ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆರಿಕೋಸ್ ವೇನ್: ರಕ್ತನಾಳಗಳಲ್ಲಿ ಟ್ರಾಫಿಕ್ ಸಮಸ್ಯೆ

Last Updated 18 ಏಪ್ರಿಲ್ 2023, 4:26 IST
ಅಕ್ಷರ ಗಾತ್ರ

ಮನುಷ್ಯನ ವೃತ್ತಿ ಅವನ ಕಾಯಿಲೆಗಳನ್ನೂ ನಿರ್ಧರಿಸುತ್ತದೆ. ವೈದ್ಯರು ರೋಗಿಯ ಆದಾಯವನ್ನು ಅಳೆಯುವ ಸಲುವಾಗಿ ರೋಗಿಗಳ ವೃತ್ತಿಯನ್ನು ವಿಚಾರಿಸುತ್ತಾರೆಂಬ ಆರೋಪವಿದೆ. ಆದರೆ ಸತ್ಯಸಂಗತಿಯೇನೆಂದರೆ ಕೆಲವೊಂದು ವೃತ್ತಿಯಲ್ಲಿ ಕೆಲವು ಕಾಯಿಲೆಗಳು ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತವೆ. ಆಳಕ್ಕೆ ಇಳಿದು ವಿಶ್ಲೇಷಣೆ ಮಾಡಿದಾಗ ಮಾತ್ರ ಮನುಷ್ಯ ಮಾಡುವ ವೃತ್ತಿಗೂ ಮತ್ತು ಅತನಿಗೆ ಬರುವ ಕಾಯಿಲೆಗೂ ಇರುವ ವೈಜ್ಞಾನಿಕ ಕಾರಣಗಳು ಸ್ಪಷ್ಟವಾಗುತ್ತವೆ. ಟ್ರಾಫಿಕ್ ಪೊಲೀಸರು,‌ ಬಸ್ ಕಂಡಕ್ಟರ್‌ಗಳು ಮತ್ತು ಹೊಟೇಲ್ ಸರ್ವರ್‌ಗಳು ತಮ್ಮ ದಿನದ ಹೆಚ್ಚಿನ ಸಮಯವನ್ನು ನಿಂತುಕೊಂಡೆ ಕಳೆಯುತ್ತಾರೆ. ಇಂಥವರಲ್ಲಿ ಸಂಜೆಯ ವೇಳೆಗೆ ಪಾದದ ಬಳಿ ಊತ ಮತ್ತು ನೋವು ಕಾಣಿಸಿಕೊಳ್ಳುತ್ತವೆ. ಇವರ ಕಾಲಿನ ಭಾಗದಲ್ಲಿನ ರಕ್ತನಾಳಗಳು ಸುರುಳಿಯಾಕಾರದಲ್ಲಿ ಊದಿಕೊಂಡಿರುವುದೂ ಕಂಡುಬರುತ್ತದೆ. ಕಾಯಿಲೆಯು ಇನ್ನೂ ತೀವ್ರವಾದಲ್ಲಿ ಕಾಲಿನ ಚರ್ಮದಲ್ಲಿ ಕಪ್ಪುಕಲೆಗಳು ಮತ್ತು ದೀರ್ಘಕಾಲದಿಂದ ಒಣಗದಿರುವ ಗಾಯಗಳೂ ಕಂಡುಬರಬಹುದು. ಊದಿಕೊಂಡಿರುವ ಕಾಲಿನ ರಕ್ತನಾಳಗಳ ಅಸಮರ್ಪಕ ಕಾರ್ಯದಿಂದಾಗಿ ಕಾಲಿನಲ್ಲಿ ಊತ ಮತ್ತು ವಾಸಿಯಾಗದಿರುವ ಹುಣ್ಣುಗಳಿರುವ ರೋಗವನ್ನು ‘ವೆರಿಕೋಸ್ ವೇನ್’ (Varicose Veins) ಎಂದು ಕರೆಯಲಾಗುತ್ತದೆ. ಈ ವೆರಿಕೋಸ್ ವೇನ್ ಇಂದು ನಿನ್ನೆ ಪತ್ತೆಯಾದ ಹೊಸ ಕಾಯಿಲೆಯಲ್ಲ. ಈ ಕಾಯಿಲೆ ಮತ್ತು ಅದರ ಚಿಕಿತ್ಸೆಗೆ ಬಹಳ ಪ್ರಾಚೀನವಾದ ಇತಿಹಾಸವಿದೆ. ಈ ಕಾಯಿಲೆಯು ಹಿಂದಿನ ಕಾಲದಲ್ಲಿ ರಾಜರ ಆಸ್ಥಾನದಲ್ಲಿ ನಿಂತುಕೊಂಡೆ ಕೆಲಸ ಮಾಡುತ್ತಿದ್ದ ಕಾವಲುಗಾರರಲ್ಲಿ ಮತ್ತು ಸೈನಿಕರಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು.

ಮನುಷ್ಯನ ದೇಹದಲ್ಲಿ ರಕ್ತಸಂಚಾರದ ನಿಯಮಗಳು ಅರ್ಥವಾದರಷ್ಟೆ ವೆರಿಕೋಸ್ ವೇನ್ ರೋಗದ ಕಾರಣಗಳು ಅರ್ಥವಾಗಬಹುದು. ಹೃದಯದಿಂದ ವಿವಿಧ ಅಂಗಾಂಗಗಳಿಗೆ ರಕ್ತವನ್ನು ತಲುಪಿಸಲು ದೇಹದಲ್ಲಿ ‘ಒನ್ ವೇ ಟ್ರಾಫಿಕ್’ ವ್ಯವಸ್ಥೆಯಿದೆ. ಹೃದಯದಿಂದ ರಕ್ತವು ದೇಹದ ಮೂಲೆ ಮೂಲೆಗೂ ಅಪಧಮನಿಗಳ ( Artery) ಮೂಲಕ ತಲುಪಿ ವಿವಿಧ ಅಂಗಾಂಗಗಳಿಗೆ ಆಮ್ಲಜನಕದ ಸರಬರಾಜು ಮಾಡುತ್ತವೆ. ವಿವಿಧ ಅಂಗಾಂಗಗಳಿಂದ ರಕ್ತವು ಹೃದಯಕ್ಕೆ ಅಭಿಧಮನಿಗಳ (Vein) ಮೂಲ ಮರಳುತ್ತದೆ. ರಕ್ತಸಂಚಾರದ ಈ ಏಕಮುಖ ಟ್ರಾಫಿಕ್ಕಿನ ನಿಯಮದ ಉಲ್ಲಂಘನೆಯಾಗದಿದ್ದಲ್ಲಿ ಮನುಷ್ಯರಿಗೆ ಯಾವುದೇ ಸಮಸ್ಯೆಗಳು ಕಂಡು ಬರುವುದಿಲ್ಲ. ಅಭಿಧಮನಿಗಳಲ್ಲಿ ರಕ್ತವು ಹೃದಯದ ಕಡೆಗೆ ಮಾತ್ರ ಏಕಮುಖವಾಗಿ ಚಲಿಸುವಂತೆ ಮಾಡಲು ವಾಲ್ವ್ (valve) ವ್ಯವಸ್ಥೆಯಿದೆ. ಈ ವಾಲ್ವುಗಳು ರಕ್ತವು ಹಿಮ್ಮುಖವಾಗಿ ಚಲಿಸದಂತೆ ತಡೆಹಿಡಿಯುವ ಕೆಲಸವನ್ನು ಮಾಡುತ್ತವೆ.

ಹೆಚ್ಚಿನ ಸಮಯ ನಿಂತುಕೊಂಡೆ ಕೆಲಸ ಮಾಡುವ ಜನರ ಕಾಲುಗಳಲ್ಲಿರುವ ಅಭಿಧಮನಿಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಕಾಲಿನಲ್ಲಿ ಎರಡು ಮಾದರಿಯ ಅಭಿಧಮನಿಗಳು ಪ್ರಮುಖವಾಗಿ ಕಂಡುಬರುತ್ತವೆ. ಮಾಂಸಖಂಡಗಳ ಒಳಗೆ ಆಳದಲ್ಲಿರುವ ಅಭಿಧಮನಿಗಳು ಮತ್ತು ಚರ್ಮದ ಬಳಿಯಿರುವ ಮೇಲ್ಪದರದ ಅಭಿಧಮನಿಗಳು ರಕ್ತವನ್ನು ಹೃದಯದತ್ತ ಸಾಗಿಸುವ ಕೆಲಸವನ್ನು ಮಾಡುತ್ತವೆ. ಕಾಲಿನ ಚರ್ಮದಿಂದ ಸ್ವಲ್ಪ ಒಳಗಿರುವ ಈ ಮೇಲ್ಪದರದ ಅಭಿಧಮನಿಗಳು ಊದಿಕೊಂಡು ಅವುಗಳಲ್ಲಿರುವ ವಾಲ್ವುಗಳು ನಿಷ್ಕ್ರಿಯಗೊಳ್ಳುವುದು ವೆರಿಕೋಸ್ ವೇನ್ ರೋಗಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ರೋಗಿಗಳ ಕಾಲುಗಳಲ್ಲಿರುವ ಅಭಿಧಮನಿಗಳಲ್ಲಿ ರಕ್ತವು ಹೃದಯದ ವಿರುದ್ಧ ದಿಕ್ಕಿನಲ್ಲಿ ಚಲಿಸಲು ತೊಡಗುತ್ತದೆ. ಇಂತಹ ರೋಗಿಗಳ ಕಾಲುಗಳ ಅಭಿಧಮನಿಗಳು ಶೇಖರಣೆಯ ಕಾರಣದಿಂದಾಗಿ ನಿರಂತರವಾಗಿ ಊದಿಕೊಂಡಿರುತ್ತದೆ.

ರೋಗಿಯು ರಾತ್ರಿ ಮಲಗಿರುವ ವೇಳೆಯಲ್ಲಿ ಕಾಲುಗಳ ಅಭಿಧಮನಿಯಲ್ಲಿನ ರಕ್ತವು ಹೃದಯದತ್ತ ಸಮರ್ಪಕವಾಗಿ ಹರಿದ ಕಾರಣದಿಂದಾಗಿ ಮುಂಜಾನೆ ಏಳುವ ಸಮಯದಲ್ಲಿ ರೋಗಿಯ ಕಾಲುಗಳ ಅಭಿಧಮನಿಗಳು ಊದಿಕೊಂಡಿರುವುದಿಲ್ಲ. ಆದರೆ ದಿನವಿಡೀ ನಿಂತುಕೊಂಡು ಕೆಲಸ ಮಾಡುತ್ತಿದ್ದಂತೆ ಕಾಲಿನ ಅಭಿಧಮನಿಗಳಲ್ಲಿ ರಕ್ತವು ಹೃದಯದತ್ತ ಸಂಚರಿಸದೆ ಶೇಖರಣೆಗೊಂಡು ಕಾಲಿನ ರಕ್ತನಾಳಗಳು ಊದಿಕೊಳ್ಳುತ್ತವೆ; ಸಂಜೆಯ ವೇಳೆ ಕಾಲಿನಲ್ಲಿ ನೋವು ಕೂಡ ಕಾಣಿಸಿಕೊಳ್ಳುತ್ತದೆ. ರಕ್ತದ ಅಸಮರ್ಪಕ ಸಂಚಾರದಿಂದಾಗಿ ಕಾಲಿನ ಚರ್ಮವು ಸಾಯುವುದರ ಜೊತೆಗೆ ಡಯಾಬಿಟಿಸ್ ರೋಗಿಗಳಲ್ಲಿ ಕಂಡುಬರುವಂತೆ ಈ ವೆರಿಕೋಸ್ ವೇನ್ ರೋಗಿಗಳ ಕಾಲಿನಲ್ಲಿಯೂ ವಾಸಿಯಾಗದ ಹುಣ್ಣುಗಳು ಕಂಡುಬರಬಹುದು. ಊದಿಕೊಂಡಿರುವ ಈ ನಿಷ್ಕ್ರಿಯ ಅಭಿಧಮನಿಗಳನ್ನು ಆಂಗ್ಲಭಾಷೆಯಲ್ಲಿ ‘ವೆರಿಕೋಸ್ ವೇನ್’ ಎಂದು ಕರೆಯುತ್ತಾರೆ. ಈ ನಿಷ್ಕ್ರಿಯ ಅಭಿಧಮನಿಗಳು ಕೆಲಸಕ್ಕೆ ಬಾರದ ಅಭಿಧಮನಿಗಳಾಗಿದ್ದು ಅವುಗಳಲ್ಲಿ ರಕ್ತ ಶೇಖರಣೆಯಾಗಿ ಕಾಲಿನ ಆರೋಗ್ಯಕ್ಕೆ ತೊಂದರೆಯುಂಟಾಗುತ್ತದೆ. ವೆರಿಕೋಸ್ ವೇನ್ ಸಮಸ್ಯೆಯಿರುವ ಕಾಲಿಗೆ ಮೃದುವಾಗಿ ‘ಕ್ರೇಪ್ ಬ್ಯಾಂಡೇಜ’ನ್ನು ಕಟ್ಟುವುದರಿಂದ ಮತ್ತು ರೋಗಿಯು ಹೆಚ್ಚು ಸಮಯ ನಿಂತಿರದಂತೆ ಎಚ್ಚರ ವಹಿಸುವುರಿಂದ ರೋಗಲಕ್ಷಣಗಳು ಹೆಚ್ಚಾಗದಂತೆ ನೋಡಿಕೊಳ್ಳಬಹುದು. ಆದರೆ ಈ ಕಾಯಿಲೆಯನ್ನು ಶಾಶ್ವತವಾಗಿ ಬಗೆಹರಿಸಬೇಕೆಂದರೆ ಈ ನಿಷ್ಕ್ರಿಯ ಅಭಿಧಮನಿಗಳನ್ನು ಕಾಲಿನಿಂದ ಶಸ್ತ್ರಚಿಕಿತ್ಸೆಯ ಮೂಲಕ ಹೊರಗೆ ತೆಗೆಯುವುದು ಅಥವಾ ಬೇರೆ ತಂತ್ರಜ್ಞಾನದ ಮೂಲಕ ಈ ಅಭಿಧಮನಿಗಳನ್ನು ಮುಚ್ದಿಸಬೇಕಾಗುತ್ತದೆ.

ನಿಷ್ಕ್ರಿಯ ಅಭಿಧಮನಿಗಳನ್ನು ಕಾಲಿನಿಂದ ಕಿತ್ತು ತೆಗೆಯುವ ಕ್ರಮವನ್ನು ವೈದ್ಯಕೀಯ ವಿಜ್ಞಾನ ಕ್ಷೇತ್ರ ಕಳೆದ ಶತಮಾನದಲ್ಲಿ ಪಾಲಿಸಿಕೊಂಡು ಬಂದಿತ್ತು. ಈ ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಯು ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಬೇಕಾಗುತ್ತಿತ್ತು; ಶಸ್ತ್ರಚಿಕಿತ್ಸೆಯ ನೋವನ್ನು ಅನುಭವಿಸಬೇಕಾಗುತ್ತಿತ್ತು. ಇದೇ ನಿಷ್ಕ್ರಿಯ ಅಭಿಧಮನಿಗಳನ್ನು ಯಾವುದೇ ಗಾಯವಿಲ್ಲದ ಈಗ ಲೇಸರ್ ಮೂಲಕವೂ ಮುಚ್ಚುವ ತಜ್ಞವೈದ್ಯರಿದ್ದಾರೆ. ವರ್ಷಾನುಗಟ್ಟಲೆ ನಿಂತ ಕಾರಣದಿಂದ ಬಂದಿರಬಹುದಾದ ಈ ಕಾಯಿಲೆಯನ್ನು ರೋಗಿಯು ಆಸ್ಪತ್ರೆಯಲ್ಲಿ ಒಂದು ದಿನವೂ ನಿಲ್ಲದೆ ಲೇಸರ್ ಮೂಲಕ ಕೆಲವೇ ಗಂಟೆಗಳಲ್ಲಿ ಸರಿಪಡಿಸುವಷ್ಟರ ಮಟ್ಟಿಗೆ ವೈದ್ಯಕೀಯ ವಿಜ್ಞಾನವು ಪ್ರಗತಿಯನ್ನು ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT