ನ್ಯಾಯಮಂಡಳಿ ಆದೇಶಕ್ಕೆ ಹೈಕೋರ್ಟ್ ತಡೆ

7
ಪಟ್ಟಂದೂರು ಅಗ್ರಹಾರ ಕೆರೆ ಜಮೀನು ವಿವಾದ *11 ಎಕರೆ 20 ಗುಂಟೆ ಪಹಣಿ ಕೇಳಿದ್ದ ಅರ್ಜಿದಾರರಿಗೆ ಹಿನ್ನಡೆ

ನ್ಯಾಯಮಂಡಳಿ ಆದೇಶಕ್ಕೆ ಹೈಕೋರ್ಟ್ ತಡೆ

Published:
Updated:

ಬೆಂಗಳೂರು: ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೇ ನಂ.54ರಲ್ಲಿ ಕೋಟ್ಯಂತರ ಮೌಲ್ಯದ 11 ಎಕರೆ 20 ಗುಂಟೆ ಜಮೀನಿಗೆ ಪಹಣಿ ನೀಡುವಂತೆ ನಿರ್ದೇಶನ ನೀಡಿದ್ದ ಭೂ ನ್ಯಾಯಮಂಡಳಿ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಭೂ ನ್ಯಾಯಮಂಡಳಿ ಆದೇಶ ಪ್ರಶ್ನಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು, ‘ಇದೊಂದು ಪುರಾತನ ಕೆರೆ. ಇದರ ಅಂಗಳವನ್ನು ಕೆಲವು ಖಾಸಗಿ ವ್ಯಕ್ತಿಗಳು  ಅಕ್ರಮವಾಗಿ ಒತ್ತುವರಿ ಮಾಡಿ ಭೂ ನ್ಯಾಯಮಂಡಳಿಯಿಂದ ಆದೇಶ ಪಡೆದಿದ್ದಾರೆ’ ಎಂದರು. 

‘ಭೂ ನ್ಯಾಯಮಂಡಳಿ ಆದೇಶವನ್ನು ಪ್ರಶ್ನಿಸುವುದು ತಡವಾಗಿದೆ ಎಂಬುದೇನೊ ನಿಜ. ಅಂದಿನ ಅಧಿಕಾರಿಗಳು ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದೂ ಅಷ್ಟೇ ಸರಿ. ಹಾಗೆಂದು, ರಾಜ್ಯ ಸರ್ಕಾರ ಕೈಕಟ್ಟಿ ಕುಳಿತಿಲ್ಲ. ಕೆರೆ ಸಂರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಿದ್ದು ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಲೇ ಇದೆ’ ಎಂದರು.

‘ಭೂ ನ್ಯಾಯಮಂಡಳಿಗೆ ಕೆರೆ ಅಂಗಳದ ಪ್ರದೇಶವನ್ನು ಹಿಡುವಳಿ ಎಂದು ಅಧಿಭೋಗ ಪ್ರಮಾಣಪತ್ರ ನೀಡುವ ಅಧಿಕಾರವೇ ಇಲ್ಲ. ಆದ್ದರಿಂದ, ನ್ಯಾಯಮಂಡಳಿ 1980ರ ನವೆಂಬರ್ 27ರಂದು ನೀಡಿರುವ ಆದೇಶ ರದ್ದುಗೊಳಿಸಬೇಕು’ ಎಂದು ಕೋರಿದರು. 

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಮೀನು ಖರೀದಿದಾರರ ಪರ ವಕೀಲ ಪಿ.ಎನ್.ಮನಮೋಹನ್, '38 ವರ್ಷಗಳ ಹಿಂದೆಯೇ ಅರ್ಜಿದಾರರು ಈ ಜಮೀನು ಖರೀದಿ ಮಾಡಿದ್ದಾರೆ. ಭೂ ನ್ಯಾಯ ಮಂಡಳಿ ಆದೇಶ ನಮ್ಮ ಪರವಾಗಿದೆ ಮತ್ತು ಕಾನೂನು ಬದ್ಧವಾಗಿಯೂ ಇದೆ’ ಎಂದು ಪ್ರತಿಪಾದಿಸಿದರು.

ಆದರೆ, ಇದನ್ನು ಮಾನ್ಯ ಮಾಡದ ನ್ಯಾಯಪೀಠ, ಭೂ ನ್ಯಾಯಮಂಡಳಿ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಲಾಗಿದೆ.

ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಭೂ ನ್ಯಾಯ ಮಂಡಳಿಯ ಆದೇಶವನ್ನು ರಿಟ್‌ ಅರ್ಜಿ ಮೂಲಕ ಪ್ರಶ್ನಿಸಿದೆ.

ದಶಕಗಳ ಕಾಲ ಪ್ರಕರಣ ನಡೆದು ಬಂದ ವ್ಯಾಜ್ಯದ ಹಾದಿ...
ಕಂದಾಯ ಇಲಾಖೆ ಸಲ್ಲಿಸಿರುವ ರಿಟ್‌ ಅರ್ಜಿಯಲ್ಲಿ ಪ್ರತಿವಾದಿಗಳೂ ಆಗಿರುವ ವಿವಾದಿತ ಜಮೀನಿನ ಕೊನೆಯ ಖರೀದಿದಾರರಾದ ಅರ್ಜಿದಾರರು 1980ರಲ್ಲಿ ಭೂ ನ್ಯಾಯಮಂಡಳಿ ಮುಂದೆ ಅರ್ಜಿ ಸಲ್ಲಿಸಿ ತಮ್ಮ ಹೆಸರಿಗೆ ಹಿಡುವಳಿ ದಾಖಲೆ ಮಾಡಿಕೊಡುವಂತೆ ಕೇಳಿದ್ದರು.

ಇದನ್ನು ಮಾನ್ಯ ಮಾಡಿದ್ದ ನ್ಯಾಯಮಂಡಳಿ, ‘ಕೆರೆ ಅಂಗಳ ತನ್ನ ಸ್ವರೂಪ ಕಳೆದುಕೊಂಡಿದೆ’ ಎಂಬ ಕಾರಣ ನೀಡಿ ಈ ಜಮೀನನ್ನು ಅರ್ಜಿದಾರರ ಹೆಸರಿಗೆ ಅಧಿಭೋಗ ಪ್ರಮಾಣ ಪತ್ರ  (ಆಕ್ಯುಪೆನ್ಸಿ ಸರ್ಟಿಫಿಕೇಟ್) ನೀಡಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ಅರ್ಜಿದಾರರು ಸಿವಿಲ್‌ ಕೋರ್ಟ್‌ನಲ್ಲಿ ಅಸಲು ದಾವೆ (ಒ.ಎಸ್‌) ಸಲ್ಲಿಸಿ, ‘ಈ ಜಮೀನಿನ ಮಾಲೀಕರು ನಾವೇ. ಇದಕ್ಕೆ ಡಿಕ್ರಿ ಮಾಡಿ ನಮ್ಮನ್ನು ಮಾಲೀಕರೆಂದು ಘೋಷಿಸಬೇಕು’ ಎಂದು ಕೋರಿದ್ದರು. ಇದರಲ್ಲಿ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಲಾಗಿತ್ತು. ಈ ವ್ಯಾಜ್ಯದಲ್ಲಿ ಅರ್ಜಿದಾರರ ಪರ ಡಿಕ್ರಿ ಆಯಿತು. ಈ ಡಿಕ್ರಿ ಆದೇಶವನ್ನು ಪ್ರಶ್ನಿಸಿ ಸರ್ಕಾರ ಜಿಲ್ಲಾ ನ್ಯಾಯಾಲಯದಲ್ಲಿ ರಿವಿಷನ್ ಅಪೀಲು (ಆರ್.ಎ) ಸಲ್ಲಿಸಿತು.

ಆರ್. ಎನಲ್ಲಿ ಸರ್ಕಾರದ ವಿರುದ್ಧ ಆದೇಶ ಬಂತು. ಇದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ನಲ್ಲಿ ಆರ್‌ಎಸ್‌ಎ (ರಿವಿಷನ್ ಸೆಕೆಂಡ್ ಅಪೀಲು) ಹಾಕಿತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ‘ಆರ್.ಎ ವಿಚಾರಣೆ ಸಮರ್ಪಕವಾಗಿ ನಡೆದಿಲ್ಲ. ಇದನ್ನು ಜಿಲ್ಲಾ ನ್ಯಾಯಾಲಯ ಮತ್ತೊಮ್ಮೆ ವಿಚಾರಣೆ ನಡೆಸಬೇಕು’ ಎಂದು ನಿರ್ದೇಶಿಸಿ ವಾಪಸು ಕಳಿಸಿತು. ಆಗ ಆರ್.ಎ ಮತ್ತೆ ವಜಾ ಆಯಿತು. ನಂತರದ ಆರ್‌.ಎಸ್.ಎನಲ್ಲೂ ಕೂಡಾ ಹೈಕೋರ್ಟ್‌ನಲ್ಲಿ ಸರ್ಕಾರದ ವಿರುದ್ಧವೇ ನಿರ್ಣಯ ಹೊರಬಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ (ಸ್ಪೆಷಲ್ ಲೀವ್ ಪಿಟಿಷನ್‌) ಸಲ್ಲಿಸಿತು. ಆದರೆ, ‘ಎಸ್‌ಎಲ್‌ಪಿ ಸಲ್ಲಿಸುವಲ್ಲಿ ವಿಳಂಬ ಆಗಿದೆ’ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್‌ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿತು. ಇದೀಗ ಅರ್ಜಿದಾರರು, ‘ಸರ್ಕಾರ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿಲ್ಲ’ ಎಂದು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಇದು ವಿಚಾರಣೆ ಹಂತದಲ್ಲಿದೆ.

ಸರ್ಕಾರದ ಸ್ಪಷ್ಟನೆ 
‘ಸರ್ವೇ ನಂ 54ರ ಪ್ರದೇಶವು 1859ರ ಸರ್ಕಾರಿ ದಾಖಲೆಗಳಲ್ಲಿ ಹಾಗೂ ಬಿ.ಖರಾಬ್‌ ಜಮೀನು ಎಂದೇ ಗುರುತಿಸಲಾಗಿದೆ. ಹಾಗಾಗಿ ಬಿ.ಖರಾಬ್ ಜಮೀನನ್ನು ಈಗ ಹಿಡುವಳಿ ಜಮೀನು ಎಂದು ಪರಿವರ್ತಿಸಲು ಸರ್ಕಾರದಿಂದ ಪ್ರತ್ಯೇಕ ಆದೇಶದ ಅಗತ್ಯವಿದೆ’ ಎಂದು ನ್ಯಾಯಾಂಗ ನಿಂದನೆ ಮೊಕದ್ದಮೆ ವೇಳೆ ಸರ್ಕಾರ ಹೈಕೋರ್ಟ್‌ಗೆ ಈಗಾಗಲೇ ಸ್ಪಷ್ಟಪಡಿಸಿದೆ.

*
38 ವರ್ಷಗಳಿಂದ ಜಮೀನು ನಿಮ್ಮದೆಂದು ಹೇಳುತ್ತಿದ್ದೀರಿ. ಆದರೆ, ನೀವು ಯಾಕೆ ಅಲ್ಲಿ ಇಷ್ಟು ದಿನ ಯಾವುದೇ ಚಟುವಟಿಕೆ ನಡೆಸದೇ ಸುಮ್ಮನಿದ್ದೀರಿ ?
-ಜಿ.ನರೇಂದರ್, ನ್ಯಾಯಮೂರ್ತಿ

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !