ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಕ್ರಿಯೆ: ನೋವಾಗುತ್ತದೆ ಡಾಕ್ಟ್ರೆ..

Last Updated 29 ಅಕ್ಟೋಬರ್ 2022, 10:40 IST
ಅಕ್ಷರ ಗಾತ್ರ

ಹೊಸದಾಗಿ ಮದುವೆಯಾಗಿರುವ ಅಥವಾ ಮೊದಲ ಬಾರಿಗೆ ಲೈಂಗಿಕ ಕ್ರಿಯೆಗೆ ಪ್ರಯತ್ನ ಮಾಡುವ ಯಾವುದೇ ಯುವತಿಯು ಆ ಸಂದರ್ಭದಲ್ಲಿ ನೋವು ಅಥವಾ ಕಷ್ಟವನ್ನು ಅನುಭವಿಸುವುದು ಸಹಜ. ಅವರು ಉದ್ರೇಕಗೊಳ್ಳದೇ ಇರಬಹುದು ಅಥವಾ ಯೋನಿಯು ಸಣ್ಣದಾಗಿರಬಹುದು. ಆಗ ಸಂಭೋಗ ಕ್ರಿಯೆ ವೇಳೆ ಸಣ್ಣ ಪ್ರಮಾಣದಿಂದ ಗಂಭೀರ ಸ್ವರೂಪದವರೆಗೆ ನೋವು ಕಾಣಿಸಿಕೊಳ್ಳುತ್ತದೆ.

‘ಮೊದಲ ಸಂಭೋಗದ ವೇಳೆ ಯೋನಿನಾಳದ ಪೊರೆಯು ಯೋನಿಯೊಳಗೆ ಸೇರುತ್ತಿದ್ದಂತೆ ನೋವು ಕಾಣಿಸಿಕೊಳ್ಳಲಾರಂಭಿಸುತ್ತದೆ. ಸಂಭೋಗದ ವೇಳೆ ಪೊರೆಯು ಹಿಗ್ಗುವುದರಿಂದ ಅಥವಾ ಹರಿಯುವುದರಿಂದ ನೋವು ಕೆಲವು ದಿನಗಳವರೆಗೆ ಇರುತ್ತದೆ. ಕೆಲವೊಮ್ಮೆ ದಂಪತಿಗೆ ಸಂಭೋಗ ಪ್ರಕ್ರಿಯೆ ನಡೆಸುವುದು ಹೇಗೆ ಎಂಬ ಜ್ಞಾನ ಇರುವುದಿಲ್ಲ ಮತ್ತು ಯಾವುದೇ ಸರಿಯಾದ ಕ್ರಮವನ್ನು ಅನುಸರಿಸದೇ ಸಂಭೋಗ ಕ್ರಿಯೆಯಲ್ಲಿ ತೊಡಗಬಹುದು. ಇದು ನೋವಿಗೆ ಕಾರಣವಾಗುತ್ತದೆ. ಮಹಿಳೆಯು ಸಂಭೋಗ ಕ್ರಿಯೆ ವೇಳೆ ಸಮರ್ಪಕವಾಗಿ ಉದ್ರೇಕಗೊಂಡಿರಬೇಕು ಮತ್ತು ಯೋನಿಯಲ್ಲಿ ಸ್ರವಿಸುವಿಕೆ ಆಗಬೇಕು. ಈ ಕ್ರಮ ಇದ್ದರೆ ಸಂಭೋಗ ಕ್ರಿಯೆಯು ಯಾವುದೇ ನೋವು ಅಥವಾ ಕಷ್ಟವಿಲ್ಲದೇ ನಡೆಯುತ್ತದೆ’ ಎನ್ನುತ್ತಾರೆ ಬೆಂಗಳೂರಿನ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಲ್ಯಾಪರೋಸ್ಕೋಪಿಕ್ ಸರ್ಜನ್ ಮತ್ತು ಫರ್ಟಿಲಿಟಿ ತಜ್ಞೆ ಡಾ. ವಿದ್ಯಾ ವಿ. ಭಟ್

ವೆಬ್‌ಸೈಟ್‌ಗಳು, ಪುಸ್ತಕಗಳು ಮತ್ತು ಮಾಧ್ಯಮಗಳಲ್ಲಿ ಸರಿಯಾದ ಸಂಭೋಗ ಕ್ರಮಗಳ ಬಗ್ಗೆ ಮಾಹಿತಿಗಳು ಇದ್ದರೂ ಶೇ 20– 30 ರಷ್ಟು ದಂಪತಿ ಅದನ್ನು ನಿರ್ಲಕ್ಷ್ಯ ಮಾಡುತ್ತಾರೆ. ನಮ್ಮ ದೇಶದಲ್ಲಿ ಲೈಂಗಿಕತೆ ಎಂಬುದನ್ನು ನಿಷಿದ್ಧ ಎಂದು ಭಾವಿಸಿದ್ದಾರೆ. ಹಲವಾರು ಮಹಿಳೆಯರು ಮತ್ತು ಪುರುಷರು ಲೈಂಗಿಕತೆ ಬಗ್ಗೆ ಮಾತನಾಡುವುದು ಮತ್ತು ಲೈಂಗಿಕತೆ ಬಗ್ಗೆ ಸೂಕ್ತವಾದ ಜ್ಞಾನ ಹೊಂದಬೇಕೆಂದು ಮಾತನಾಡುವುದು ಅಸಹ್ಯಕರ ಎಂದು ಭಾವಿಸಿದ್ದಾರೆ. ಇದು ಲೈಂಗಿಕ ಜೀವನದಲ್ಲಿ ಸಾಕಷ್ಟು ಗೊಂದಲಗಳು ಮತ್ತು ಹತಾಶೆಗೆ ಕಾರಣವಾಗುತ್ತದೆ. ಸಂಪ್ರದಾಯಸ್ಥ ವಾತಾವರಣದಿಂದ ಬೆಳೆದು ಬಂದಿರುವ ಮಹಿಳೆ ಪತಿಯೊಂದಿಗೆ ಸಂಭೋಗ ಕ್ರಿಯೆ ನಡೆಸುವಾಗ ಭಯ ಮತ್ತು ಆತಂಕಕ್ಕೆ ಒಳಗಾಗುತ್ತಾಳೆ. ಇದು ಯೋನಿ ತುಡಿತ ಅಥವಾ ನೋವಿನಂತಹ ಅಂಶಗಳಿಗೆ ಕಾರಣವಾಗುತ್ತದೆ. ಭಯವಾದಾಗ ಸ್ನಾಯು ಸಡಿಲವಾಗದೇ ಇರುವುದರಿಂದ ನೋವಾಗುತ್ತದೆ.

ಯೋನಿಯಲ್ಲಿನ ಫಂಗಸ್‌ ಸೋಂಕು ಸಹ ಸಂಭೋಗ ಕ್ರಿಯೆ ವೇಳೆ ನೋವಿಗೆ ಕಾರಣವಾಗುತ್ತದೆ. ಮೂತ್ರನಾಳದಲ್ಲಿ ಸೋಂಕು (ಯುಟಿಐ) ಇದ್ದರೂ ಸಹ ನೋವಿಗೆ ಕಾರಣವಾಗುತ್ತದೆ. ಯೋನಿ ಮತ್ತು ಯುಟಿಐ ಸೋಂಕು ಇದ್ದರೆ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ. ಸಂಭೋಗ ಕ್ರಿಯೆ ವೇಳೆ ಮಹಿಳೆಯರಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುವುದು ಅತ್ಯಂತ ವಿರಳ. ಇದಕ್ಕೆ ಪ್ರಮುಖ ಕಾರಣವೆಂದರೆ ದೀರ್ಘಕಾಲದ ಸೋಂಕು. ಜನನಾಂಗದಲ್ಲಿನ ಕ್ಷಯ ಮತ್ತು ಆಳವಾಗಿ ಎಂಡೋಮೆಟ್ರಿಯೋಸಿಸ್‌ನ ಒಳನುಸುಳುವಿಕೆಯಂತಹ ಅಂಶಗಳು.

ಪರಿಹಾರಗಳು

‘ಸಂಭೋಗ ಕ್ರಿಯೆ ವೇಳೆ ಮೇಲಿನ ಸಮಸ್ಯೆಗಳು ಕಂಡು ಬಂದರೆ ದಂಪತಿ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಬಹುತೇಕ ಸಂದರ್ಭಗಳಲ್ಲಿ ಸಕಾಲಕ್ಕೆ ಚಿಕಿತ್ಸೆಯನ್ನು ಪಡೆದರೆ ದಂಪತಿಯು ಸಾಮಾನ್ಯವಾದ ಲೈಂಗಿಕ ಜೀವನವನ್ನು ಸಾಗಿಸಬಹುದು ಮತ್ತು ಸಂತಸದ ವೈವಾಹಿಕ ಜೀವನವನ್ನು ಕಳೆಯಬಹುದು’ ಎನ್ನುತ್ತಾರೆ ಡಾ. ವಿದ್ಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT