ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಕಟ್ಟಲಾಗದ ಆಟಿಕೆ!

Last Updated 8 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

200 ರೂಪಾಯಿಗೆ ಚಲಿಸುವ ರೈಲು, 300 ಕೊಟ್ಟರೆ ಬಾರ್ಬಿ ಬೊಂಬೆ, ಮತ್ತಷ್ಟು ಕೊಟ್ಟರೆ ಮಗುವಿನಷ್ಟೇ ದೊಡ್ಡದಾದ ಟೆಡ್ಡಿಬೇರ್... ಮಕ್ಕಳ ಆಟಿಕೆಗಳ ಅಂಗಡಿಗಳಿಗೆ ಹೋದರೆ ಏನುಂಟು ಏನಿಲ್ಲ? ಮಕ್ಕಳ ಬೌದ್ಧಿಕ, ಮಾನಸಿಕ ಬೆಳವಣಿಗೆಗೆ ಆಟಿಕೆಗಳು ಪೂರಕ ಎಂಬುದು ಖಚಿತವಾದ ಮೇಲಂತೂ ಪೈಪೋಟಿಯ ಮೇಲೆ ಸಾವಿರಾರು ರೂಪಾಯಿಗಳ ವಿವಿಧ ಆಟಿಕೆಗಳು ಮಳಿಗೆಗಳಲ್ಲಿ ರಾರಾಜಿಸುತ್ತವೆ.

ಬೆಳೆಯುವ ಮಕ್ಕಳಿಗೆ ಆಟಿಕೆಗಳು ಉತ್ತಮ ಸಂಗಾತಿ. ಇದರಲ್ಲಿ ಸಂಶಯವೇ ಇಲ್ಲ. ಆದರೆ ಕೇವಲ ಆಟಿಕೆಗಳಿಂದಷ್ಟೇ ಮಕ್ಕಳು ಸಂತೋಷದಿಂದ ಇರಬಲ್ಲರೇ? ಕೈಗೆ ಎಟುಕದಿದ್ದರೂ ಅವುಗಳನ್ನು ಹೇಳಿದ ಬೆಲೆ ತೆತ್ತು ಮನೆಗೆ ತಂದು ಮಕ್ಕಳಿಗೆ ನೀಡಿದರೆ ನಮ್ಮ ಕರ್ತವ್ಯ ಮುಗಿದಂತೆಯೇ?

ಮಕ್ಕಳೊಡನೆ ಪ್ರೀತಿಯಿಂದ ಸಾವಧಾನವಾಗಿ ನೀವು ಕಳೆಯುವ ಸಂದರ್ಭಗಳಲ್ಲಿ, ನಿಮ್ಮ ಒಡನಾಟದ ಆ ಕ್ಷಣಗಳಲ್ಲಿ ಅವರು ನಿಮ್ಮಿಂದ ಕಲಿಯುವ ಜೀವನ ಪಾಠದ ಮುಂದೆ ನಿರ್ಜೀವಿ, ದುಬಾರಿ ಆಟಿಕೆಗಳು ಕಲಿಸುವ ಪಾಠ ಹಿಂದೆ ಬೀಳುತ್ತದೆ.

‘Children need your presence more than your presents’ ಎನ್ನುವಂತೆ, ಬೆಳೆಯುವ ಮಕ್ಕಳಿಗೆ ತಂದೆ ತಾಯಿ ನೀಡುವ ಗುಣಮಟ್ಟದ ಸಮಯದ ಮುಂದೆ ಎಂತಹ ಆಟಿಕೆಗಳೂ ಸಪ್ಪೆ ಎನಿಸುತ್ತವೆ.

ಮಕ್ಕಳ ಮುಗ್ಧ ಆಟಗಳಲ್ಲಿ ಪ್ರೀತಿಯಿಂದ ತೊಡಗಿಕೊಂಡು, ಅವರು ಎಡೆಬಿಡದೆ ಕೇಳುವ ಪ್ರಶ್ನೆಗಳಿಗೆ ತಾಳ್ಮೆಯ ಉತ್ತರ ನೀಡುತ್ತಾ, ಕುತೂಹಲ ತುಂಬಿದ ಕ್ರಿಯಾತ್ಮಕವಾದ ಅವರ ಚಿಂತನೆಗಳಿಗೆ ಪ್ರೋತ್ಸಾಹ ನೀಡುತ್ತಾ ನೀವು ಅವರೊಂದಿಗೆ ದಿನದ ಕೆಲ ಸಮಯವನ್ನಾದರೂ ಕಳೆಯಬಲ್ಲಿರಾದರೆ, ಸಮಯ ಎಂಬ ಬೆಲೆ ಕಟ್ಟಲಾಗದ ಕಾಣಿಕೆಯನ್ನು ಅವರಿಗೆ ನೀಡಬಲ್ಲಿರಾದರೆ ಅದೇ ನೀವು ನಿಮ್ಮ ಮಕ್ಕಳಿಗೆ ನೀಡುವ ದೊಡ್ಡ ಕೊಡುಗೆ.

ಮಾರುಕಟ್ಟೆಯಿಂದ ಕೊಂಡು ತಂದ ಆಟಿಕೆ ಮುರಿಯಬಹುದು, ಬಣ್ಣ ಕಳೆದುಕೊಳ್ಳಬಹುದು. ಆದರೆ ತಂದೆ ತಾಯಿಯ ಪ್ರೀತಿಯ ಸ್ಪರ್ಶ, ಮಾತು, ನಗು ಎಂಬ ಆಟಿಕೆಗಳು ಉಪಯೋಗಿಸಿದಷ್ಟೂ ಬೆಳೆಯುತ್ತಾ ಹೋಗುತ್ತವೆ, ಬಲವಾಗುತ್ತಾ ಸಾಗುತ್ತವೆ. ಆದ್ದರಿಂದ ಮಕ್ಕಳಿಗೆ ಗುಣಮಟ್ಟದ ಸಮಯ ಕಳೆಯುವ  ಕಾಣಿಕೆಯನ್ನು ಹೆಚ್ಚಾಗಿ ನೀಡಿ. ಆಟಿಕೆಗಳು ಖಂಡಿತಾ ಅವಶ್ಯಕ. ಆದರೆ ಅವು ಜೀವಂತ ಆಟಿಕೆಗಳಿಗೆ ಪರ್ಯಾಯವಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT