ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ: ಯೋಚಿಸಿ ತೀರ್ಮಾನಿಸಿ– ನಮ್ಮ ನಿರ್ಧಾರಗಳು ಸ್ವತಂತ್ರ ನಿರ್ಧಾರಗಳೇ?

ರಮ್ಯಾ ಶ್ರೀಹರಿ ಲೇಖನ
Published 10 ಅಕ್ಟೋಬರ್ 2023, 0:48 IST
Last Updated 10 ಅಕ್ಟೋಬರ್ 2023, 0:48 IST
ಅಕ್ಷರ ಗಾತ್ರ

ನಮ್ಮ ಜೀವನದಲ್ಲಿ ನಾವು ಕೈಗೊಂಡ ಪ್ರಮುಖ ನಿರ್ಧಾರಗಳು ಯಾವುವು, ಅದರಲ್ಲಿ ಯಾವುದಾದರೂ ಐದು ನಿರ್ಧಾರಗಳನ್ನು ಗುರುತಿಸಿ 'ಅವನ್ನು ಕೈಗೊಳ್ಳಲು ಇದ್ದ ಬಲವಾದ ಕಾರಣಗಳು, ಆ ನಿರ್ಧಾರದ ಫಲಿತಾಂಶ ಹೇಗಿತ್ತು, ಅದರ ಕುರಿತು ಈಗ ಏನು ಅನಿಸುತ್ತಿದೆ’ ಎನ್ನುವ ಒಂದು ಪಟ್ಟಿಯನ್ನು ತಯಾರಿಸಿ ಅವಲೋಕಿಸಿದರೆ ನಮ್ಮ ನಿರ್ಧಾರವನ್ನು ತೆಗೆದುಕೊಳ್ಳುವ, ಅದರ ಪರಿಣಾಮಗಳನ್ನು ನಿರ್ವಹಿಸುವ, ನಮಗೇ ವಿಶಿಷ್ಟವಾದ ಒಂದು ಶೈಲಿ ಅಥವಾ ವಿನ್ಯಾಸವಿರುತ್ತದೆ ಎನ್ನುವ ಅರಿವಾಗುತ್ತದೆ.

ನಿರ್ಧಾರಗಳನ್ನು ತೆಗೆದುಕೊಳ್ಳುವ ನಮ್ಮ ಈ ವಿಶಿಷ್ಟ ಶೈಲಿಯನ್ನು ವಿಶ್ಲೇಷಿಸಿದರೆ ನಮ್ಮ ಬಗ್ಗೆಯೇ ಅನೇಕ ವಿಷಯಗಳು ಅನಾವರಣಗೊಳ್ಳುತ್ತದೆ. ಅವುಗಳಲ್ಲಿ ಮುಖ್ಯವಾಗಿ - ನಾವು ಯಾವುದೇ ನಿರ್ಧಾರದಿಂದ ಉಂಟಾಗುವ ಫಲಿತಾಂಶದ ಜವಾಬ್ದಾರಿಯನ್ನು ಹೇಗೆ ಹೊರುತ್ತೇವೆ, ಸಮಸ್ಯೆಗಳಿಗೆ ಯಾವ ರೀತಿಯ ಪರಿಹಾರವನ್ನು ಕಂಡುಕೊಳ್ಳಲು ಬಯಸುತ್ತೇವೆ, ಭಾವನೆಗಳು ಮತ್ತು ವೈಚಾರಿಕ ಚಿಂತನೆಯ ನಡುವಿನ ಸಮತೋಲನವನ್ನು ಹೇಗೆ ಕಂಡುಕೊಳ್ಳುತ್ತೇವೆ ಎಂಬುದೆಲ್ಲಾ ಗೊತ್ತಾಗುತ್ತಹೋಗುತ್ತದೆ.

ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಒಂದು ಗಹನವಾದ ತಾತ್ವಿಕ ಸಮಸ್ಯೆಯೂ ಅಡಕವಾಗಿದೆ. ನಮ್ಮೆಲ್ಲಾ ನಿರ್ಧಾರಗಳೂ ನಿಜವಾಗಿಯೂ ನಮ್ಮ ‘ಸ್ವತಂತ್ರ’ ನಿರ್ಧಾರಗಳೇ ಹೌದೇ? ನಮ್ಮ ಸ್ವ-ಇಚ್ಛೆಗಳೆಲ್ಲಾ ನಮ್ಮ ನಿಯಂತ್ರಣದಲ್ಲಿರದ ಅನೇಕ ಅಂಶಗಳ ಪ್ರಭಾವಕ್ಕೆ ನಮಗೆ ಗೊತ್ತಿಲ್ಲದಂತೆಯೇ ಒಳಗಾಗಿರಬಹುದು ಅಲ್ಲವೇ?

ಚೆನ್ನಾಗಿ ಯೋಚಿಸಿ ನಿರ್ಧಾರ ಮಾಡಬೇಕೆನ್ನುವುದೇನೋ ಸರಿ, ಆದರೆ ನಮ್ಮ ಯೋಚಿಸುವ ರೀತಿಯೇ ಪೂರ್ವಗ್ರಹಕ್ಕೆ, ಕೌಟುಂಬಿಕ, ಸಾಮಾಜಿಕ, ಸಾಂಸ್ಕೃತಿಕ ಪರಿಸರದ ಪ್ರಬಲ ಪ್ರಭಾವಗಳಿಗೆ ಒಳಗಾಗಿರುವಾಗ ನಾವೆಷ್ಟೇ ‘ಚೆನ್ನಾಗಿ’ ಯೋಚಿಸಿದರೂ ಹೊಸದೇನೂ ಹೊಳೆಯುವುದಿಲ್ಲ. ಬದಲಾಗಿ, ನಾವೀಗ ಯಾವ ರೀತಿಯಲ್ಲಿ ಯೋಚಿಸುವುದಕ್ಕೆ ಒಗ್ಗಿಹೋಗಿ, ಯಾವುದು ಅಭ್ಯಾಸವಾಗಿಬಿಟ್ಟಿರುತ್ತದೆಯೂ ಹಾಗೆಯೇ ಯೋಚಿಸುತ್ತ ಆ ಯೋಚನೆಯ ಫಲವಾಗಿ ತೆಗೆದುಕೊಂಡ ಹಳೆಯ ನಿರ್ಧಾರಗಳ ಹೊಸ ರೂಪವೊಂದನ್ನೇ ‘ಸ್ವತಂತ್ರ’ ನಿರ್ಧಾರ ಎಂದು ತಿಳಿದುಕೊಂಡುಬಿಡುತ್ತೇವೆ.

ಉದಾಹರಣೆಗೆ, ಉನ್ನತ ವಿದ್ಯಾಭ್ಯಾಸ, ವೃತ್ತಿ ಇವುಗಳನ್ನು ಆಯ್ದುಕೊಳ್ಳುವಾಗ ನಮ್ಮ ಆಸಕ್ತಿ, ಸಾಮರ್ಥ್ಯ, ಆ ಕ್ಷೇತ್ರದಲ್ಲಿ ಮುಂದುವರಿಯುವ ಸಾಧ್ಯತೆಗಳು ಮುಂತಾದವುಗಳ ವಸ್ತುನಿಷ್ಠ ವಿಶ್ಲೇಷಣೆಯನ್ನು ಮಾಡಿ ಸಾಧ್ಯವಾದಷ್ಟು ಸ್ಪಷ್ಟತೆಯನ್ನು ಪಡೆದುಕೊಂಡು ಮುಂದುವರಿಯಬೇಕೆನ್ನುವುದು ಅಪೇಕ್ಷಿತ. ಆದರೆ ಇಂತಹ ಆಯ್ಕೆಗಳನ್ನು ಮಾಡುವಾಗ ನಮ್ಮ ಕೌಟುಂಬಿಕ ಹಿನ್ನೆಲೆ, ಸಮವಯಸ್ಕರ, ಸುತ್ತಲಿನವರ ಅವ್ಯಕ್ತ ಒತ್ತಡ, ಸಮಾಜ ನಮ್ಮನ್ನು ಹೇಗೆ ನೋಡುತ್ತದೆ ಎನ್ನುವ ಗ್ರಹಿಕೆ, ಭವಿಷ್ಯದ ಬಗೆಗೆ, ಜೀವನದ ಬಗೆಗೆ ನಮಗಿರುವ ಕಲ್ಪನೆಗಳು ಎಲ್ಲವೂ ಪ್ರಭಾವ ಬೀರುತ್ತವೆ. ಹಾಗಾಗಿಯೇ ಒಂದು ಪರಿಸರದಲ್ಲಿ ಸಹಜವಾಗಿ ಕಾಣಬಹುದಾದ ಆಯ್ಕೆಗಳು / ನಿರ್ಧಾರಗಳು ಇನ್ನೊಂದು ಪರಿಸರದಲ್ಲಿ ಅಸಹಜವಾಗಿ, ಅಸಂಬದ್ಧವಾಗಿ ಕಾಣುತ್ತವೆ.
ಅಂದರೆ ನಮ್ಮೆಲ್ಲಾ ನಿರ್ಧಾರಗಳೂ ಯಾವುದೋ ಒಂದು ರೀತಿಯಲ್ಲಿ ‘ಪೂರ್ವಯೋಜಿತ’.

ಹಾಗಾಗಿ ನಾವು ಮಾಡಬಹುದಾದದ್ದು ಏನೂ ಇಲ್ಲ; ನಮ್ಮ ನಿರ್ಧಾರಗಳಿಗೆ ನಾವು ಜವಾಬ್ದಾರರಲ್ಲ; ನಾವು ಕೈಗೊಂಡ ತೀರ್ಮಾನಗಳ, ಅದಕ್ಕನುಗುಣವಾಗಿ ಮಾಡಿದ ಕೆಲಸಗಳ ನೈತಿಕ ಹೊಣೆ ಹೊರಬೇಕಾಗಿಲ್ಲ ಎನ್ನುವುದು ತಾತ್ಪರ್ಯವಲ್ಲ. ಬದಲಾಗಿ ನಮ್ಮ ನಿರ್ಧಾರಗಳು ಎಷ್ಟು ‘ಸ್ವತಂತ್ರವಾದದ್ದು’ ಎಷ್ಟು ‘ಅನ್ಯ ಪ್ರಭಾವಗಳ ಹಿಡಿತಕ್ಕೆ ಒಳಗಾದದ್ದು’ ಎನ್ನುವ ಪ್ರಶ್ನೆಯನ್ನು ಹಿನ್ನೆಲೆಯಲ್ಲಿರಿಸಿಕೊಂಡು ಯೋಚಿಸುವುದನ್ನು ಅಭ್ಯಾಸಮಾಡಿಕೊಂಡಾಗ ನಮ್ಮ ನಿರ್ಧಾರಗಳು ಹೆಚ್ಚು ಪ್ರಜ್ಞಾಪೂರ್ವಕವಾಗುತ್ತ, ಪ್ರೌಢವಾಗುತ್ತ, ಪಕ್ವಗೊಳ್ಳುತ್ತ ಹೋಗುತ್ತವೆ.

ನಾವು ಯೋಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದುಕೊಂಡಿರುತ್ತೇವಷ್ಟೇ. ಆದರೆ ವಾಸ್ತವವಾಗಿ ನಾವು ಭಾವನೆಗಳ, ಕಲ್ಪನೆ, ಕನಸುಗಳ ಹಿಡಿತಕ್ಕೊಳಗಾಗಿ ಕೆಲವು ತೀರ್ಮಾನಗಳನ್ನು ಮೊದಲು ಕೈಗೊಂಡುಬಿಟ್ಟಿರುತ್ತೇವೆ. ನಂತರ ಬುದ್ಧಿಯನ್ನು ಉಪಯೋಗಿಸಿ ನಮ್ಮ ತೀರ್ಮಾನಗಳಿಗೆ ಸಮಜಾಯಿಷಿಯನ್ನು, ವಿವರಣೆಗಳನ್ನು ಹುಡುಕಿಕೊಳ್ಳುವುದನ್ನೇ ‘ಯೋಚನೆ ಮಾಡುವುದು’ ಎಂದು ಕರೆದುಕೊಳ್ಳುತ್ತೇವಷ್ಟೇ! ಹಾಗಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದಾಗ ‘ತಾರ್ಕಿಕವಾಗಿ ವಿಶ್ಲೇಷಿಸಿ ನಿರ್ಧಾರ ತೆಗೆದುಕೊಳ್ಳುವುದು’ ಎಂದರ್ಥವಲ್ಲ; ಬದಲಾಗಿ ಆಲೋಚನೆಗೆ, ನಿರ್ಧಾರಕ್ಕೆ ಪ್ರಚೋದಿಸುವ ಭಾವನೆಗಳನ್ನು ಆಳವಾದ ವಿಮರ್ಶೆಗೆ ಒಳಪಡಿಸುವುದು ಎಂದರ್ಥ.

ಇಲ್ಲಿಯವರೆಗೆ ಹೇಗೆ ನಾವು ‘ಸ್ವತಂತ್ರ’ ಎಂದು ತಿಳಿದುಕೊಂಡ ನಿರ್ಧಾರಗಳು ನಿಜವಾಗಿ ಸ್ವತಂತ್ರವೇ ಅಲ್ಲ; ಭಾವನೆಗಳ, ಗ್ರಹಿಕೆಗಳ ಪ್ರಭಾವಕ್ಕೆ ಒಳಗಾದದ್ದು ಎಂದು ನೋಡಿದೆವು. ಈಗ ಇದರ ಇನ್ನೊಂದು ಮಗ್ಗುಲನ್ನು ನೋಡೋಣ. ನಾವು ನಮ್ಮ ಕೆಲವು ಮಾತುಕತೆ, ವರ್ತನೆಗಳನ್ನು ನಮ್ಮ ಸ್ವತಂತ್ರ ನಿರ್ಧಾರಗಳೆಂದೇ ಒಪ್ಪಲು ತಯಾರಿರುವುದಿಲ್ಲ. ‘ನಾನಿರುವುದೇ ಹಾಗೆ, ಹಾಗಲ್ಲದೆ ಬೇರೆ ರೀತಿಯಲ್ಲಿ ನನಗೆ ಆಲೋಚಿಸುವುದೇ ಸಾಧ್ಯವಿಲ್ಲ’ ಎಂದುಕೊಂಡಿರುತ್ತೇವೆ; ಆದರೆ ಅಂತಹ ಮಾತುಕತೆ, ವರ್ತನೆಗಳೂ ಕೂಡ ನಾವೆಂದೋ ಅಪ್ರಜ್ಞಾಪೂರ್ವಕವಾಗಿ ಮಾಡಿಕೊಂಡ ನಿರ್ಧಾರಗಳೇ ಆಗಿರುತ್ತವೆ. ಉದಾಹರಣೆಗೆ, ‘ಯಾರೂ ನಂಬಿಕೆಗೆ ಅರ್ಹರಲ್ಲ’, ‘ಅಳುವುದು ಅಪ್ರಯೋಜಕ’ – ಹೀಗೆ ಹಲವಾರು ಇರುತ್ತವೆ.

ನಾವು ಮಾಡಿಕೊಂಡ ಇಂತಹ  – ಮೇಲ್ನೋಟಕ್ಕೆ ‘ನಿರ್ಧಾರ’ ಎಂದು ಅನಿಸದ – ತೀರ್ಮಾನಗಳನ್ನು ಅನುಸರಿಸಿಯೇ ಬದುಕನ್ನು ನಡೆಸುತ್ತಿರುತ್ತೇವೆ. ಒಮ್ಮೆ ಇಂತಹ ತೀರ್ಮಾನಗಳನ್ನು ಗುರುತಿಸಿ ಪ್ರಶ್ನಿಸುವುದನ್ನು ಅಭ್ಯಾಸಮಾಡಿಕೊಂಡರೆ ಅವುಗಳ ಆಳದಲ್ಲಿ ಅಡಗಿರುವ ಗ್ರಹಿಕೆಗಳನ್ನು ಬದಲಾಯಿಸಿಕೊಳ್ಳುವುದೂ ಸಾಧ್ಯವಿದೆ, ಆಗ ಮಾತ್ರ ನಮ್ಮ ನಿರ್ಧಾರ ನಮ್ಮ ಸ್ವತಂತ್ರ ಪ್ರಜ್ಞಾಪೂರ್ವಕ ಆಯ್ಕೆಯಾಗಿರುತ್ತದೆ. ನಮ್ಮ ಆಲೋಚನೆಗಳೂ, ಭಾವನೆಗಳೂ ಹೀಗೆ ಮಥನಕ್ಕೆ ಒಳಗಾದಾಗ ಮಾತ್ರ ‘ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು’ ಎನ್ನುವುದಕ್ಕೆ ಅರ್ಥವಿರುತ್ತದೆ, ಇಲ್ಲವಾದಲ್ಲಿ ಅನ್ಯಪ್ರಭಾವಕ್ಕೆ ಒಳಗಾಗಿ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ತೋರಿಸುವುದನ್ನೇ ‘ನಿರ್ಧಾರ’ ಎಂದುಕೊಳ್ಳುತ್ತೇವೆ. ‘ನಿರ್ಧಾರ’ ಎಂದರೆ ಅದು ನಮ್ಮ ಸ್ವಾತಂತ್ರ್ಯದ ಅಭಿವ್ಯಕ್ತಿ, ನಾವು ಪ್ರಪಂಚಕ್ಕೆ ಸ್ಪಂದಿಸುವ, ಸಾವಧಾನವಾಗಿ, ಪ್ರಜ್ಞಾಪೂರ್ವಕವಾಗಿ (mindful) ಬದುಕುವ ರೀತಿ ಎನ್ನುವ ಕಲ್ಪನೆಯೇ ಉಂಟಾಗುವುದಿಲ್ಲ. ‘ನಿರ್ಧಾರ ಮಾಡುವುದು’ ಎಂದರೆ ಆಯ್ಕೆ ಮಾಡುವುದು, ಅನೇಕ ಆಯ್ಕೆಗಳನ್ನು ಮಾಡುವ ಸಾಧ್ಯತೆಗೆ ತೆರೆದುಕೊಳ್ಳುವುದು ಎಂದರ್ಥ. ಆಯ್ಕೆಗಳೇ ಇಲ್ಲದಂತಹ ಭಾವನಾತ್ಮಕ, ಬೌದ್ಧಿಕ ಬಂಧನಕ್ಕೆ ಒಳಗಾಗಿರುವ ಸ್ಥಿತಿಯ ಬಗ್ಗೆ ಅರಿವೂ ಇಲ್ಲದಿದ್ದಾಗ ಏನು ಒದಗುತ್ತದೆಯೋ ಅದನ್ನೇ ಆಶ್ರಯಿಸಿ ಬದುಕುವುದನ್ನು ‘ಸ್ವತಂತ್ರ ನಿರ್ಧಾರ’ ಎಂದು ಕರೆಯುವುದು ಸಾಧ್ಯವೇ?

ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ನಾವು ಎರಡು ರೀತಿಯ ಅತಿರೇಕಗಳನ್ನು ನೋಡುತ್ತೇವೆ. ಒಂದು, ನಿರ್ಧಾರಗಳಿಂದ ಉಂಟಾಗುವ ಪರಿಣಾಮದ ಜವಾಬ್ದಾರಿ ಹೊರಲಾರದೆ, ಯಾವ ನಿರ್ಧಾರದಿಂದ ಏನು ತಪ್ಪಾಗುವುದೋ ಎನ್ನುವ ಹೆದರಿಕೆಯಿಂದ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳದೆ ತಟಸ್ಥರಾಗಿರುವುದು; ಬೇರೆಯವರೇ ತನ್ನ ಪರಿಸ್ಥಿತಿಗೆ ಕಾರಣ ಎಂದು ದೂಷಿಸುವುದು, ಜವಾಬ್ದಾರಿಯಿಂದ ತಪ್ಪಿಸಿಕೊಂಡು ಓಡಿ ಹೋಗುವುದು. ಯಾವುದೇ ನಿರ್ಧಾರವನ್ನು ಮಾಡಿದರೂ ಅದರ ಫಲಿತಾಂಶ ಭಾಗಶಃ ಅನಿಶ್ಚಿತತೆಯಿಂದ ಕೂಡಿರುತ್ತದೆ, ತೀರ್ಮಾನವೇ ತೆಗೆದುಕೊಳ್ಳದಿರುವುದೂ ಒಂದು ತೀರ್ಮಾನವೇ ಹೌದು ಎನ್ನುವುದು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಚಾರ.

ನಿರ್ಧಾರಗಳನ್ನು ಕೈಗೊಳ್ಳುವ ದಿಕ್ಕಿನಲ್ಲಿ ಎದುರಾಗುವ ಇನ್ನೊಂದು ಅತಿರೇಕವೆಂದರೆ, ಎಲ್ಲ ಸಮಸ್ಯೆಗಳನ್ನು ಇಲ್ಲಿ, ಈ ಕ್ಷಣವೇ ಪರಿಹಾರ ಮಾಡಿಕೊಂಡುಬಿಡಬೇಕು ಎನ್ನುವಂತೆ ಆಡುತ್ತಾ, ಮೊದಲು ತೋಚಿದ ಸುಲಭ (ಆದರೆ ನಂತರ ಬಲು ದುಬಾರಿಯಾಗುವ) ತೀರ್ಮಾನವನ್ನು ತೆಗೆದುಕೊಳ್ಳುವ ಆತುರದ ಸ್ವಭಾವ. ಭಾವವೇಶದಿಂದ ತಕ್ಷಣದ ಪ್ರತಿಕ್ರಿಯಾತ್ಮಕ ನಿರ್ಧಾರ ತೆಗೆದುಕೊಳ್ಳುವವರು - ಬದುಕು, ಭಾವನೆ, ಸಂಬಂಧ, ಏನನ್ನಾದರೂ ಕಟ್ಟುವುದು, ಬೆಳೆಸುವುದು, ಸಾಧಿಸುವುದು ಎಲ್ಲವೂ ಒಂದು ಪ್ರಕ್ರಿಯೆ. ಕಾಲಕ್ಕೆ ತನ್ನದೇ ಗತಿ, ರೀತಿ ನೀತಿಯಿದೆ, ಎನ್ನುವುದನ್ನು ಮನನ ಮಾಡಿಕೊಂಡಾಗ ಅನೇಕ ಆಯ್ಕೆಗಳಿರುವುದನ್ನು, ಆಯ್ದುಕೊಳ್ಳುವ ಸ್ವಾತಂತ್ರವಿರುವುದನ್ನು ಕಂಡುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT