ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾತಿ ಮಾಲಿವಾಲ್ ಹಲ್ಲೆ ಪ್ರಕರಣ: ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್‌ ಕುಮಾರ್ ಬಂಧನ

ಮುಖ್ಯಮಂತ್ರಿ ನಿವಾಸದ 10 ಜನರಿಂದ ಹೇಳಿಕೆ ದಾಖಲು
Published 18 ಮೇ 2024, 7:43 IST
Last Updated 18 ಮೇ 2024, 7:43 IST
ಅಕ್ಷರ ಗಾತ್ರ

ನವದೆಹಲಿ: ಎಎಪಿ ಸಂಸದೆ ಸ್ವಾತಿ ಮಾಲಿವಾಲ್‌ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಆಪ್ತ ಸಹಾಯಕ ಬಿಭವ್‌ ಕುಮಾರ್ ಅವರನ್ನು ಪೊಲೀಸರು ಶನಿವಾರ ಬಂಧಿಸಿದರು.

ಮುಖ್ಯಮಂತ್ರಿಗಳ ನಿವಾಸಕ್ಕೆ ಶನಿವಾರ ಬಂದಿದ್ದ ಬಿಭವ್‌ ಅವರನ್ನು ಅಲ್ಲಿಯೇ ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್‌ ಕಸ್ಟಡಿಗೆ ನೀಡುವಂತೆ ಕೋರಲಾಗುವುದು ಎಂದು ಅವರು ಹೇಳಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ನಿವಾಸದಲ್ಲಿನ ಭದ್ರತಾ ಸಿಬ್ಬಂದಿ ಸೇರಿದಂತೆ 10 ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿರುವುದಾಗಿ ಅವರು ತಿಳಿಸಿದರು.

ಬಿಭವ್‌ ಕುಮಾರ್‌ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಅವರ ಪರ ವಕೀಲರು ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಗೂ 20 ನಿಮಿಷ ಮುನ್ನವೇ ಅವರ ಬಂಧನವಾಗಿತ್ತು. ಹೀಗಾಗಿ ನ್ಯಾಯಾಲಯವು ಈ ಅರ್ಜಿಯನ್ನು ನಿರುಪಯುಕ್ತ ಎಂದು ಹೇಳಿ, ವಿಲೇವಾರಿ ಮಾಡಿತು.

ತನಿಖೆಗೆ ಸಹಕರಿಸಲು ಸಿದ್ಧ: ಇದಕ್ಕೂ ಮುನ್ನ ಬಿಭವ್‌ ಕುಮಾರ್‌, ‘ನಾನು ತನಿಖೆಗೆ ಸಹಕರಿಸಲು ಸಿದ್ಧ. ಆದರೆ ಮಾಲಿವಾಲ್‌ ವಿರುದ್ಧ ನಾನು ನೀಡಿದ್ದ ದೂರನ್ನೂ ಪರಿಗಣಿಸಬೇಕು’ ಎಂದು ಪೊಲೀಸರಿಗೆ ಪತ್ರ ಬರೆದಿದ್ದರು.

ಈ ಕುರಿತು ಶುಕ್ರವಾರವೇ ಪೊಲೀಸರಿಗೆ ದೂರು ನೀಡಿದ್ದ ಬಿಭವ್‌, ‘ಮೇ 13ರಂದು ಮಾಲಿವಾಲ್‌ ಅವರು ಮುಖ್ಯಮಂತ್ರಿ ನಿವಾಸವನ್ನು ಅನಧಿಕೃತವಾಗಿ ಪ್ರವೇಶಿಸಿದ್ದಲ್ಲದೇ, ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಉಲ್ಲಂಘಿಸಿ, ಗದ್ದಲ ಸೃಷ್ಟಿಸಿದರು. ಅದನ್ನು ತಡೆಯಲು ಯತ್ನಿಸಿದಾಗ ನಿಂದಿಸಿದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ನಿಷ್ಪಕ್ಷಪಾತವಾಗಿ ಇದ್ದರೆ, ಬಿಭವ್‌ ನೀಡಿದ್ದ ದೂರನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಬೇಕು ಎಂದು ಎಎಪಿ ನಾಯಕಿ, ದೆಹಲಿ ಸಚಿವೆ ಆತಿಶಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. 

ಬಿಜೆಪಿಯಿಂದ ಸ್ವಾತಿಗೆ ಬ್ಲ್ಯಾಕ್‌ಮೇಲ್‌: ಆತಿಶಿ ಆರೋಪ

ನವದೆಹಲಿ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಅವರು ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿಯೇ ಇದನ್ನು ದಾಳವಾಗಿ ಬಳಸಿ ಕೇಜ್ರಿವಾಲ್‌ ವಿರುದ್ಧದ ಪಿತೂರಿಯಲ್ಲಿ ಭಾಗಿಯಾಗಲು ಬಿಜೆಪಿ ಅವರಿಗೆ ‘ಬ್ಲ್ಯಾಕ್‌ಮೇಲ್‌’ ಮಾಡಿದೆ ಎಂದು ದೆಹಲಿ ಸಚಿವೆ ಆತಿಶಿ ಆರೋಪಿಸಿದರು. 

ಮುಖ್ಯಮಂತ್ರಿ ಅವರ ಭೇಟಿಗೆ ಯಾವುದೇ ಸಮಯ ನಿಗದಿಯಾಗದಿದ್ದರೂ ಸ್ವಾತಿ ಅವರು ಮುಖ್ಯಮಂತ್ರಿ ಅವರ ಅಧಿಕೃತ ನಿವಾಸಕ್ಕೆ ಮೇ 13ರಂದು ಏಕೆ ಹೋಗಿದ್ದರು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. ‘ಅಂದು ಕೇಜ್ರಿವಾಲ್‌ ಅವರು ಸ್ವಾತಿ ಅವರನ್ನು ಭೇಟಿಯಾಗಲಿಲ್ಲ. ಒಂದು ವೇಳೆ ಭೇಟಿಯಾಗಿದ್ದಲ್ಲಿ ಬಿಭವ್‌ ವಿರುದ್ಧ ಈಗ ಇರುವ ಆರೋಪಗಳು ಅವರ ಮೇಲೆ ಬರುತ್ತಿದ್ದವು’ ಎಂದು ಅವರು ಹೇಳಿದರು. 

‘ಬಿಜೆಪಿಯವರು ಮೊದಲು ಪ್ರಕರಣಗಳನ್ನು ದಾಖಲಿಸುತ್ತಾರೆ. ನಂತರ ನಾಯಕರನ್ನು ಜೈಲಿಗೆ ಕಳುಹಿಸುವ ಬೆದರಿಕೆ ಹಾಕುತ್ತಾರೆ. ಸ್ವಾತಿ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಅಕ್ರಮ ನೇಮಕಾತಿ ಪ್ರಕರಣ ದಾಖಲಿಸಿದ್ದು ಅವರನ್ನು ಬಂಧಿಸುವ ಸಾಧ್ಯತೆ ಇದೆ’ ಎಂದು ಅವರು ವಿವರಿಸಿದರು. 

ಸ್ವಾತಿ ಅವರ ಮೊಬೈಲ್‌ ಕರೆಗಳ ದಾಖಲೆಗಳನ್ನು ಪರಿಶೀಲಿಸಿದರೆ ಅವರು ಯಾವ ಬಿಜೆಪಿ ನಾಯಕರ ಜತೆ ಸಂಪರ್ಕದಲ್ಲಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT