ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಕಾಡಿನ ಬಫರ್ ವಲಯಕ್ಕೂ ಕಾಲಿಟ್ಟ ರಿಯಲ್ ಎಸ್ಟೇಟ್! ವಿಶೇಷ ವರದಿ

ಆರು ಕಂಪನಿಗಳಿಗೆ ನೋಟಿಸ್
Published 7 ಜನವರಿ 2024, 20:36 IST
Last Updated 7 ಜನವರಿ 2024, 20:36 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಲೇಔಟ್, ವಿಲ್ಲಾಗಳನ್ನು ನಿರ್ಮಿಸುತ್ತಿದ್ದ ರಿಯಲ್ ಎಸ್ಟೇಟ್‌ ಕಂಪನಿಗಳು ಈಗ ಕಾಫಿನಾಡಿನ ಪರಿಸರ ಸೂಕ್ಷ್ಮಪ್ರದೇಶಗಳಿಗೆ ಲಗ್ಗೆ ಇಟ್ಟಿವೆ. ‘‍ಜೈನ್ ಕಾಫಿ ಬೈ ದಿ ಸ್ಟ್ರೀಮ್’ ಮತ್ತು ‘ದಿ ರೈನ್‌ಬೊ’ ಎಂಬ ಹೆಸರುಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಆನೆ ಕಾರಿಡಾರ್‌ನ ಬಫರ್ ವಲಯದಲ್ಲೇ ಲೇಔಟ್ ನಿರ್ಮಿಸಲು ಮುಂದಾಗಿವೆ. 

ಚಿಕ್ಕಮಗಳೂರು ತಾಲ್ಲೂಕಿನ ಜಾಗರ ಹೋಬಳಿಯ ಗೋಣಕಲ್ ಮತ್ತು ಮೇಲಿನಹುಲುವತ್ತಿ ಸರ್ವೆ ನಂಬರ್‌ನಲ್ಲಿ ಇರುವ 242 ಎಕರೆ ಜಾಗವನ್ನು ತುಂಡು ಭೂಮಿಯಾಗಿ ವಿಭಜಿಸಿ ಲೇಔಟ್‌ ನಿರ್ಮಿಸಲು ಆರು ಕಂಪನಿಗಳು ಮುಂದಾಗಿವೆ. ಪಶ್ಚಿಮ ಘಟ್ಟದ ಗುಡ್ಡಗಳ ನಡುವೆ, ನದಿ, ಝರಿಗಳಿಗೆ ಹೊಂದಿಕೊಂಡಂತೆ ನಿವೇಶನಗಳು ಲಭ್ಯ ಇರುವ ಬಗ್ಗೆ ಬ್ರೋಚರ್‌ಗಳನ್ನು ಮುದ್ರಿಸಲಾಗಿದೆ. ಆನ್‌ಲೈನ್‌ನಲ್ಲಿ ಲೇಔಟ್ ನಕ್ಷೆ ಸಹಿತ ಪ್ರಕಟಣೆಯನ್ನೂ ಹೊರಡಿಸಿವೆ.

ಅರಣ್ಯ ಇಲಾಖೆ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಸೇರಿ ಸಂಬಂಧಿಸಿದ ಯಾವುದೇ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಈ ಬಗ್ಗೆ ಎಲ್ಲರಿಂದ ವರದಿಯನ್ನು ಜಿಲ್ಲಾಡಳಿತ ಪಡೆದುಕೊಂಡಿದೆ. ಆರು ಕಂಪನಿಗಳ ಎಲ್ಲಾ ಜಾಹೀರಾತುಗಳು ಮತ್ತು ಲೇಔಟ್ ನಿರ್ಮಿಸಲು ಹೊರಟಿರುವ ಜಾಗವನ್ನು ಕೂಲಂಕಶವಾಗಿ ಪರಿಶೀಲಿಸಿ ನೋಟಿಸ್ ಜಾರಿ ಮಾಡಿದೆ.

ಮುಳ್ಳಯ್ಯನಗಿರಿ, ಬಾಬಾ ಬುಡನ್‌ಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಗಳಿಗೆ ಹೊಂದಿಕೊಂಡಂತೆ ಈ ಕಾಫಿ ತೋಟಗಳಿವೆ. ಲೇಔಟ್ ನಿರ್ಮಿಸಲು ಗುರುತಿಸಿರುವ ಜಾಗ ಕಾಮೇನಹಳ್ಳಿ ಮೀಸಲು ಅರಣ್ಯ ಪ್ರದೇಶದಿಂದ (ಮೈಸೂರು ಎಲಿಫೆಂಟ್‌ ರಿಸರ್ವ್ ಎಕ್ಸ್‌ಟೆನ್ಷನ್‌) 900ರಿಂದ 1300 ಮೀಟರ್‌ ದೂರದಲ್ಲಿದೆ.

ನೈಸರ್ಗಿಕವಾಗಿ ಕಾಡಾನೆಗಳು ಓಡಾಡುವ ಪ್ರದೇಶ ಇದಾಗಿದ್ದು, ಭದ್ರಾ ಮೀಸಲು ಅರಣ್ಯ ಪ್ರದೇಶದಿಂದ 5ರಿಂದ 6 ಕಿಲೋ ಮೀಟರ್  ದೂರದಲ್ಲಿ ಈ ಲೇಔಟ್‌ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ ಎಂದು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಗುರುತು ಮಾಡಿದ್ದಾರೆ.

ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಯಾವುದೇ ರಕ್ಷಿತ ಪ್ರದೇಶದ ಗಡಿಯಿಂದ 10 ಕಿಲೋ ಮೀಟರ್ ವ್ಯಾಪ್ತಿಯು ಪರಿಸರ ಸೂಕ್ಷ್ಮ ಪ್ರದೇಶ. ಉದ್ದೇಶಿತ ಜಾಗ ಕಾಮೇನಹಳ್ಳಿ ಮೀಸಲು ಅರಣ್ಯ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವ್ಯಾಪ್ತಿಗೆ ಒಳಪಡುತ್ತವೆ ಎಂದು ಕಂಪನಿಗಳಿಗೆ ಜಿಲ್ಲಾಧಿಕಾರಿ ನೀಡಿರುವ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಅಪರೂಪದ ಔಷಧೀಯ ಗಿಡಗಳು ಮತ್ತು ಕಾಡಾನೆ, ಹುಲಿ, ಚಿರತೆ, ಜಿಂಕೆ, ಕಡವೆ ಸೇರಿ ವಿವಿಧ ಬಗೆಯ ಪ್ರಾಣಿಗಳ ಆವಾಸ ಸ್ಥಾನವಾಗಿದೆ. ಇಂತಹ ಭೂಮಿಯನ್ನು ವಿಂಗಡಣೆ ಮಾಡಿ ಸಣ್ಣ ಸಣ್ಣ ತುಂಡುಗಳಾಗಿ ಪರಿವರ್ತಿಸುವುದರಿಂದ ವಜ್ಯಜೀವಿ ಆವಾಸಕ್ಕೆ ಧಕ್ಕೆಯಾಗಲಿದೆ. ನದಿ ಮೂಲಗಳು ಮಲಿನಗೊಂಡು ನಶಿಸಿ ಹೋಗುವ ಅಪಾಯ ಇದೆ ಎಂದು ವಿವರಿಸಿದ್ದಾರೆ.

ಆರು ಕಂಪನಿಗಳಿಗೆ ನೋಟಿಸ್

ಜೆಎಫ್ ಕಾಫಿ ಬೈ ದಿ ಸ್ಟ್ರೀಮ್ ಎಲ್ಎಲ್‌ಪಿ ವ್ಯವಸ್ಥಾಪಕ, ಪಾಲುದಾರರಾದ ಆದಿತ್ಯ, ಎಂ.ಎಸ್.ಜಯರಾಮ್‌, ಐಬಿಸಿ ಎಸ್ಟೇಟ್‌ನಿಂದ ಜಿಪಿಎ ಪಡೆದಿರುವ ವಿ.ಬಾರೆಟೊ, ಅಭಿಷೇಕ್ ಜಿಂದಾಲ್, ಮಹೇಂದ್ರ ಎಸ್.ಕೆ. ಅವರಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ.

ಕರ್ನಾಟಕ ಭೂಸುಧಾರಣಾ ಕಾಯ್ದೆಯ ಪ್ರಕಾರ ನಿಗದಿಗಿಂತ ಹೆಚ್ಚಿನ ಕೃಷಿ ಜಮೀನನ್ನು ಹೊಂದುವಂತಿಲ್ಲ. ಆದರೆ, ಕಾಫಿ ಬೆಳೆಯನ್ನು ಕಡಿಮೆ ವಿಸ್ತೀರ್ಣದಲ್ಲಿ ಸಾಗುವಳಿ ಮಾಡುವುದು ಆರ್ಥಿಕವಾಗಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಈ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ.

ಕಾಫಿ ಕಾಯ್ದೆ ಪ್ರಕಾರ ಕಾಫಿ ತೋಟಗಳನ್ನು ಕೈಗಾರಿಕೆ ಎಂದು ಪರಿಗಣಿಸಲಾಗಿದೆ. ಆದರೆ, ಕರ್ನಾಟಕ ಭೂಕಂದಾಯ ಕಾಯ್ದೆ, ಕರ್ನಾಟಕ ಭೂಸುಧಾರಣಾ ಕಾಯ್ದೆಯಲ್ಲಿರುವ ಅವಕಾಶಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ನೋಟಿಸ್‌ನಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಬೇಕಿದ್ದರೆ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯುವುದು ಅವಶ್ಯ. ಆದರೆ, ಯಾವುದೇ ಇಲಾಖೆಯಿಂದ ಅನುಮತಿ ಪಡೆಯದೆ ಸರ್ಕಾರಕ್ಕೆ ನಷ್ಟ ಉಂಟಮಾಡಲಾಗಿದೆ. ಅಕ್ರಮವಾಗಿ ಪರಭಾರೆ ಮಾಡಲು ಮುಂದಾಗಿರುವ ಬಗ್ಗೆ ವರದಿಯಾಗಿದೆ ಎಂದಿದ್ದಾರೆ.

ಯಾವುದೇ ಪ್ರಾಧಿಕಾರದಿಂದ ಅನುಮತಿ ಪಡೆದಿದ್ದರೆ ಏಳು ದಿನಗಳೊಳಗೆ ದಾಖಲೆಗಳೊಂದಿಗೆ ಹಾಜರಾಗಬೇಕು. ಇಲ್ಲದಿದ್ದರೆ ಕಂದಾಯ ಮತ್ತು ಪರಿಸರ ಕಾಯ್ದೆಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿ ಆಕ್ಷೇಪ

‘ಕ್ಲಬ್‌ ಹೌಸ್, ಹಾಲಿಡೇ ಹೋಮ್ಸ್ ಹಾಗೂ ಲೇಔಟ್‌ಗಳ ನಿರ್ಮಾಣದಿಂದ ಜಲ ಮಾಲಿನ್ಯ ಮತ್ತು ವಾಯು ಮಾಲಿನ್ಯ ಉಂಟಾಗುವ ಅಪಾಯ ಇದೆ. ಆದ್ದರಿಂದ ಅನುಮತಿ ನೀಡಬಾರದು’ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.

ಅನಿಯಂತ್ರಿತ ಅಭಿವೃದ್ಧಿಯಿಂದ ನೀರಿನ ಸೆಲೆಗಳು ಬತ್ತಿ ಹೋಗುವ ಸಂಭವ ಇದೆ. ಕಾಡಾನೆ ಮತ್ತು ಹುಲಿ ಕಾರಿಡಾರ್‌ಗೆ ಸಹ ಧಕ್ಕೆ ಉಂಟಾಗಲಿದ್ದು, ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗಲಿದೆ ಎಂದು ಅರಣ್ಯ ಇಲಾಖೆ ಅಭಿಪ್ರಾಯಪಟ್ಟಿದೆ.ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಮರಗಳನ್ನು ಕಡಿದು ರಸ್ತೆ ನಿರ್ಮಿಸುವುದರಿಂದ ಮಾಲಿನ್ಯ ಮತ್ತು ಅಸಮತೋಲನ ಉಂಟಾಗಲಿದೆ. ಮಣ್ಣು ಹಾಗೂ ಗುಡ್ಡ ಕುಸಿತ ಉಂಟಾಗುವ ಸಂಭವ ಇದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT