ಬುಧವಾರ ರಾತ್ರಿ ಕುಲ್ಲುವಿನ ನಿರ್ಮಂಡ್, ಸೈಂಜ್ ಮತ್ತು ಮಲಾನಾ ಪ್ರದೇಶ, ಮಂಡಿಯ ಪಾಧರ್ ಹಾಗೂ ಶಿಮ್ಲಾ ಜಿಲ್ಲೆಯ ರಾಂಪುರದಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಐದು ಮಂದಿ ಮೃತಪಟ್ಟಿದ್ದು, 45ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ಕುಲ್ಲುವಿನ ಮಣಿಕರನ್ ಪ್ರದೇಶದಲ್ಲಿರುವ ಮಲಾನಾ ವಿದ್ಯುತ್ ಯೋಜನೆಯ ಸ್ಥಳದಲ್ಲಿ 33 ಮಂದಿ ಸಿಲುಕಿದ್ದರು. ಈ ಪೈಕಿ 29 ಜನರನ್ನು ಶೋಧ ಕಾರ್ಯಾಚರಣೆ ವೇಳೆ ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ತೋರುಲ್ ಎಸ್. ರವೀಶ್ ತಿಳಿಸಿದ್ದಾರೆ.
ಮಳೆಯಿಂದಾಗಿ ಗೋಡೆ ಮತ್ತು ಸುರಂಗ ಮಾರ್ಗಕ್ಕೆ ಹಾನಿಯಾಗಿದ್ದು, ನೀರು ಬ್ಯಾರೇಜ್‌ಗೆ ಪ್ರವೇಶಿಸಿದೆ. ಇದರ ನಡುವೆಯೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ಮತ್ತು ಹೋಮ್ ಗಾರ್ಡ್ ತಂಡಗಳು ಸಂಕಷ್ಟದಲ್ಲಿ ಸಿಲುಕಿದ್ದ 29 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇನ್ನೂ ನಾಲ್ವರು ಪವರ್ ಹೌಸ್‌ನಲ್ಲಿಯೇ ಸಿಲುಕಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ನಾಪತ್ತೆಯಾದವರ ಸಂಬಂಧಿಕರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಪೊಲೀಸರು ಮತ್ತು ಗೃಹ ರಕ್ಷಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಡ್ರೋನ್‌ಗಳ ಸಹಾಯದ ಮೂಲಕ ನಾಪತ್ತೆಯಾದವರ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.