ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲಿವಾಲ್ ಪ್ರಕರಣ: ಕೇಜ್ರಿವಾಲ್ ನಿವಾಸದ ಸಿಸಿಟಿವಿ ಡಿವಿಆರ್ ಪೊಲೀಸ್‌ ವಶಕ್ಕೆ

Published 19 ಮೇ 2024, 10:41 IST
Last Updated 19 ಮೇ 2024, 10:41 IST
ಅಕ್ಷರ ಗಾತ್ರ

ನವದೆಹಲಿ: ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ತಂಡ ಭಾನುವಾರ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿವೆ ಎಂದು ಮೂಲಗಳು ತಿಳಿಸಿವೆ.

ಮೇ 13ರಂದು ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರು ಸಿಎಂ ನಿವಾಸದಲ್ಲಿ ಮಾಲಿವಾಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ. ಅವರ ಮೇಲೆ ಹಲ್ಲೆ ನಡೆಸಿದ ದೃಶ್ಯಾವಳಿಗಳನ್ನು ಪಡೆಯಲು ಪೊಲೀಸರ ತಂಡ ಸಿಸಿಟಿವಿ ಡಿವಿಆರ್ (ಡಿಜಿಟಲ್ ವಿಡಿಯೊ ರೆಕಾರ್ಡರ್ ) ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಕ್ಕೆ ಪಡೆದಿದೆ.

ಸಿಎಂ ನಿವಾಸದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ತಿರುಚಲಾಗುತ್ತಿದೆ ಎಂದು ಮಾಲಿವಾಲ್ ಆರೋಪಿಸಿದ್ದರು.

ಪ್ರಕರಣ ಸಂಬಂಧ ಬಿಭವ್ ಕುಮಾರ್ ಅವರನ್ನು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ. ಪೊಲೀಸ್ ಕಸ್ಟಡಿಯ ಅವಧಿಯಲ್ಲಿ ಪತ್ನಿ ಹಾಗೂ ತಮ್ಮ ವಕೀಲರನ್ನು ಪ್ರತಿ ದಿನ 30 ನಿಷಮಿಗಳ ಕಾಲ ಭೇಟಿ ಮಾಡಲು ಅವಕಾಶ ನೀಡಿದೆ.

ಪಕ್ಷದ ವರ್ಚಸ್ಸಿಗೆ ಮಸಿ ಬಳಿಯಲು ಯತ್ನ: ಎಎಪಿ ಆರೋಪ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ನಿವಾಸದೊಳಗಿನ ಸಿ.ಸಿ.ಟಿ.ವಿ ಕ್ಯಾಮೆರಾಗಳ ಡಿವಿಆರ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಚುನಾವಣೆಗೂ ಮುನ್ನ ಎಎಪಿಯ ವರ್ಚಸ್ಸಿಗೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ ಎಂದು ಎಎಪಿ ನಾಯಕ ದೆಹಲಿ ಸಚಿವ ಸೌರಭ್‌ ಭಾರದ್ವಾಜ್‌ ಆರೋಪಿಸಿದರು.

‘ಸಿ.ಎಂ ನಿವಾಸದ ಪ್ರವೇಶ ದ್ವಾರ ಗಡಿ ಗೋಡೆಗಳಲ್ಲಿನ ಕ್ಯಾಮೆರಾಗಳ ಡಿವಿಆರ್‌ಗಳನ್ನು ಶನಿವಾರವೇ ವಶಕ್ಕೆ ಪಡೆದಿದ್ದ ಪೊಲೀಸರು ಭಾನುವಾರ ಮನೆಯ ಇತರ ಭಾಗಗಳಲ್ಲಿನ ಕ್ಯಾಮೆರಾಗಳ ಡಿವಿಆರ್‌ಗಳನ್ನು ವಶಕ್ಕೆ ಪಡೆದರು’ ಎಂದ ಅವರು ‘ಪೊಲೀಸರು ಈಗ ದೃಶ್ಯಾವಳಿಯ ತುಣುಕುಗಳನ್ನು ಅಳಿಸಲಾಗಿದೆ ಎಂದು ಕತೆ ಕಟ್ಟುತ್ತಿದ್ದಾರೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಈ ಪ್ರಕರಣದ ಎಫ್‌ಐಆರ್‌ ಎಲ್ಲ ಕಡೆ ಹರಿದಾಡಿದೆ. ಆದರೆ ಆರೋಪಿ ಬಿಭವ್‌ ಕುಮಾರ್‌ ಮತ್ತು ಎಎಪಿ ಬಳಿ ಈ ಎಫ್‌ಐಆರ್‌ ಪ್ರತಿ ಇಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಅಳಿಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ‘ಡ್ರಾಯಿಂಗ್‌ ರೂಮ್‌ನಲ್ಲಿ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಆದರೆ ನಾನು ಅಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಇರುವುದನ್ನೇ ನೋಡಿಲ್ಲ. ಕ್ಯಾಮೆರಾವೇ ಇಲ್ಲದಿದ್ದಾಗ ಅದರ ದೃಶ್ಯಗಳನ್ನು ಅಳಿಸುವುದಾದರೂ ಹೇಗೆ? ಪೊಲೀಸರ ಬಳಿ ಈಗ ಎಲ್ಲವೂ ಇದೆ ಅವರೇ ಯಾವುದನ್ನಾದರೂ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಬಹುದು ನೋಡಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT