6
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಯೋಗ: ಪೂರ್ಣಾರೋಗ್ಯಕ್ಕೆ ದಿಕ್ಸೂಚಿ

Published:
Updated:

‘ಯೋಗ’ ಎನ್ನುವ ಶಬ್ದಕ್ಕೆ ಹಲವು ಅರ್ಥಗಳು. ಸಾಧನೆ, ಉಪಾಯ, ಒಟ್ಟಿಗೆ ಸೇರುವುದು, ಪರಸ್ಪರ ಸಮಾಗಮ, ಯುಕ್ತಿ, ಮಹಿಮೆ, ಅನಂತದಲ್ಲಿ ಅಥವಾ ದೇವರಲ್ಲಿ ಐಕ್ಯವಾಗುವುದು, ಇಂದ್ರಿಯ ನಿಗ್ರಹ, ಏಕಾಗ್ರತೆ, ಧ್ಯಾನ, ಅದೃಷ್ಟ, ಸುದೈವ - ಹೀಗೆ ಇಪ್ಪತ್ತಾರಕ್ಕೂ ಹಲವು ಅರ್ಥಗಳನ್ನು ನಿಘಂಟು ಮುಂದಿಡುತ್ತದೆ. ಕೆಲವನ್ನು ಭಾವಾರ್ಥ, ಇನ್ನೂ ಕೆಲವನ್ನು ವಾಚ್ಯಾರ್ಥ ಎಂದುಕೊಳ್ಳೋಣ. ಜೊತೆಗೆ ಶಾರೀರಿಕ ವ್ಯಾಯಾಮವನ್ನೂ ಯೋಗವೆಂದು ಕರೆಯುವ ಸಂಪ್ರದಾಯವಿದೆ. ಶರೀರವನ್ನಷ್ಟೇ ದುಡಿಸಿಕೊಳ್ಳದೇ ಜೊತೆಯಲ್ಲಿ ನಮ್ಮ ಮನಸ್ಸನ್ನೂ ಅದರಲ್ಲಿ ತೊಡಗುವಂತೆ ಮಾಡಿ ಮನುಷ್ಯನ ಸಂಪೂರ್ಣ ಸ್ವಾಸ್ಥ್ಯಕ್ಕೆ ಹೊಸ ಅವಕಾಶದ ಬಾಗಿಲು ತೆರೆದಿದೆ. ಹೀಗಾಗಿ ಯೋಗ ಎನ್ನುವುದೇ ಒಂದು ನೂತನಜ್ಞಾನದ ಶಾಖೆಯಾಗಿ ಕಾಣುವುದಿದೆ.

 ಜೂನ್ 21ರಂದು ಅಂತರರಾಷ್ಟ್ರೀಯ ಯೋಗದ ದಿನವನ್ನಾಗಿ ಆಚರಿಸಲಾಗುತ್ತದೆ. ಶಾರೀರಿಕ ಯೋಗದಿಂದ ಮನುಷ್ಯನು ಆರೋಗ್ಯಪೂರ್ಣ ಬದುಕನ್ನು ಕಟ್ಟಿಕೊಳ್ಳಲು ಒಂದು ವೇದಿಕೆ, ಒಂದು ಸುಸಂದರ್ಭವಾಗಿಯೂ ಈ ದಿನವನ್ನು ಪರಿಗಣಿಸಬಹುದು.

ಯೋಗದ ಹಲವು ಅರ್ಥಗಳಲ್ಲಿ ಧ್ಯಾನ ಹೆಚ್ಚು ವಿಶೇಷ ಆಯಾಮ ಹೊಂದಿರುವ ಅರ್ಥ ಎನ್ನಬಹುದು. ಅದು ಮನುಷ್ಯನ ಮನಸ್ಸಿಗೆ ಸಂಬಂಧಿಸಿದ ಚಟುವಟಿಕೆ. ನಾವು ನಮ್ಮ ಜೀವನದಲ್ಲಿ ಹಲವಾರು ಅನುಭವಗಳನ್ನು ಪಡೆಯುತ್ತೇವೆ. ಪಂಚೇಂದ್ರಿಗಳ ಅನುಭವಕ್ಕೆ ಬಂದ ಅನುಭವಗಳನ್ನು ಹೇಳಿಕೊಳ್ಳುತ್ತೇವೆ. ಆದರೆ ಧ್ಯಾನದ ಮೂಲಕ ನಮಗೆ ಸಿಗುವ ಆನಂದದ ಅನುಭವವನ್ನು ಶಬ್ದಗಳಲ್ಲಿ ಹಿಡಿದಿಡಲು ಅಸಾಧ್ಯ. ಹರಿದಾಸರಲ್ಲಿ ಯೋಗಿಗಳು ಎಂದೇ ಹೆಸರಾದ ಕನಕದಾಸರು ‘ಇಷ್ಟು ದಿನ ವೈಕುಂಠ ಎಷ್ಟು ದೂರವೋ’ ಎಂಬ ಕೀರ್ತನೆಯಲ್ಲಿ ಹರಿಯನ್ನು ಯೋಗದೃಷ್ಟಿಯಿಂದ ನೋಡಿದ ಸಂತಸ ಹಾಗೂ ಧನ್ಯತೆಯ ಅನುಭವವನ್ನು ಹೇಳಿದ್ದಾರೆ. ಇಂಥ ಅನುಭವಗಳ ಉದಾಹರಣೆಯನ್ನು ನೋಡುವಾಗ ಧ್ಯಾನ ನಮ್ಮಲ್ಲಿ ಮೂಡಿಸುವಂಥ ಸಾಧ್ಯತೆಗಳು ಬೆರಗನ್ನುಂಟು ಮಾಡುವಂಥವು. ಪತಂಜಲಿಯ ಯೋಗದರ್ಶನದಲ್ಲಿ ಆಧ್ಯಾತ್ಮಿಕ ಹಾಗೂ ನೈತಿಕತೆಯ ಅಂಶಗಳನ್ನೂ ಕಾಣಬಹುದು.

ನೈತಿಕತೆ ಎನ್ನುವುದು ಅಪ್ಪಟ ಮನಸ್ಸಿಗೆ ಸಂಬಂಧಿಸಿದ್ದು ಅಲ್ಲವೇ! ಮನಸ್ಸಿನ ನಿಯಂತ್ರಣವೇ ಇಲ್ಲಿ ಪ್ರಧಾನ ಗುರಿಯಾಗಿದೆ. ಧ್ಯಾನವೂ ಮನಸ್ಸಿಗೆ ಏಕಾಗ್ರತೆಯನ್ನು ಅಭ್ಯಾಸ ಮಾಡಿಸುವ ಚಟುವಟಿಕೆ. ಮನಸ್ಸು ಎಲ್ಲರಲ್ಲೂ ಒಂದೇ ರೀತಿಯಲ್ಲಿರದು. ಒಬ್ಬನಿಗೆ ಬಹುಬೇಗನೆ ಏಕಾಗ್ರತೆ ಅಭ್ಯಾಸವಾದರೆ ಇನ್ನೊಬ್ಬನಿಗೆ ಸ್ವಲ್ಪ ಹೆಚ್ಚು ದಿನಗಳು ಬೇಕಾಗುಬಹುದು. ಆದರೆ ಧ್ಯಾನ ನಿಧಾನವಾಗಿ ನಮ್ಮನ್ನು ಸಮಾಧಾನಕ್ಕೆ ತರುತ್ತದೆ ಎನ್ನುವುದು ಪ್ರಾಯೋಗಿಕವಾಗಿಯೂ ಅನೇಕರು ಸಾಧಿಸಿದ ಅರಿವು.  ಮನಸ್ಸಿನ ಹೊಯ್ದಾಟವನ್ನು ನಿಲ್ಲಿಸುವ ಪ್ರಕ್ರಿಯೆಯೇ ‘ಯೋಗ’.

ಆರೋಗ್ಯವೆಂದರೆ ಕೇವಲ ಶರೀರದ ಆರೋಗ್ಯವಲ್ಲದೇ ಮಾನಸಿಕ ಆರೋಗ್ಯವೂ ಸೇರುತ್ತದೆ. ನಮ್ಮೆಲ್ಲ ಸಾಧನೆಗಳಿಗೆ, ಕೆಲಸಗಳಿಗೆ ಬೇಕಾಗಿರುವುದು ಆರೋಗ್ಯಪೂರ್ಣ ಶರೀರ. ಯೋಗದ ಭಾಗವಾಗಿರುವ ಆಸನಗಳು ನಮಗೆ ದೈಹಿಕ ಸದೃಢತೆಯನ್ನು ತಂದು ಕೊಡುತ್ತವೆ. ಯೋಗಾಸನಗಳನ್ನು ನಿಯಮಿತವಾಗಿ ಮಾಡುವುದರಿಂದ ದೇಹ ಸದೃಢವಾಗುವುದರ ಜೊತೆಗೆ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಯೋಗಾಸನಗಳು ಮತ್ತು ಧ್ಯಾನ ಮನಸ್ಸಿನ ಚಾಂಚಲ್ಯವನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ಯೋಗವನ್ನು ನಮ್ಮ ಜೀವನದ ಭಾಗವಾಗಿ ಅಳವಡಿಸಿಕೊಂಡರೆ ನಮಗೆ ಹೆಚ್ಚಿನ ಲಾಭವುಂಟು; ಅದು ನಮ್ಮ ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ಆಧ್ಯಾತ್ಮಿಕ ಅವಶ್ಯಕತೆಗಳನ್ನು ಪೂರೈಸುವಂಥ ದಿವ್ಯವಾದ ಔಷಧವೇ ಹೌದು.

v

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !