ಗುರುವಾರ , ಅಕ್ಟೋಬರ್ 6, 2022
24 °C
ವಿಶ್ವ ಸ್ತನ್ಯಪಾನ ಜಾಗೃತಿ ಸಪ್ತಾಹ

ಎದೆಹಾಲು ವೃದ್ಧಿಗೆ ಇಲ್ಲಿವೆ ಸರಳ ಮಾರ್ಗಗಳು

ಡಾ.ಪ್ರೀತಿ ಗೌಡ Updated:

ಅಕ್ಷರ ಗಾತ್ರ : | |

Prajavani

ಎದೆಹಾಲಿನ ಮಹತ್ವ ಹಾಗೂ ಜಾಗೃತಿಗಾಗಿ ಪ್ರತಿ ವರ್ಷ ಆಗಸ್ಟ್‌ ಮೊದಲ ವಾರವನ್ನು ಸ್ತನ್ಯಪಾನ ಜಾಗೃತಿ ಸಪ್ತಾಹವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎದೆಹಾಲಿನ ಕೊರತೆಗೆ ಕಾರಣ ಮತ್ತು ಉತ್ಪಾದನೆ ಹೆಚ್ಚಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಕುರಿತ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸಮಾಲೋಚಕಿ ಡಾ.ಪ್ರೀತಿ ಗೌಡ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.

***

ಹಸುಗೂಸುಗಳಿಗೆ ತಾಯಿಯ ಎದೆ ಹಾಲು ಅತ್ಯವಶ್ಯಕ. ಅದಕ್ಕೆ ಎದೆ ಹಾಲನ್ನು ಅಮೃತಕ್ಕೆ ಸಮ ಎನ್ನುತ್ತಾರೆ. ಮಗು ಜನಿಸಿದಾಗಿನಿಂದ ಕನಿಷ್ಠ ವರ್ಷದವರೆಗೆ ಮಕ್ಕಳಿಗೆ ತಾಯಂದಿರು ಎದೆಹಾಲು ಉಣಿಸಬೇಕು. ಮಗುವಿನ ಬೆಳವಣಿಗೆಗೆ ನಿಜವಾದ ಅಡಿಪಾಯವೇ ‘ಸ್ತನ್ಯಪಾನ’. 

ಆದರೆ, ಇತ್ತೀಚೆಗೆ ಹಲವು ಕಾರಣಗಳಿಂದಾಗಿ ಅನೇಕ ಮಹಿಳೆಯರಿಗೆ (ಬಾಣಂತಿಯರಿಗೆ) ಎದೆಹಾಲಿನ ಕೊರತೆ ಕಾಡುತ್ತಿದೆ. ಕೆಲವರಿಗೆ ಹಾಲು ಉತ್ಪತ್ತಿಯಾಗುವುದಿಲ್ಲ. ಇನ್ನೂ ಕೆಲವರಿಗೆ ಉತ್ಪತ್ತಿಯಾಗುವ ಹಾಲು ಮಗುವಿಗೆ ಸಾಕಾಗುವುದಿಲ್ಲ. ಇದರಿಂದ ಬಾಟಲಿ ಹಾಲಿನ ಮೊರೆ ಹೋಗುತ್ತಾರೆ. ಇದಕ್ಕೆ ಕಾರಣವೇನು ? ಎದೆಹಾಲು ಉತ್ಪತ್ತಿ ಹೆಚ್ಚಿಸಲು ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಸಲಹೆಗಳು ಇಲ್ಲಿವೆ. 

ಎದೆಹಾಲು ಕೊರತೆಗೆ ಕಾರಣ
ವೈಜ್ಞಾನಿಕ ಸಂಶೋಧನೆಯ ಪ್ರಕಾರ ಬಾಣಂತಿಯರಲ್ಲಿ ಶೇ 90ರಷ್ಟು ಮಗುವಿಗೆ ಅಗತ್ಯವಿರುವಷ್ಟು ಎದೆಹಾಲು ಸಹಜವಾಗಿಯೇ ಉತ್ಪಾದನೆಯಾಗುತ್ತದೆ. ಆದರೆ, ಒತ್ತಡದ ಬದುಕಿನಿಂದಾಗಿ ತಾಯಂದಿರು ಮಕ್ಕಳಿಗೆ ಸಕಾಲ ದಲ್ಲಿ ಎದೆಹಾಲು ಉಣಿಸಲು ಸಾಧ್ಯವಾಗದ ಕಾರಣ, ಹಾಲು ಎದೆಯಲ್ಲೇ ಇಂಗುತ್ತದೆ. ಇದರಿಂದ ‘ಹಾಲು ಉತ್ಪತ್ತಿಯಾಗುತ್ತಿಲ್ಲ‘ ಎಂಬ ನಿರ್ಣಯಕ್ಕೆ ಬರುವ ಅಮ್ಮಂದಿರು ಮಕ್ಕಳಿಗೆ ಬಾಟಲಿ ಹಾಲು  ಕುಡಿಸಲು ಆರಂಭಿಸುತ್ತಾರೆ. ಇದು ಸರಿಯಾದ ಕ್ರಮವಲ್ಲ. 

ಎದೆಹಾಲು ಉತ್ಪತ್ತಿ ಬಗ್ಗೆ ಸರಿಯಾದ ಮಾಹಿತಿ ಕೊರತೆಯೂ ತಾಯಂದಿರು ಇಂಥ ಗೊಂದಲಕ್ಕೆ ಸಿಲುಕಲು ಕಾರಣ. ಇಂಥ ವೇಳೆಯಲ್ಲಿ ಎದೆಹಾಲು ಉತ್ಪತ್ತಿ ಹೆಚ್ಚಿಸಲು ಇರುವ ಸರಳ ಮಾರ್ಗಗಳ ಬಗ್ಗೆ ವೈದ್ಯ ರಿಂದ ತಿಳಿದುಕೊಳ್ಳಬೇಕು. ಅಂಥ ಮಾರ್ಗಗಳ ಕುರಿತು ಇಲ್ಲಿ ವಿವರಿಸಲಾಗಿದೆ. 

ಪ್ರೊಟಿನ್‌ಯುಕ್ತ ಆಹಾರ
ಪ್ರಸವದ ನಂತರ ತಾಯಿ ನಿಶ್ಯಕ್ತಳಾಗುತ್ತಾಳೆ. ಈ ವೇಳೆ ಅವರಿಗೆ ಪ್ರೋಟಿನ್‌ಯುಕ್ತ ಆಹಾರ ಬೇಕು. ಹಣ್ಣು, ತರಕಾರಿ, ಸೊಪ್ಪು, ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್‌ ಅಂಶವಿರುವ ಪೌಷ್ಟಿಕ ಆಹಾರ  ಸೇವಿಸಬೇಕು. ಮೆಂತ್ಯ, ಬೆಳ್ಳುಳ್ಳಿ, ಅಜವಾನ (ಕೇರಮ್ ಬೀಜಗಳು), ಸಬ್ಸಿಗೆ ಸೊಪ್ಪು, ನುಗ್ಗೆ ಸೊಪ್ಪು, ಜೀರಿಗೆ, ಓಟ್ಸ್‌ ಇವು ಹಾಲು ಉತ್ಪಾದನೆ ಯನ್ನು ಹೆಚ್ಚಿಸುವ ಕೆಲವು ಆಹಾರ ಪದಾರ್ಥ ಗಳು. ಇಂಥ ಆಹಾರ ಸೇವನೆಯಿಂದ ತಾಯಿಗೂ ಶಕ್ತಿ ಬರುತ್ತದೆ, ಜೊತೆಗೆ ಎದೆಹಾಲು ಹೆಚ್ಚು ಉತ್ಪತ್ತಿಯಾಗಲು ಸಹಕಾರಿಯಾಗುತ್ತದೆ. ಇದರ ಜೊತಗೆ, ದಿನದಲ್ಲಿ ಪ್ರತಿ ಎರಡು ಗಂಟೆಗಳಿಗೊಮ್ಮೆ ಮಗುವಿಗೆ ಎದೆಹಾಲು ಉಣಿಸುತ್ತಿರಬೇಕು.  

ಹೆಚ್ಚು ನೀರು ಸೇವಿಸಿ
ಎದೆಹಾಲಿನಲ್ಲಿ ಶೇ 87ರಷ್ಟು ನೀರು ಇರುವುದರಿಂದ, ಹಾಲುಣಿಸುವ ತಾಯಂದಿರು ದಿನಕ್ಕೆ ಕನಿಷ್ಠ ಎರಡರಿಂದ ಮೂರು ಲೀಟರ್ ನೀರು ಕುಡಿಯುತ್ತಿರಬೇಕು. ಇದು ಎದೆಹಾಲು ಉತ್ಪತ್ತಿಗೆ ಸಹಕಾರಿಯಾಗಲಿದೆ.  ಮಗುವಿಗೆ ಹಾಲುಣಿಸುವ ಮೊದಲು ಹಾಗೂ ನಂತರ ನೀರು ಕುಡಿಯಲು ಸೂಕ್ತ ಸಮಯ.

ಮಲಗುವ ಮುನ್ನ ಹಾಲುಣಿಸಿ ಮಗು ಕಕ್ಕುವ(ವಾಂತಿ) ಸಾಧ್ಯತೆ ಇರುತ್ತದೆ ಎಂದು ಆಲೋಚಿಸಿ, ಕೆಲವು ತಾಯಂದಿರು ಮಗುವಿಗೆ ರಾತ್ರಿ ಮಗುವ ವೇಳೆ ಹಾಲುಣಿಸು ವುದಿಲ್ಲ. ಇದು ಸರಿಯಾದ ಕ್ರಮವಲ್ಲ. ರಾತ್ರಿ ಮಲಗುವ ಮುನ್ನ ಮಗುವಿಗೆ ಹಾಲು ಉಣಿಸಿದರೆ, ಹಾಲು ಉತ್ಪತ್ತಿ ಪ್ರಮಾಣ ದ್ವಿಗುಣಗೊಳ್ಳುತ್ತದೆ. ಏಕೆಂದರೆ,  ಸ್ತನ್ಯಪಾನ ಮಾಡಿಸುವಾಗ, ಸ್ತನಗಳಲ್ಲಿನ ನರಗಳು ನಿಮ್ಮ ಮೆದುಳಿಗೆ 'ಪ್ರೊಲ್ಯಾಕ್ಟಿನ್' ಬಿಡುಗಡೆ ಮಾಡುವಂತೆ ಸೂಚಿಸುತ್ತವೆ. ಇದು ಎದೆ ಹಾಲಿನ ಉತ್ಪಾದನೆಗೆ ಕಾರಣವಾಗುತ್ತದೆ. ಎದೆಹಾಲು ಉತ್ಪಾದನೆಗೆ ಮತ್ತೊಂದು ಪ್ರಮುಖ ಹಾರ್ಮೋನ್ ಆಕ್ಸಿಟೋಸಿನ್. ಇದು ನಿಮ್ಮ ಮತ್ತು ಮಗುವಿನ ಬಾಂಧ್ಯ ವೃದ್ಧಿಸಿ, ಮನಸ್ಸನ್ನು ನಿರ್ಮಲವಾಗಿಡಲು ಸಹಕರಿಸುತ್ತದೆ.

ಎರಡೂ ಸ್ತನಗಳಿಂದಲೂ ಸಮವಾಗಿ ಹಾಲುಣಿಸಿ
ಎರಡೂ ಸ್ತನಗಳಿಂದಲೂ ಹಾಲುಣಿಸುವುದು, ಹಾಲುಣಿಸುವಿಕೆ ಸುಧಾರಿಸುವ ಇನ್ನೊಂದು ವಿಧಾನ. ಮಗುವಿಗೆ ಒಂದೇ ಸ್ತನದಲ್ಲಿ ಹಾಲು ಕುಡಿಸುವುದರಿಂದ, ಹಾಲು ಉತ್ಪತ್ತಿಗೆ ಹಿನ್ನೆಡೆ ಆಗಬಹುದು. ಶಿಶುವು ಕನಿಷ್ಠ 15 ರಿಂದ 20 ನಿಮಿಷ ಹಾಲು ಕುಡಿಯಬೇಕು. ಏಕೆಂದರೆ ಮೊದಲ ಏಳರಿಂದ ಹತ್ತು ನಿಮಿಷಗಳಲ್ಲಿ ಬರುವ ಹಾಲು ಹೆಚ್ಚಿನದಾಗಿ ನೀರಿನ ಅಂಶ ಒಳಗೊಂಡಿರುತ್ತದೆ. ಹೀಗಾಗಿ ಕನಿಷ್ಠ 10 ನಿಮಿಷಗಳವರೆಗೂ ಮಗುವಿಗೆ ಹಾಲುಣಿ ಸಬೇಕು. ಇದರಿಂದ ಮಗುವಿಗೆ ಹೆಚ್ಚು ಪ್ರೋಟಿನ್‌ ಅಂಶ ಲಭ್ಯವಾಗುತ್ತದೆ.

ಆಗಾಗ್ಗೆ ಸ್ತನಗಳ ಮಸಾಜ್‌ ಮಾಡಿ
ಹಾಲುಣಿಸುವ ಸಂದರ್ಭದಲ್ಲಿ ಕೆಲವೊಮ್ಮೆ ಹಾಲಿನ ನಾಳಗಳು ಮುಚ್ಚಿಹೋಗಬಹುದು, ಗಟ್ಟಿಯಾಗ ಬಹುದು. ಹೀಗಾಗಿ ಆಗಾಗ್ಗೆ ಸ್ತನ ಮಸಾಜ್ ಮಾಡುವುದರಿಂದ ನಾಳಗಳಲ್ಲಿ ಹಾಲು ಸರಾಗವಾಗಿ ಬರಲು ಸಾಧ್ಯವಾಲಿದೆ. ಒಂದೊಮ್ಮೆ ಸ್ತನಗಟ್ಟಿಯಾಗುವುದು, ಗಡ್ಡಿಕಟ್ಟಿದಂತಾದರೂ ಈ ಮಸಾಜ್‌ ಮೂಲಕ ಗಡ್ಡೆಗಳು ಕರಗಲು ಸಹಕಾರಿಯಾಗುತ್ತದೆ.

ಎದೆ ಹಾಲನ್ನು ಪವರ್ ಪಂಪಿಂಗ್ ಮಾಡಿ
ಎದೆ ಹಾಲನ್ನು ಮಗುವಿಗೆ ಕುಡಿಸುವ ಜೊತೆಗೆ ಸ್ತನಗಳಿಗೆ ಪವರ್‌ ಪಂಪ್‌ ಮೂಲಕ ಹಾಲನ್ನು ಹಿಂಡಿ ಬಾಟಲಿಗೆ ತುಂಬಬಹುದು. ಈ ಪಂಪ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೀಗೆ ಮಾಡುವುದರಿಂದ ಮಗುವಿಗೆ ಆಗಾಗ್ಗೇ ಮೊಲೆತೊಟ್ಟು ಕೊಡುವ ಬದಲು ಈ ಹಾಲನ್ನೇ ಕುಡಿಸಬಹುದು. ಇದು ಹೆಚ್ಚಿದ ಹಾಲಿನ ಬೇಡಿಕೆಯ ಸಂವೇದನೆಯನ್ನು ಸೃಷ್ಟಿಸುತ್ತದೆ. ಇದರಿಂದಾಗಿ ನೈಸರ್ಗಿಕ ಎದೆ ಹಾಲು ಉತ್ಪಾದನೆಯನ್ನು ಸುಧಾರಿಸುತ್ತದೆ.

ಹಾಲು ಬರದೇ ಇದ್ದರೆ ವೈದ್ಯರನ್ನು ಸಂಪರ್ಕಿಸಿ

ನಿಮ್ಮ ಮಗುವಿಗೆ ಸಾಕಷ್ಟು ಹಾಲು ಸಿಗುತ್ತಿಲ್ಲ ಅಥವಾ ಮಗು ಹಾಲು ಕುಡಿಯುತ್ತಿದ್ದರೂ ಬೆಳವಣಿಗೆ ಕಾಣುತ್ತಿಲ್ಲ ಎಂದೆನಿಸಿದರೆ ಕೂಡಲೇ ವೈದ್ಯರನ್ನು ಕಾಣುವುದು ಒಳ್ಳೆಯದು. ಏಕೆಂದರೆ, ಕೆಲವರಲ್ಲಿ ಹಾರ್ಮೋನ್‌ಗಳ ಏರಿಳಿತದಿಂದ ಹಾಲು ಉತ್ಪತ್ತಿಯಲ್ಲಿ ಕೊರತೆ ಉಂಟಾಗಬಹುದು ಅಥವಾ ಇತರೆ ನಿಮ್ಮ ದೈನಂದಿನ ಚಟುವಟಿಕೆಯ ಸಮಸ್ಯೆಯಿಂದಲೂ ಹಾಲು ಉತ್ಪತ್ತಿ ಸಾಧ್ಯವಾಗದೇ ಇರಬಹುದು.

ಹಾಲು ಉತ್ಪತ್ತಿಯಾಗದೇ ಇರಲು ಇರುವ ಇತರೆ ಕಾರಣಗಳು
ಭಾವನಾತ್ಮಕ ಅಂಶಗಳು: ಆತಂಕ, ಒತ್ತಡ, ಮತ್ತು ಮುಜುಗರವೂ ಸಹ ತಾಯಂದಿರಲ್ಲಿ ಹಾಲು ಉತ್ಪತ್ತಿಗೆ ಅಡ್ಡಿಪಡಿಸಬಹುದು, ಇದರಿಂದಾಗಿ ಕಡಿಮೆ ಹಾಲು ಉತ್ಪಾದನೆಯಾಗುತ್ತದೆ. ಹೀಗಾಗಿ ನಿಮಗೆ ಹಿತವೆನಿಸುವ ಜಾಗದಲ್ಲಿ ಎದೆಹಾಲು ನೀಡಿ, ವಿಶ್ರಾಂತಿ ಪಡೆಯಿರಿ.

ಆರೋಗ್ಯ ಸಮಸ್ಯೆಗಳು: ಮಧುಮೇಹ, ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ ಪ್ರೆಗ್ನೆನ್ಸಿ(ಪಿಸಿಒಎಸ್‌)-ಇಂಡ್ಯೂಸ್ಡ್ ಹೈಪರ್ ಟೆನ್ಷನ್ ನಂತಹ ಕೆಲವು ಆರೋಗ್ಯ ಸಮಸ್ಯೆಗಳು ಹಾಲು ಉತ್ಪಾದನೆಗೆ ಅಡ್ಡಿಪಡಿಸಬಹುದು. ಸೈನಸ್ ಮತ್ತು ಅಲರ್ಜಿ  ಔಷಧಿಗಳಂತಹ ಸ್ಯೂಡೊಫೆಡ್ರಿನ್-ಒಳಗೊಂಡಿರುವ ಔಷಧಿಗಳೂ ಎದೆ ಹಾಲಿನ ಉತ್ಪಾದನೆ ಕಡಿಮೆ ಮಾಡಬಹುದು.

ತಂಬಾಕು ಮತ್ತು ಮದ್ಯ: ಧೂಮಪಾನ ಮತ್ತು ಮದ್ಯಪಾನದಿಂದಲೂ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಹಾಗೂ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು