ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲಿಗೆ ಕ್ಲಿಪ್ ತಪ್ಪು ಕಲ್ಪನೆ ಬೇಡ

ವಾರದ ವೈದ್ಯ
Last Updated 30 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ತಪ್ಪು: ಕ್ಲಿಪ್ ಹಾಕಿಸುವುದರಿಂದ ಹಲ್ಲು ಸಡಿಲಗೊಳ್ಳುತ್ತದೆ.

ಸರಿ: ಕ್ಲಿಪ್ ಚಿಕಿತ್ಸೆ ನಡೆಯುವಾಗ ಸಹಜವಾಗಿಯೇ ಹಲ್ಲು ಅಲುಗಾಡುತ್ತದೆ. ಅದು ಶೇ 10- 20ರಷ್ಟು ಪ್ರಮಾಣದಲ್ಲಿ ಮಾತ್ರ. ಇಷ್ಟು ಕಡಿಮೆ ಪ್ರಮಾಣದ ಅಲುಗಾಟದಿಂದ ಯಾವುದೇ ಶಾಶ್ವತ ಹಾನಿ ಆಗುವುದಿಲ್ಲ. ಮೂಳೆಯ ಬಿಗಿ ಹಿಡಿತ ಇರುವವರೆಗೂ ಸಮಸ್ಯೆ ಇರುವುದಿಲ್ಲ. ಚಿಕಿತ್ಸಾ ಸಮಯದಲ್ಲಿ ಹಲ್ಲು ಜರುಗುವ ಸಲುವಾಗಿ ಸಡಿಲಗೊಳ್ಳುವುದು ಸಹಜ ಮತ್ತು ಇದು ತಾತ್ಕಾಲಿಕ. ಆದ್ದರಿಂದ ಹೆದರುವ ಅವಶ್ಯಕತೆ ಇರುವುದಿಲ್ಲ. ಚಿಕಿತ್ಸೆ ಮುಗಿದ 6- 8 ತಿಂಗಳೊಳಗೆ ಮೂಳೆ ಮೊದಲಿನ ಬಿಗಿ ಹಿಡಿತದ ಸ್ಥಿತಿಗೆ ಬರುತ್ತದೆ.

ತಪ್ಪು: ಉಬ್ಬು ಹಲ್ಲು ಅದೃಷ್ಟ ಸೂಚಕವಾಗಿದ್ದು, ಅದನ್ನು ಕ್ಲಿಪ್ ಹಾಕಿ ಸರಿಪಡಿಸಿದರೆ ದುರದೃಷ್ಟ ಕಾಡುತ್ತದೆ.

ಸರಿ: ಹಲ್ಲಿಗೂ ಅದೃಷ್ಟಕ್ಕೂ ಯಾವುದೇ ಸಂಬಂಧ ಇಲ್ಲ. ಉಬ್ಬು ಹಲ್ಲುಗಳಿದ್ದಾಗ ಬಹುತೇಕರು ಸಾಮಾಜಿಕವಾಗಿ ಇತರರ ಜೊತೆಗೆ ಬೆರೆಯದೆ ಕೀಳರಿಮೆ ಅನುಭವಿಸುತ್ತಾರೆ. ಜೊತೆಗೆ ಸುಲಭವಾಗಿ ಪೆಟ್ಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಕ್ಲಿಪ್‌ನಿಂದ ಎಲ್ಲ ರೀತಿಯಲ್ಲೂ ಉಪಯೋಗ ಆಗುತ್ತದೆ ಹೊರತು ಕೇಡು ಸಂಭವಿಸುವುದಿಲ್ಲ.

ತಪ್ಪು: ಚಿಕಿತ್ಸಾ ಸಮಯದಲ್ಲಿ ಹಲ್ಲು ಕಿತ್ತರೆ ಕಣ್ಣು, ನರ, ತಲೆಗೆ ತೊಂದರೆ ಆಗುತ್ತದೆ.

ಸರಿ: ಇದೊಂದು ಅತ್ಯಂತ ಸಾಮಾನ್ಯ ನಂಬಿಕೆಯಾಗಿದ್ದು, ಸತ್ಯಕ್ಕೆ ಸಂಪೂರ್ಣ ದೂರವಾಗಿದೆ. ಹಲ್ಲು ಕಿತ್ತರೆ ಇತರ ಅಂಗಗಳಿಗೆ ತೊಂದರೆ ಆಗುವುದಿಲ್ಲ.

ತಪ್ಪು: ಹಲ್ಲಿನ ಕ್ಲಿಪ್ ಮಕ್ಕಳಿಗೆ ಮಾತ್ರ.

ಸರಿ: ಇದು ತಪ್ಪು. ಕ್ಲಿಪ್ ಚಿಕಿತ್ಸೆಯನ್ನು 8ನೇ ವಯಸ್ಸಿನಿಂದ ಪ್ರಾರಂಭಿಸಿ 50ನೇ ವರ್ಷದವರೆಗೂ ಹಾಕಿಸಬಹುದು. ಮೂಳೆಯ ದೃಢತನ ಹಾಗೂ ಸಾಂದ್ರತೆಯ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ 25ನೇ ವಯಸ್ಸಿನೊಳಗೆ ಚಿಕಿತ್ಸೆ ಶೀಘ್ರ ಫಲಕಾರಿ ಆಗಿರುತ್ತದೆ.

ತಪ್ಪು: ಹಲ್ಲಿಗೆ ಕ್ಲಿಪ್ ಹಾಕಿಸಲು 14 ವರ್ಷ ಆಗಿದ್ದರೆ ಒಳ್ಳೆಯದು.

ಸರಿ: ಕ್ಲಿಪ್ ಹಾಕಿಸಲು ಎಲ್ಲ ಹಾಲು ಹಲ್ಲುಗಳೂ ಉದುರಲೇಬೇಕೆಂಬ ಕಡ್ಡಾಯ ನಿಯಮವೇನೂ ಇಲ್ಲ. ಆದರೆ ಬೆಳವಣಿಗೆಯ ಹಂತದಲ್ಲೇ ಸರಿಪಡಿಸಬಹುದಾದ ವಿಧಾನ ಲಭ್ಯವಿದೆ (ಇಂಟರ್‌ಸೆಪ್ಟಿವ್). ಜೊತೆಗೆ 15- 18ರ ವಯೋಮಾನ ಚಿಕಿತ್ಸೆಗೆ ಅತ್ಯಂತ ಪೂರಕವಾಗಿರುತ್ತದೆ.

ತಪ್ಪು: ಕ್ಲಿಪ್ ಹಾಕಿಸಲು ಹಲ್ಲನ್ನು ಕಡ್ಡಾಯವಾಗಿ ತೆಗೆಯಲೇಬೇಕು.

ಸರಿ: ಕ್ಲಿಪ್ ಧರಿಸಲು ಎಲ್ಲರಿಗೂ ಹಲ್ಲು ತೆಗೆಸಲೇಬೇಕೆಂಬ ನಿಯಮ ಇಲ್ಲ. ಆದರೆ, ಚಿಕಿತ್ಸೆಗೆ ಅನಿವಾರ‌್ಯ ಇದ್ದಾಗ, ಹಲ್ಲುಗಳ ನಡುವಿನ ಸಂದುಗಳನ್ನು ಬಳಸಿಕೊಳ್ಳಲು ಆಗದಿದ್ದಾಗ ಮಾತ್ರ ಹಲ್ಲು ತೆಗೆಯಬೇಕಾದ ಅಗತ್ಯ ಬರುತ್ತದೆ.

ತಪ್ಪು: ಕ್ಲಿಪ್ ಚಿಕಿತ್ಸೆ ಅತ್ಯಂತ ನೋವುಕಾರಕ.

ಸರಿ: ಕ್ಲಿಪ್ ಹಾಕಿಸಿದ ಒಂದೆರಡು ದಿನಗಳು ಮಾತ್ರ ಚುಚ್ಚುವ, ಒತ್ತುವ, ಸೆಳೆತದ ಅತ್ಯಂತ ಸಾಧಾರಣ ಮಟ್ಟದ ನೋವು ಇರುತ್ತದೆ. ಇದು ಸಾಮಾನ್ಯ. ಇದಕ್ಕಾಗಿ ಹೆದರಬಾರದು. ಚಿಕಿತ್ಸೆಗೆ ವಿದಾಯ ಬೇಡ.

ತಪ್ಪು: ಕ್ಲಿಪ್ ಚಿಕಿತ್ಸೆ ಅತ್ಯಂತ ದೀರ್ಘಕಾಲೀನ ಆಗಿರುತ್ತದೆ.

ಸರಿ: ಹಾಗೇನೂ ಇಲ್ಲ. ಪ್ರತಿ ವ್ಯಕ್ತಿಯ ಮೂಳೆಯ ದೃಢತೆಯ ಆಧಾರದ ಮೇಲೆ ಚಿಕಿತ್ಸೆ, ಹಲ್ಲಿನ ಜರುಗಾಟ ಆಗುತ್ತದೆ. ಕೆಲವರಲ್ಲಿ 6- 9 ತಿಂಗಳಿನಲ್ಲಿ ಆದರೆ, ಮತ್ತೆ ಕೆಲವರಿಗೆ ಒಂದೂವರೆಯಿಂದ ಎರಡು ವರ್ಷ ಹಿಡಿಯಬಹುದು. ಜೀವನಪರ್ಯಂತ ಸುಂದರ ಮುಖಚರ್ಯೆ ಬೇಕಾಗಿದ್ದಲ್ಲಿ ಈ ಚಿಕಿತ್ಸಾ ಸಮಯಕ್ಕೆ ಒಗ್ಗಿಕೊಳ್ಳಲೇ ಬೇಕಾಗುತ್ತದೆ.

ತಪ್ಪು: ಕ್ಲಿಪ್ ಹಾಕಿಸಿದರೆ ಊಟ ಮಾಡಲು ಆಗುವುದಿಲ್ಲ.

ಸರಿ: ಜಗಿಯುವ ದವಡೆ ಹಲ್ಲಿನ ಮೇಲ್ಭಾಗದಲ್ಲಿ ಯಾವುದೇ ಕ್ಲಿಪ್ ಇರದ ಕಾರಣ ಊಟ ಮಾಡಲು ಯಾವುದೇ ತೊಂದರೆ ಇರುವುದಿಲ್ಲ. ಕ್ಲಿಪ್‌ನ ಗುಂಡಿಗಳು (ಬ್ರಾಕೆಟ್) ಇರುವ ಮುಂಭಾಗದ ಬಾಚಿ ಹಲ್ಲುಗಳಿಂದ ಜಗಿಯಬಾರದು ಅಷ್ಟೆ. ಇದಕ್ಕಾಗಿ ವೈದ್ಯರ ಸಲಹೆ- ಸೂಚನೆ ಪಡೆಯಬೇಕು.

ತಪ್ಪು: ಹಲ್ಲಿಗೆ ಕ್ಲಿಪ್ ಹಾಕಿಸಿರುವುದು ಜನರಿಗೆ ಗೊತ್ತಾಗುತ್ತದೆ, ಎಲ್ಲರೂ ಆಡಿಕೊಂಡು ನಗುತ್ತಾರೆ.

ಸರಿ: ಇದಕ್ಕಾಗಿ ಬೇಜಾರಾಗದಿರಿ. ಮುಂಭಾಗದ ಕ್ಲಿಪ್ ಚಿಕಿತ್ಸೆಯಂತೆ ಹಲ್ಲಿನ ಒಳಭಾಗದಿಂದಲೂ ಚಿಕಿತ್ಸಾ ಕ್ರಮ ಲಭ್ಯವಿದೆ. ಶೇ 30ರಷ್ಟು ಜನ ಈ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಚಿಕಿತ್ಸೆ ಪಡೆದರೆ ನಿಮ್ಮ ಮುಂದೆ ಇರುವ ವ್ಯಕ್ತಿಗಳಿಗೂ ಬಾಯಿಯ ಕ್ಲಿಪ್ ಕಾಣಿಸುವುದಿಲ್ಲ. ಇದರ ಜೊತೆಗೆ ಪಾರದರ್ಶಕ ಕ್ಲಿಪ್ (ಹಲ್ಲಿನ ಬಣ್ಣ), ಇನ್‌ವಿಸಲೈನ್ (ಇನ್‌ವಿಸಿಬಲ್ ಅಲೈನ್‌ಮೆಂಟ್- ಬರಿಗಣ್ಣಿಗೆ ಕಾಣದಷ್ಟು ಸೂಕ್ಷ್ಮವಾದ  ಕ್ಲಿಪ್) ವಿಧಾನ ಲಭ್ಯವಿದೆ. ಇಂತಹ ವಿಧಾನ ನಿಮಗೆ ಉಪಯೋಗಕ್ಕೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT