ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ ಹತ್ತಿಕೊಂಡಾಗ

Last Updated 19 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಕಾರ್ಲಟನ್ ಅಗ್ನಿ ದುರಂತ,  ಚೆನ್ನೈನ ಕಿಲ್ ಪೌಕ್ ಆಸ್ಪತ್ರೆಗೆ ಬೆಂಕಿ, ಮಲೆಮಹದೇಶ್ವರ ದೇವಸ್ಥಾನದ ಬಳಿ ಐವತ್ತು ಅಂಗಡಿಗಳು ಸುಟ್ಟು ಭಸ್ಮ - ಹೀಗೆ ಬೆಂಕಿಯು ತನ್ನ ಶಕ್ತಿಯನ್ನು  ನೆನಪಿಸುವುದಕ್ಕಾಗಿಯೋ  ಎಂಬಂತೆ  ಕೆನ್ನಾಲಿಗೆಯನ್ನು  ಚಾಚಿ  ದುರಂತಗಳಿಗೆ ಕಾರಣವಾದ ಘಟನೆಗಳು ಒಂದೇ .... ಎರಡೇ? ಸುಡುವುದನ್ನೇ ಧರ್ಮವಾಗಿಸಿಕೊಂಡ ಬೆಂಕಿಯ  ಕ್ರೋಧವನ್ನು ಅಡಗಿಸಲು  ನೀರಿಗಿಂತ ಅತ್ಯುತ್ತಮ ಸಾಧನ ಮತ್ತೊಂದಿಲ್ಲ! 

ಜನಪದರು ಇದನ್ನು ಬಹಳ ಹಿಂದೆಯೇ ಅರಿತು ಅಜ್ಜ ಏನು ಕೊಟ್ಟರೂ ತಿಂತಾನ, ನೀರು ಕೊಟ್ಟರೆ ಸಾಯ್ತೊನ ಎಂಬ ಒಗಟನ್ನು ಕೂಡ ರೂಪಿಸಿದ್ದಾರೆ. ಆದರೆ ಸುಳಿವನ್ನೇ ನೀಡದೆ ಒಮ್ಮೆಗೇ ಹಬ್ಬುವ ಬೆಂಕಿಯನ್ನು ನಂದಿಸಲು  ನೀರು  ಲಭ್ಯವಿರದಿದ್ದರೆ  ಅಂತಹ ಕಡೆಗಳಲ್ಲಿ ಪರ್ಯಾಯ ಮಾರ್ಗವನ್ನು  ಅರಿತಿರಲೇಬೇಕು.

ಬೆಂಕಿಯನ್ನು ಆರಿಸಬೇಕಾದರೆ ಸುಡುತ್ತಿರುವ ವಸ್ತುವಿನಿಂದ ಉಷ್ಣವನ್ನು ತೆಗೆಯಬೇಕು. ವಾತಾವರಣದಲ್ಲಿರುವ ಆಮ್ಲಜನಕವು ಬೆಂಕಿಯು ಇನ್ನಷ್ಟು ಧಗಧಗಿಸಿ ಉರಿಯಲು ಕಾರಣವಾಗುತ್ತದೆ. ಹಾಗಾಗಿ ಮೊದಲು ಆಮ್ಲಜನಕದ ಸರಬರಾಜನ್ನು ತಪ್ಪಿಸಬೇಕು.

ಬರಿಯ ಮೈಗಷ್ಟೇ ಬೆಂಕಿ ಹತ್ತಿಕೊಂಡಿದ್ದರೆ ಮುಖವನ್ನು ಕೈಗಳಿಂದ ಮುಚ್ಚಿ ನೆಲದ ಮೇಲೆ ಮಲಗಿ ಬೆಂಕಿ ಆರುವವರೆಗೆ ಉರುಳಿಕೊಂಡು ಹೋಗಿ. ಕಂಬಳಿಯನ್ನು ಅಥವಾ  ದಪ್ಪ ಬಟ್ಟೆಯನ್ನು ಗಟ್ಟಿಯಾಗಿ  ಸುತ್ತಿಕೊಳ್ಳಿ.ಯಾವುದೇ ಕಾರಣಕ್ಕೂ  ಓಡದಿರಿ.

ಧಗಧಗಿಸಿ ಉರಿಯುವ ಬೆಂಕಿಯ ಮೇಲೆ ಮರಳು ಇಲ್ಲವೇ ಮಣ್ಣನ್ನು  ಸುರಿಯುವುದರಿಂದಲೂ ನಂದಿಹೋಗುವುದು. ಅದಕ್ಕಾಗಿ ಅಡುಗೆ ಕೋಣೆಯಲ್ಲಿ ದೊಡ್ಡ ಪಾತ್ರೆಯಲ್ಲಿ ಮರಳನ್ನು ತುಂಬಿಸಿಟ್ಟು ಅಲಂಕಾರಿಕ ಗಿಡವನ್ನು ಬೆಳೆಸುವುದು ಉತ್ತಮ.

ಮೈಗಲ್ಲದೆ ಸುತ್ತಲೂ ಜ್ವಾಲೆ ವ್ಯಾಪಿಸಿದ್ದರೆ, ದಟ್ಟವಾಗಿ ಆವರಿಸುವ ಹೊಗೆಯೇ ಹೆಚ್ಚಿನ ಜನರ ಸಾವಿಗೆ ಕಾರಣವಾಗುವುದು. ಇದು ಮೇಲುಗಡೆ ಹರಡಿಕೊಂಡಿರುತ್ತದೆ. ಹಾಗಾಗಿ ಅಂಬೆಗಾಲಿಟ್ಟು ಹೊರಬನ್ನಿ.

ಹೊಗೆಯಿಂದಾಗಿ ಆಮ್ಲಜನಕದ ಕೊರತೆಯುಂಟಾಗುವುದರಿಂದ ಉಸಿರಾಟ ಕಷ್ಟವಾಗುವುದು. ಅದಕ್ಕಾಗಿ ಒದ್ದೆ ಬಟ್ಟೆ , ಇಲ್ಲವೇ  ಕರವಸ್ತ್ರಕ್ಕೆ ಎಂಜಲನ್ನಾದರೂ ತಗುಲಿಸಿ ಮೂಗಿನ ಬಳಿ  ಇಟ್ಟುಕೊಳ್ಳಿ

ಅಗ್ನಿ ಶಾಮಕ ಸಾಧನವೆಂದೇ ಕರೆಯಲ್ಪಡುವ ಇಂಗಾಲದ ಡೈ ಆಕ್ಸೈಡ್  ಚಿಮ್ಮಿಸಬೇಕು.

ಹತ್ತಿರದ ಅಗ್ನಿ ಶಾಮಕದಳದ  ದೂರವಾಣಿ ಸಂಖ್ಯೆಯನ್ನು ಇಟ್ಟುಕೊಂಡಿರಿ. ಸ್ನೇಹಿತರಿಗೆ ಕರೆಮಾಡಿ ಸುದ್ದಿ ತಿಳಿಸಿ.

ತುರ್ತು ನಿರ್ಗಮನದ ದಾರಿಮೊದಲೇ ತಿಳಿದುಕೊಂಡಿರಿ. ಲಿಫ್ಟ್ ಬಳಕೆ ಬೇಡ.

ಅಗ್ನಿಶಾಮಕ ವಾಹನ ಬರಲು ದಾರಿ ಮಾಡಿಕೊಡಿ, ಕಟ್ಟಡದ ಮುಂದೆ ಜಮಾಯಿಸಬೇಡಿ

ಮನೆಯಲ್ಲಿ ಅಡುಗೆ ಅನಿಲದ ಸೋರಿಕೆಯ ವಾಸನೆ ತೀವ್ರವಾಗಿ ಬರುತ್ತಿದ್ದರೆ ಯಾವುದೇ ವಿದ್ಯುತ್ ಸ್ವಿಚ್ ನ್ನು   ಆನ್ /ಆಫ್  ಮಾಡಬೇಡಿ.  ಕತ್ತಲಲ್ಲೇ  ಆ ಪ್ರದೇಶದಿಂದ ಹೊರಬನ್ನಿ
ಪ್ರಥಮ ಚಿಕಿತ್ಸೆ

ಚರ್ಮವು ಸುಟ್ಟು ಹೋದಾಗ ದೇಹವು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶವನ್ನು ಕಳೆದುಕೊಳ್ಳುತ್ತದೆ. ಅದಕ್ಕಾಗಿ ಗಾಯಗೊಂಡ ವ್ಯಕ್ತಿಯು ಎಚ್ಚರವಿದ್ದರೆ ಒಂದು ಲೀಟರ್ ನೀರಿಗೆ ಒಂದು ಚಮಚದಷ್ಟು ಅಡುಗೆ ಸೋಡಾವನ್ನು ಬೆರೆಸಿ ಹತ್ತು ನಿಮಿಷಕ್ಕೊಮ್ಮೆ ಅರ್ಧ ಲೋಟದಷ್ಟು ಕುಡಿಸಬೇಕು ಇಲ್ಲವೇ ಬರಿಯ ಹಾಲನ್ನಾದರೂ ನೀಡಿ.

ಬೆಂಕಿ ಅಪಘಾತಕ್ಕೊಳಗಾದ ವ್ಯಕ್ತಿಯನ್ನು  ಬಾಳೆ ಎಲೆಯ ಮೇಲೆ  ಶುದ್ಧವಾದ ಗಾಳಿಯಾಡುವ ಪ್ರದೇಶದಲ್ಲಿ ಮಲಗಿಸಿ. ಸುಟ್ಟುಹೋದ, ದೇಹಕ್ಕೆ ಅಂಟಿಕೊಂಡಿರುವ ಬಟ್ಟೆಗಳನ್ನು ತೆಗೆಯುವ ಪ್ರಯತ್ನಬೇಡ. ಸುಟ್ಟ ಜಾಗದ ಮೇಲೆ ತಣ್ಣೀರು ಸುರಿಯುತ್ತಿರಿ (ಮೇಲ್ಮೈಯಷ್ಟೇ ಸುಟ್ಟಿದ್ದರೆ).

ಗಾಯವು ಆಳವಾಗಿದ್ದರೆ ನೀರು ತಾಗಿ ಸೋಂಕು ಉಂಟಾಗುವ ಸಾಧ್ಯತೆ ಇರುವುದರಿಂದ ಮೊದಲು ಗಾಯದ ಆಳವನ್ನು ಪರಿಶೀಲಿಸಿ. ಆಳವಾಗಿ ಸುಟ್ಟುಹೋಗಿದ್ದರೆ ನೀರು ಮುಟ್ಟಿಸಬಾರದು ಎಂಬ ಬಗ್ಗೆ 108  ಆಂಬ್ಯುಲೆನ್ಸ್‌ನಲ್ಲಿ ಕಾರ್ಯ ನಿರ್ವಹಿಸುವ ಪಂಕಜ ಅವರ ಸಲಹೆಯನ್ನು ಮರೆಯದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT