ನಿಗಮ, ಮಂಡಳಿ, ಪ್ರಾಧಿಕಾರ ಗಳ ಅಧ್ಯಕ್ಷರಿಗೆ ಸಚಿವ ಸ್ಥಾನ ನೀಡಿರುವ ಸರ್ಕಾರದ ನಿರ್ಧಾರ ಜನರ ತೆರಿಗೆ ಹಣದ ಅಪಬಳಕೆ ಹಾಗೂ ಓಲೈಕೆ ರಾಜ್ಯಕಾರಣದ ಫಲಶ್ರುತಿಯಾಗಿದೆ.

ಐವತ್ತನಾಲ್ಕಕ್ಕೂ ಹೆಚ್ಚು ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನ ಹಾಗೂ ಸೌಲಭ್ಯವನ್ನು ಕಲ್ಪಿಸಿ ಸರ್ಕಾರ ಈಚೆಗೆ ಆದೇಶ ಹೊರಡಿಸಿದೆ. ಇದು ಆಡಳಿತಾತ್ಮಕವಾಗಿ ಕೆಟ್ಟ ಮೇಲ್ಪಂಕ್ತಿ ಹಾಕಿಕೊಡುವ ಹಾಗೂ ಜನರ ತೆರಿಗೆ ಹಣದ ಅಪಬಳಕೆಯ ಕ್ರಮವಾಗಿದೆ; ಓಲೈಕೆ ರಾಜಕಾರಣ ಮಿತಿ ಮೀರಿರುವುದರ ಫಲಶ್ರುತಿಯಾಗಿದೆ. ಈ ಹಿಂದೆ ನಿಗಮ–ಮಂಡಳಿಗಳ ಅಧ್ಯಕ್ಷರಾಗಿ ನೇಮಕಗೊಂಡಿದ್ದ 25ಕ್ಕೂ ಹೆಚ್ಚು ಶಾಸಕರು, ಪ್ರಾಧಿಕಾರ, ನಿಗಮಗಳ ಅಧ್ಯಕ್ಷರೂ ಸೇರಿದಂತೆ ಕೆಲವರಿಗೆ ಸಂಪುಟ ದರ್ಜೆಯ ಸೌಲಭ್ಯ ಒದಗಿಸಲಾಗಿತ್ತು. ಸಚಿವರೂ ಸೇರಿ, ಕಳೆದ ವರ್ಷದ ಅಕ್ಟೋಬರ್ನಲ್ಲಿ ಸಚಿವ ದರ್ಜೆಯ ಸೌಲಭ್ಯ ಪಡೆಯುವವರ ಸಂಖ್ಯೆ 76ರಷ್ಟಿತ್ತು. ಹೊಸ ಆದೇಶದ ಬಳಿಕ ಈ ಸಂಖ್ಯೆ 120 ಅನ್ನು ದಾಟಿದೆ.

ಸಚಿವ ಶ್ರೇಣಿಯ ಸೌಲಭ್ಯಕ್ಕಾಗಿ ಪ್ರತಿಯೊಬ್ಬರಿಗೆ ತಿಂಗಳಿಗೆ ಸರಿಸುಮಾರು ₹10 ಲಕ್ಷವನ್ನು ಬೊಕ್ಕಸದಿಂದ ಭರಿಸಲಾಗುತ್ತಿದೆ. ಈ ಲೆಕ್ಕದಂತೆ ವರ್ಷಕ್ಕೆ ಅಂದಾಜು ₹144 ಕೋಟಿಗೂ ಹೆಚ್ಚು ಮೊತ್ತ ವ್ಯಯವಾಗುತ್ತಿದೆ. ಶಾಸಕರನ್ನು ತೃಪ್ತಿಪಡಿಸಲು ಮೊದಲು ಬೇಕಾಬಿಟ್ಟಿಯಾಗಿ ಸಚಿವ ಸ್ಥಾನ ನೀಡಲಾಗುತ್ತಿತ್ತು. ‘ಜಂಬೋ’ ಸಚಿವ ಸಂಪುಟವು ಬೊಕ್ಕಸಕ್ಕೆ ಹೊರೆಯಾಗುವುದನ್ನು ತಪ್ಪಿಸಲು, ಆಯಾ ವಿಧಾನಸಭೆಯ ಸದಸ್ಯರ ಸಂಖ್ಯಾಬಲಕ್ಕೆ ಅನುಗುಣವಾಗಿ ಸಚಿವ ಸಂಪುಟಕ್ಕೆ ಮಿತಿ ಹಾಕಲಾಯಿತು. ಕರ್ನಾಟಕದಲ್ಲಿ ಮುಖ್ಯಮಂತ್ರಿಯೂ ಸೇರಿ 34 ಮಂದಿಗೆ ಮಾತ್ರ ಸಚಿವ ಸ್ಥಾನ ನೀಡುವ ಅವಕಾಶ ಇದೆ.

ಸಚಿವ ಸ್ಥಾನ ಹಂಚಿಕೆಯಲ್ಲಿ ಸಾಮಾಜಿಕ ಹಾಗೂ ಪ್ರಾದೇಶಿಕ ನ್ಯಾಯ ನಿರ್ಣಾಯಕವಾಗುವ ಬದಲು ಜಾತಿ, ಹಣಬಲವೇ ಪ್ರಧಾನವಾಗಿರುವುದು ರಹಸ್ಯವೇನಲ್ಲ. ಸಚಿವ ಸ್ಥಾನ ಸಿಗದೇ ಸಿಟ್ಟಿಗೇಳುವ ಶಾಸಕರನ್ನು ತೃಪ್ತಿಪಡಿಸಲು ಆಯಾ ಕಾಲದ ಸರ್ಕಾರಗಳು ಒಳದಾರಿಗಳನ್ನು ಹಿಡಿದವು. ನಿಗಮ–ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಿಸಿ, ಅವರಿಗೆ ಸಚಿವ ಶ್ರೇಣಿಯ ಎಲ್ಲ ಸೌಲಭ್ಯ ಗಳು ದಕ್ಕುವಂತೆ ಮಾಡುವುದು ಕೂಡ ಅಡ್ಡಮಾರ್ಗಗಳಲ್ಲೊಂದು. ಸಚಿವರು ಮಾತ್ರವಲ್ಲದೆ, ಕಾರ್ಯಕರ್ತರನ್ನು ಸಮಾಧಾನಪಡಿಸಲು ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರಿಗೂ ರಾಜ್ಯ ಸಚಿವ ಸ್ಥಾನ ನೀಡುವ ಕೆಟ್ಟ ಪರಂಪರೆಯೂ ಸೃಷ್ಟಿಯಾಯಿತು. ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿ ಗೊಳಿಸಿದ ಐದು ‘ಗ್ಯಾರಂಟಿ’ಗಳ ಅನುಷ್ಠಾನದ ಮೇಲುಸ್ತುವಾರಿಗಾಗಿ ಮತ್ತೊಂದು ಪ್ರಾಧಿಕಾರ ಸೃಜಿಸಿ ಅದಕ್ಕೆ ಅಧ್ಯಕ್ಷ–ಉಪಾಧ್ಯಕ್ಷರನ್ನು ನೇಮಕ ಮಾಡಲಾಯಿತು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲೂ ಸಮಿತಿ ರಚಿಸಿ, ಅವರಿಗೆ ಗೌರವಧನ ಕೊಡುವ ಹೊಸ ಪರಿಪಾಟವನ್ನೂ ಆರಂಭಿಸಲಾಯಿತು. ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಹೊಸ ತಂತ್ರಗಾರಿಕೆಯನ್ನು ಕಾಂಗ್ರೆಸ್ ಆರಂಭಿಸಿತು. ಎಲ್ಲ ಮಾದರಿಯ ಹೊಸ ಹುದ್ದೆಗಳು ಬೊಕ್ಕಸಕ್ಕೆ ಅನಗತ್ಯ ಹೊರೆ ಎಂಬುದು ನಿರ್ವಿವಾದ.

ಹದಿನೇಳನೇ ಬಾರಿ ಆಯವ್ಯಯ ಮಂಡಿಸಲು ತಯಾರಿ ನಡೆಸುತ್ತಿರುವ ಸಿದ್ದರಾಮಯ್ಯ ಅವರು, ಹಿಂದೆಲ್ಲ ಹಣಕಾಸು ಖಾತೆ ಹಾಗೂ ಮುಖ್ಯಮಂತ್ರಿಯಾಗಿ ಈ ಖಾತೆಯನ್ನು ನಿಭಾಯಿಸಿದಾಗ ಪೈಸೆ–ಪೈಸೆ ವೆಚ್ಚದ ಮೇಲೂ ನಿಗಾ ಇಡುತ್ತಿದ್ದರು. ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ನೇರ–ಪರೋಕ್ಷ ಸಂಗ್ರಹವಾಗುವ ಸಂಪನ್ಮೂಲವನ್ನು ವ್ಯಯಿಸುವಾಗ ವಿವೇಚನೆ, ವಿವೇಕವನ್ನು ಬಳಸುತ್ತಿದ್ದರು. ಈಗಲೂ ಹಣಕಾಸು ಖಾತೆ ಅವರ ಬಳಿಯೇ ಇದೆ. ಸಾರ್ವಜನಿಕ ಹಣವನ್ನು ಬಳಸುವಲ್ಲಿ ಹಿಂದಿನ ಕಾಠಿಣ್ಯವನ್ನು ಬಿಟ್ಟಿರುವ ಅವರು ಈಗ ಧಾರಾಳಿಯಾಗಿದ್ದಾರೆ. ಹಿಂದಿನ ಮತ್ತು ಇಂದಿನ ಅವಧಿಯಲ್ಲಿ ಬದಲಾಗಿರುವ ರಾಜಕೀಯವೂ ಇದಕ್ಕೆ ಕಾರಣ. ಮೊದಲ ಅವಧಿಯಲ್ಲಿ ಪ್ರಶ್ನಾತೀತ ನಾಯಕರಾಗಿದ್ದ ಸಿದ್ದರಾಮಯ್ಯ ಅವರ ದಾರಿ ಈಗ ಅಷ್ಟು ಸಲೀಸಾಗಿಲ್ಲ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮನ್ನು ಬೆಂಬಲಿಸುವ ಶಾಸಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಶತಾಯಗತಾಯ ಯತ್ನಿಸುತ್ತಲೇ ಇದ್ದಾರೆ. ಈ ಕಾರಣಕ್ಕಾಗಿ ಸಿದ್ದರಾಮಯ್ಯ ಅವರು ತಮ್ಮಿಂದ ದೂರವಾಗದಂತೆ ಶಾಸಕರನ್ನು ಓಲೈಸಿಕೊಂಡು, ಅಗತ್ಯ ಸಂಖ್ಯಾಬಲವನ್ನು ಹಿಡಿತದಲ್ಲಿಟ್ಟುಕೊಳ್ಳುವ ಅನಿವಾರ್ಯಕ್ಕೆ ಸಿಲುಕಿದ್ದಾರೆ.

ಇದೇ ಕಾರಣಕ್ಕಾಗಿಯೇ ಶಾಸಕರಿಗೆ ಸಂಪುಟ ದರ್ಜೆ ಹಾಗೂ ನಿಗಮ–ಮಂಡಳಿಗಳ ಅಧ್ಯಕ್ಷರಾಗಿರುವ ಕಾರ್ಯಕರ್ತರಿಗೆ ರಾಜ್ಯ ಸಚಿವರ ಸೌಲಭ್ಯ ಒದಗಿಸಿದ್ದಾರೆ. ಸಂಪುಟದ ಸಚಿವರಿಗೆ ಸೌಲಭ್ಯ ನೀಡಲು ಎಲ್ಲ ಸೌಲಭ್ಯ ಕಲ್ಪಿಸಲು ಸಾಂವಿಧಾನಿಕವಾಗಿ ಅವಕಾಶ ಇದೆ. ಅದರ ಹೊರತಾಗಿ, ಯಾರನ್ನೋ ಓಲೈಸಲು ಹೀಗೆ ಸಚಿವ ಸ್ಥಾನದ ಸೌಲಭ್ಯ ನೀಡುವುದು, ಅದನ್ನು ವಿವೇಚನಾರಹಿತವಾಗಿ ಬೇಕಾದವರಿಗೆಲ್ಲ ವಿಸ್ತರಿಸುತ್ತಾ ಹೋಗುವುದು ಸರಿಯಾದ ಕ್ರಮವಲ್ಲ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಬೇಕಾದ ಸಾರ್ವಜನಿಕರ ಹಣವನ್ನು ಹೀಗೆ ದುಂದುವೆಚ್ಚ ಮಾಡುವುದು ಅರ್ಥವ್ಯವಸ್ಥೆಗೂ ಮಾರಕ. ಇಂತಹ ನಡೆಗಳಿಗೆ ಕಡಿವಾಣ ಹಾಕಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.