ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳಾ ಕಪ್‌ ಬ್ಯಾಡ್ಮಿಂಟನ್‌: ಪ್ರಶಸ್ತಿ ಮುಡಿಗೇರಿಸಿಕೊಂಡ ನಿಖಿಲ್, ಕನಕ್

Published 12 ಮೇ 2024, 15:44 IST
Last Updated 12 ಮೇ 2024, 15:44 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದ ರ‍್ಯಾಂಕಿಂಗ್‌ ಆಟಗಾರರು ನಿರಾಸೆ ಕಂಡ ಕೊನೆಯ ದಿನ ಭರ್ಜರಿ ಆಟವಾಡಿದ ನಿಖಿಲ್ ಶ್ಯಾಮ್ ಶ್ರೀರಾಮ್‌ ಅವರು ಮಂಗಳಾ ಕಪ್ ರಾಷ್ಟ್ರೀಯ ಮುಕ್ತ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಮಹಿಳಾ ವಿಭಾಗದ ಪ್ರಶಸ್ತಿ ಸ್ನೇಹಾ ಎಸ್‌ ಮುಡಿಯೇರಿತು.

ಮಂಗಳಾ ಬ್ಯಾಡ್ಮಿಂಟನ್ ಸಂಸ್ಥೆ, ನಗರದ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಟೂರ್ನಿಯ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಬೆಂಗಳೂರಿನ ಅರೈಸ್ ಬ್ಯಾಡ್ಮಿಂಟನ್ ಅಕಾಡೆಮಿಯ ನಿಖಿಲ್‌ 21–11, 15–21, 22–20ರಲ್ಲಿ ಎಲ್‌ಎನ್‌ಬಿಎಯ ಶ್ರೀವರ್ಷನ್ ವಿರುದ್ಧ ಜಯ ಸಾಧಿಸಿದರು.

ಆಕ್ರಮಣಕಾರಿ ಆಟವಾಡಿದ ಶ್ರೀವರ್ಷನ್‌ ಅವರ ಮುಂದೆ ಚಾಕಚಕ್ಯತೆ ಮೆರೆದ ನಿಖಿಲ್, ನೆಟ್‌ ಬಳಿ ಮೋಹಕ ಡ್ರಾಪ್‌ಗಳ ಮೂಲಕ ಪಾಯಿಂಟ್‌ಗಳನ್ನು ಕಲೆ ಹಾಕಿದರು. ಎರಡನೇ ಗೇಮ್‌ ಗೆದ್ದ ಶ್ರೀವರ್ಷನ್‌ ಕೊನೆಯ ಗೇಮ್‌ನಲ್ಲಿ ಭಾರಿ ಪೈಪೋಟಿ ನೀಡಿದರು. ಒಂದು ಹಂತದಲ್ಲಿ ಪಂದ್ಯ ಗೆಲ್ಲುವತ್ತ ಸಾಗಿದ್ದರು. ಆದರೆ ಧೃತಿಗೆಡದ ನಿಖಿಲ್ ಹಿನ್ನಡೆಯಿಂದ ಚೇತರಿಸಿಕೊಂಡು ಗೇಮ್ ಮತ್ತು ಪಂದ್ಯವನ್ನು ತಮ್ಮದಾಗಿಸಿಕೊಂಡರು. 

ನಿಖಿಲ್ ₹ 35 ಸಾವಿರ ಮೊತ್ತ ಮತ್ತು ಟ್ರೋಫಿ ಗಳಿಸಿದರೆ ರನ್ನರ್ ಅಪ್ ಶ್ರೀವರ್ಷನ್‌ಗೆ ₹ 15 ಸಾವಿರ ಮೊತ್ತ ಮತ್ತು ಟ್ರೋಫಿ ನೀಡಲಾಯಿತು. ಸೆಮಿಫೈನಲ್‌ನಲ್ಲಿ ರ‍್ಯಾಂಕಿಂಗ್ ಆಟಗಾರ ಹೇಮಂತ್ ಗೌಡ ವಿರುದ್ಧ ನಿಖಿಲ್ ಮತ್ತು ಆದಿತ್ಯ ವಿರುದ್ಧ ಶ್ರೀವರ್ಷನ್ ಜಯ ಗಳಿಸಿದ್ದರು. ಇತರ ರ‍್ಯಾಂಕಿಂಗ್ ಆಟಗಾರರು ಎಂಟರ ಘಟ್ಟದಲ್ಲಿ ಮುಗ್ಗರಿಸಿದ್ದರು. 

ಕನಕ್ ಸವಾಲು ಗೆದ್ದ ಸ್ನೇಹಾ

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ನಾಲ್ಕರ ಘಟ್ಟ ತಲುಪಿದ್ದ ರಾಜ್ಯದ ಏಕೈಕ ರ‍್ಯಾಂಕಿಂಗ್ ಆಟಗಾರ್ತಿ, ಬೆಂಗಳೂರಿನ ಸೆಲೆನೈಟ್ ಸ್ಪೋರ್ಟ್ಸ್ ಅಕಾಡೆಮಿಯ ಸ್ನೇಹಾ ಎಸ್‌ ಫೈನಲ್‌ನಲ್ಲಿ ಆರ್‌ಆರ್‌ಬಿಎಯ ಕನಕ್ ಕಲಕೋಟಿ ಸವಾಲನ್ನು ಮೀರಿನಿಂತರು. ತೀವ್ರ ಪೈಪೋಟಿ ಕಂಡ ಎರಡನೇ ಗೇಮ್‌ನಲ್ಲಿ ಸೋತರೂ ಪಂದ್ಯದಲ್ಲಿ ಕನಕ್ ಅವರನ್ನು 21–8, 21–23, 21–9ರಲ್ಲಿ ಮಣಿಸಿದ ಸ್ನೇಹಾ ₹ 15 ಸಾವಿರ ಮೊತ್ತ ಮತ್ತು ಟ್ರೋಫಿ ತಮ್ಮದಾಗಿಸಿಕೊಂಡರು. ಕನಕ್‌ ₹ 7 ಸಾವಿರ ಮತ್ತು ಟ್ರೋಫಿ ಗಳಿಸಿದರು.

ಕುತೂಹಲ ಕೆರಳಿಸಿದ್ದ ಮಿಶ್ರ ಡಬಲ್ಸ್‌ನಲ್ಲಿ ಅರೈಸ್ ಬ್ಯಾಡ್ಮಿಂಟನ್ ಅಕಾಡೆಮಿಯ ಡ್ಯಾನೀಲ್ ಎಸ್‌.ಫರೀದ್ ಮತ್ತು ಅಮೃತಾ ಪಿ ಜೋಡಿ ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ ಅವರು ಬೆಂಗಳೂರಿನ ವೈಪಿಬಿಎಯ ಸಂತೋಷ್ ಗಜೇಂದ್ರನ್ ಮತ್ತು ಗಗನಾ ಎನ್‌.ಎಸ್‌ ವಿರುದ್ಧ 25–27, 21–11, 21–12ರಲ್ಲಿ ಗೆಲುವು ಸಾಧಿಸಿದರು. ವಿಜೇತ ಜೋಡಿಗೆ ₹ 20 ಸಾವಿರ ಮೊತ್ತ ಮತ್ತು ಟ್ರೋಫಿ, ರನ್ನರ್ ಅಪ್‌ಗೆ ₹ 11 ಸಾವಿರ ಮತ್ತು ಟ್ರೋಫಿ ನೀಡಲಾಯಿತು.

ಮಹಿಳೆಯರ ಡಬಲ್ಸ್‌ ಪ್ರಶಸ್ತಿ ವೈಪಿಬಿಎಯ ಗಗನಾ ಎನ್‌.ಎಸ್ ಮತ್ತು ಸೆಲೆನೈಟ್ ಸ್ಪೋರ್ಟ್ಸ್ ಅಕಾಡೆಮಿಯ ಪ್ರಾಂಜಲಿ ಪಾಲಾಯಿತು. ಫೈನಲ್‌ನಲ್ಲಿ ಈ ಜೋಡಿ ಅರೈಸ್‌ನ ಜಾಹ್ನವಿ ಶೆಟ್ಟಿ ಹಾಗೂ ಪ್ರೇರಣಾ ನೀಲೂರಿ ಅವರನ್ನು 21–13, 23–21ರಲ್ಲಿ ಮಣಿಸಿತು. ರಾತ್ರಿ ನಡೆದ ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಅರೈಸ್‌ನ ಅರ್ಷಿತ್ ಸೂರ್ಯ ಮತ್ತು ವೈಭವ್, ಮೈಸೂರು ಆರ್‌ಬಿಎಯ ರುದ್ರ ಶಾಹಿ ಮತ್ತು ಕಿಶಲ್ ಗಣಪತಿ ವಿರುದ್ಧ ಗೆದ್ದರು. 

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ನಿಖಿಲ್ ಶ್ಯಾಮ್‌ ಸಂಭ್ರಮ -ಪ್ರಜಾವಾಣಿ ಚಿತ್ರ /ಫಕ್ರುದ್ಧೀನ್ ಎಚ್
ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ನಿಖಿಲ್ ಶ್ಯಾಮ್‌ ಸಂಭ್ರಮ -ಪ್ರಜಾವಾಣಿ ಚಿತ್ರ /ಫಕ್ರುದ್ಧೀನ್ ಎಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT