ಪ್ರಕ್ರಿಯೆ. ಅದನ್ನು ಮೊದಲು ಅರ್ಥಮಾಡಿಕೊಳ್ಳುವುದು ಬಹಳ ಅಗತ್ಯ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT