ವಿಮಾನ ನಿಲ್ದಾಣಕ್ಕೆ ಉಪನಗರ ರೈಲು?

7
ಹೈಸ್ಪೀಡ್‌ ರೈಲು ಸಂಪರ್ಕ ಯೋಜನೆ ಪ್ರಸ್ತಾವ ಕೈಬಿಟ್ಟ ರಾಜ್ಯ ಸರ್ಕಾರ

ವಿಮಾನ ನಿಲ್ದಾಣಕ್ಕೆ ಉಪನಗರ ರೈಲು?

Published:
Updated:

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಉಪನಗರ ರೈಲು ಅಥವಾ ಮೆಟ್ರೊ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿರುವ ರಾಜ್ಯ ಸರ್ಕಾರ ನಗರದ ಕಬ್ಬನ್‌ ರಸ್ತೆಯಿಂದ ಅಲ್ಲಿಗೆ ಹೈಸ್ಪೀಡ್‌ ರೈಲು ಸೇವೆ ಒದಗಿಸುವ ಪ್ರಸ್ತಾವ ಕೈಬಿಟ್ಟಿದೆ.

ಬೆಂಗಳೂರು ವಿಮಾನ ನಿಲ್ದಾಣ ರೈಲು ಸಂಪರ್ಕ (ಬಿಎಆರ್‌ಎಲ್‌) ಸಂಸ್ಥೆಯನ್ನು 2008ರಲ್ಲಿ ಆರಂಭಿಲಾಗಿತ್ತು. ಈ ಸಂಸ್ಥೆಯು ಅಲ್ಟ್ರಾ ಹೈಸ್ಪೀಡ್‌ ಮ್ಯಾಗ್‌ಲೆವ್‌ (ಕಾಂತೀಯ ಪ್ರಭಾವದಿಂದ ತೇಲುವ) ರೈಲು ವ್ಯವಸ್ಥೆಯನ್ನು ಒದಗಿಸುವ ಕುರಿತು ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಸಿದ್ಧಪಡಿಸಿತ್ತು.

ಸ್ವಿಸ್‌ ಕಂಪನಿಯ ನೆರವಿನಿಂದ ರೂಪಿಸಿದ್ದ ಈ ಡಿಪಿಆರ್‌ ಪ್ರಕಾರ, ಈ ವ್ಯವಸ್ಥೆಗೆ ಮೂರು ಹಂತಗಳಲ್ಲಿ  ಮೂಲಸೌಕರ್ಯ ನಿರ್ಮಿಸಲು ಉದ್ದೇಶಿಸಲಾಗಿತ್ತು. 38 ಕಿ.ಮೀ ಉದ್ದದ ಮಾರ್ಗವನ್ನು ಎರಡು ಹಂತಗಳಲ್ಲಿ ಹಾಗೂ 7 ಕಿ.ಮೀ ಉದ್ದದ ಮಾರ್ಗವನ್ನು ಮೂರನೇ ಹಂತದಲ್ಲಿ ಕೈಗೊಳ್ಳುವಂತೆ ಸಂಸ್ಥೆ ಶಿಫಾರಸು ಮಾಡಿತ್ತು. 

‘ನಾವು ಈ ಯೋಜನೆಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಹಸ್ತಾಂತರಿಸುತ್ತಿದ್ದೇವೆ. ಬಿಎಆರ್‌ಎಲ್‌ನ ಹೊಣೆಯನ್ನೂ ಅವರಿಗೇ ವಹಿಸುತ್ತಿದ್ದೇವೆ. ಹಾಗಾಗಿ ಹೈಸ್ಪೀಡ್‌ ರೈಲು ಯೋಜನೆಯನ್ನು ಕೈಬಿಡುತ್ತೇವೆ. ಅದರ ಬದಲು ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸಂಪರ್ಕ ಕಲ್ಪಿಸಲು ಹೆಚ್ಚಿನ ಆಸಕ್ತಿ ಹೊಂದಿದ್ದೇವೆ’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ತಿಳಿಸಿದರು.

‘ದೇವನಹಳ್ಳಿವರೆಗಿನ ರೈಲು ಮಾರ್ಗ ವಿಮಾನ ನಿಲ್ದಾಣದ ಸಮೀಪದಲ್ಲೇ ಹಾದುಹೋಗುತ್ತದೆ. ಸೂಪರ್‌ಫಾಸ್ಟ್‌ ರೈಲುಗಳನ್ನು ಓಡಿಸಲು ಅನುವಾಗುವಂತೆ ಇಲ್ಲಿನ ಮಾರ್ಗವನ್ನು ಮೇಲ್ದರ್ಜೆಗೇರಿಸಬೇಕಾಗಿದೆ. ಇಲ್ಲಿ ಜೋಡಿ ಹಳಿ ನಿರ್ಮಿಸುವ ಬಗ್ಗೆ ಹಾಗೂ ಈ ಮಾರ್ಗದ ವಿದ್ಯುದೀಕರಣದ ಬಗ್ಗೆ ರೈಲ್ವೆ ಇಲಾಖೆ ಜೊತೆ ಮಾತುಕತೆ ನಡೆಸಿದ್ದೇವೆ’ ಎಂದು ವಿವರಿಸಿದರು.

ಇನ್ನೊಂದೆಡೆ, ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸುವ ಕುರಿತ ವಿಸ್ತೃತ ವಿನ್ಯಾಸ ರೂಪಿಸಲು ಬಿಎಂಆರ್‌ಸಿಎಲ್‌ ಟೆಂಡರ್‌ ಆಹ್ವಾನಿಸಿದೆ. ನಾಗವಾರ– ಹಾಗೂ ವಿಮಾನನಿಲ್ದಾಣ ನಡುವಿನ 29 ಕಿ.ಮೀ ಉದ್ದದ ಹಾಗೂ ₹ 5,950 ಕೋಟಿ ವೆಚ್ಚದ ಈ ಕಾಮಗಾರಿಗೆ ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ನಮ್ಮ ಮೆಟ್ರೊ ಎರಡನೇ ಹಂತದಲ್ಲಿ (2ಬಿ) ಇದು ಅನುಷ್ಠಾನಗೊಳ್ಳಲಿದೆ.

‘ಸರ್ಕಾರವು ಉಪನಗರ ರೈಲು ಸಂಪರ್ಕ ಕಲ್ಪಿಸುವುದಕ್ಕೇ ಆಸಕ್ತಿ ವಹಿಸಿದೆ. ಇದರಿಂದ ವಿಮಾನ ನಿಲ್ದಾಣವನ್ನು ಬೇಗ ತಲುಪಬಹುದು. ಮೆಟ್ರೊಗೆ ಹೋಲಿಸಿದರೆ ರೈಲು ಪ್ರಯಾಣ ದರವೂ ಕಡಿಮೆ. ಈ ಮಾರ್ಗದಲ್ಲಿ ನಿತ್ಯ ಪ್ರಯಾಣಿಸುವವರು ತಿಂಗಳ ಪಾಸ್‌ನ ಪ್ರಯೋಜನವನ್ನೂ ಪಡೆಯಬಹುದು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಬಿಎಆರ್‌ಎಲ್‌ಗೆ ಹೈಸ್ಪೀಡ್‌ ರೈಲು ಯೋಜನೆ ಜೊತೆಗೆ ಮಾನೊರೈಲು ಅಥವಾ ಲಘು ರೈಲು ಸಾರಿಗೆ (ಎಲ್‌ಆರ್‌ಟಿ) ಯೋಜನೆ ರೂಪಿಸುವ ಹೊಣೆಯನ್ನೂ ವಹಿಸಲಾಗಿತ್ತು. ಸಂಸ್ಥೆಯು ಹೊರವರ್ತುಲ ರಸ್ತೆಯ ಪಶ್ಚಿಮ ಭಾಗದಲ್ಲಿ ಹೆಬ್ಬಾಳ– ಜೆ.ಪಿ.ನಗರದ ನಡುವೆ ಹಾಗೂ ಮಾಗಡಿ ರಸ್ತೆ ಟೋಲ್‌ಗೇಟ್‌ನಿಂದ ನೈಸ್‌ ರಸ್ತೆಯಾಚೆಗಿನ ಕಾಚೋಹಳ್ಳಿ ಗೇಟ್‌ವರೆಗೆ ಎಲ್‌ಆರ್‌ಟಿ ಯೋಜನೆ ರೂಪಿಸಬೇಕಿತ್ತು. ಈ ಎಲ್ಲ ಯೋಜನೆಗಳನ್ನೂ ಬಿಎಂಆರ್‌ಸಿಎಲ್‌ ಅನುಷ್ಠಾನಗೊಳಿಸಲಿದೆ. ಹಾಗಾಗಿ ಬಿಎಆರ್‌ಎಲ್‌ ವಿಸರ್ಜಿಸಿ ಅದರಲ್ಲಿರುವ ಸಿಬ್ಬಂದಿಯನ್ನು ಅನ್ಯ ಇಲಾಖೆಗಳಿಗೆ (ಸಿಬ್ಬಂದಿ ಕೊರತೆ ಇರುವ ಕಡೆ) ನಿಯೋಜಿಸಲು ಶಿಫಾರಸು ಮಾಡಿದ್ದೇವೆ’ ಎಂದು ವಿವರಿಸಿದರು.

Tags: 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !