ಗುರುವಾರ , ಅಕ್ಟೋಬರ್ 17, 2019
26 °C

ಚಳಿಗಾಲಕ್ಕಿರಲಿ ತ್ವಚೆಯ ಆರೈಕೆ

Published:
Updated:

ಇನ್ನೇನು ಚಳಿಗಾಲ ಆರಂಭವಾಗುತ್ತದೆ. ಚಳಿಗಾಲ ಎಂದರೆ ಬರೀ ಚಳಿಯಲ್ಲ, ಅದು ಋತುಮಾನಗಳಲ್ಲೇ ತುಂಬ ಸುಂದರ ಕಾಲ. ಬೆಚ್ಚಗೆ ಹೊದ್ದು ಮಲಗುವ ಬಯಕೆ ಹುಟ್ಟಿಸುವ ಚಳಿಗಾಲದಲ್ಲಿ ಉದಾಸೀನವೂ ಜೊತೆಯಾಗುತ್ತದೆ. ಆದರೆ ಸೌಂದರ್ಯದ ಬಗ್ಗೆ ಉದಾಸೀನ ಸಲ್ಲದು. ಚಳಿಗಾಲ ಆರಂಭವಾಗುತ್ತಿದ್ದಂತೆ ಚರ್ಮ ಒಣಗಲು ಆರಂಭವಾಗುತ್ತದೆ. ಚರ್ಮದ ಬಗ್ಗೆ ಕಾಳಜಿ ವಹಿಸದಿದ್ದರೆ ಸುಕೋಮಲ ಚರ್ಮವು ಪಕಳೆಯೇಳಲು ಆರಂಭಿಸುತ್ತದೆ. ರಂಗಿನ ತುಟಿಗಳಲ್ಲಿ ಬಿರುಕು ಮೂಡುತ್ತದೆ. ಅದರಲ್ಲೂ ಹೆಂಗಳೆಯರ ಚರ್ಮ ತುಸು ಸೂಕ್ಷ್ಮ ಹಾಗೂ ಮೃದು. ಚಳಿಗಾಲ ನಿಮ್ಮ ಸುಂದರ ಮುಖ ಹಾಗೂ ಚರ್ಮದ ಅಂದವನ್ನು ಕೆಡಿಸುವ ಮೊದಲೇ ಒಂದಿಷ್ಟು ಜಾಗೃತೆ ವಹಿಸಿದರೆ ಉತ್ತಮ. ಅದರಿಂದ ಚಳಿಗಾಲ ಪೂರ್ತಿ ನಿಮ್ಮ ಚರ್ಮದ ಕಾಂತಿ ಹಾಗೇ ಇರುತ್ತದೆ. ಚಳಿಯಲ್ಲಿ ಚರ್ಮ ರಕ್ಷಿಸಲು ಕೆಲವು ಟಿಪ್ಸ್‌ಗಳನ್ನು ಪಾಲಿಸಿದರೆ ಸೌಂದರ್ಯ ಹೆಚ್ಚುವುದರಲ್ಲಿ ಸಂಶಯವಿಲ್ಲ.

ಆಹಾರ ಕ್ರಮದ ಮೇಲೆ ನಿಗಾ ಇರಲಿ

ಚರ್ಮದ ಸೌಂದರ್ಯ ಕೇವಲ ನಾವು ಹಚ್ಚುವ ಕ್ರೀಮ್‌ಗಳ ಮೇಲಷ್ಟೇ ಅವಲಂಬಿತವಾಗಿಲ್ಲ. ತಿನ್ನುವ ಆಹಾರವೂ ಚರ್ಮದ ಅಂದವನ್ನು ಹೆಚ್ಚಿಸುತ್ತದೆ. ತರಕಾರಿ, ಹಣ್ಣು, ಎಳನೀರಿನ ಸೇವನೆಯಿಂದ ದೇಹಕ್ಕೆ ಬೇಕಾಗುವ ಅಗತ್ಯ ಪೌಷ್ಟಿಕಾಂಶಗಳು ದೊರೆಯುತ್ತವೆ. ಇದು ಚರ್ಮ ಕಾಂತಿ ಹೆಚ್ಚಲು ಸಹಕಾರಿ. ದೇಹ ಹಾಗೂ ಚರ್ಮದ ಆರೋಗ್ಯಕ್ಕೆ ನೀರು ತುಂಬ ಅವಶ್ಯ. ಅದರಲ್ಲೂ ಚರ್ಮದ ಕಾಂತಿ ಹೆಚ್ಚಲು ಪ್ರತಿದಿನ 4 ಲೀಟರ್‌ಗಳಷ್ಟು ನೀರು ಕುಡಿಯಬೇಕು. ತರಕಾರಿ ಹಾಗೂ ಹಣ್ಣಿನ ಸೇವನೆಯಿಂದಲೂ ದೇಹದಲ್ಲಿ ನೀರಿನಂಶ ಸಂಗ್ರಹವಾಗುತ್ತದೆ. ಪ್ರಿಮ್‌ರೋಸ್ ಸಿರಪ್, ಮಾತ್ರೆ ಹಾಗೂ ಆಲೀವ್ ಎಣ್ಣೆಯನ್ನು ಆಹಾರದೊಂದಿಗೆ ಬಳಸುವುದರಿಂದ ಚರ್ಮವು ಮೃದುವಾಗುತ್ತದೆ.

ಪ್ರತಿದಿನ ಮಾಯಿಶ್ಚರೈಸಿಂಗ್ ಕ್ರೀಮ್ ಹಚ್ಚಿ

ಹಿಮದ ವಾತಾವರಣ ಹಾಗೂ ಚಳಿಗಾಳಿಗೆ ದೇಹವನ್ನು ಒಡ್ಡುವುದರಿಂದ ಚರ್ಮ ಬೇಗ ಒಣಗಿದಂತಾಗುತ್ತದೆ. ಮಾಯಿಶ್ಚರೈಸರ್ ಅಥವಾ ಕೋಲ್ಡ್‌ಕ್ರೀಮ್‌ಗಳನ್ನು ಚರ್ಮಕ್ಕೆ ಹಚ್ಚುವುದು ತುಂಬಾ ಮುಖ್ಯ. ಇದರಿಂದ ಚರ್ಮದಲ್ಲಿ ತೇವಾಂಶ ಸಂಗ್ರಹವಾಗುತ್ತದೆ. ಪ್ರತಿದಿನ ಸಂಜೆ ಮಾಯಿಶ್ಚರೈಸಿಂಗ್ ನೈಟ್‌ಕ್ರೀಮ್ ಹಚ್ಚುವುದನ್ನು ಮರೆಯಬೇಡಿ. ಹಗಲು ಹೊತ್ತಿನಲ್ಲಿ ಕಣ್ಣು ಹಾಗೂ ಒಣಗಿದ ಚರ್ಮದ ಭಾಗಕ್ಕೆ ಮಾಯಿಶ್ಚರೈಸಿಂಗ್ ಕ್ರೀಮ್ ಹಚ್ಚುವುದಕ್ಕೆ ಮರೆಯಬೇಡಿ. ಆದರೆ ಗಮನಿಸಬೇಕಾದದ್ದು ಏನೆಂದರೆ ದೇಹಕ್ಕೆ ಯಾವುದೇ ಕ್ರೀಮ್‌ ಅನ್ನು ಹಚ್ಚುವ ಮೊದಲು ಚರ್ಮವೈದ್ಯರಿಂದ ಅಭಿಪ್ರಾಯ ಪಡೆದುಕೊಳ್ಳುವುದು ಉತ್ತಮ.

ಎಣ್ಣೆ ಚಿಕಿತ್ಸೆ

ಸ್ನಾನಕ್ಕೂ ಮೊದಲು ಚರ್ಮಕ್ಕೆ ಬಿಸಿ ಮಾಡಿದ ತೆಂಗಿನೆಣ್ಣೆ ಹಚ್ಚಿ ಮಸಾಜ್ ಮಾಡುವುದು ತುಂಬಾ ಮುಖ್ಯ. ಇದರಿಂದ ಚರ್ಮ ಒಣಗುವುದನ್ನು ತಪ್ಪಿಸಬಹುದು. ಜೊತೆಗೆ ಪಕಳೆ ಏಳುವುದು ತಪ್ಪುತ್ತದೆ. ಕೆನೆಯುಳ್ಳ ಸೋಪ್‌ ಅನ್ನು ಬಳಸುವುದರಿಂದ ಚರ್ಮಕ್ಕೆ ಬೇಕಾಗುವ ಪೂರಕ ತೇವಾಂಶವನ್ನು ಅದು ಒದಗಿಸುತ್ತದೆ. ಹಿಮಗಾಳಿಗೆ ಹೊರ ಹೋಗುವ ಹಾಗಿದ್ದರೆ ಸ್ನಾನ ಮಾಡಿದ ಅಥವಾ ಮುಖ ತೊಳೆದ ಅರ್ಧ ಗಂಟೆ ನಂತರ ಹೊರಡಿ. ತಾಪಮಾನದ ಬದಲಾವಣೆಯೂ ಚರ್ಮ ಕಳೆಗಟ್ಟಲು ಕಾರಣವಾಗಬಹುದು. ಹಾಗಾಗಿ ಹೊರಗಿನಿಂದ ಬಂದ ಕೂಡಲೇ ತಣ್ಣೀರಿನಿಂದ ಮುಖ ತೊಳೆಯುವುದನ್ನು ಮರೆಯದಿರಿ.

ಎಣ್ಣೆ ಬಳಕೆ

ಸ್ನಾನ ಮಾಡುವ ಮೊದಲು ನೀರಿಗೆ ಕೆಲವು ಹನಿ ತೆಂಗಿನೆಣ್ಣೆ ಸೇರಿಸಿಕೊಳ್ಳಿ. ಇದರಿಂದ ಸ್ನಾನ ಮಾಡಿದ ಮೇಲೆ ಚರ್ಮ ಒಣಗದಂತೆ ಕಾಪಾಡಿಕೊಳ್ಳಬಹುದು. ಸಾಧ್ಯವಾದರೆ ಸ್ನಾನಕ್ಕೂ ಮೊದಲು ಅಭ್ಯಂಗ (ಉಗುರು ಬೆಚ್ಚಗಿನ ಎಣ್ಣೆಯಲ್ಲಿ ಮಸಾಜ್ ಮಾಡುವುದು) ಮಾಡಿಕೊಳ್ಳುವುದು ತುಂಬಾ ಉತ್ತಮ. ಚಳಿಗಾಲದಲ್ಲಿ ಅತಿ ಬಿಸಿನೀರು ಸ್ನಾನ ಮಾಡುವುದು ಒಳ್ಳೆಯದಲ್ಲ. ಇದರಿಂದ ದೇಹದಲ್ಲಿರುವ ನೈಸರ್ಗಿಕ ಎಣ್ಣೆ ಅಂಶವು ಕಡಿಮೆಯಾಗಬಹುದು.

ಅಗಸೆಬೀಜ, ಬಾದಾಮಿ ಹಾಗೂ ತುಪ್ಪ‌

ಅಗಸೆಬೀಜದ ಎಣ್ಣೆ ಬಾಯಿಗೆ ಕಹಿಯಾದರೂ ಇದು ದೇಹದೊಳಗಿನಿಂದ ತೇವಾಂಶವನ್ನು ಹೆಚ್ಚಿಸುತ್ತದೆ. ಇದರಲ್ಲಿ ಪ್ರಮುಖ ಕೊಬ್ಬಿನಂಶಗಳಿದ್ದು ಇದರಿಂದ ನಮ್ಮ ದೇಹಾರೋಗ್ಯವೂ ಉತ್ತಮವಾಗುತ್ತದೆ. ಇದು ಅಂಗಡಿಗಳಲ್ಲೂ ಲಭ್ಯವಿದೆ. ಅಲ್ಲದೇ ಮಾತ್ರೆಗಳ ರೂಪದಲ್ಲೂ ಸಿಗುತ್ತದೆ.

ಕೂದಲ ರಕ್ಷಣೆ

ಚಳಿಗಾದಲ್ಲಿ ಒದ್ದೆ ಕೂದಲಿನಲ್ಲಿ ಹೊರ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ. ಇದರಿಂದ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳಬಹುದು. ಡೈಯರ್ಸ್ ಹಾಗೂ ಕರ್ಲಿಂಗ್ ಮಾಡುವ ಸಾಧನವನ್ನು ಬಳಸುವುದಕ್ಕೆ ಕಡಿವಾಣ ಹಾಕಿ. ಅದನ್ನು ಬಳಸಲೇಬೇಕಾದ ಅನಿವಾರ್ಯತೆಯ ಎದುರಾದರೆ ಬಳಸುವ ಮೊದಲು ಕಂಡಿಷನರ್ ಹಚ್ಚಿ.

ತುಟಿಯ ರಕ್ಷಣೆ

ಚಳಿಗಾಲದಲ್ಲಿ ತುಟಿ ಚರ್ಮ ಒಡೆಯುವುದು, ಸಿಪ್ಪೆ ಏಳುವುದು ಸಾಮಾನ್ಯ. ಹಾಗೆಂದು ಸಿ‌ಪ್ಪೆಯನ್ನು ಕಚ್ಚುವುದು, ಕೀಳುವುದು ಮಾಡಬಾರದು. ಒಮ್ಮೆ ತುಟಿಯ ಮೇಲಿಯ ಚರ್ಮವನ್ನು ಕಿತ್ತರೆ ಅದು ಗಾಯವಾಗುತ್ತದೆ, ಆ ಗಾಯ ಬೇಗನೆ ಗುಣ ಹೊಂದುವುದಿಲ್ಲ. ಇದರಿಂದ ತುಟಿ ದಪ್ಪವಾಗಿ ರಂಗು ಮಾಸುತ್ತದೆ. ಇದು ಅನೇಕರಲ್ಲಿ ಇರುವ ಕೆಟ್ಟ ಚಟ. ಇದನ್ನು ಬಿಡುವುದು ಕಷ್ಟ. ಆದರೆ ತುಟಿಯ ಅಂದ ಕಾಪಾಡಲು ಈ ಚಟದಿಂದ ದೂರವಿರುವುದು ಅನಿವಾರ್ಯ.

ಲಿಪ್‌ ಬಾಮ್‌

ಚಳಿಗಾಲದಲ್ಲಿ ದಿನಕ್ಕೆ ಕನಿಷ್ಠ 5 ಬಾರಿಯಾದರೂ ನಿಮ್ಮ ತುಟಿಯನ್ನು ಲಿಪ್‌ಬಾಮ್‌ನಿಂದ ಮುಚ್ಚಿ. ಈಗ ಲಿಪ್‌ಬಾಮ್‌ಗಳು ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲೂ ಸಿಗುತ್ತವೆ. ಆದರೆ ಅದರಲ್ಲಿ ಎಸ್‌ಪಿಎಫ್‌ 15 ಅಥವಾ 20 ಇದೆಯೇ ಗಮನಿಸಿ. ಅದರೊಂದಿಗೆ ಲಿಪ್‌ಬಾಮ್‌ನಲ್ಲಿ ವಿಟಮಿನ್ ಇ ಹಾಗೂ ಶಿಯಾ ಬಟರ್‌ ಅಂಶ ಇದ್ದರೆ ಉತ್ತಮ. ಚಳಿಗಾಲದಲ್ಲಿ ತುಟಿಯ ಮೇಲೆ ತುಪ್ಪ ಹಚ್ಚುವುದನ್ನು ಅಭ್ಯಾಸ ಮಾಡಿ. ರಾತ್ರಿ ಮಲಗುವ ಮೊದಲು ತೆಳ್ಳಗೆ ತುಪ್ಪ ಹಚ್ಚಿಕೊಂಡು ಮಲಗಿದರೆ ತುಟಿ ಒಣಗುವುದನ್ನು ನೈಸರ್ಗಿಕವಾಗಿ ತಡೆಯಬಹುದು.

ಇದನ್ನೂ ಓದಿ: ಚಳಿಗಾಲದಲ್ಲಿ ಪುರುಷರ ಚರ್ಮದ ಆರೈಕೆ

Post Comments (+)