ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ: 40ರ ನಂತರ ಸ್ತನದಲ್ಲಿ ನೋವು ಅಪಾಯವೇ?

Last Updated 22 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

1. ನನಗೆ 47 ವರ್ಷ. ಕಳೆದ ಒಂದು ವರ್ಷದಿಂದಒಂದೂವರೆಯಿಂದ ಮೂರು ತಿಂಗಳ ಅಂತರದಲ್ಲಿ ಒಮ್ಮೆ ಮುಟ್ಟಾಗುತ್ತಿದೆ ಮತ್ತು ಆಗಾಗ ಸ್ತನಗಳ ನೋವು ಬರುತ್ತಿದೆ. ಗರ್ಭಕೋಶ ಹಾಗೂ ಸ್ತನದ ಸ್ಕ್ಯಾನಿಂಗ್ ಮಾಡಿಸಿದ್ದೇನೆ. ರಿಪೋರ್ಟ್ ನಾರ್ಮಲ್ ಎಂದು ಬಂದಿದೆ. ದಯವಿಟ್ಟು ಸಲಹೆ ಕೊಡಿ.

ಹೆಸರು, ಊರು ತಿಳಿಸಿಲ್ಲ

ನಿಮಗೆ ಈಗ 47 ವರ್ಷವಾದ್ದರಿಂದ ನೀವು ಋತುಬಂಧದ ಆಸುಪಾಸಿನಲ್ಲಿದ್ದೀರಿ. ಈ ಸಮಯದಲ್ಲಿ ಅಂಡಾಶಯದಿಂದ ಉತ್ಪತ್ತಿಯಾಗುವ ಹೆಣ್ತನದ ಹಾರ್ಮೋನುಗಳಾದ ಇಸ್ಟ್ರೋಜನ್ ಮತ್ತು ಪ್ರೊಜೆಸ್ಟಿರಾನ್ ಹಾರ್ಮೋನುಗಳು ನಿಧಾನವಾಗಿ ಕ್ಷೀಣಿಸುತ್ತಾ ಬರುತ್ತದೆ ಮತ್ತು ಈ ಸಂದರ್ಭದಲ್ಲಿ ರಕ್ತದಲ್ಲಿ ಈ ಹಾರ್ಮೋನುಗಳ ಪ್ರಮಾಣ ಅನಿರೀಕ್ಷಿತವಾದ ಏರಿಳಿತಕ್ಕೆ ಒಳಗಾಗುವುದರಿಂದ ಇದು ಸ್ತನದ ಅಂಗಾಂಶದ ಮೇಲೆ ಪರಿಣಾಮ ಬೀರಿ ನೋವನ್ನುಂಟುಮಾಡುತ್ತದೆ. ಇಂತಹ ನೋವು ಮುಟ್ಟು ನಿಂತ ಮೇಲೆ ತಾನೇ ತಾನಾಗಿ ಕಡಿಮೆಯಾಗುತ್ತದೆ. ನಿಮ್ಮ ತೂಕ ಅತಿಯಾಗಿದ್ದರೂ ಮತ್ತು ಸ್ತನದ ಗಾತ್ರ ಹೆಚ್ಚಿದ್ದವರಲ್ಲಿ ಕೂಡ ಇಂತಹ ನೋವು ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸ್ತನದಲ್ಲಿ ಸಿಸ್ಟ್‌ಗಳು ಅಥವಾ ಸೌಮ್ಯಗಡ್ಡೆಗಳು ಇದ್ದಾಗಲೂ ಇಂತಹ ನೋವು ಕಾಣಿಸಿಕೊಳ್ಳಬಹುದು. ಋತುಬಂಧದ ಸಮಯದಲ್ಲಿ ಈ ಹೆಣ್ತನದ ಹಾರ್ಮೋನುಗಳ ಏರಿಳಿತದಿಂದಲೇ ನಿಮಗೆ ಮುಟ್ಟಿನ ಅವಧಿಯಲ್ಲಿ ವ್ಯತ್ಯಾಸವಾಗುತ್ತಿರಬಹುದು. ನಿಮ್ಮ ಸ್ಕ್ಯಾನಿಂಗ್ ವರದಿಗಳು ನಾರ್ಮಲ್ ಇರುವುದರಿಂದ ಚಿಂತೆ ಬೇಡ. ಯಾವುದಕ್ಕೂ ತಜ್ಞವೈದ್ಯರಿಗೆ ಸಲಹೆ ಚಿಕಿತ್ಸೆ ಅವಶ್ಯವಿದ್ದಲ್ಲಿ ಪಡೆಯಿರಿ. ತೂಕ ಹೆಚ್ಚಿದ್ದರೆ ಸಮತೂಕ ಹೊಂದಲು ಪ್ರಯತ್ನಿಸಿ. ಮುಟ್ಟು ನಿಲ್ಲುತ್ತಿದ್ದ ಹಾಗೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ.

2. ನನಗೆ 31 ವರ್ಷ. ತುಂಬಾ ವರ್ಷಗಳಿಂದ ಋತುಚಕ್ರದ ಒಂದು ವಾರದ ನಂತರ ಬಿಳಿಸೆರಗು ಅತಿಯಾಗಿ ನೀರಿನ ಹಾಗೆ 4 ದಿನ ಹೋಗುತ್ತದೆ. ಹಲವು ತಜ್ಞ ವೈದ್ಯರಿಗೆ ತೋರಿಸಿದ್ದೇನೆ. ಪ್ರಯೋಜನವೂ ಆಗಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.

ಹೆಸರು, ಊರು ತಿಳಿಸಿಲ್ಲ

ಬಿಳಿಮುಟ್ಟು ಹೋಗಲು ಸೋಂಕಿನ ಕಾರಣವಿರಬಹುದು, ಇಲ್ಲವೇ ಕೆಲವೊಮ್ಮೆ ಗರ್ಭಕೊರಳಿನಲ್ಲಿ ಗಾಯವೇನಾದರೂ ಆಗಿದ್ದಲ್ಲಿ ಕೂಡ ಬಿಳಿಮುಟ್ಟು ಹೋಗಬಹುದು. ಅಂತಹ ಸ್ರಾವವು ವಾಸನೆ ಹಾಗೂ ಬಣ್ಣರಹಿತವಾಗಿರುತ್ತದೆ. ಯಾವುದಕ್ಕೂ ನೀವು ತಜ್ಞವೈದ್ಯರ ಹತ್ತಿರ ಸ್ಪೆಕ್ಯೂಲಂ ಎನ್ನುವ ಉಪಕರಣದಿಂದ ಗರ್ಭಕೊರಳನ್ನು ಪರೀಕ್ಷಿಸಿಕೊಳ್ಳಿ. ಇದು ಹೊರರೋಗಿ ವಿಭಾಗದಲ್ಲಿ ಮಾಡಬಹುದಾದ ಸರಳವಾದ ಪರೀಕ್ಷೆ. ಇದರಿಂದ ನಿಮ್ಮ ಬಿಳಿಸೆರಗಿಗೆ ಕಾರಣ ಗೊತ್ತಾಗಬಹುದು. ಇದರಿಂದ ಪರಿಹಾರ ಸಿಗಬಹುದು.

3. ನನಗೆ 29 ವರ್ಷ. ನವೆಂಬರ್‌ನಲ್ಲಿ ಪ್ರೆಗ್ನೆಸಿ ಪಾಸಿಟಿವ್ ಆಗಿತ್ತು. ಆದರೆ ಬೇಡ ಅಂತ ಗರ್ಭಪಾತ ಮಾಡಿಸಿಕೊಂಡೆ. ಆದರೆ ಈಗ 2 ತಿಂಗಳಿನಿಂದ ಋತುಚಕ್ರದಲ್ಲಿ ಏರುಪೇರಾಗಿದೆ. ಇದನ್ನು ಸರಿಪಡಿಸಬಹುದೇ?

ಲಕ್ಷ್ಮೀ, ಬೆಂಗಳೂರು

ಗರ್ಭಪಾತದ ನಂತರ ಋತುಚಕ್ರದಲ್ಲಿ ಏರುಪೇರಾಗಬಹುದು. ಕೆಲವೊಮ್ಮೆ ಟ್ಯೂಬ್‌ಬ್ಲಾಕ್ ಕೂಡ ಆಗುತ್ತದೆ. ಹಾಗಾಗಿ ಅನಪೇಕ್ಷಿತ ಗರ್ಭಧಾರಣೆಯಾಗದ ಹಾಗೆ ನೀವು ಹಾಗೂ ನಿಮ್ಮಂತವರೆಲ್ಲಾ ಸದಾ ಜಾಗರೂಕರಾಗಿರಬೇಕು. ಸೂಕ್ತ ಸಂತಾನ ನಿಯಂತ್ರಣ ಕ್ರಮಗಳನ್ನು ಅನುಸರಿಸಿ, ಲೈಂಗಿಕ ಸುಖವನ್ನು ಅನುಭವಿಸಿ. ಯಾವಾಗ, ಎಷ್ಟು ಮಗುವನ್ನು ಪಡೆಯಬೇಕೆಂಬ ಪರಿಜ್ಞಾನ ಹೊಂದುವುದು ಪ್ರತಿ ದಂಪತಿಗೂ ಅಗತ್ಯವಿದೆ. ಋತುಚಕ್ರ ಕಾಲಕ್ರಮೇಣ ಸರಿ ಹೋಗಬಹುದು. ನಂತರವೂ ಸರಿಯಾಗಿಲ್ಲ ಎಂದರೆ ತಜ್ಞ ವೈದ್ಯರ ಸಲಹೆಯನ್ನು ಪಡೆಯಿರಿ.

4. ನನಗೆ ಮೊದಲನೆ ಮಗು ಹೆರಿಗೆಯಾದ ನಂತರ ಋತುಚಕ್ರದಲ್ಲಿ ಏರುಪೇರಾಗಿದೆ ಮತ್ತು ಮುಟ್ಟಿಗೆ 3 ದಿನ ಮೊದಲು ಸ್ವಲ್ಪ ಕೆಂಪು ಹಾಗೂ ಕಂದುಬಣ್ಣದ ಸ್ರಾವವಾಗಿ ನಾಲ್ಕನೇ ದಿನದ ನಂತರ 3 ದಿನ ಸರಿಯಾಗಿ ರಕ್ತಸ್ರಾವವಾಗುತ್ತದೆ. ಕಳೆದ ನಾಲ್ಕು ವರ್ಷದಿಂದ ಹೀಗೆ ಯಾಕಾಗುತ್ತದೆ? ನನಗೆ ತಿಂಗಳಿಗೊಮ್ಮೆಸಹಜ ಋತುಚಕ್ರ ಆಗುತ್ತಿದೆ.

ಹೆಸರು, ಊರು ತಿಳಿಸಿಲ್ಲ

ಕಳೆದ ನಾಲ್ಕು ವರ್ಷದಿಂದ ನಿಯಮಿತವಾಗಿ ನಿಮಗೆ ಈ ತರಹ ಋತುಸ್ರಾವ ಆಗುತ್ತಿದೆ ಎಂದರೆ ಈ ಬಗ್ಗೆ ನೀವು ಚಿಂತಿಸಬೇಡಿ. ಈ ತರಹದ ಸ್ರಾವ ರಕ್ತದಲ್ಲಿ ಹೆಣ್ತನದ ಹಾರ್ಮೋನುಗಳ ಮಟ್ಟ ಕುಸಿದು ರಕ್ತಸ್ರಾವವಾಗುವಾಗ (ವಿತ್‌ಡ್ರಾಲ್ ಬ್ಲೀಡಿಂಗ್) ಕೆಲವರಿಗೆ ಹೀಗಾಗಬಹುದು ಚಿಂತಿಸಬೇಡಿ.

5.1. ನನ್ನ ಮಗಳಿಗೆ ಸಮಾರು 9ನೇ ತರಗತಿಯಿಂದ ಪಿಸಿಒಡಿ ಸಮಸ್ಯೆ ಶುರುವಾಗಿತ್ತು. ಹಲವು ಗೈನಕಾಲಜಿಸ್ಟ್ ಬಳಿ ತೋರಿಸಿದ್ದೇನೆ ಹಾಗೂ ಆಯುರ್ವೇದ ಔಷಧಿಗಳನ್ನೂ ಸೇವಿಸಿದ್ದೇನೆ. ಆದರೆ ಅವಳ ತೂಕ ಹೆಚ್ಚಾಗುತ್ತಾಲೇ ಇದೆ. ಪಿಸಿಒಡಿ ಪ್ರಾಬ್ಲಮ್ ಗುಣಪಡಿಸಲು ಸಲಹೆ ನೀಡಿ.

ಹೆಸರು, ಊರು ಬೇಡ

5.2. ನಾನು 2 ವರ್ಷದಿಂದ ಮಗು ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಆಗುತ್ತಿಲ್ಲ. ನನಗೆ ನಿರಂತರವಾಗಿ ಋತುಚಕ್ರವಾಗುತ್ತಿಲ್ಲ. ಅಲ್ಲದೇ ಪಿಸಿಒಡಿ ಸಮಸ್ಯೆಯೂ ಇದೆ. ಅದಕ್ಕೆ ಪರಿಹಾರ ತಿಳಿಸಿ.

ಹೆಸರು, ಊರು ಬೇಡ

ಪಿಸಿಒಡಿ ಬಗ್ಗೆ ಸಾಕಷ್ಟು ಬಾರಿ ಹಿಂದಿನ ಅಂಕಣಗಳಲ್ಲಿ ಸಲಹೆಯನ್ನು ಕೊಟ್ಟಿರುತ್ತೇನೆ. ಉತ್ತಮ ಜೀವನಶೈಲಿಯನ್ನು ಅನುಸರಿಸಿ ತಜ್ಞವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ತೆಗೆದುಕೊಂಡು ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಿ. ತೂಕ ಹೆಚ್ಚಿದ್ದರೆ ಕೇವಲ ಶೇ 10ರಷ್ಟು ತೂಕ ಕಡಿಮೆ ಮಾಡಿಕೊಂಡರೂ ನಾವು ಕೊಡುವ ಔಷಧದ ಪರಿಣಾಮ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಸತತ ಪ್ರಯತ್ನದಿಂದ ನೀವು ಆಹಾರ ನಿಯಂತ್ರಣ ಜೊತೆಗೆ ನಿಯಮಿತ ವ್ಯಾಯಾಮ, ರಾತ್ರಿ 6 ರಿಂದ 8 ತಾಸು ನಿದ್ರೆ, ಅಳವಡಿಸಿಕೊಂಡು ಜೀವನಶೈಲಿ ಸುಧಾರಿಸಿಕೊಂಡರೆ ಮಾತ್ರ ಪಿಸಿಓಡಿ ಜಯಿಸಲು ಸಾಧ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT