ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಅ. 28ರಿಂದ ಬಸವ ಮಹಾಮನೆಯಲ್ಲಿ ‘ಕಲ್ಯಾಣ ಪರ್ವ’

ಒಂದು ಲಕ್ಷ ಭಕ್ತರು; ಆನೆ ಅಂಬಾರಿ ಮೇಲೆ ವಚನ ಸಾಹಿತ್ಯದ ಭವ್ಯ ಮೆರವಣಿಗೆ
Published 26 ಅಕ್ಟೋಬರ್ 2023, 13:47 IST
Last Updated 26 ಅಕ್ಟೋಬರ್ 2023, 13:47 IST
ಅಕ್ಷರ ಗಾತ್ರ

ಬೀದರ್‌: ‘ಬಸವ ಧರ್ಮ ಪೀಠದಿಂದ ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಅ. 28ರಿಂದ 30ರ ವರೆಗೆ 22ನೇ ‘ಕಲ್ಯಾಣ ಪರ್ವ’ ಹಮ್ಮಿಕೊಳ್ಳಲಾಗಿದ್ದು, ವಿವಿಧ ಕಡೆಗಳಿಂದ ಒಂದು ಲಕ್ಷಕ್ಕೂ ಅಧಿಕ ಬಸವ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ‘ಕಲ್ಯಾಣ ಪರ್ವ’ ಉತ್ಸವ ಸಮಿತಿ ಅಧ್ಯಕ್ಷ ಸಂಜುಕುಮಾರ ಪಾಟೀಲ ತಿಳಿಸಿದರು.

ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡಿನಿಂದ ಬಸವ ಭಕ್ತರು ಕಾರ್ಯಕ್ರಮಕ್ಕೆ ಬರಲಿದ್ದು, ಅವರಿಗಾಗಿ ಮೂರು ದಿನ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ನಗರದ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಅ. 28ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ‘ಕಲ್ಯಾಣ ಪರ್ವ’ ಉದ್ಘಾಟಿಸುವರು. ಶಾಸಕ ಶರಣು ಸಲಗರ ಗುರುಬಸವ ಪೂಜೆ ನೆರವೇರಿಸುವರು. ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಕಮ್ಮತ್ತಹಳ್ಳಿ ವಿರಕ್ತಮಠದ ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಚಿಂತಕರಾದ ಆರ್‌.ಕೆ. ಹುಡಗೆ, ಶಿವಲಿಂಗ ಹೆಡೆ ಉಪನ್ಯಾಸ ನೀಡುವರು ಎಂದು ತಿಳಿಸಿದರು.

ಅಂದು ಸಂಜೆ 4ಕ್ಕೆ ಧರ್ಮ ಚಿಂತನ ಗೋಷ್ಠಿ ಜರುಗಲಿದೆ. ಕಲಬುರಗಿ ವಿಕಾಸ ಅಕಾಡೆಮಿ ಮುಖ್ಯ ಸಂಯೋಜಕ ಬಸವರಾಜ ಪಾಟೀಲ ಸೇಡಂ ಉದ್ಘಾಟಿಸುವರು. ತೆಲಂಗಾಣ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಶಂಕರೆಪ್ಪಾ ಪಾಟೀಲ ಅಧ್ಯಕ್ಷತೆ ವಹಿಸುವರು. ಚಿಂತಕರಾದ ಶಿವಶರಣಪ್ಪಾ ಹುಗ್ಗೆ ಪಾಟೀಲ, ವೈಜಿನಾಥ ಎನ್‌. ಹುಡಗೆ ಕೊಳಾರ ಉಪನ್ಯಾಸ ನೀಡುವರು, ಜಾಗತಿಕ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಬಸವರಾಜ ಬುಳ್ಳಾ ಬಸವೇಶ್ವರರ ಪೂಜೆ ನೆರವೇರಿಸುವರು. ರಾತ್ರಿ 8ಕ್ಕೆ ವಚನ ನೃತ್ಯರೂಪಕ ನಡೆಯಲಿದೆ ಎಂದು ಮಾಹಿತಿ ಹಂಚಿಕೊಂಡರು.

ಅ. 29ರಂದು ಬೆಳಿಗ್ಗೆ 7.30ಕ್ಕೆ ಶರಣ ವಚನ, ಶರಣರಿಗೆ ಶರಣಾರ್ಥಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಸವಧರ್ಮ ಪೀಠದ ಜಂಗಮ ಮೂರ್ತಿಗಳು ಕಾರ್ಯಕ್ರಮ ನಡೆಸಿಕೊಡುವರು. ಬೆಳಿಗ್ಗೆ 10ಕ್ಕೆ ಧರ್ಮ ಚಿಂತನಗೋಷ್ಠಿ–2 ಕ್ಕೆ ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಚಾಲನೆ ನೀಡುವರು. ಔರಾದ್‌ ಶಾಸಕ ಪ್ರಭು ಚವಾಣ್‌ ಧ್ವಜಾರೋಹಣ ನೆರವೇರಿಸುವರು. ಚಿಂತಕರಾದ ಜೆ.ಎಸ್‌. ಪಾಟೀಲ, ವಿವೇಕಾನಂದ ಎಚ್‌.ಕೆ. ಉಪನ್ಯಾಸ ನೀಡುವರು ಎಂದರು.

ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಮಹಿಳಾ ಗೋಷ್ಠಿಗೆ ಭಾರತೀಯ ಬಸವ ಬಳಗದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಚಾಲನೆ ನೀಡುವರು. ನೀಲಮ್ಮಾ ವಿ.ಕೆ. ಪಾಟೀಲ ಧ್ವಜಾರೋಹಣ ನೆರವೇರಿಸುವರು. ಲೇಖಕಿ ಕೆ.ಆರ್‌. ಸೌಮ್ಯ ಅನುಭಾವ ನೀಡುವರು. ಸಂಜೆ 7ಕ್ಕೆ ಸಿದ್ದರಾಮೇಶ್ವರ ಸ್ವಾಮೀಜಿ ಪೀಠಾರೋಹಣದ 21ನೇ ವಾರ್ಷಿಕೋತ್ಸವ ಜರುಗಲಿದೆ. 7.30ಕ್ಕೆ ಬಸವ ಧರ್ಮದ ವಿಜಯೋತ್ಸವ ನಡೆಯಲಿದೆ ಎಂದು ತಿಳಿಸಿದರು.

ಅ. 30ರಂದು ಬೆಳಿಗ್ಗೆ 9ಕ್ಕೆ ಕೋಟೆ ಆವರಣದಿಂದ ಬಸವ ಮಹಾಮನೆಯ ವರೆಗೆ ಬಸವಣ್ಣನವರ ಭಾವಚಿತ್ರ ಹಾಗೂ ಆನೆ ಅಂಬಾರಿ ಮೇಲೆ ವಚನ ಸಾಹಿತ್ಯದ ಭವ್ಯ ಮೆರವಣಿಗೆ ಜರುಗಲಿದೆ. 12ನೇ ಶತಮಾನದಲ್ಲಿ ಶರಣರನ್ನು ಆನೆ ಕಾಲಿಗೆ ಕಟ್ಟಿ ಎಳೆದು ಹತ್ಯೆ ಮಾಡಿದ ಸ್ಥಳದಲ್ಲಿ ಆನೆಯ ಮೇಲೆ ವಚನ ಸಾಹಿತ್ಯದ ಮೆರವಣಿಗೆ ಪ್ರಮುಖ ಆಕರ್ಷಣೆ. ಕುದುರೆ, ಒಂಟೆಗಳ ಮೇಲೆ ಶರಣ ವೇಷಧಾರಿಗಳ ಮೆರವಣಿಗೆ ನಡೆಯಿದೆ. ಛತ್ರಿ, ಚಾಮರ, ಕೋಲಾಟ, ಡೊಳ್ಳು ಕುಣಿತ, ವಚನ ಭಜನೆ ಸೇರಿದಂತೆ ಹಲವು ಕಲಾ ತಂಡಗಳು ಪಾಲ್ಗೊಳ್ಳಲಿವೆ ಎಂದು ಮಾಹಿತಿ ಹಂಚಿಕೊಂಡರು.

ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಪ್ರಮುಖರಾದ ಕುಶಾಲರಾವ ಪಾಟೀಲ ಖಾಜಾಪುರ, ಸಿದ್ರಾಮ ಶೆಟಕಾರ, ಕಂಟೆಪ್ಪ ಗಂದಿಗುಡಿ, ಗಣೇಶ ಬಿರಾದಾರ, ಮಹಾಲಿಂಗ ಸ್ವಾಮಿ, ರವಿ ಪಾಪಡೆ ಹಾಜರಿದ್ದರು.

ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟ ನಿಲ್ಲುವುದಿಲ್ಲ’: ‘ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟ ಯಾವ ಕಾರಣಕ್ಕೂ ನಿಲ್ಲುವುದಿಲ್ಲ. ‘ಕಲ್ಯಾಣ ಪರ್ವ’ ಮುಗಿದ ನಂತರ ಪುನಃ ಹೋರಾಟ ಆರಂಭವಾಗಲಿದೆ’ ಎಂದು ರಾಷ್ಟ್ರೀಯ ಬಸವ ದಳದ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ ತಿಳಿಸಿದರು. ಲಿಂಗಾಯತ ಸಮಾಜದ ಹಿರಿಯ ಮುಖಂಡ ಬಸವಕುಮಾರ ಪಾಟೀಲ ಅವರು ಇತ್ತೀಚೆಗೆ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಬರುವ ದಿನಗಳಲ್ಲಿ ಉತ್ತಮ ವಿಚಾರಗಳೊಂದಿಗೆ ಎಲ್ಲಾ ಸರಿಪಡಿಸುವ ಮಾತುಗಳನ್ನು ಆಡಿದ್ದಾರೆ. ಇತ್ತೀಚೆಗೆ ‘ಸ್ವಾಭಿಮಾನಿ ಕಲ್ಯಾಣ ಪರ್ವ’ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಕಾರ್ಯಕ್ರಮ ಮಾಡುವ ಹಕ್ಕಿದೆ. ಅನುಭವ ಮಂಟಪ ನಿರ್ಮಾಣದಲ್ಲಿ ಬಸವರಾಜ ಪಾಟೀಲ ಸೇಡಂ ಅವರು ಕೆಲಸ ನಿರ್ವಹಿಸಿದ್ದರಿಂದ ಅವರನ್ನು ಗುರುಪೂಜೆಗೆ ಆಹ್ವಾನಿಸಲಾಗಿದೆ ಹೊರತು ಬೇರಾವ ಉದ್ದೇಶವಿಲ್ಲ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಲಿಂಗೈಕ್ಯ ಮಾತೆ ಮಹಾದೇವಿಯವರ ಕಾರಣದಿಂದ ಕೂಡಲಸಂಗಮ ಅಭಿವೃದ್ಧಿ ಕಂಡಿದೆ. ಅವರ ಪಾದಸ್ಪರ್ಶದಿಂದ ಬಸವಕಲ್ಯಾಣ ಕೂಡ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. 108 ಅಡಿ ಎತ್ತರದ ಬಸವೇಶ್ವರರ ಪುತ್ಥಳಿ ಸ್ಥಾಪನೆಯಾದ ನಂತರ ಕಲ್ಯಾಣ ಜಗತ್ತಿನ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಈಗಾಗಲೇ ಅನುಭವ ಮಂಟಪದ ಕೆಲಸ ಪ್ರಗತಿಯಲ್ಲಿದೆ. ಈ ಸಲ ಯುವ ಬಸವ ದಳದೊಂದಿಗೆ ಸಂಘಟನೆ ಬಲಪಡಿಸಲಾಗುತ್ತಿದೆ ಎಂದು ಹೇಳಿದರು.

ಬಸವರಾಜ ಧನ್ನೂರ ರಾಜೀನಾಮೆ ಅಂಗೀಕಾರ: ‘ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಸವರಾಜ ಧನ್ನೂರ ಅವರ ರಾಜೀನಾಮೆಯನ್ನು ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿಯವರು ಅಂಗೀಕಾರ ಮಾಡಿದ್ದಾರೆ. ಇನ್ನಷ್ಟೇ ಮಾತಾಜಿ ಅವರು ಹೊಸಬರಿಗೆ ಆ ಜವಾಬ್ದಾರಿ ವಹಿಸುವರು. ಸಂಘಟನೆ ಬಲಪಡಿಸಲಾಗುವುದು’ ಎಂದು ಚಿತ್ರದುರ್ಗದ ವಿಜಯಾಂಬಿಕಾ ಮಾತಾಜಿ ತಿಳಿಸಿದರು.

ಗಲಾಟೆ ಮುನ್ನೆಚ್ಚರಿಕೆಯಿಂದ ಪೊಲೀಸರು ತಡೆದರು: ‘ಬಸವಕಲ್ಯಾಣದಲ್ಲಿ ಇತ್ತೀಚೆಗೆ ನಡೆದ ಕಲ್ಯಾಣ ಪರ್ವದ ಪೂರ್ವಭಾವಿ ಸಭೆಗೆ ಬಂದು ಗಲಾಟೆ ಮಾಡುತ್ತಾರೆ ಎಂದು ಮುನ್ನೆಚ್ಚೆರಿಕೆಯಿಂದ ಪೊಲೀಸರು ಚನ್ನಬಸವಾನಂದ ಸ್ವಾಮೀಜಿ ಹಾಗೂ ಅವರ ಬೆಂಬಲಿಗರನ್ನು ತಡೆದು ಕರೆದೊಯ್ದರು’ ಎಂದು ‘ಕಲ್ಯಾಣ ಪರ್ವ’ ಉತ್ಸವ ಸಮಿತಿ ಅಧ್ಯಕ್ಷ ಸಂಜುಕುಮಾರ ಪಾಟೀಲ ತಿಳಿಸಿದರು. ಲಿಂಗಾಯತರಿಗೆ ಬಸವ ಧರ್ಮ ಪೀಠ ಸರ್ವೊಚ್ಚವಾದುದು. ಅದರ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕು. ಮಾತೆ ಮಹಾದೇವಿಯವರು ಹಾಗೂ ಮಾತೆ ಗಂಗಾದೇವಿಯವರ ಆಶಯದಂತೆ ‘ಲಿಂಗದೇವ’ ಪದ ಕೈಬಿಟ್ಟು ‘ಕೂಡಲಸಂಗಮದೇವ’ ಅಂಕಿತನಾಮ ಬಳಸಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT