ಗುರುವಾರ , ನವೆಂಬರ್ 26, 2020
20 °C

ಮುಖವಿರುವುದು ಗುರುತಿಗೆ ಮಾತ್ರ

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

*23 ವರ್ಷದ ವಿದ್ಯಾರ್ಥಿ. ಒಂದು ವರ್ಷದ ಹಿಂದೆ ಆಗಿದ್ದ ಗಜಕರ್ಣದಿಂದಾಗಿರುವ ಮುಖದ ಮೇಲಿನ ಕಲೆಗಳು ಹೋಗುತ್ತಿಲ್ಲ. ಅಂತರ್ಜಾಲದಲ್ಲಿ ಇದರ ಬಗ್ಗೆ ಏನೇನೋ ಓದಿ ಭಯವಾಯಿತು. ಇದರಿಂದಾಗಿ ಮಾನಸಿಕವಾಗಿ ಕುಗ್ಗಿ ಓದಿನಲ್ಲಿ ಏಕಾಗ್ರತೆ ಸಾಧ್ಯವಾಗುತ್ತಿಲ್ಲ. ಗುರಿಸಾಧನೆಗೆ ಮನಸ್ಸನ್ನು ಗಟ್ಟಿಮಾಡಿಕೊಳ್ಳುವುದು ಹೇಗೆ ತಿಳಿಸಿ.

-ಹೆಸರು, ಊರು ತಿಳಿಸಿಲ್ಲ.

ಅಂಜರ್ಜಾಲದಲ್ಲಿ ಸರಿಯಾದ ಮಾಹಿತಿಗಳ ಜೊತೆಗೆ ಸಾಕಷ್ಟು ವ್ಯಾಪಾರೀ ತಾಣಗಳೂ ಇರುತ್ತವೆ. ಅವುಗಳು ತಮ್ಮ ವಸ್ತುಗಳನ್ನು ಮಾರಾಟಮಾಡಲು ಮಾಹಿತಿಗಳನ್ನು ಉತ್ಪ್ರೇಕ್ಷಿಸಿರುವ ಸಾಧ್ಯತೆಗಳಿರುತ್ತವೆ. ಅಂತರ್ಜಾಲವನ್ನು ಬಳಸುವಾಗ ಎಚ್ಚರಿಕೆಯಿರಬೇಕು. ಮುಖದ ಕಲೆಗಳ ಬಗೆಗೆ ನಿಮ್ಮ ಕುಟುಂಬವೈದ್ಯರ ಸಲಹೆಯನ್ನು ಪಡೆಯಿರಿ.

ಹೀಗೆ ಯೋಚಿಸಿ. ಪ್ರತಿದಿನ ಭೇಟಿಯಾಗುವ ಮನೆಯವರ, ಸ್ನೇಹಿತರ ಮುಖದಲ್ಲಿರುವ ಎಲ್ಲಾ ಚುಕ್ಕಿ, ಗೀರುಗಳನ್ನು ನೀವು ಅವರು ಎದುರಿಗೆ ಇರುವಾಗಲೆಲ್ಲಾ ಗಮನಿಸುತ್ತಲೇ ಇರುವುದಿಲ್ಲ ಅಲ್ಲವೇ? ಹಾಗೆಯೇ ನಿಮ್ಮ ಮುಖದ ಕಲೆಗಳನ್ನೂ ಎಲ್ಲರೂ ಯಾವಾಗಲೂ ಗಮನಿಸುತ್ತಿರುವುದಿಲ್ಲ. ಆದರೆ ನಿಮ್ಮ ತಲೆಯಲ್ಲಿ ಮಾತ್ರ ಆದೇ ತುಂಬಿಕೊಂಡಿದೆ. ಹಾಗಾಗಿ ನಿಮ್ಮ ಯೋಚನೆಯನ್ನೇ ಬೇರೆಯವರದ್ದು ಅಂದುಕೊಂಡು ಕೊರಗುತ್ತಿದ್ದೀರಿ. ನಿಮ್ಮ ಮುಖ ನಿಮಗೇ ನಾಚಿಕೆ ಹುಟ್ಟಿಸಿದಾಗ ಹತಾಶರಾಗುತ್ತೀರಿ. ನಿಮಗೆ ಸ್ನೇಹ– ಪ್ರೇಮ ಸಿಗುವುದು ನಡೆನುಡಿಗಳಿಂದಲ್ಲವೇ? ಮಖವಿರುವುದು ಗುರುತನ್ನು ಹಿಡಿಯಲು ಮಾತ್ರ. ಅದನ್ನು ಪೂರ್ಣ ಮನಸ್ಸಿನಿಂದ ಒಪ್ಪಿಕೊಳ್ಳಿ. ವಿದ್ಯೆ, ಉದ್ಯೋಗ, ಸ್ನೇಹಿತರು, ಹವ್ಯಾಸಗಳು ಮುಂತಾದವುಗಳ ಮೂಲಕ ಒಳಗಿನಿಂದ ಹೇಗೆ ಬೆಳೆಯುವುದು ಮತ್ತು ಗಟ್ಟಿಯಾಗುವುದು ಎಂದು ಯೋಚಿಸಿ. ನಿಮ್ಮ ಕುರಿತು ನೀವೇ ಖುಷಿಪಡುವಂತಾದಾಗ ಮುಖದ ಕಲೆಗಳು ನಿಮ್ಮ ಹೆಮ್ಮೆಯ ಗುರುತುಗಳಾಗುತ್ತವೆ.   

*ವಯಸ್ಸು 25. ಚಿಕ್ಕವನಿದ್ದಾಗಿನಿಂದ ಅಪ್ಪನ ದುಶ್ಚಟಗಳು ಮತ್ತು ಅಮ್ಮನ ಜಗಳವನ್ನು ನೋಡುತ್ತಾ ಬೆಳೆದಿರುವ ನನ್ನದು ಒರಟು ವ್ಯಕ್ತಿತ್ವ ಎನಿಸುತ್ತದೆ. ಅಮ್ಮ ಸಹನಶೀಲಗಳು. ನನ್ನ ಮೇಲೆ ಪ್ರೀತಿಯಿದ್ದರೂ ಎಲ್ಲವನ್ನೂ ಒರಟಾಗಿ ಹೇಳುತ್ತಾಳೆ. ಸ್ನೇಹಿತರ ಭಾವನೆಗೆ ಸ್ಪಂದಿಸಲಾಗುತ್ತಿಲ್ಲ. ಕರುಣೆ ಕಡಿಮೆ, ಸಿಟ್ಟು ಜಾಸ್ತಿ. ಸ್ಯಾಡಿಸ್ಟ್‌ ಅನ್ನಿಸುತ್ತದೆ. ವ್ಯಕ್ತಿತ್ವ ಸುಧಾರಣೆಗೆ ಪರಿಹಾರ ತಿಳಿಸಿ.

-ಹೆಸರು, ಊರು ತಿಳಿಸಿಲ್ಲ.

ಸ್ಪಷ್ಟವಾಗಿ ಯೋಚಿಸುವ ಮತ್ತು ಪ್ರಾಮಾಣಿಕವಾಗಿ ಬರೆದಿರುವ ನಿಮ್ಮ ಗುಣಗಳು ಬಹಳ ಇಷ್ಟವಾಗುತ್ತವೆ. ಅಮೂಲ್ಯವಾದ ಇವುಗಳನ್ನು ಹಾಗೆಯೇ ಉಳಿಸಿಕೊಳ್ಳಿ.

ನಿಮ್ಮ ಬಾಲ್ಯದ ಅನುಭವ ಬಹಳ ಕಹಿಯಾಗಿತ್ತು ಮತ್ತು ಅವು ಈಗಲೂ ನಿಮ್ಮನ್ನು ಕಾಡುತ್ತಿವೆ ಎನ್ನುವುದು ನಿಜ. ಆದರೆ ಸ್ಯಾಡಿಸ್ಟ್‌ ಎಂದು ನಿಮ್ಮನ್ನು ನೀವೇ ಕರೆದುಕೊಳ್ಳುವುದರ ಮೂಲಕ ನಿಮ್ಮನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದೀರಲ್ಲವೇ? ನಿಮ್ಮ ಬಗೆಗೆ ಸಹಾನೂಭೂತಿಯನ್ನು ಬೆಳೆಸಿಕೊಳ್ಳಿ. ಅಪ್ಪ– ಅಮ್ಮನೊಡನೆ ನಿಮ್ಮ ಬೇಸರ, ದುಗುಡ, ಕಹಿಭಾವನೆಗಳನ್ನು ಹಂಚಿಕೊಳ್ಳಿ. ಅದಕ್ಕಾಗಿ ಅವರನ್ನು ದೂಷಿಸದೆ ನಿಮ್ಮ ಅಂತರಂಗದ ನೋವುಗಳ ಕುರಿತು ಮಾತ್ರ ಮಾತನಾಡಿ. ನಾನು ಹೇಗೆ ಇದ್ದರೆ ಸಮಾಧಾನವಾಗುತ್ತದೆ ಎಂದು ಯೋಚಿಸಿ, ಅವುಗಳಲ್ಲಿ ಒಂದೆರೆಡು ಅಂಶಗಳಿಂದ ಬದಲಾವಣೆಯ ಪ್ರಯೋಗವನ್ನು ಪ್ರಾರಂಭಿಸಿ. ಆರಂಭದಲ್ಲಿ ಪದೇಪದೇ ಹಳೆಯ ದಾರಿಯಲ್ಲಿಯೇ ಹೋಗುವುದು ಸಹಜ. ಹತಾಶರಾಗದೆ ಪ್ರಯತ್ನಿಸಿ. ಕಷ್ಟವೆನ್ನಿಸಿದರೆ ತಜ್ಞ ಮನೋಚಿಕಿತ್ಸಕರನ್ನು ಭೇಟಿಯಾಗಿ.

*ವಯಸ್ಸು 27, ಬಹಳ ಹಿಂಜರಿಕೆ, ಕೀಳರಿಮೆಯ ಸ್ವಭಾವ. ಏನಾದರೂ ತಪ್ಪು ಮಾಡುತ್ತೇನೋ ಎನ್ನುವ ಭಯ. ಮನೆಯಲ್ಲೂ ನನ್ನ ಮಾತುಗಳಿಗೆ ಬೆಲೆಯಿಲ್ಲವೆನಿಸುತ್ತದೆ. ಓದಿನ ಕಡೆ ಆಸಕ್ತಿ ಕಡಿಮೆಯಾಗುತ್ತಿದೆ. ಪರಿಹಾರ ತಿಳಿಸಿ.

-ಹೊನ್ನಪ್ಪ, ಊರಿನ ಹೆಸರಿಲ್ಲ.

ಹಿಂಜರಿಕೆ ಕೀಳರಿಮೆಯಿಂದಾಗಿ ನಿಮಗೆ ಏನನ್ನೂ ಮಾಡಲಾಗುತ್ತಿಲ್ಲ ಎನ್ನುವ ನೋವಿರಬೇಕಲ್ಲವೇ? ಕೀಳರಿಮೆ, ಹಿಂಜರಿಕೆ ಎಲ್ಲರಲ್ಲಿಯೂ ಒಂದಲ್ಲಾ ಒಂದು ರೀತಿಯಲ್ಲಿ ಇರಲು ಸಾಧ್ಯ. ಆದರೆ ಅವುಗಳನ್ನೇ ಮುಂದಿಟ್ಟುಕೊಂಡು ನೀವು ಪೂರ್ಣಮನಸ್ಸಿನ ಪ್ರಯತ್ನಗಳನ್ನೇ ಮಾಡುತ್ತಿಲ್ಲ ಎನ್ನಿಸುತ್ತಿದೆ. ಹಿಂಜರಿಕೆಯಿಲ್ಲದಿದ್ದರೆ ನೀವು ಏನೇನನ್ನು ಮಾಡುತ್ತಿದ್ದಿರಿ ಎನ್ನುವ ಪಟ್ಟಿ ತಯಾರಿಸಿಕೊಳ್ಳಿ. ಅವುಗಳಲ್ಲಿ ಒಂದೆರೆಡು ಅಂಶಗಳಿಂದ ಬದಲಾವಣೆಯ ಪ್ರಯತ್ನವನ್ನು ಪ್ರಾರಂಭಿಸಿ. ಆರಂಭದಲ್ಲಿ ಸೋಲುವುದು ಸಹಜ. ಹಲವಾರು ಪ್ರಯೋಗಗಳನ್ನು ಮಾಡುತ್ತಾ ಹೋದಂತೆ ಕೀಳರಿಮೆ ತನ್ನಿಂದ ತಾನೇ ಹಿಂದೆ ಸರಿಯುತ್ತದೆ. ನಿಷ್ಕ್ರಿಯತೆ ಹತಾಶೆಯನ್ನು ಹೆಚ್ಚಿಸುತ್ತದೆ ಎನ್ನುವುದು ನೆನಪಿರಲಿ.

*9ರ ತರುಣ. ಮದುವೆಯಾಗಿಲ್ಲ. ಲೈಂಗಿಕತೆಯಲ್ಲಿ ತುಂಬಾ ಆಸಕ್ತಿಯಿದೆ. ಬಲಭಾಗದ ವೃಷಣ ಬಾತುಕೊಂಡಿದೆ. ಇದರಿಂದ ಮುಂದಿನ ಲೈಂಗಿಕ ಜೀವನಕ್ಕೆ ಸಮಸ್ಯೆಯಾಗಬಹುದೇ ತಿಳಿಸಿ.

-ಹೆಸರು, ಊರು ತಿಳಿಸಿಲ್ಲ.

ನಿಮ್ಮ ಲೈಂಗಿಕತೆಯ ಆಸಕ್ತಿ ಸಹಜವಾದದ್ದು. ಇದಕ್ಕಾಗಿ ಜೀವನಸಂಗಾತಿಯನ್ನು ಹುಡುಕಿಕೊಳ್ಳಿ. ವೃಷಣದಲ್ಲಿ ನೋವು ಅಥವಾ ಇನ್ನಾವುದೇ ತೊಂದರೆಯಿಲ್ಲವೆಂದಾದರೆ ನೀವು ಆರೋಗ್ಯವಾಗಿದ್ದೀರಿ. ಬಲಭಾಗದ ವೃಷಣ ಸ್ವಲ್ಪ ದೊಡ್ಡದಾಗಿರುವುದು ಮತ್ತು ಎಡಭಾಗದ ವೃಷಣ ಹೆಚ್ಚು ಜೋತುಕೊಂಡಿರುವುದು ಸಾಮಾನ್ಯ. ಇದನ್ನೇ ನೀವು ಬಾವು ಎಂದುಕೊಂಡಿರುವ ಸಾಧ್ಯತೆಗಳಿವೆ. ನಿಮ್ಮ ಕುಟುಂಬ ವೈದ್ಯರಲ್ಲಿ ಪರೀಕ್ಷೆ ಮಾಡಿಕೊಂಡು ಖಾತ್ರಿಪಡಿಸಿಕೊಳ್ಳಿ. ಈ ಅಂಕಣ ಮಾನಸಿಕ ಸಮಸ್ಯೆಗಳಿಗೆ ಸೀಮಿತವಾಗಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು